ತಮಿಳುನಾಡಲ್ಲಿ ರಜನಿ ರಾಜಕೀಯ
Team Udayavani, Jan 1, 2018, 6:00 AM IST
ಚೆನ್ನೈ: ಒಂದಲ್ಲ ಎರಡಲ್ಲ ಬರೋಬ್ಬರಿ ಎರಡು ದಶಕಗಳ ಚರ್ಚೆಯೊಂದಕ್ಕೆ ತಲೈವಾ ಖ್ಯಾತಿಯ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ತೆರೆ ಎಳೆದಿದ್ದಾರೆ. ರಜನಿ ರಾಜಕೀಯ ಪ್ರವೇಶ ಮಾಡುತ್ತಾರೋ, ಇಲ್ಲವೋ ಎಂಬ ಸಂದೇಹ ಹಾಗೇ ಉಳಿದಿತ್ತು. ಭಾನುವಾರ ಅಭಿಮಾನಿಗಳ ಎದುರೇ ಈ ಸಂದೇಹಕ್ಕೆ ಸ್ಪಷ್ಟ ಉತ್ತರ ನೀಡುವ ಮೂಲಕ ತಮಿಳುನಾಡು ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
2017ಕ್ಕೆ ವಿದಾಯ ಹೇಳಿ 2018ಕ್ಕೆ ಆಹ್ವಾನಿಸುವ ಸಂಭ್ರಮದ ಗಳಿಗೆಯ ನಡುವೆ ಈ ಸುದ್ದಿ ನೀಡಿ ರಾಜಕೀಯ ಪ್ರವೇಶ ನಿರೀಕ್ಷಿಸುತ್ತಿದ್ದ ಅಭಿಮಾನಿಗಳ ಹರ್ಷ ಇಮ್ಮಡಿಗೊಳಿಸಿದ್ದಾರೆ ಸೂಪರ್‌ಸ್ಟಾರ್ ರಜನಿ.
ರಾಜಕೀಯ ಇನಿಂಗ್ಸ್ ಬಗ್ಗೆ ಪ್ರತಿಕ್ರಿಯಿಸಿರುವ ರಜನಿಕಾಂತ್, 2021ರ ತಮಿಳುನಾಡು ವಿಧಾನಸಭಾ ಚುನಾವಣೆ ವೇಳೆ ಹೊಸ ಪಕ್ಷ ಸ್ಥಾಪಿಸಿ, ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಿಸಿದರು. ಜಾತಿ ಮತ್ತು ಧರ್ಮದಿಂದ ಹೊರತಾಗಿರುವ ಆಧ್ಯಾತ್ಮಿಕ ರಾಜಕೀಯ (ಸ್ಪಿರಿಚುವಲ್ ಪಾಲಿಟಿಕ್ಸ್) ಮಾಡಬೇಕಾಗಿರುವ ಅಗತ್ಯವಿದೆ. ವ್ಯವಸ್ಥೆಯಲ್ಲೂ ಬದಲಾವಣೆ ಮಾಡಬೇಕಾಗಿದೆ. ಅದಕ್ಕಾಗಿ ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಗೆ ಎಲ್ಲಾ 234 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇನೆ ಎಂದಿರುವ ಅವರು, ಪಕ್ಷದ ಆಶಯಗಳನ್ನು ರೂಪಿಸಿ ಚುನಾವಣೆ ಹತ್ತಿರವಿರುವಾಗ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯೇ ಬರುತ್ತಿದ್ದೆ:
ಅಧಿಕಾರದ ಆಸೆಗಾಗಿ ರಾಜಕೀಯ ಪ್ರವೇಶ ಮಾಡಿಲ್ಲ ಎನ್ನುವುದನ್ನು ರಜನಿ ಇದೇ ವೇಳೆ ಸ್ಪಷ್ಟಪಡಿಸಿದರು. “”ಅಂಥ ಆಸೆ ಇದ್ದಿದ್ದರೆ 45 ವರ್ಷ ವಯಸ್ಸಾಗಿದ್ದಾಗಲೇ ರಾಜಕೀಯ ಕ್ಷೇತ್ರಕ್ಕೆ ಬರುವ ಅವಕಾಶವಿತ್ತು. ಅದೇ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗುವಂಥ ಅವಕಾಶವೂ ಬಂದೊದಗಿತ್ತು” ಎಂದಿದ್ದಾರೆ.
