ಕಾನೂನು ಪಕ್ರಿಯೆ ಬಳಿಕ ರಾಮಮಂದಿರ ನಿರ್ಧಾರ
Team Udayavani, Jan 2, 2019, 1:17 AM IST
ನವದೆಹಲಿ: ರಾಮಜನ್ಮಭೂಮಿ ವಿವಾದ ಸದ್ಯಕ್ಕೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದರಿಂದ ಆ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದ ನಂತರವೇ ರಾಮಮಂದಿರ ನಿರ್ಮಾಣದ ಬಗ್ಗೆ ಸುಗ್ರೀವಾಜ್ಞೆ ಕುರಿತು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ತಮ್ಮ ಸರ್ಕಾರದ ಮೇಲೆ ವಿಪಕ್ಷಗಳು ಈವರೆಗೆ ಮಾಡಿರುವ ಎಲ್ಲಾ ಟೀಕೆಗಳಿಗೆ, ಸರ್ಕಾರದ ಮುಂದಿರುವ ಸವಾಲುಗಳಿಗೆ ಹಾಗೂ ಅನವಶ್ಯಕವಾಗಿ ಸರ್ಕಾರದ ಮೇಲೆದ್ದ ಅನುಮಾನಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ರಾಮಮಂದಿರ ವಿಚಾರದಲ್ಲಿ ಅವರು, “”ಸುಪ್ರೀಂ ಕೋರ್ಟ್‌ನಲ್ಲಿ ರಾಮಮಂದಿರ ವ್ಯಾಜ್ಯ ಕುರಿತಂತೆ ಕೆಲವು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಪ್ರಕ್ರಿಯೆಗಳು ಸರಾಗವಾಗಿ ನಡೆಯದಿರಲು ಕಾಂಗ್ರೆಸ್ ಬೆಂಬಲಿತ ಕೆಲ ವಕೀಲರು ಅಡ್ಡಗಾಲು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆಗಳು ತಡವಾಗಿ
ಸಾಗುತ್ತಿವೆ. ಇದೆಲ್ಲಾ ಮುಗಿದ ನಂತರವಷ್ಟೇ ರಾಮ ಮಂದಿರದ ನಿರ್ಮಾಣದ ಬಗ್ಗೆ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಮಾಡಬಹುದಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ” ಎಂದಿದ್ದಾರೆ. ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿಯ ಇತರೆ ಮಿತ್ರಪಕ್ಷಗಳು ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒಕ್ಕೊರಲಿನಿಂದ ಮಾಡಿದ ಆಗ್ರಹಕ್ಕೆ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.
ಸಂದರ್ಶನದ ಪೂರ್ಣ ವಿವರ ಇಲ್ಲಿದೆ:
ಆ ದೇಶಕ್ಕೆ ಬುದ್ಧಿ ಬರೋದಿಲ್ಲ ಬಿಡಿ: ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಮೋದಿ, “”ಒಂದು ಯುದ್ಧದಿಂದ ಪಾಕಿಸ್ತಾನ ಬದಲಾಗುತ್ತದೆ ಎಂದುಕೊಂಡರೆ ಅದು ದೊಡ್ಡ ತಪ್ಪಾಗುತ್ತದೆ. ಅದು ಬುದ್ಧಿ ಕಲಿಯುವ ರಾಷ್ಟ್ರವಲ್ಲ. ಆ ದೇಶ ಸುಧಾರಣೆಯಾಗಲು ಇನ್ನೂ
ಸಾಕಷ್ಟು ಸಮಯ ಬೇಕಿದೆ” ಎಂದಿದ್ದಾರೆ. ಧರ್ಮ, ನಂಬಿಕೆಯ ವಿಚಾರವಲ್ಲ: ಇದು ಯಾವುದೇ ಧರ್ಮ ಅಥವಾ ನಂಬಿಕೆಯ ವಿಚಾರವಲ್ಲ. ಇದು ಲಿಂಗ ಸಮಾನತೆ, ಸಾಮಾಜಿಕ ಸಮಾನತೆಯ ಪ್ರತೀಕ. ತ್ರಿವಳಿ ತಲಾಖ್ ಬಗ್ಗೆ ಪ್ರಧಾನಿ ವ್ಯಕ್ತಪಡಿಸಿರುವ
ಅಭಿಪ್ರಾಯವಿದು.
