ಕಾವೇರಿಗೆ ನಿರ್ವಹಣಾ ಮಂಡಳಿಯ ಆತಂಕ?
Team Udayavani, Sep 21, 2017, 6:00 AM IST
ನವದೆಹಲಿ: ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗುವ ಎಲ್ಲ ರಕ್ಷಣೆಗಳು ಗೋಚರಿಸುತ್ತಿವೆ. 2007ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಒಲವು ವ್ಯಕ್ತಪಡಿಸಿದೆ.
ಸದ್ಯ ವಿಚಾರಣೆ ಪೂರ್ಣಗೊಳಿಸಿರುವ ಪೀಠ, ತೀರ್ಪನ್ನು ಕಾಯ್ದಿರಿಸಿದೆ. ಜತೆಗೆ ನಾಲ್ಕೂ ರಾಜ್ಯಗಳೂ ಎರಡು ವಾರದಲ್ಲಿ ಅಭಿಪ್ರಾಯ ತಿಳಿಸುವಂತೆ ಸೂಚಿಸಿದೆ. ಕೃಷ್ಣಾ, ನರ್ಮದಾ ನದಿ ವಿವಾದಗಳಲ್ಲಿ ಮಂಡಳಿ ಮಾಡಲಾಗಿದೆ. ಅದೇ ರೀತಿಯಲ್ಲಿ ಕಾವೇರಿಗೂ ಒಂದು ಮಂಡಳಿ ರಚನೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ, ಅಂತಿಮ ಆದೇಶದಲ್ಲಿ ಮಂಡಳಿ ಕುರಿತಂತೆ ಪೂರ್ಣ ಸ್ವರೂಪ ಬಗ್ಗೆ ವಿವರಿಸಲಾಗುವುದು ಎಂದು ಹೇಳಿ ತೀರ್ಪು ಕಾಯ್ದಿರಿಸಿತು.
ಈಗಿನ ನಿಟ್ಟುಸಿರಿನ ವಿಚಾರವೆಂದರೆ, ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿಲ್ಲವೆಂಬುದು. ಆದರೆ, ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಕೇಂದ್ರ ಸರ್ಕಾರವನ್ನು ಖಡಕ್ಕಾಗಿ ಪ್ರಶ್ನಿಸಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಅಮಿತಾವ್ ರಾಯ್ ಮತ್ತು ನ್ಯಾ. ಖಾನ್ವಿಲ್ಕರ್ ಅವರಿದ್ದ ತ್ರಿಸದಸ್ಯ ಪೀಠ, ನ್ಯಾಯಾಧಿಕರಣದ ತೀರ್ಪು ಬಂದು 10 ವರ್ಷಗಳಾದರೂ ಇನ್ನೂ ಏಕೆ ರಚನೆ ಮಾಡಿಲ್ಲ ಎಂದು ಪ್ರಶ್ನಿಸಿದೆ.
ಒಂದು ವೇಳೆ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದೇ ಆದಲ್ಲಿ ಕಾವೇರಿ ನದಿ ಪಾತ್ರದಲ್ಲಿ ಬರುವ ಜಲಾಶಯಗಳಾದ ಕೆ.ಆರ್.ಎಸ್., ಹಾರಂಗಿ, ಕಬಿನಿ ಹಾಗೂ ಹೇಮಾವತಿ ಜಲಾಶಯಗಳು ಸಂಪೂರ್ಣವಾಗಿ ನಿರ್ವಹಣಾ ಮಂಡಳಿ ನಿಯಂತ್ರಣಕ್ಕೆ ಒಳಪಡಲಿದೆ. ಅದರ ಬದಲು ಮಂಡಳಿ ರಚನೆ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಟ್ಟರೆ ಕೇಂದ್ರ ತನ್ನ ನಿರ್ಧಾರ ಕೈಗೊಳ್ಳುವವರೆಗೆ ರಾಜ್ಯ ಸರ್ಕಾರ ಕಾಯಬೇಕಾಗುತ್ತದೆ.
