ಜ|ರಾವತ್ ಅದ್ಭುತ ಜೀವನ, ಅಸಾಮಾನ್ಯ ಹೋರಾಟದ ಕಥನ
ಅಪ್ರತಿಮ ಯೋಧ, ಧೀರೋದಾತ್ತ ನಾಯಕ
Team Udayavani, Dec 9, 2021, 6:20 AM IST
ಭಾರತದ ಮೂರೂ ಸೇನಾಪಡೆಗಳ ಮೊದಲ ಮುಖ್ಯಸ್ಥ ಜ|ಬಿಪಿನ್ ರಾವತ್ ಭಾರತೀಯ ಸೇನೆ ಕಂಡ ವಿಶಿಷ್ಟ ನಾಯಕ. ಅವರ ಜೀವನ ಅನಿರೀಕ್ಷಿತವಾಗಿ ಮುಗಿದು ಹೋಗಿದೆ. ಅಂತ್ಯ ಎಷ್ಟು ಅನೂಹ್ಯವೋ, ಅವರ ಬದುಕೂ ಅಷ್ಟೇ ಅನೂಹ್ಯ. ಅತ್ಯುನ್ನತ ಶಿಕ್ಷಣ ಪಡೆದು ಮೂರೂ ಸೇನಾಪಡೆಗಳ ಅತ್ಯುನ್ನತ ಸ್ಥಾನಕ್ಕೆ ಏರಿದ ಅವಧಿಯಲ್ಲಿ ನಡೆದ ಸಾಹಸಗಳು, ಸಾಧನೆಗಳು ಅಸಾಮಾನ್ಯ. ಅವರ ಹುಟ್ಟು, ಬದುಕು, ಸಾಧನೆ, ಸಾಹಸಗಳ ಚಿತ್ರಣ ಇಲ್ಲಿದೆ.
ಉತ್ತರಾಖಂಡದಲ್ಲಿ
ಜನನ, ಅತ್ಯುನ್ನತ ಶಿಕ್ಷಣ
ಉತ್ತರಾಖಂಡ ರಾಜ್ಯದ ಪೌರಿ ಗರ್ವಾಲ್ ಜಿಲ್ಲೆಯ ಪೌರಿಯಲ್ಲಿ 1958, ಮಾ.16ರಂದು ಬಿಪಿನ್ ರಾವತ್ ಜನಿಸಿದರು. ತಂದೆ ಲಕ್ಷ್ಮಣ್ ಸಿಂಗ್ ರಾವತ್. ಬಿಪಿನ್ ಉನ್ನತ ಶಿಕ್ಷಣ ಪಡೆದಿದ್ದರು. ಬಾಲ್ಯಶಿಕ್ಷಣ ಡೆಹ್ರಾಡೂನಿನ ಕೇಂಬ್ರಿಯನ್ ಹಾಲ್ ಮತ್ತು ಸೇಂಟ್ ಎಡ್ವರ್ಡ್ಸ್ ಶಾಲೆಯಲ್ಲಿ ನಡೆಯಿತು. ಮಹಾ ರಾ ಷ್ಟ್ರದ ಪುಣೆ ಯ ಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಬಿಎಸ್ಸಿ ಪದವಿ ಪಡೆದರು. ಅಮೆರಿಕದ ಕನ್ಸಾಸ್‌ನಲ್ಲಿರುವ ಆರ್ಮಿ ಕಮ್ಯಾಂಡ್ ಆ್ಯಂಡ್ ಜನರಲ್ ಸ್ಟಾಫ್ ಕಾಲೇಜ್‌ನಲ್ಲಿ ಹೈಯರ್ ಕಮ್ಯಾಂಡ್ ಕೋರ್ಸ್ ಮುಗಿಸಿದರು. ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜ್‌ನಲ್ಲಿ ಎಂಫಿಲ್, ಚೌಧರಿ ಚರಣ್ ಸಿಂಗ್ ವಿವಿಯಿಂದ ಪಿಎಚ್‌ಡಿ ಪಡೆದರು.