ಪಾಕಿಸ್ತಾನ ಸೇರಿದಂತೆ ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ತ್ರಿವಳಿ ತಲಾಖ್ ಸಂಪ್ರದಾಯವನ್ನು ನಿಷೇಧಿಸಲಾಗಿದೆ. ಇದರ ಮಹತ್ವವನ್ನರಿತೇ ಬಿಜೆಪಿಯು ಸಂವಿಧಾನದ ಅಡಿಯಲ್ಲಿ ಇದನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ನಮ್ಮ ಸುಪ್ರೀಂ ಕೋರ್ಟ್ ಆದೇಶದ ನಂತರವೇ ನಾವು ಈ ಬಗ್ಗೆ ಕಾರ್ಯೋನ್ಮುಖರಾಗಿದ್ದೇವೆ. ಇದು ರಾಜಕೀಯ ಮಾಡುವ ವಿಚಾರವಲ್ಲ ಎಂದಿದ್ದಾರೆ ಅವರು.
ಅಮಾನ್ಯ: ತೊಂದರೆಯಾಗಿಲ್ಲ
2016ರ ನವೆಂಬರ್ 8ರಂದು ಕೈಗೊಂಡ ನೋಟು ಅಮಾನ್ಯ ನಿರ್ಧಾರದಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ನೋಟು ಅಮಾನ್ಯ ಹೊಡೆತ ನೀಡಲಿಲ್ಲ. ಕಪ್ಪು ಹಣ ಹೊಂದಿರುವವರಿಗೆ ಆ ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಂತೆ ಸೂಚಿಸಿದೆವಷ್ಟೆ. ನಮ್ಮ ಮಾತಿಗೆ ಓಗೊಟ್ಟು ಹಲವಾರು ಮಂದಿ ಸ್ವಯಂಪ್ರೇರಿತವಾಗಿ ಮುಂದೆ ಬಂದರು.
ಶಬರಿಮಲೆ ವಿವಾದದ ಬಗ್ಗೆ ಚರ್ಚೆಯಾಗಲಿ: ಇದು ಚರ್ಚೆಯ ಮೂಲಕ ಇತ್ಯರ್ಥವಾಗಬೇಕಿರುವ ವಿಚಾರ. ನಮ್ಮ ದೇಶದ ಹಲವಾರು ದೇಗುಲಗಳಲ್ಲಿ ಹಲವಾರು ಸಂಪ್ರದಾಯಗಳಿರುತ್ತವೆ. ಕೆಲವು ದೇಗುಲಗಳಲ್ಲಿ ಪುರುಷರಿಗೇ ಪ್ರವೇಶವಿಲ್ಲ. ಹಾಗೆಯೇ, ಅಯ್ಯಪ್ಪ ಸ್ವಾಮಿ ದೇಗುಲದ ವಿಚಾರಕ್ಕೆ ಬಂದಾಗ ಅಲ್ಲಿ ಮಹಿಳೆಯರಿಗೆ ಪ್ರವೇಶವಿರಲಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಮಹಿಳಾ
ನ್ಯಾಯಮೂರ್ತಿಯೊಬ್ಬರು ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ. ಒಬ್ಬ ಮಹಿಳೆಯಾಗಿ ಅವರು ಮಂಡಿಸಿರುವ ವಿಚಾರಗಳನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಬೇಕು ಮತ್ತು ಆ ಬಗ್ಗೆ ಚರ್ಚೆಯಾಗಬೇಕು.
ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ: ತೆಲಂಗಾಣ, ಮಿಜೋರಾಂನಲ್ಲಿ ಜನರು ಬಿಜೆಪಿಗೆ ಅಧಿಕಾರ ಕೊಡಲಿಲ್ಲ. ಕಾಂಗ್ರೆಸ್‌ಗೆ ಛತ್ತೀಸ್‌ಗಡದಲ್ಲಿ ಮಾತ್ರವೇ ನಿಚ್ಚಳ ಜನಾದೇಶ ಸಿಕ್ಕಿದ್ದು. ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದನ್ನು ಎಲ್ಲರೂ ಗಮನಿಸಬೇಕು. ಆದರೂ, ಈ ರಾಜ್ಯಗಳಲ್ಲಿ ನಿಚ್ಚಳ ಬಹುಮತ ಬಾರದಿರುವುದಕ್ಕೆ ಎಲ್ಲಿ ಲೋಪವಾಗಿದೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಾಗುವುದು.
