ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್‌ಗೆ ಜೈಲು
Team Udayavani, Apr 6, 2018, 6:00 AM IST
ಜೋಧಪುರ: ಇಪ್ಪತ್ತು ವರ್ಷಗಳ ಹಿಂದೆ ಜೋಧಪುರದಲ್ಲಿ ಸ್ಥಳೀಯ ಬಿಶ್ನೋಯ್ ಜಾತಿಯವರ ಆರಾಧ್ಯದೈವ ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣ ಸಂಬಂಧ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೋಧಪುರ ನ್ಯಾಯಾ ಲಯ ಗುರುವಾರ 5 ವರ್ಷಗಳ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಇದೇ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಬಾಲಿವುಡ್‌ನ ಇತರ ಕಲಾವಿದರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ, ಸ್ಥಳೀಯ ಉದ್ಯಮಿ ದುಶ್ಯಂತ್ ಸಿಂಗ್‌ರನ್ನು ಖುಲಾಸೆಗೊಳಿಸಲಾಗಿದೆ. ಇದೇ ವೇಳೆ, ಸಲ್ಮಾನ್ ಪರ ವಕೀಲರು ಜೋಧಪುರ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಬೆಳಗ್ಗೆ ಅರ್ಜಿ ವಿಚಾರಣೆ ನಡೆಯಲಿದೆ.
ಜೈಲು ವಾಸ ಇದೇ ಮೊದಲಲ್ಲ: ವನ್ಯಜೀವಿ ಸಂರಕ್ಷಣಾ ಕಾಯ್ದೆಯ 9/51 ಸೆಕ್ಷನ್‌ನ ಅನ್ವಯ ಸಲ್ಮಾನ್ ಖಾನ್ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಜಾರಿಯಾದ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಅವರನ್ನು ಜೋಧಪುರದ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿ ಸಲ್ಮಾನ್ ಖಾನ್, ಜೋಧಪುರದ ಕೇಂದ್ರ ಕಾರಾಗೃಹದಲ್ಲಿ 1998, 2006 ಹಾಗೂ 2007ರಲ್ಲಿ ಒಟ್ಟು 18 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದರು.
ಏನಿದು ಪ್ರಕರಣ?: 1998ರಲ್ಲಿ “ಹಮ್ ಸಾಥ್ ಸಾಥ್ ಹೈ’ ಹಿಂದಿ ಚಿತ್ರದ ಶೂಟಿಂಗ್‌ಗಾಗಿ ಜೋಧಪುರಕ್ಕೆ ಆಗಮಿಸಿದ್ದಾಗ, ಅ. 1ರ ರಾತ್ರಿ ಕಂಕಣಿ ಎಂಬ ಹಳ್ಳಿಯ ಸುತ್ತಲಿನ ಅರಣ್ಯ ಪ್ರದೇಶಕ್ಕೆ ತೆರಳಿ, ಅಲ್ಲಿ ಎರಡು ಕೃಷ್ಣಮೃಗಳನ್ನು ಬೇಟೆಯಾಡಿದ್ದರೆಂಬ ಆರೋಪ ಅವರ ಮೇಲಿತ್ತು.
ಸಂಭ್ರಮಾಚರಣೆ: ಸಲ್ಮಾನ್ ಖಾನ್ ವಿರುದ್ಧ 20 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ್ದ ಜೋಧಪುರದ ಅಖೀಲ ಭಾರತೀಯ ಬಿಶ್ನೋಯ್ ಮಹಾಸಭಾ ಗುರುವಾರ ತೀರ್ಪು ಬರುತ್ತಿದ್ದಂತೆಯೇ ಸಂಭ್ರಮಿಸಿತು. ಜಾತಿಯ ಮಂದಿಯೆಲ್ಲ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಇದೇ ವೇಳೆ, ಪ್ರಾಣಿ ಹಕ್ಕುಗಳ ಸಂಘಟನೆಗಳೂ ತೀರ್ಪನ್ನು ಸ್ವಾಗತಿಸಿವೆ. ಇನ್ನೊಂದೆಡೆ, ಬಾಲಿವುಡ್ ತಾರೆಯರು ಸಲ್ಮಾನ್ ಬೆನ್ನಿಗೆ ನಿಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ “ಸೇವ್ ಸಲ್ಮಾನ್’ ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ.