ನೇರ ವಾಗ್ಧಾಳಿ
ರಾವತ್‌ರದ್ದು ವಿಭಿನ್ನ ವ್ಯಕ್ತಿತ್ವ. ಸಾಮಾನ್ಯವಾಗಿ ಮಹತ್ವದ ಹುದ್ದೆಯಲ್ಲಿರುವವರು ಮಾತಿಗೆ ಬಹಳ ಕಡಿಮೆ ಆದ್ಯತೆ ನೀಡುತ್ತಾರೆ. ರಾವತ್ ಮೂರೂ ಪಡೆಗಳ ಮುಖ್ಯಸ್ಥರಾದ ನಂತರ ರಕ್ಷಣೆಗೆ ಸಂಬಂಧಪಟ್ಟ ಹಲವು ವಿಷಯ ಗಳಿಗೆ ಸಂಬಂಧಿಸಿದಂತೆ ಕಟು ಪ್ರತಿ ಕ್ರಿಯೆ ನೀಡುತ್ತಿದ್ದರು. ಮಾತ್ರವಲ್ಲ ಚೀನಾ, ಪಾಕ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರು.
ತಂದೆಯನ್ನೇ ಮೀರಿ ನಿಂತರು
ಜ| ಬಿಪಿನ್ ರಾವತ್ ಅಕ್ಷರಶಃ ತಂದೆಯ ಹಾದಿಯನ್ನೇ ಅನು ಸರಿಸಿದರು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ವಂಶ ಪರಂಪರೆಯನ್ನು ಪಾಲಿಸಿದರು. ಅವರ ಕುಟುಂಬ ಹಲವು ತಲೆಮಾರುಗಳಿಂದಲೇ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ 11 ಗೋರ್ಖಾ ರೈಫಲ್ಸ್‌ನ 5ನೇ ಬೆಟಾಲಿಯನ್ ಮೂಲಕ ತಮ್ಮ ಸೇನಾಜೀವನವನ್ನು ಆರಂಭಿಸಿದ್ದರು. ವಿಶೇಷವೆಂದರೆ ಇದೇ ಘಟಕದ ಮೂಲಕ ಬಿಪಿನ್ ರಾವತ್ ಕೂಡ ಸೇವೆಯನ್ನು ಆರಂಭಿಸಿದರು. ತಂದೆ ಲಕ್ಷ್ಮಣ್ ಸಿಂಗ್ ಭೂಸೇನೆಯ ಎರಡನೇ ಅತ್ಯುನ್ನತ ಪದವಿಯಾದ ಲೆಫ್ಟಿನೆಂಟ್ ಜನರಲ್ ಸ್ಥಾನಕ್ಕೇರಿದ್ದರು. ಬಿಪಿನ್ ಸೇನೆ ಸೇರಿದ್ದು 1978, ಡಿ.16ರಂದು. ಸೇನೆಯಲ್ಲಿ ಒಟ್ಟಾರೆ 43 ವರ್ಷಗಳ ದೀರ್ಘಯಾನ ಅವರದ್ದು. ಈ ಅವಧಿಯಲ್ಲಿ ಅವರು ಯಾರೂ ಏರದ ಸ್ಥಾನಕ್ಕೇರಿದರು.
ಇದನ್ನೂ ಓದಿ:ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ
ರಕ್ಷಣ ಪಡೆಗಳ ಮುಖ್ಯಸ್ಥ:ಸೇನಾ ನಿಯಮಗಳಿಗೆ ತಿದ್ದುಪಡಿ
ಗೋರ್ಖಾ ಬ್ರಿಗೇಡ್‌ನಿಂದ ಮೇಲೇರಿ ಭೂಸೇನಾ ಮುಖ್ಯಸ್ಥರಾದ ಮೂರನೇ ವ್ಯಕ್ತಿ ಬಿಪಿನ್ ರಾವತ್. ದೇಶದ ಮೂರೂ ಸೇನಾಪಡೆಗಳ ಮೊದಲ ಮುಖ್ಯಸ್ಥ. ಭಾರತೀಯ ಸೇನೆಯನ್ನು ಏಕತ್ರಗೊಳಿಸುವ ಹಾಗೂ ಮೂರೂ ಸೇನೆಗಳ ಬಗ್ಗೆ ಒಂದೇ ಕೇಂದ್ರದಿಂದ ಮಾಹಿತಿ ಪಡೆಯಲು ಈ ಹುದ್ದೆಯನ್ನು ಸೃಷ್ಟಿಸಲಾಯಿತು. ಇದನ್ನು ರಕ್ಷಣಾ ಪಡೆಗಳ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಎಂದು ಕರೆಯಲಾಗಿದೆ. ಇದು ಮೊದಲ ಹುದ್ದೆಯಾಗಿದ್ದರಿಂದ ಸೇನಾ ನಿಯಮಗಳಿಗೂ ತುಸು ಬದಲಾವಣೆ ಮಾಡಲಾಯಿತು. ಸೇನೆಯಲ್ಲಿ 62 ವರ್ಷಗಳಿಗೆ ನಿವೃತ್ತಿ ನೀಡಲಾಗುತ್ತದೆ. ಇದನ್ನು 65 ವರ್ಷಗಳಿಗೇರಿಸಲಾಯಿತು. ಇದರಿಂದ 2020, ಜ|1ರಿಂದ ಮೂರೂ ಪಡೆಗಳ ಮುಖ್ಯಸ್ಥರಾಗಿ ಕಾರ್ಯಾಚರಣೆ ಆರಂಭಿಸಿದರು.