“”ರಾಜರ ಕಾಲದಲ್ಲಿ ಅವರು ತಮ್ಮ ವೈರಿಗಳ ರಾಜ್ಯಗಳ ಮೇಲೆ ದಾಳಿ ಮಾಡಿ ಕೊಳ್ಳೆ ಹೊಡೆಯುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮ್ಮವರನ್ನೇ ಸುಲಿಗೆ ಮಾಡುತ್ತಾರೆ. ವ್ಯವಸ್ಥೆಯಲ್ಲಿ ನಾವು ಬದಲಾವಣೆ ಮಾಡಬೇಕಾಗಿದೆ. ಪಕ್ಷದ ಕಾರ್ಯಕರ್ತರು ಜನರ ರಕ್ಷಣೆ ಮಾಡಬೇಕು. ಪೊಲೀಸರು ರಾಜಕೀಯ ನಾಯಕರ ಗುಲಾಮರಂತೆ ವರ್ತಿಸಬಾರದು. ನಾನು ಜನರ ರಕ್ಷಕನಾಗಿ ಕೆಲಸ ಮಾಡಲಿದ್ದೇನೆ” ಎಂದು ಪ್ರತಿಪಾದಿಸಿದ್ದಾರೆ.
ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ:
ಯಾವುದೇ ರೀತಿಯ ಸ್ವಜನಪಕ್ಷಪಾತವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ರಜನಿ, ವೈಯಕ್ತಿಕ ಹಿತಾಸಕ್ತಿ ಸಾಧನೆಗಾಗಿ ಶಾಸಕರು, ಸಚಿವರು, ಸಂಸದರ ಬಳಿಗೆ ಹೋಗುವ ಸರ್ಕಾರಿ ಅಧಿಕಾರಿಗಳ ಮೇಲೆ ನಿಗಾ ಇರಿಸಬೇಕು ಎಂದು ಹೇಳಿದ್ದಾರೆ. “ಪಕ್ಷದ ಕಾರ್ಯಕರ್ತರು ಅಂಥವರ ಮೇಲೆ ನಿಗಾ ಇರಿಸಬೇಕು. ಅಂಥವರೇ ಪಕ್ಷಕ್ಕೆ ಬೇಕಾದವರು’ ಎಂದು ಹೇಳಿದ್ದಾರೆ. ಸ್ವಾರ್ಥ ಸಾಧನೆಗೆ ಮನಸ್ಸು ಮಾಡದ ಸ್ವಯಂ ಸೇವಕರು ಬೇಕು. ಅದರ ಬದಲಾಗಿ ಕಾರ್ಯಕರ್ತರ ಪಡೆಯಲ್ಲ ಎಂದಿದ್ದಾರೆ ರಜನಿ.
ರಾಜಕೀಯ ಮತ್ತು ಪ್ರಜಾಪ್ರಭುತ್ವ ಒಟ್ಟಾಗಿ ಭಾರಿ ಅನಾಹುತವಾಗಿದೆ ಎಂದು ರಜನಿ ಹೇಳಿದ್ದಾರೆ. ಒಂದು ವರ್ಷದಿಂದ ನಡೆದಿರುವ ಕೆಲವೊಂದು ಘಟನೆಗಳು ಅದನ್ನು ಪುಷ್ಟೀಕರಿಸುತ್ತಿವೆ. ಅವುಗಳು ತಮಿಳುನಾಡಿನ ಪ್ರತಿಯೊಬ್ಬನ ತಲೆ ತಗ್ಗಿಸುವಂತೆ ಮಾಡಿವೆ ಎಂದು ಹೇಳಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷದ ನೇತೃತ್ವದ ಸರ್ಕಾರದ ವಿರುದ್ಧ ಅವ್ಯವಹಾರದ ಆರೋಪಗಳು ಕೇಳಿ ಬಂದಿರುವಾಗಲೇ ಅವರು ಹೇಳಿರುವ ಮಾತುಗಳು ಗಮನಾರ್ಹವಾಗಿವೆ.
ಸಮುದ್ರದಿಂದ ಹರಳು ತೆಗೆದಂತೆ: ಹೊಸ ಪಕ್ಷ ಸ್ಥಾಪನೆ, ಅದನ್ನು ಜನಪ್ರಿಯಗೊಳಿಸಿ ಅಧಿಕಾರಕ್ಕೇರುವುದು ಸುಲಭವಲ್ಲ ಎಂದು ಹೇಳಿರುವ ಅವರು, ಇದೊಂದು ಸಮುದ್ರದಿಂದ ಹರಳು ತೆಗೆದಂತೆ ಎಂದು ಹೇಳಿದ್ದಾರೆ. ದೇವರ ಆಶೀರ್ವಾದದಿಂದಲೇ ಪಕ್ಷ ಸ್ಥಾಪನೆ ಸಾಧ್ಯವಾಯಿತು ಎಂದಿರುವ ಸೂಪರ್‌ಸ್ಟಾರ್, “ಯುದ್ಧ ಘೋಷಣೆ ಮಾಡಿ, ಅದರಲ್ಲಿ ಗೆದ್ದರೆ ದೇಶವನ್ನೇ ಆಳಬಹುದು. ಒಂದು ವೇಳೆ ಅದರಲ್ಲಿ ಅಸು ನೀಗಿದರೆ ವೀರ ಸ್ವರ್ಗ ಸೇರಬಹುದು. ಒಂದು ವೇಳೆ ಯುದ್ಧ ಘೋಷಿಸದೆ ಹೋದರೆ ಹೇಡಿ ಎಂದು ಲೇವಡಿ ಮಾಡುತ್ತಾರೆ’ ಎಂದು ಹೇಳಿದಾಗ ಬೆಂಬಲಿಗರಿಂದ ಹರ್ಷೋದ್ಗಾರ ಕೇಳಿಬಂತು.
ಅಭಿಮಾನಿಗಳಲ್ಲಿ ಸಂತಸ, ಸಂಭ್ರಮ: ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ತಮಿಳುನಾಡು, ಮುಂಬೈನಲ್ಲಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಿಂದ ಹೊರಬಂದ ರಜನಿಕಾಂತ್ ಅಭಿಮಾನಿಗಳತ್ತ ಕೈ ಬೀಸಿ, ಸಂತಸ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಸಿದ ಅಭಿಮಾನಿಗಳು “ತಲೈವಾ’ ಎಂದು ಸಂಭ್ರಮದಿಂದ ಕೂಗು ಹಾಕಿದರು. “ಹೊಸ ವರ್ಷಕ್ಕೆ ತಲೈವರ್ (ನಾಯಕ)ರಿಂದ ನಮಗೆ ಉಡುಗೊರೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಚೆನ್ನೈ ಮತ್ತು ಇತರ ಪ್ರಮುಖ ನಗರಗಳಲ್ಲಿ ಅಭಿಮಾನಿ ಸಂಘದ ಧ್ವಜ ಹಾರಿಸಲಾಗಿತ್ತು. ಜತೆಗೆ ದೊಡ್ಡ ಗಾತ್ರದ ಕಟೌಟ್, ಪೋಸ್ಟರ್‌ಗಳನ್ನೂ ಹಾಕಲಾಗಿತ್ತು. ಮುಂಬೈ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅಲ್ಲಿ ಒಟ್ಟು 150 ರಜನಿಕಾಂತ್ ಅಭಿಮಾನಿ ಸಂಘಗಳು ಇದ್ದು, ಈ ಪೈಕಿ 90 ಮುಂಬೈನಲ್ಲಿಯೇ ಇವೆ.
ಕಮಲ್ ಕತೆ ಏನು?
ಬಹು ಭಾಷಾ ನಟ ಕಮಲ್ ಹಾಸನ್ 2017ರ ನವೆಂಬರ್‌ನಲ್ಲಿಯೇ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡಿದ್ದರು. ಹೊಸ ವರ್ಷದ ಆರಂಭದಲ್ಲಿಯೇ ಅದರ ಬಗ್ಗೆ ವಿವರಣೆ ನೀಡುವುದಾಗಿಯೂ ಹೇಳಿದ್ದರು. ಇದೀಗ ಅವರ ಬದಲಿಗೆ ಸ್ನೇಹಿತ ರಜನಿಕಾಂತ್ ರಾಜಕೀಯ ಪ್ರವೇಶದ ಘೋಷಣೆ ಮಾಡಿದ್ದು, ಕಮಲ್ ಎಂದು ಈ ಬಗ್ಗೆ ಮಾಹಿತಿ ನೀಡುತ್ತಾರೆ ಎನ್ನುವ ಬಗ್ಗೆ ಚರ್ಚೆಯಾಗುತ್ತಿದೆ.
“ಪಡೆಯಪ್ಪ’ದಲ್ಲಿತ್ತು ಪಕ್ಷದ ಚಿಹ್ನೆ?