2007ರ ಮೇನಲ್ಲಿ ತೀರ್ಪು ನೀಡಿದ್ದ ಕಾವೇರಿ ನ್ಯಾಯಾಧಿಕರಣ, ಕರ್ನಾಟಕ ಸೇರಿದಂತೆ ನಾಲ್ಕೂ ರಾಜ್ಯಗಳಿಗೆ ಕಾವೇರಿ ನೀರನ್ನು ಹಂಚಿಕೆ ಮಾಡಿದ್ದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ನದಿ ನೀರಿನ ಹಂಚಿಕೆ ಮತ್ತು ನಿರ್ವಹಣೆಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಶಿಫಾರಸು ಮಾಡಿತ್ತು. ಆದರೆ 2013ರಲ್ಲಿ ಕಾವೇರಿ ಐ ತೀರ್ಪನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಕೈಬಿಟ್ಟಿತ್ತು. ಬುಧವಾರದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಬಗ್ಗೆಯೇ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲ ರಂಜಿತ್ ಕುಮಾರ್ ಸುಪ್ರೀಂಕೋರ್ಟ್‌ನ ಆಕ್ರೋಶಕ್ಕೆ ತುತ್ತಾಗಬೇಕಾಯಿತು. “ಕಾವೇರಿ ನ್ಯಾಯಾಧಿಕರಣದ ಐ ತೀರ್ಪು ಜಾರಿ ನಿಮ್ಮ ಹೊಣೆಯಲ್ಲವೇ? ‘ ಎಂದು ತೀಕ್ಷ್ಣವಾಗಿ ಪ್ರಶ್ನಿಸಿತು. ಇದಕ್ಕೆ ಉತ್ತರ ನೀಡಿದ ವಕೀಲರು, ಈಗಾಗಲೇ ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ಕಾವೇರಿ ನದಿ ನೀರು ಪ್ರಾಧಿಕಾರ ಮತ್ತು ಮೇಲ್ವಿಚಾರಣಾ ಕಮಿಟಿಯನ್ನು ರಚಿಸಿದ್ದೇವೆ. ಆದರೆ, ನ್ಯಾಯಾಧಿಕರಣದ ಐ ತೀರ್ಪಿನ ಬಗ್ಗೆ ಇನ್ನಷ್ಟು ಸ್ಪಷ್ಟ ಉತ್ತರ ಬೇಕಿತ್ತು, ಹೀಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದರು. ಅಲ್ಲದೆ ತೀರ್ಪು ಕೊಟ್ಟ ಆರು ವಾರದಲ್ಲಿ ಖಂಡಿತವಾಗಿಯೂ ಜಾರಿ ಮಾಡುತ್ತೇವೆ ಎಂದು ರಂಜಿತ್‌ಕುಮಾರ್ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟರು.
ನಿವೃತ್ತ ಸುಪ್ರೀಂ ಜಡ್ಜ್ ಇರಲಿ
ಕರ್ನಾಟಕದ ಪರ ವಾದ ಮಂಡಿಸಿದ ಫಾಲಿ ನಾರಿಮನ್, ಕಾವೇರಿ ನಿರ್ವಹಣಾ ಮಂಡಳಿ ಅಥವಾ ಪ್ರಾಧಿಕಾರಕ್ಕೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಂಜಿತ್ ಕುಮಾರ್ ಅವರು, ಬರಗಾಲದ ಸಂದರ್ಭದಲ್ಲಿ ನದಿ ನೀರನ್ನು ಹೇಗೆ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಖಚಿತತೆ ಇಲ್ಲ ಎಂದರು. ಈಗ ಕರ್ನಾಟಕದ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಹೋಗುವ ನೀರಿನ ಅಳತೆ ಮಾಡಲಾಗುತ್ತಿದೆ. ಆದರೆ, ಮಳೆ ಬಾರದೇ ಬರಗಾಲ ಉಂಟಾದಾಗ ಏನು ಮಾಡಬೇಕು ಎಂಬ ಬಗ್ಗೆ ನ್ಯಾಯಾಧಿಕರಣ ಖಚಿತವಾಗಿ ಹೇಳಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾರಿಮನ್ ಅವರು, ಹೆಚ್ಚುವರಿ ನೀರು ಬಂದಾಗಲೂ ಯಾವ ಸೂತ್ರ ಪಾಲನೆ ಮಾಡಬೇಕು ಎಂಬುದು ನ್ಯಾಯಾಧಿಕರಣದ ಐ ತೀರ್ಪಿನಲ್ಲಿ ಇಲ್ಲ. ಜತೆಗೆ ತಿಂಗಳುಗಳ ಲೆಕ್ಕಾಚಾರದಲ್ಲಿ ನೀರನ್ನು ಬಿಡುವುದು ಕಷ್ಟ ಸಾಧ್ಯ. ಇದಕ್ಕೆ ಬದಲಾಗಿ ಖಾರಿಫ್ ಋತುವಿನ ಅಂತ್ಯದಲ್ಲಿ ಅಥವಾ ಮಳೆ ಕೊನೆಯಾಗುವ ವೇಳೆ ತಮಿಳುನಾಡಿಗೆ ಹೋಗಿದ್ದೇಷ್ಟು ಎಂಬ ಲೆಕ್ಕ ಹಾಕಬೇಕು ಎಂದರು. ಆಗಷ್ಟೇ, ನೀರು ಹೆಚ್ಚು ಹೋಗಿದೆಯೋ ಅಥವಾ ಕಡಿಮೆ ಹೋಗಿದೆಯೋ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ತಮಿಳುನಾಡು ಪರ ವಕೀಲ ಶೇಕರ್ ನಾಫಡೆ, ತಮಿಳುನಾಡಿನಲ್ಲಿ ಬೆಳೆ ಪದ್ಧತಿ ಬೇರೆಯಾಗಿಯೇ ಇದೆ. ಅಲ್ಲಿ ಕುರುವಾಯಿ ಮತ್ತು ಸಾಂಬಾ ಬೆಳೆ ಬೆಳೆಯಲಾಗುತ್ತದೆ. ಇದಕ್ಕಾಗಿ ನ್ಯಾಯಾಧಿಕರಣ ಯಾವ ತೀರ್ಪು ನೀಡಿದೆಯೋ ಅದೇ ಇರಲಿ. ಇದರಲ್ಲಿ ಯಾವುದೇ ಬದಲಾವಣೆ ಮಾಡಲು ತಮಿಳುನಾಡು ಒಪ್ಪುವುದಿಲ್ಲ ಎಂದರು. ಅದಲ್ಲದೇ, ತಿಂಗಳುಗಳ ಲೆಕ್ಕಾಚಾರದಲ್ಲೇ ತಮಿಳುನಾಡಿಗೆ ನೀರು ಬಿಡಬೇಕು ಎಂದು ಹೇಳಿದರು.
ಶೇಕರ್ ವಾದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ದೀಪಕ್ ಮಿಶ್ರಾ, ತಿಂಗಳುಗಳ ಲೆಕ್ಕದಲ್ಲಿ ನೀರು ಬಿಡಬೇಕು ಎಂಬ ನಿಮ್ಮ ವಾದ ಒಪ್ಪುತ್ತೇನೆ. ಆದರೆ, ಋತುವೊಂದರ ಅಂತ್ಯದಲ್ಲಿ ನದಿಯಲ್ಲಿ ಹರಿದು ಬರುವ ನೀರು ಸಮುದ್ರಕ್ಕೆ ಸೇರಿ ಪೋಲಾಗುತ್ತದೆ. ಏಕಂದರೆ, ಆಗ ತಮಿಳುನಾಡಿಗೆ ನೀರು ಬೇಕಾಗಿಲ್ಲದೇ ಇರಬಹುದು ಎಂದರು. ಇದೇ ವೇಳೆ ತಮಾಷೆಯಾಗಿ ಹೇಳಿದ ಅವರು, ನಿಮಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಒಮ್ಮೆಗೇ ಕೊಟ್ಟರೆ ತಿನ್ನಲು ಆಗುತ್ತದೆಯೇ ಎಂದು ಪ್ರಶ್ನಿಸಿದರು. ಇಂಥ ಪರಿಸ್ಥಿತಿ ಉದ್ಭವವಾಗಬಾರದು ಎಂಬುದೇ ನಮ್ಮ ಆಶಯ ಎಂದರು.
ನಮಗೆ ಸೂಚನೆ ಬೇಡ
ವಿಚಾರಣೆ ವೇಳೆ ನಾರಿಮನ್ ಅವರು, ಕರ್ನಾಟಕದ ಮೇಲೆ ಉಳಿದ ರಾಜ್ಯಗಳು ಸವಾರಿ ಮಾಡುವುದು ನಿಲ್ಲಬೇಕು. ನಮ್ಮ ಪಾಲಿಗೆ ಎಷ್ಟು ನೀರು ಬಂದಿರುತ್ತದೆಯೋ ಅಷ್ಟನ್ನು ನಾವು ನಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಇದರಲ್ಲಿ ಉಳಿದವರು ಮೂಗು ತೂರಿಸುವುದು ಬೇಡ ಎಂದರು.
ಕೇಂದ್ರದ ಮೇಲೆ ನಂಬಿಕೆ ಇಲ್ಲ
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಖಂಡಿತವಾಗಿಯೂ ಪಾಲನೆ ಮಾಡುತ್ತೇವೆ ಎಂಬ ಕೇಂದ್ರದ ವಾದವನ್ನು ಅನುಮಾನದಿಂದಲೇ ನೋಡಿದ ತಮಿಳುನಾಡಿನ ಪರ ವಕೀಲ ಶೇಕರ್ ನಾಫಡೆ, ನಮಗೆ ಕೇಂದ್ರ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದರು. ಕಾವೇರಿ ನ್ಯಾಯಾಧಿಕರಣ ಐ ತೀರ್ಪು ನೀಡಿದ ಮೇಲೆ ಅದನ್ನು ಜಾರಿಗೊಳಿಸಲು ಆರು ವರ್ಷ ತೆಗೆದುಕೊಂಡಿತು.