ತೀರ್ಪಿನ ಪ್ರತಿ ನೋಡಿ ಅಚ್ಚರಿಯಾಯಿತು
ಜೋಧಪುರ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್ ಪರ ವಕೀಲ ಆನಂದ್ ದೇಸಾಯಿ, “ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ, ತೀರ್ಪಿನ ಪ್ರತಿಯನ್ನು ಓದುವಾಗ ಅಚ್ಚರಿಯಾಗಿದೆ. ಈ ಹಿಂದೆ ಇಂಥದ್ದೇ ಎರಡು ಪ್ರಕರಣಗಳಲ್ಲಿ ಸಲ್ಮಾನ್ ಖಾನ್‌ರನ್ನು ರಾಜಸ್ಥಾನ ಹೈಕೋರ್ಟ್ ಖುಲಾಸೆ ಮಾಡಿತ್ತು. ಅದರಲ್ಲಿ ಅಕ್ರಮ ಶಸ್ತ್ರಾಸ್ತ್ರ ಪ್ರಕರಣವೂ ಒಂದು. ಆ ಪ್ರಕರಣಗಳಲ್ಲಿನ ತನಿಖಾ ವರದಿ ಹಾಗೂ ಇನ್ನಿತರ ಅಂಶಗಳು ಇದೇ ಪ್ರಕರಣದ ತನಿಖಾ ವರದಿ ಹಾಗೂ ಅಂಶಗಳನ್ನು ಹೋಲುತ್ತವೆ. ಹಾಗಿರುವಾಗ ಆ ಪ್ರಕರಣಗಳಲ್ಲಿ ಸಿಕ್ಕ ಖುಲಾಸೆ ಈ ಪ್ರಕರಣದಲ್ಲಿ ಏಕೆ ಸಿಗಲಿಲ್ಲ ಎಂಬುದೇ ಪ್ರಶ್ನೆಯಾಗಿದೆ’ ಎಂದರು. ಪ್ರಕರಣದ ಇನ್ನಿತರ ಐವರು ಆರೋಪಿಗಳನ್ನು ಖುಲಾಸೆಗೊಳಿಸಿರುವುದೂ ಅಚ್ಚರಿ ತಂದಿದ್ದು, ಶುಕ್ರವಾರ ಬೆಳಗ್ಗೆ ಸೆಷನ್ಸ್ ಕೋರ್ಟಿನಲ್ಲಿ ನಡೆಯಲಿರುವ ಸಲ್ಮಾನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ವಿಚಾರವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಯಾವುದು?
1998ರಲ್ಲಿ ಜೋಧಪುರದ ಕಂಕಣಿಯಲ್ಲಿ 2 ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಪ್ರಕರಣ
ಆರೋಪಿಗಳು ಯಾರ್ಯಾರು?
ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ, ಸ್ಥಳೀಯ ಉದ್ಯಮಿ ದುಶ್ಯಂತ್ ಸಿಂಗ್
ದೋಷಿ ಎಂದು ಸಾಬೀತು:
ಸಲ್ಮಾನ್ ಖಾನ್
ಶಿಕ್ಷೆ
5 ವರ್ಷಗಳ ಜೈಲು, 10,000 ರೂ. ದಂಡ
ಖುಲಾಸೆಯಾದವರು
ಸೈಫ್, ಸೋನಾಲಿ, ಟಬು, ನೀಲಂ, ದುಶ್ಯಂತ್ ಸಿಂಗ್
ಈ ಹಿಂದಿನ ಜೈಲುವಾಸ
ಬೇಟೆ ಪ್ರಕರಣ ಸಂಬಂಧ 1998, 2006 ಮತ್ತು 2007ರಲ್ಲಿ ಒಟ್ಟು 18 ದಿನ ಜೈಲಲ್ಲಿ ಕಳೆದಿದ್ದ ಸಲ್ಲು
600 ಕೋಟಿ ರೂ.
ಸಲ್ಮಾನ್ ಮೇಲಿರುವ ಬಾಲಿವುಡ್ ಪ್ರಾಜೆಕ್ಟ್ಗಳ ಮೊತ್ತ
ಸಲ್ಮಾನ್ ಖಾನ್ ಅವರಿಗೆ ಶಿಕ್ಷೆಯಾಗಿದ್ದು ಕೇಳಿ ಆಘಾತವಾಯಿತು. ಆದರೆ ನನಗೆ ಭಾರತೀಯ ನ್ಯಾಯಾಂಗದಲ್ಲಿ ಭರವಸೆಯಿದೆ. ಸಲ್ಮಾನ್ ಖಾನ್‌ಗೆ ಮುಂದೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ.
– ಸುಭಾಷ್ ಘಾಯ್, ನಿರ್ದೇಶಕ
ಕಾನೂನು ಏನು ಮಾಡಬೇಕೋ ಅದನ್ನು ಮಾಡಿದೆ. ಹಾಗಾಗಿ ತೀರ್ಪಿನ ವಿರುದ್ಧ ದನಿಯೆತ್ತುವುದು ಸಲ್ಲದು. ಆದರೆ ಸಲ್ಮಾನ್ ಖಾನ್ ಅವರನ್ನು ಕ್ರಿಮಿನಲ್ ಎಂದು ಒಪ್ಪಿಕೊಳ್ಳಲು ಮನಸ್ಸಿಗೆ ಕಷ್ಟವಾಗುತ್ತಿದೆ.
– ಅರ್ಜುನ್ ರಾಂಪಾಲ್, ನಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.