ಹಲವು ಹುದ್ದೆಗಳು, ಹಲವು ಪದಕಗಳು
ಬ್ರಿಗೇಡ್ ಕಮ್ಯಾಂಡರ್, ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್, ಸೇನಾ ಕಾರ್ಯಾಚರಣೆಗಳ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ (ಗ್ರೇಡ್ 2), ಕಿರಿಯರ ಕಮ್ಯಾಂಡ್ ವಿಂಗ್‌ನಲ್ಲಿ ಹಿರಿಯ ಸಲಹಾಧಿಕಾರಿ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. 2016, ಡಿ.31ರಂದು ಭೂಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಅವರ ಅಪೂರ್ವ ಸೇವೆಯನ್ನು ಪರಿಗಣಿಸಿ ಪರಮವಿಶಿಷ್ಟ ಸೇವಾ, ಉತ್ತಮ ಯುದ್ಧ ಸೇವಾ, ಅತಿ ವಿಶಿಷ್ಟ ಸೇವಾ, ವಿಶಿಷ್ಟ ಸೇವಾ, ಯುದ್ಧ ಸೇವಾ, ಸೇನಾ ಪದಕಗಳನ್ನು ನೀಡಲಾಗಿದೆ.
ಶತ್ರುಗಳ ವಿರುದ್ಧ ಸದಾ ಕಟ್ಟೆಚ್ಚರ
– ತಮ್ಮ ಅಪೂರ್ವ ಸೇವಾವಧಿಯಲ್ಲಿ ಜನರಲ್ ಬಿಪಿನ್ ರಾವತ್ ಭಾರೀ ಸೇನಾ ಸಾಹಸಗಳಿಗೆ ಸಾಕ್ಷಿಯಾಗಿದ್ದಾರೆ. ಅತಿಮುಖ್ಯವಾಗಿ ಅವರು ಉಗ್ರರ ಒಳನುಸುಳುವಿಕೆಯನ್ನು ತಡೆಯಲು ಮುಖ್ಯ ಪಾತ್ರವಹಿಸಿದ್ದಾರೆ. ಮಾತ್ರವಲ್ಲ ಉನ್ನತ ಪರ್ವತಪ್ರದೇಶಗಳಲ್ಲಿ ನಿಂತು ರಣವ್ಯೂಹವನ್ನು ರಚಿಸಿ, ನಿರ್ವಹಿಸುವುದರಲ್ಲಿ ಅಪ್ರತಿಮರಾಗಿದ್ದರು.
– ಸಮೊರಾಂಗ್ ಚು ಕಣಿವೆ ಭಾರತದ ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆ ಮತ್ತು ಟಿಬೆಟ್‌ನ ಕೋನಾ ಎಂಬ ಪ್ರದೇಶದಲ್ಲಿ ಬರುವ ಭಾರತ-ಚೀನಾದ ಗಡಿಭಾಗ. ಇದು ರಕ್ಷಣಾ ದೃಷ್ಟಿಯಿಂದ ಭಾರೀ ಮಹತ್ವ ಪಡೆದಿದೆ. ಚೀನಾ ಸೇನೆ 1987ರಲ್ಲಿ ಈ ಭಾಗದಲ್ಲಿ ಮುನ್ನುಗ್ಗಿ ದಾಳಿ ಮಾಡಲು ಬಂದಾಗ ರಾವತ್ ಇದ್ದ ಬೆಟಾಲಿಯನ್ ಅದಕ್ಕೆ ಎದೆಯೊಡ್ಡಿ ನಿಂತಿತ್ತು. 1962ರಲ್ಲಿ ನಡೆದ ಭಾರತ-ಚೀನಾ ಯುದ್ಧಾನಂತರ, ಮೆಕ್‌ವೊàಹನ್ ಗಡಿಯಲ್ಲಿ ನಡೆದ ಪ್ರಮುಖ ಸಂಘರ್ಷವಿದು.
– 2015ರಲ್ಲಿ ಭಾರತೀಯ ಸೇನೆಯ 18 ಯೋಧರನ್ನು ಮಣಿಪುರ ಉಗ್ರರು ಕೊಂದಿದ್ದರು. ಇದಕ್ಕೆ ರಾವತ್ ನೇತೃತ್ವದಲ್ಲಿ ಭಾರತೀಯ ಸೇನೆ ಭರ್ಜರಿಯಾಗಿಯೇ ಪ್ರತಿಕ್ರಿಯಿಸಿತು. ಮಾಯೆನ್ಮಾರ್ ದೇಶದ ಒಳನುಗ್ಗಿ ಅಲ್ಲಿ ಅವಿತುಕೊಂಡಿದ್ದ ಉಗ್ರರನ್ನು ನಾಶ ಮಾಡಿತು.
– 2016, ಸೆ.28ರಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಭಾರತದೊಳಗೆ ಉಗ್ರಕೃತ್ಯವೆಸಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿಕೊಳ್ಳುವುದು ಪಾಕ್ ಉಗ್ರರ ಎಂದಿನ ಚಾಳಿ. ಇದನ್ನು ಸರಿಯಾಗಿ ಅರಿತಿದ್ದ ಭಾರತೀಯ ಸೇನೆ ರಾತ್ರೋರಾತ್ರಿ ಪಿಒಕೆಯ ಆಯಕಟ್ಟಿನ ಭಾಗಗಳ ಮೇಲೆ ದಾಳಿ ಮಾಡಿ ಭಾರೀ ಸಂಖ್ಯೆಯಲ್ಲಿ ಉಗ್ರರನ್ನು ಹೊಡೆದು ಹಾಕಿತು. ಈ ದಾಳಿಯನ್ನು ನವದೆಹಲಿಯಲ್ಲಿ ಕುಳಿತು ಜನರಲ್ ರಾವತ್ ನಿರ್ವಹಿಸಿದ್ದರು ಎಂದು ಮೂಲಗಳು ಹೇಳಿವೆ.
– 2008ಲ್ಲಿ ಕಾಂಗೊ ಗಣರಾಜ್ಯದಲ್ಲಿ ಭಾರೀ ಆಂತರಿಕ ಗಲಭೆಯೆದ್ದಿತ್ತು. ಜನ ಅಲ್ಲಿನ ಸೇನೆಯ ವಿರುದ್ಧ ಕೆಂಡಾಮಂಡಲವಾಗಿದ್ದರು. ಉತ್ತರ ಕಿವುವಿನ ರಾಜಧಾನಿ ಗೊಮಾದಲ್ಲಿ ಪರಿಸ್ಥಿತಿ ನಿಯಂತ್ರಣ ಮೀರಿತ್ತು. ಈ ವೇಳೆ ವಿಶ್ವಸಂಸ್ಥೆಯ ಬಹುರಾಷ್ಟ್ರೀಯ ಪಡೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ ಗೊಮಾಗೆ ತೆರಳಿದ್ದರು. ಈ ಪರಿಸ್ಥಿತಿಯಲ್ಲಿ ಜನರೂ ವಿಶ್ವಸಂಸ್ಥೆಯ ಶಾಂತಿಪಾಲನೆ ಪಡೆಗಳ ವಿರುದ್ಧ ರೊಚ್ಚಿಗೆದ್ದಿದ್ದರು. ಆಗ ಉಗ್ರರನ್ನು ನಿಗ್ರಹಿಸುವುದರ ಜೊತೆಜೊತೆಗೇ ಬೇಸತ್ತಿದ ಜನರಿಗೆ ರಾವತ್ ಸಾಂತ್ವನ ಹೇಳಿದರು. ಮಾತ್ರವಲ್ಲ ಅವರಿಗೆಲ್ಲ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲು ವ್ಯವಸ್ಥೆ ಮಾಡಿದರು. ಇದು ಆಗ ಭಾರೀ ಯಶಸ್ಸು ಪಡೆದಿತ್ತು.
ಬಿಪಿನ್ ರಾವತ್ ನುಡಿಗಳು
ಸುಲಭವಾಗಿ ಸ್ನೇಹಿತರನ್ನು ಮಾಡಿಕೊಂಡುಬಿಡಬಹುದು. ಆದರೆ ನಮ್ಮನ್ನು ಸದಾ ಎಚ್ಚರದಲ್ಲಿ ಇರಿಸುವವರು ನಮ್ಮ ವೈರಿಗಳೇ.