ಅಲ್ಲದೆ ಆಗ ಕಾವೇರಿ ನಿರ್ವಹಣಾ ಮಂಡಳಿಯನ್ನೂ ರಚಿಸಲಿಲ್ಲ. ಈಗ ಬೇರೊಂದು ಕಾರಣ ಹೇಳುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ಮುಂದೆ ನಿಂತು ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕೆಆರ್‌ಎಸ್‌ನಲ್ಲಿ ನೀರಿಲ್ಲ. ಕಬಿನಿ ಜಲಾಶಯದಲ್ಲಿ ಇರುವ ನೀರಿನ ಸಂಗ್ರಹ ಸಾಲಲ್ಲ. ಆದರೂ, ನಾವು ತಮಿಳುನಾಡಿಗೆ 195 ಟಿಎಂಸಿ ನೀರು ಕೊಡಬೇಕು. ಮಳೆ ಬರದೆ ಜಲಾಶಯದಲ್ಲಿ ನೀರಿಲ್ಲ ಅಂದಾಗ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಸಂಕಷ್ಟದ ಸೂತ್ರ ಪಾಲಿಸಬೇಕಾಗಿದ್ದರೂ ನಮ್ಮಲ್ಲಿ ನೀರಿಲ್ಲ. ಸಂಕಷ್ಟ ಸೂತ್ರವನ್ನೂ ಪಾಲಿಸಲು ಆಗಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಒಲವು ವ್ಯಕ್ತಪಡಿಸಿರುವ ಕುರಿತು ನಮ್ಮ ವಕೀಲರ ತಂಡದ ಜೊತೆಗೆ ಚರ್ಚಿಸಿತ್ತೇನೆ. ನೀರು ನಿರ್ವಹಣಾ ಮಂಡಳಿ ರಚನೆ ಮಾಡುವ ಅಧಿಕಾರ ಸಂಸತ್ತಿಗಿದೆ ಎಂದು ಈ ಹಿಂದೆಯೇ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿದೆ. ಈ ವಿಷಯದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಏರ್ಪಡುವುದು ಬೇಡ. ಈ ವಿಷಯದಲ್ಲಿ ನ್ಯಾಯಾಲಯ ಸಂಸತ್ತಿಗಿರುವ ಅಧಿಕಾರಕ್ಕೆ ಮನ್ನಣೆ ನೀಡುವ ವಿಶ್ವಾಸ ಇದೆ.
-ಎಂ.ಬಿ. ಪಾಟೀಲ್, ಜಲ ಸಂಪನ್ಮೂಲ ಸಚಿವ.
ಕಾವೇರಿ ವಿಷಯದಲ್ಲಿ ಮೊದಲ ಬಾರಿಗೆ 28 ದಿನ ವಿಚಾರಣೆ ನಡೆದಿದೆ. ಅಂತರಾಜ್ಯ ನದಿ ನೀರು ಹಂಚಿಕೆ ಕಾಯ್ದೆ ಸೆಕ್ಸನ್ 6ಎ ಯಲ್ಲಿ ನೀರು ನಿರ್ವಹಣಾ ಮಂಡಳಿ ರಚನೆ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಇಂದು ವಾದ ಅಂತ್ಯಗೊಂಡಿದ್ದು, ತೀರ್ಪು ನಮ್ಮ ಪರವಾಗಿದೆ ಎಂಬ ನಿರೀಕ್ಷೆ ಇದೆ.
-ಮೋಹನ್ ಕಾತರಕಿ, ರಾಜ್ಯದ ಪರ ವಕೀಲ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಒಲವು ವ್ಯಕ್ತಪಡಿಸಿರುವ ಕುರಿತು ನ್ಯಾಯಾಲಯದಲ್ಲಿ ನಡೆದ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಪ್ರತಿಕ್ರಿಯೆ ನೀಡುತ್ತೇನೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮತ್ತು ಕರ್ನಾಟಕ ಅನ್ಯೋನ್ಯವಾಗಿರುವಂತಹ ತೀರ್ಪು ಬಂದರೆ ನಾವು ಸ್ವಾಗತಿಸುತ್ತೇವೆ. ರಾಜ್ಯಕ್ಕೆ ಅನ್ಯಾಯವಾಗುವ ರೀತಿ ಆದೇಶ ಬಂದರೆ, ನಾವೆಲ್ಲರೂ ವಿರೋಧಿಸುತ್ತೇವೆ. ಅಗತ್ಯ ಬಿದ್ದರೆ ಮೇಲ್ಮನವಿ ಸಲ್ಲಿಸುತ್ತೇವೆ.
-ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.