“ಪಡೆಯಪ್ಪ’ ಸಿನಿಮಾದಲ್ಲಿ ರಜನಿ ತೋರಿಸಿದ್ದ ಚಿಹ್ನೆ ಹೊಸ ಪಕ್ಷದ ಚಿಹ್ನೆಯಾಗಲಿದೆ ಎಂದು ಹೇಳಲಾಗುತ್ತಿದೆ. “ಒಳ್ಳೆಯದನ್ನೇ ಮಾಡು, ಮಾತಾಡು ಮತ್ತು ಒಳ್ಳೆಯದೇ ಆಗುತ್ತದೆ’ ಎನ್ನುವುದೇ ಪಕ್ಷದ ಧ್ಯೇಯ ವಾಕ್ಯವಾಗಲಿದೆ. ಸತ್ಯಸಂಧತೆ, ಕಠಿಣ ದುಡಿಮೆ ಮತ್ತು ಬೆಳವಣಿಗೆ ಘೋಷಣೆಯಾಗಲಿದೆ.
ಚಿತ್ರರಂಗದ ನನ್ನ ಸ್ನೇಹಿತ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರಿಗೆ ನನ್ನ ಶುಭಾಶಯಗಳು.
– ಅಮಿತಾಭ್ ಬಚ್ಚನ್, ಹಿಂದಿ ಚಿತ್ರರಂಗದ ನಟ
ಸಾಮಾಜಿಕ ಹೊಣೆಗಾರಿಕೆ ಇರುವ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರಿಗೆ ಸ್ವಾಗತವಿದೆ.
– ಕಮಲ್‌ಹಾಸನ್, ಬಹುಭಾಷಾ ನಟ
ರಜನಿಕಾಂತ್ ರಾಜಕೀಯ ಪ್ರವೇಶ ಮಾಡುತ್ತಾರೆ. 2017ನೇ ವರ್ಷದ ಬಲು ದೊಡ್ಡ ಸುದ್ದಿ ಇದು. ಜೈ ಹೋ.
– ಅನುಪಮ್ ಖೇರ್, ಬಾಲಿವುಡ್ ನಟ
ಭಾರತ ಸಾಮರಸ್ಯದಿಂದ ಕೂಡಿದ ದೇಶವಾಗಬೇಕು, ವ್ಯವಸ್ಥೆಯಲ್ಲಿ ಬದಲಾವಣೆ ಮತ್ತು ಅಂಥ ಚಿಂತನೆ ಇರುವವರು ರಾಜಕೀಯಕ್ಕೆ ಬರಬೇಕು. ರಜನಿಕಾಂತ್ ಅವರು ಎಲ್ಲರನ್ನೂ ಒಳಗೊಂಡ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯಾಗಬೇಕು ಎಂಬ ನಿಯಮ ಹೊಂದಿದ್ದಾರೆ.
– ಖಷೂº ಸುಂದರ್, ಕಾಂಗ್ರೆಸ್ ನಾಯಕಿ
ರಾಜಕೀಯಕ್ಕೆ ಸೇರುವ ರಜನೀಕಾಂತ್ ನಿರ್ಧಾರಕ್ಕೆ ಅಭಿನಂದನೆ ಹೇಳುತ್ತೇನೆ. ಅವರು ಪೂರಕ ವಾತಾವರಣದೊಂದಿಗೆ ತಮಿಳುನಾಡಿನ ರಾಜಕೀಯ ನಿರ್ವಾತವನ್ನು ತುಂಬಲಿದ್ದಾರೆ ಎಂದು ಭಾವಿಸುತ್ತೇನೆ. ಅವರ ರಾಜಕೀಯ ಪ್ರವೇಶ ತಮಿಳುನಾಡಿನಲ್ಲಿ ಅವಶ್ಯಕವಾಗಿರುವ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ (ಟ್ವೀಟ್)
ರಜನಿಕಾಂತ್ ಅನಕ್ಷರಸ್ಥ: ಸುಬ್ರಮಣಿಯನ್ ಸ್ವಾಮಿ
ರಾಜಕೀಯ ಪಕ್ಷ ಸ್ಥಾಪನೆ ಮಾಡಿರುವ ನಟ ರಜನಿಕಾಂತ್‌ರನ್ನು “ಅನಕ್ಷರಸ್ಥ’ ಎಂದು ಬಿಜೆಪಿ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ. ತಮಿಳುನಾಡಿನಲ್ಲಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಅವರ ಬಳಿ ಯಾವುದೇ ಯೋಜನೆಗಳಿಲ್ಲ. ಅವರೇ ಒಬ್ಬ ಭ್ರಷ್ಟ ಎಂದಿದ್ದಾರೆ “ಮತ್ತೂಬ್ಬ ಸಿನಿಮಾ ನಟ ರಾಜಕೀಯ ಪ್ರವೇಶ ಮಾಡಿದ್ದಾರೆ ಎಂಬ ವಿಚಾರವೇ ಜೋಕ್’ ಎಂದಿದ್ದಾರೆ. ಮಾಧ್ಯಮಗಳನ್ನು ನಿರ್ವಹಿಸಲು ರಜನಿಕಾಂತ್ ಬಳಿ ಪರಿಣತರು ಇರಬಹುದು. ಆದರೆ ರಾಜಕೀಯವೆಂದರೆ ಕೇವಲ ಮಾಧ್ಯಮಗಳನ್ನು ನಿಭಾಯಿಸುವುದರಿಂದ ಆಗುವುದಿಲ್ಲ. ಇಲ್ಲಿನ ಜನರು ಹೆಚ್ಚಿನ ಶಿಕ್ಷಣ ಪಡೆದಿದ್ದಾರೆ. ಇಲ್ಲಿನ ರಾಜಕೀಯ ಸಿನಿಮಾ ನಟರನ್ನು ಈಗ ಪ್ರೋತ್ಸಾಹಿಸುವುದಿಲ್ಲ. ಅದಕ್ಕೆ ಆರ್.ಕೆ.ನಗರ ಕ್ಷೇತ್ರದ ಉಪ ಚುನಾವಣೆ ಸಾಕ್ಷಿ ಎಂದಿದ್ದಾರೆ. ಗಮನಾರ್ಹ ಅಂಶವೆಂದರೆ ತಮಿಳುನಾಡು ಬಿಜೆಪಿ ಘಟಕ ಅಧ್ಯಕ್ಷ ಡಾ.ತಮಿಳ್‌ಸೈ ಸುಂದರರಾಜನ್ ಅವರು ರಜನಿ ರಾಜಕೀಯಕ್ಕೆ ಬರುವುದನ್ನು ಸ್ವಾಗತಿಸಿದ್ದಾರೆ.
ರಾಜ್ಯ ಬಿಜೆಪಿ ಪಾಳಯದಲ್ಲಿ ಭಾರಿ ಚರ್ಚೆ
ಬೆಂಗಳೂರು: ರಜನೀಕಾಂತ್ ಹೊಸ ಪಕ್ಷ ಸ್ಥಾಪಿಸುವ ನಿರ್ಧಾರವನ್ನು ರಾಜ್ಯದ ಬಿಜೆಪಿ ಪ್ರಮುಖರು ಸ್ವಾಗತಿಸಿದ್ದಾರೆ. ಭಾನುವಾರ ನಗರದ ಹೊರವಲಯದಲ್ಲಿ ಅಮಿತ್ ಶಾ ಅವರ ಸರಣಿ ಸಭೆಗಳಿದ್ದ ಕಾರಣ ಬಿಜೆಪಿ ಮುಖಂಡರು ಬೆಳಗ್ಗೆಯೇ ಆಗಮಿಸಿದ್ದರು. ಆದರೆ, ಅಮಿತ್ ಶಾ ಆಗಮನ ವಿಳಂಬವಾಗಿದ್ದರಿಂದ ರಜನಿಕಾಂತ್ ರಾಜಕೀಯ ಪ್ರವೇಶದ ಕುರಿತು ಚರ್ಚಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೂ ತಮ್ಮ ಅಭಿಪ್ರಾಯ ಹಂಚಿಕೊಂಡರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸುತ್ತಿದ್ದ ರಜನಿಕಾಂತ್ ಇದೀಗ ಹೊಸ ಪಕ್ಷ ಸ್ಥಾಪಿಸುತ್ತಿರುವುದು ಬಿಜೆಪಿ ನಾಯಕರಲ್ಲೂ ಕುತೂಹಲಕ್ಕೆ ಕಾರಣವಾಗಿತ್ತು ಎಂಬುದು ಅವರ ಮಾತುಗಳಿಂದಲೇ ವ್ಯಕ್ತವಾಗಿದೆ.
– ಕಡೆಗೂ ರಾಜಕೀಯ ಪ್ರವೇಶ ಅಧಿಕೃತಗೊಳಿಸಿದ ಸೂಪರ್‌ಸ್ಟಾರ್
– 2021ರ ತಮಿಳುನಾಡು ವಿಧಾನಸಭೆ ಚುನಾವಣೆ ವೇಳೆ ಘೋಷಣೆ
– ಜಾತಿ, ಧರ್ಮದಿಂದ ಹೊರತಾದ ಆಧ್ಯಾತ್ಮಿಕ ರಾಜಕೀಯ ಬೇಕು
– ಸದ್ಯದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕಾಗಿದೆ: ಸೂಪರ್‌ಸ್ಟಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
MUST WATCH
ಹೊಸ ಸೇರ್ಪಡೆ
Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…
Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.