ಹಿಜಾಬ್‌ಗೆ ಅಡ್ಡಿಯಿಲ್ಲ; ಆದರೆ ಶಾಲೆಗಳಲ್ಲಿ ನಿಯಮದ ತೊಂದರೆ: ಸುಪ್ರೀಂ ಕೋರ್ಟ್
ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿರುವ ಅರ್ಜಿಗಳ ವಿಚಾರಣೆ
Team Udayavani, Sep 8, 2022, 6:55 AM IST
ನವದೆಹಲಿ: ಹಿಜಾಬ್ ಧರಿಸಬಾರದು ಎಂದು ಯಾರು ನಿಷೇಧ ಹೇರಿಲ್ಲ. ಆದರೆ ಶಾಲೆಗಳಲ್ಲಿ ಅದನ್ನು ಧರಿಸಲು ನಿಯಮ ಅಡ್ಡಿಯಾಗಿದೆ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಸಂವಿಧಾನದ 19ನೇ ವಿಧಿಯ ಅನ್ವಯ ಹಿಜಾಬ್ ಅನ್ನು ಧರಿಸುವುದು ಮೂಲಭೂತ ಹಕ್ಕು ಎಂದು ಅರ್ಜಿದಾರರು ವಾದಿಸುವುದಿದ್ದರೆ ಬಟ್ಟೆಗಳನ್ನು ಧರಿಸದೇ ಇರುವುದೂ (ರೈಟ್ ಟು ಅನ್‌ಡ್ರೆಸ್) ಕೂಡ ಅದಕ್ಕೆ ಸಮನಾಗಿಯೇ ಇರುತ್ತದೆ ಎಂದು ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಹಿಜಾಬ್ ಧರಿಸುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಕೆ ಮಾಡಲಾಗಿರುವ 23 ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಖ್ಯಾತ ನ್ಯಾಯವಾದಿ ದೇವದತ್ತ ಕಾಮತ್ ಅವರು ಪ್ರಕರಣವನ್ನು ಐವರು ಸದಸ್ಯರು ಇರುವ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಎಂದು ಅರಿಕೆ ಮಾಡಿಕೊಂಡರು. ಸಂವಿಧಾನದ 19, 21 ಅಥವಾ 25ರ ಅನ್ವಯ ವಿದ್ಯಾರ್ಥಿನಿ ಹಿಜಾಬ್ ಅನ್ನು ಧರಿಸಲು ನಿರ್ಧರಿಸುತ್ತಾಳೆ. ಈ ಸಂದರ್ಭದಲ್ಲಿ ಸರ್ಕಾರ ಅದರ ಮೇಲೆ ನಿಷೇಧ ಹೇರಿದ್ದೇ ಆದಲ್ಲಿ ಅದು ಆಕೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದರು.
ಶಾಲೆಗಳಲ್ಲಿ ನಿಯಮ ಅಡ್ಡಿ: ಕಾಮತ್ ಅವರ ವಾದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಹೇಮಂತ್ ಗುಪ್ತಾ “ಹಿಜಾಬ್ ಅನ್ನು ಧರಿಸಬಾರದು ಎಂದು ಯಾರೂ ಅಡ್ಡಿ ಮಾಡಿಲ್ಲ. ಅದನ್ನು ಯಾರು ಎಲ್ಲಿ ಬೇಕಾದರೂ ಧರಿಸಬಹುದು. ಆದರೆ, ಶಾಲೆಗಳಲ್ಲಿ ಮಾತ್ರ ಅದನ್ನು ಧರಿಸಬಾರದು ಎಂಬ ನಿಯಮ ಇದೆ. ಅದರ ಬಗ್ಗೆ ಮಾತ್ರ ನ್ಯಾಯಪೀಠ ಪರಿಶೀಲಿಸುತ್ತದೆ’ ಎಂದರು.