ಪಾಕಿಸ್ತಾನದೊಂದಿಗೆ ಚೀನಾದ ಪಾಲುದಾರಿಕೆ ಮತ್ತು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅದರ ನಿಲುವನ್ನು ಗಮನಿಸಿದರೆ ಚೀನಾದ ನಿಲುವನ್ನು ಭಾರತ ವಿರೋಧಿ ನಂಟೆಂದು ಸ್ಪಷ್ಟವಾಗಿ ವಿವರಿಸಬಹುದು.
ಚೀನಾಕ್ಕೆ ವಿಶ್ವದಲ್ಲಿ ಪ್ರಸಿದ್ಧವಾಗಲೆಂದು ಹಣ ಮತ್ತು ಆರ್ಥಿಕತೆಯನ್ನು ಬಳಸಿಕೊಳ್ಳುವ ಹವ್ಯಾಸವಿದೆ. ಆದರೆ ನಾವು ಪ್ರಸಿದ್ಧರಾಗಲು ಪ್ರಧಾನಿಯವರ ಸಾಗರ್ ಮಿಷನ್(ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಸುರಕ್ಷತೆ ಮತ್ತು ಅಭಿವೃದ್ಧಿ)ನೊಂದಿಗೆ ಮುಂದುವರಿಯಬೇಕು.
ಪಾಕಿಸ್ತಾನದವರು ನಮ್ಮ ಆಸ್ತಿಗೆ ಏನಾದರೂ ಹಾನಿ ಮಾಡಲು ಪ್ರಯತ್ನಿಸಿದರೆ ಅದಕ್ಕೆ ನಮ್ಮ ಸಶಸ್ತ್ರ ಪಡೆಗಳ ಪ್ರತಿಕ್ರಿಯೆ ವಿಭಿನ್ನವಾಗಿರಲಿದೆ. ನಮ್ಮಲ್ಲಿ ರಾಜಕೀಯ ಇಚ್ಛಾಶಕ್ತಿಯಿದೆ ಮತ್ತು ನಮ್ಮ ಸಶಸ್ತ್ರ ಪಡೆಯೂ ಸಜ್ಜಾಗಿದೆ.
ಪಾಕಿಸ್ತಾನವನ್ನು ನಾವು ನಿಯಂತ್ರಿಸುವ ಅವಶ್ಯಕತೆಯೇ ಇಲ್ಲ. ಅವರಾಗಿ ಅವರೇ ನಿಯಂತ್ರಣ ತಪ್ಪಿ ಹೋಗುತ್ತಿದ್ದಾರೆ. ನಾವು ಏನೂ ಪ್ರಕ್ರಿಯೆ ನಡೆಸುವುದೇ ಬೇಡ. ಅವರು ಅದಾಗಲೇ ಆತ್ಮಾಹುತಿ ಹಂತದಲ್ಲಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಇಷ್ಟು ಬೇಗ ವಶಕ್ಕೆ ಪಡೆದುಕೊಳ್ಳುತ್ತಾರೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಭವಿಷ್ಯವೇನೆಂದು ಯಾರಿಗೂ ಗೊತ್ತಿಲ್ಲ. ಯಾರೂ ನಿರೀಕ್ಷಿಸಲಾಗದಷ್ಟು ಪ್ರಕ್ಷುಬ್ಧತೆ ಮತ್ತು ಬದಲಾವಣೆಗಳು ಇದ್ದರೂ ಇರಬಹುದು.
ಭಾರತವು ಸಾಗರೋತ್ತರ ಹಿತಾಸಕ್ತಿಗಳಿಗೆ ಭದ್ರತೆ ನೀಡಲು ಅನುಕೂಲಕರ ಕಾರ್ಯತಂತ್ರಗಳನ್ನು ರಚಿಸುವಲ್ಲಿ ಚೀನಾದಿಂದ ಭಾರೀ ಸ್ಪರ್ಧೆಯನ್ನು ಎದುರಿಸುತ್ತದೆ.
ಭಾರತದ ಸಶಸ್ತ್ರ ಪಡೆಯು ದೇಶದ ಎಲ್ಲ ಗಡಿ ಭಾಗದಲ್ಲಿ ಮತ್ತು ಕರಾವಳಿ ಭಾಗಗಳಲ್ಲಿ ಸದಾ ಕಾಲ ಎಚ್ಚರಿಕೆಯಿಂದಿರುವಂತೆ ಚೀನಾ ಮತ್ತು ಪಾಕಿಸ್ತಾನದ ಮಹತ್ವಾಕಾಂಕ್ಷೆಗಳು ಮಾಡುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.