ಊರ್ಜಿತ್ ಜತೆ ಅಸಮಾಧಾನವಿಲ್ಲ: ಊರ್ಜಿತ್ ಪಟೇಲ್ ರಾಜಿನಾಮೆ ಸಲ್ಲಿಸಿದ ನಂತರ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ, ಅವರು ಆರೇಳು ತಿಂಗಳುಗಳ ಹಿಂದೆಯೇ ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಆ ಹುದ್ದೆಗೆ ರಾಜಿನಾಮೆ ಸಲ್ಲಿಸಲು ನಿರ್ಧರಿಸಿದ್ದರು. ಹಲವಾರು ಬಾರಿ ನನ್ನ ಬಳಿ ಈ ಪ್ರಸ್ತಾಪ ಮಾಡಿದ್ದರಲ್ಲದೆ, ಬರಹ ರೂಪದಲ್ಲಿ ಮನವಿಯನ್ನೂ ಸಲ್ಲಿಸಿದ್ದರು. ಹಾಗಾಗಿ, ಇಲ್ಲಿ ರಾಜಕೀಯ ಒತ್ತಡ ಎಂಬ ಮಾತೇ ಇಲ್ಲ. ಆರ್‌ಬಿಐ ಗವರ್ನರ್ ಆಗಿ ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ನೋಟು ಅಮಾನ್ಯ, ಜಿಎಸ್‌ಟಿಯಂಥ ನಿರ್ಧಾರಗಳ ನಂತರ ಜನರು ತತ್ತರಿಸಿದ್ದರ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ರಾಮಮಂದಿರ
ವಿಚಾರದಲ್ಲಿ ಸುಗ್ರೀವಾಜ್ಞೆಯ ಅಗತ್ಯವಿಲ್ಲ. ಸುಪ್ರೀಂ ತೀರ್ಪು ಹೊರಬೀಳುವವರೆಗೂ ಕಾಯಬೇಕಿದೆ.
●ರಣದೀಪ್ ಸುಜೇìವಾಲ, ಕಾಂಗ್ರೆಸ್ ನಾಯಕ
ಬೆಳಗಾಗುವುದರೊಳಗೆ ವಾಪಸ್ ಬಂದುಬಿಡಿ!
“ಕಾರ್ಯಾಚರಣೆ ಸಫಲವಾಗುತ್ತೋ, ವಿಫಲವಾಗುತ್ತೋ ಅದು ಬೇಡ. ಒಟ್ಟಿನಲ್ಲಿ ಬೆಳಗಾಗುವುದರೊಳಗೆ ಭಾರತಕ್ಕೆ ಬಂದುಬಿಡಿ’. ಇದು ಪ್ರಧಾನಿ ನರೇಂದ್ರ ಮೋದಿ ಸರ್ಜಿಕಲ್ ಸ್ಟ್ರೈಕ್‌ಗೆ ಹೊರಟಿದ್ದ ಸೈನಿಕರಿಗೆ ಹೇಳಿದ್ದ ಕಿವಿಮಾತು. ಆ ನಿರ್ಧಾರ ಕೈಗೊಂಡಾಗ
ತಮಗೆ ಭಯೋತ್ಪಾದಕರ ದಮನಕ್ಕಿಂತ ನಮ್ಮ ಸೈನಿಕರ ಸುರಕ್ಷೆಯೇ ಹೆಚ್ಚು ಆತಂಕಕ್ಕೀಡು ಮಾಡಿತ್ತು ಎಂದಿರುವ
ಅವರು, ಬೇಗನೇ ಬಂದುಬಿಡುವಂತೆ ಹೇಳಿದ್ದಾಗಿ ತಿಳಿಸಿದ್ದಾರೆ.