ಅದಕ್ಕೆ ವಿನಮ್ರರಾಗಿ ಉತ್ತರಿಸಿದ ನ್ಯಾಯವಾದಿ ದೇವದತ್ತ ಕಾಮತ್ ಅವರು, ಸಂವಿಧಾನದ 145 (3)ರ ಅನ್ವಯ ಪ್ರಕರಣವನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವಹಿಸಬೇಕು. ಏಕೆಂದರೆ ಈ ವಿಚಾರದಲ್ಲಿ ಮೂಲಭೂತ ಹಕ್ಕುಗಳ ವಿಚಾರ ಇದೆ. ಹೀಗಾಗಿ, ವಿಚಾರಣೆಗೆ ಐವರು ಸದಸ್ಯರು ಇರುವ ನ್ಯಾಯಪೀಠವೇ ಯೋಗ್ಯವೆಂದರು. ಈ ಪೀಠ ನಾಗರಿಕರಿಗೆ ಸಂವಿಧಾನದ 19, 21 ಅಥವಾ 25ರ ಅನ್ವಯ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಅವಕಾಶ ಮಾಡಿಕೊಡುವಲ್ಲಿ ಸರ್ಕಾರ ಎಡವಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದ 19ನೇ ವಿಧಿಯ ಅನ್ವಯ ಇರುವ ವಾಕ್‌ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿಯಲ್ಲಿ ಸೂಕ್ತ ರೀತಿಯಲ್ಲಿ ವಸ್ತ್ರಗಳನ್ನು ಧರಿಸುವ ಹಕ್ಕು ಕೂಡ ಇದೆ ಎಂದು ಕಾಮತ್ ಪ್ರತಿಪಾದಿಸಿದರು. ಅರ್ಜಿದಾರರು ಶಾಲೆಗಳಲ್ಲಿ ಸಮವಸ್ತ್ರ ಧರಿಸಲು ವಿರೋಧ ವ್ಯಕ್ತಪಡಿಸಲಿಲ್ಲ ಎಂದೂ ಅವರು ಹೇಳಿಕೊಂಡರು.
ಅದಕ್ಕೆ ಉತ್ತರಿಸಿದ ನ್ಯಾ.ಹೇಮಂತ್ ಗುಪ್ತಾ “ನಿಮ್ಮ ವಾದವನ್ನು ಎಲ್ಲೆಲ್ಲಿಗೋ ತೆಗೆದುಕೊಂಡು ಹೋಗಬೇಡಿ. ವಸ್ತ್ರ ಧರಿಸುವ ಹಕ್ಕು ಎಂದರೆ ವಸ್ತ್ರವನ್ನು ಧರಿಸದೇ ಇರುವುದು (ರೈಟ್ ಟು ಅನ್‌ಡ್ರೆಸ್) ಎಂಬ ಅಂಶವೂ ಇದೆಯೇ’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯವಾದಿ ಕಾಮತ್ “ಶಾಲೆಗಳಲ್ಲಿ ಯಾರೂ ವಸ್ತ್ರ ಧರಿಸದೇ ಇರುವುದಿಲ್ಲ. ಸಂವಿಧಾನದ 19ನೇ ವಿಧಿಯ ಅನ್ವಯ ಈ ದಿರಿಸು (ಹಿಜಾಬ್) ಧರಿಸಲು ಅವಕಾಶ ನೀಡದಂತೆ ನಿರ್ಬಂಧ ಇದೆಯೇ?’ ಎಂದು ಪ್ರಶ್ನಿಸಿದರು. “ನಾನು ಈ ವಿಚಾರದಲ್ಲಿ ಸುಖಾ ಸುಮ್ಮನೆ ವಾದಿಸುತ್ತಿಲ್ಲ’ ಎಂದರು.
ಅದಕ್ಕೆ ಉತ್ತರಿಸಿದ ನ್ಯಾ.ಗುಪ್ತಾ, ಹಿಜಾಬ್ ಧರಿಸಲು ಯಾರ ಅಡ್ಡಿಯೂ ಇಲ್ಲ. ಆದರೆ ಶಾಲೆಗಳಲ್ಲಿ ನಿಯಮ ಇದೆ ಇದೆ ಎಂದರು. ಅದಕ್ಕೆ ಉತ್ತರಿಸಿದ ಕಾಮತ್ ಅವರು “ಸಂವಿಧಾನದ ಅನ್ವಯ ನೈತಿಕತೆ, ಸಮಾನತೆ…’ ಎಂದರು. ನ್ಯಾ.ಸಂತೋಷ್ ಗುಪ್ತಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಾದವನ್ನು ಆಲಿಸಿ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.