ವಿಕ್ರಾಂತ ಭೂಷಣ; ಸೆ. 2ರಂದು ಐಎನ್‌ಎಸ್ ವಿಕ್ರಾಂತ್ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಚಾಲನೆ; ಸ್ವದೇಶೀಯವಾಗಿ ನಿರ್ಮಿತವಾಗಿರುವ ಸಮರನೌಕೆ
Team Udayavani, Aug 28, 2022, 7:00 AM IST
ಮಧುವಣಗಿತ್ತಿಯಂತೆ ಆಕೆ ಸಿಂಗಾರಗೊಳ್ಳುತ್ತಿದ್ದಾಳೆ. ಸಾವಿರಾರು ಜನ ಆಕೆಯನ್ನು ಸಿಂಗರಿಸುವಲ್ಲಿ ಮಗ್ನರಾಗಿದ್ದಾರೆ. ಅಂದ ಹಾಗೆ ಸಮುದ್ರದ ರಾಣಿ “ಐಎನ್‌ಎಸ್ ವಿಕ್ರಾಂತ್’ 75ನೇ ಸ್ವಾತಂತ್ರ್ಯದ “ಅಮೃತ’ ಘಳಿಗೆಯಲ್ಲಿ ಭಾರತೀಯ ನೌಕಾಪಡೆಯ ಕೈಹಿಡಿಯಲಿದ್ದಾಳೆ. ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ. ಆ ಬಂಧನಕ್ಕೆ ಲಗುಬಗೆಯಿಂದ ಸಜ್ಜುಗೊಳ್ಳುತ್ತಿರುವ ಐಎನ್‌ಎಸ್ ವಿಕ್ರಾಂತ್ ಕೊಚ್ಚಿ ಬಂದರಿನಲ್ಲಿ ಒಂದು ತೇಲುವ ದ್ವೀಪದಂತೆ ಕಂಗೊಳಿಸುತ್ತಿದೆ. ಈ ಸಂಭ್ರಮಕ್ಕೆ ಉದಯವಾಣಿಯೂ ಸಾಕ್ಷಿಯಾಯಿತು.
ಭಾರತಕ್ಕೆ ಶಕ್ತಿ
ಐಎನ್‌ಎಸ್ ವಿಕ್ರಾಂತ್ ಅನ್ನು ಹೆಚ್ಚುಕಡಿಮೆ ಸಂಪೂರ್ಣವಾಗಿ ದೇಶೀಯವಾಗಿಯೇ ನಿರ್ಮಿಸಲಾಗಿದೆ. ಇದರ ನಿರ್ಮಾಣ ಜವಾ ಬ್ದಾರಿ ಹೊತ್ತದ್ದು ಕೊಚ್ಚಿ ಶಿಪ್‌ಯಾರ್ಡ್ ಕಂಪೆನಿ. 2009ರ ಫೆಬ್ರವರಿಯಲ್ಲಿ ಇದರ ಕೆಲಸ ಆರಂಭವಾಗಿದ್ದು, ಇತ್ತೀಚೆಗಷ್ಟೇ ಮುಗಿದಿದೆ. ಅಲ್ಲದೆ ಹಲವಾರು ಸುತ್ತುಗಳ ಪರೀಕ್ಷೆ ನಡೆಸಿ, ಬಳಿಕ ಭಾರತೀಯ ನೌಕಾಪಡೆಗೆ ಹಸ್ತಾಂತರಿಸ ಲಾಗುತ್ತಿದೆ. ಈ ಸಮರ ನೌಕೆಯ ನಿರ್ಮಾಣದ ಬಗ್ಗೆ ಸಂಪೂರ್ಣ ಹರ್ಷಗೊಂಡಿರುವ ಕೊಚ್ಚಿ ಶಿಪ್‌ಯಾರ್ಡ್ ಮುಖ್ಯಸ್ಥ ಮತ್ತು ಎಂಡಿ ಮಧು ನಾಯರ್, ಭಾರತವೂ ಎಲೈಟ್ ದೇಶಗಳ ಪಟ್ಟಿಗೆ ಸೇರಿದೆ ಎಂದಿದ್ದಾರೆ. ಸದ್ಯ ಜಗತ್ತಿನಲ್ಲಿ ಕೇವಲ ಐದರಿಂದ ಆರು ದೇಶಗಳು ಮಾತ್ರ ಇಂಥ ಸಮರನೌಕೆಗಳನ್ನು ನಿರ್ಮಾಣ ಮಾಡಿಕೊಳ್ಳುವ ಶಕ್ತಿಹೊಂದಿವೆ. ಈ ಸಾಲಿಗೆ ಭಾರತವೂ ಸೇರಿದೆ ಎಂದು ತಿಳಿಸಿದ್ದಾರೆ.