ರಫೇಲ್ ಡೀಲ್ ಬಗ್ಗೆ ಕೆಸರೆರಚಿ ಓಡಬೇಡಿ ರಫೇಲ್ ಡೀಲ್ ಕುರಿತಂತೆ ಕೇಳಿದ ಪ್ರಶ್ನೆಗೆ ಪ್ರಧಾನಿಯವರು ಸುದೀರ್ಘವಾಗಿಯೇ ಉತ್ತರಿಸಿದರು. ಹಗರಣವಾಗಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ನಮ್ಮ ಮೇಲೆ ಕೆಸರು ಎರಚಿ ಓಡುವ ಪ್ರಯತ್ನ ಮಾಡಬೇಡಿ ಎಂದು ತಿವಿದರು. ಸುಪ್ರೀಂನಲ್ಲೇ ಈ ವಿಷಯ ಅಂತಿಮವಾದರೂ ಅವರು ಬಿಡುತ್ತಿಲ್ಲ. “”ಯಾರು ಭಾರತೀಯ ಸೇನೆಯನ್ನು ದುರ್ಬಲಗೊಳಿಸಲು ಯತ್ನಿಸಿದರೋ ಅವರಿಂದ ನಾನು ಟೀಕೆಗಳನ್ನು ಕೇಳಬೇಕಾಗಿದೆ. ನಾನು ಅವರ ಟೀಕೆಗಳಿಗೆ ಉತ್ತರಿ ಸುತ್ತಾ ಕೂರಲೇ ಅಥವಾ ನಮ್ಮ ಸೈನ್ಯದ ಸಾಮರ್ಥ ಹೆಚ್ಚಿಸುವ ಯತ್ನದಲ್ಲಿ ತೊಡಗಲೇ? ನನ್ನಲ್ಲಿ ಸತ್ಯವಿದೆ, ಪ್ರಾಮಾಣಿಕತೆಯಿದೆ. ದೇಶದ ಸುರಕ್ಷತೆ, ಸೈನಿಕರ ಸುರಕ್ಷತೆಯೇ ನನ್ನ ಮೊದಲ ಆದ್ಯತೆ. ಯಾರೆಷ್ಟೇ ಟೀಕಿಸಿದರೂ ಈ ಎರಡು ಗುರಿಗಳನ್ನು ನಾನು ಮುಟ್ಟುತ್ತೇನೆ” ಎಂದಿದ್ದಾರೆ.
ಜನತೆ vsಘಟಬಂಧನ್
ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 2019ರ ಮಹಾಚುನಾವಣೆ ಜನತೆ ಹಾಗೂ ವಿಪಕ್ಷಗಳ ಮಹಾಘಟಬಂಧನ್ ನಡುವೆ ನಡೆಯಲಿದೆ. ನಾನು ಇಲ್ಲಿ ಜನರ ಆಶೋತ್ತರಗಳ ಪ್ರತಿನಿಧಿಯಷ್ಟೇ ಎಂದು ಹೇಳಿದರು.
ಈಗಲೇ ಮಾಡಿ: ಆರೆಸ್ಸೆಸ್
2014ರ ಲೋಕಸಭೆ ಚುನಾವಣೆಗೂ ಮುನ್ನ ಭರವಸೆ ನೀಡಿದ್ದಂತೆ ಈ ಸರ್ಕಾರದ ಅವಧಿ ಮುಗಿಯುವ ಹೊತ್ತಿಗೆ ರಾಮಮಂದಿರ ನಿರ್ಮಾಣ ಮಾಡಿ ಎಂದು ಪ್ರಧಾನಿ ಮೋದಿಗೆ ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ.
ದೇಶದ ಜನರಲ್ಲಿ ಮೋದಿ ಸರ್ಕಾರವೇ ರಾಮಮಂದಿರ ಕಟ್ಟಲಿ ಎಂಬ ಆಶಯವಿದೆ ಎಂದು ಹೇಳಿದ್ದಾರೆ. ಈ ಮಧ್ಯೆ ಮೋದಿ ಪಾಲಿಗೆ ರಾಮನಿಗಿಂತ ದೇಶದ ಕಾನೂನು ಅಷ್ಟೇನೂ ದೊಡ್ಡದಲ್ಲ ಎಂದು ಶಿವಸೇನೆ ಕೇಂದ್ರ ಸರ್ಕಾರದ ಕಾಲೆಳೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.