18 ಮಹಡಿ
ಸುಮಾರು 18 ಮಹಡಿಗಳ ಈ ಯುದ್ಧ ವಿಮಾನವಾಹಕ ನೌಕೆಯಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ಕಂಪಾರ್ಟ್ ಮೆಂಟ್‌ಗಳಿವೆ. ಅವುಗಳಲ್ಲಿ ಕೆಫೆಟೇರಿಯ, ಗ್ರಂಥಾ ಲಯ, ಎರಡು ಎಟಿಎಂಗಳು, ಜಿಮ್, ರನಿಂಗ್ ಟ್ರ್ಯಾಕ್, ಐದು ಲಿಫ್ಟ್ಗಳೂ ಇವೆ.
ಏಕಕಾಲಕ್ಕೆ ಎರಡು ಟೇಕ್‌ಆಫ್
ಓರೆಯಾದ ರನ್‌ವೇಯಲ್ಲೇ 100 ಮೀಟರ್ ಉದ್ದದ ಶಾರ್ಟ್ ಮತ್ತು 120 ಮೀಟರ್‌ಗಿಂತ ಉದ್ದದ ಲಾಂಗ್ ಟೇಕ್‌ಆಫ್ಗಳಿವೆ. ಒಂದರ ಹಿಂದೊಂದು ಒಟ್ಟಿಗೆ ಎರಡು ಯುದ್ಧ ವಿಮಾನಗಳನ್ನು ಇಲ್ಲಿ ಟೇಕ್‌ಆಫ್ ಮಾಡಬಹುದು. ಮಿಗ್- 29, ಕಾಮೊವ್- 31, ಎಂಎಚ್- 60 ಆರ್ ಹೀಗೆ ವಿವಿಧ ಪ್ರಕಾರದ 36 ಯುದ್ಧ ವಿಮಾನಗಳನ್ನು ಟೇಕ್‌ಆಫ್ ಮಾಡಬಹುದಾಗಿದೆ.
ವೈದ್ಯಕೀಯ ಸೌಲಭ್ಯ
ಕೆಳಗಿನ ಮಹಡಿಯಲ್ಲಿ ಮೆಡಿಕಲ್ ಕಾಂಪ್ಲೆಕ್ಸ್ ತೆರೆಯಲಾಗಿದೆ. ಇಲ್ಲಿ 16 ಹಾಸಿಗೆಗಳ ಸಾಮರ್ಥ್ಯದ ತುರ್ತು ನಿಗಾ ಘಟಕ, ಶಸ್ತ್ರಚಿಕಿತ್ಸಾ ಘಟಕ, ಫಿಸಿಯೋಥೆರಪಿ, ಎಕ್ಸ್‌ರೇ, ಐವರು ತಜ್ಞ ವೈದ್ಯರು, ದಂತ ವೈದ್ಯರು, ಸೇರಿದಂತೆ ಬೆಂಗಳೂರಿನಂತಹ ಒಂದು ನಗರದಲ್ಲಿ ಇರಬೇಕಾದ ಹೈಟೆಕ್ ವೈದ್ಯಕೀಯ ಸೌಲಭ್ಯಗಳೆಲ್ಲವನ್ನೂ ಅಲ್ಲಿ ಕಲ್ಪಿಸಲಾಗಿದೆ. ಅಂದಹಾಗೆ, ಸಿಟಿ ಸ್ಕ್ಯಾನ್ ಕೂಡ ಅಲ್ಲಿದ್ದು, ಈ ಸೌಲಭ್ಯವನ್ನು ಒಳಗೊಂಡ ಮೊದಲ ಯುದ್ಧವಿಮಾನವಾಹಕ ನೌಕೆ ಇದಾಗಿದೆ.
ಏಕತಾ ಪ್ರತಿಮೆಗಿಂತ ಎತ್ತರ
ಗುಜರಾತಿನ ನರ್ಮದಾ ನದಿ ಮಧ್ಯೆ ನಿರ್ಮಿಸಲಾದ ಅತೀ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗಿಂತ ಐಎನ್‌ಎಸ್ ವಿಕ್ರಾಂತ್ ಎತ್ತರದ್ದಾಗಿದೆ. ನೌಕೆಯ ಉದ್ದ 262 ಮೀಟರ್ ಮತ್ತು 62 ಮೀಟರ್ ಅಗಲವಾಗಿದೆ.
ಕನ್ನಡಿಗರ ಉಸ್ತುವಾರಿ
ದೇಶದ ಮೊದಲ ಅತಿದೊಡ್ಡ ವಿಮಾನವಾಹಕ ನೌಕೆ “ಐಎನ್‌ಎಸ್ ವಿಕ್ರಾಂತ್’ ಸದ್ಯಕ್ಕೆ ಸಾರಥ್ಯ ವಹಿಸಿರುವವರು ಅಪ್ಪಟ ಕನ್ನಡಿಗ. ಧಾರವಾಡ ಮೂಲದ ವೈಸ್‌ಅಡ್ಮಿರಲ್ ಎಂ.ಎ. ಹಂಪಿಹೊಳಿ ಒಟ್ಟಾರೆ ದಕ್ಷಿಣ ನೌಕೆಯ ಕಮಾಂಡರ್ ಆಗಿದ್ದಾರೆ. ಅದರಡಿಯಲ್ಲೇ ಕೊಚ್ಚಿ ಶಿಪ್‌ಯಾರ್ಡ್ ನಲ್ಲಿ ನಿರ್ಮಾಣಗೊಂಡಿರುವ ಐಎನ್‌ಎಸ್ ವಿಕ್ರಾಂತ್ ಕೂಡ ಬರುತ್ತದೆ. ಹಾಗಾಗಿ ಪರೋಕ್ಷವಾಗಿ ಇದರ ಸಾರಥ್ಯ ವಹಿಸಿದಂತಾಗಿದೆ. ಹಾಗೆಯೇ ಇದರ ರನ್‌ವೇ ನಿಯಂತ್ರಣವೂ ಕನ್ನಡಿಗರದ್ದೇ ಆಗಿದೆ. ಅಂದರೆ ಯುದ್ಧವಿಮಾನಗಳು 250 ಕಿ.ಮೀ. ವೇಗದಲ್ಲಿ ಬಂದು ರನ್‌ವೇಗೆ ಅಪ್ಪಳಿಸುತ್ತಿದ್ದಂತೆ ಅವುಗಳ ವೇಗಕ್ಕೆ ಕಡಿವಾಣ ಹಾಕಲು ವಿಶೇಷವಾದ ಲೋಹದ ವೈರ್‌ಗಳನ್ನು ಅಳವಡಿಸಲಾಗಿರುತ್ತದೆ. ಅವುಗಳ ಮೂಲಕ “ಹಕ್ಕಿ’ಗಳು ಬಂಧಿಸಲ್ಪಡುತ್ತವೆ. ಈ ರನ್‌ವೇಯ ಉಸ್ತುವಾರಿ ಅಪ್ಪಟ ಕನ್ನಡಿಗ ಹಾಗೂ ಬೆಂಗಳೂರು ಮೂಲದ ಲೆಫ್ಟಿನೆಂಟ್ ಕಮಾಂಡರ್ ಸ್ಕಂದ ಗೌತಮ್ ಎನ್ನುವುದು ವಿಶೇಷ.
ಶಿಪ್‌ಯಾರ್ಡ್‌ನ ಮಗಳು!
ಸಾಮಾನ್ಯವಾಗಿ ಸಮರನೌಕೆಗಳಿಗೆ ಪುರುಷರ ಹೆಸರನ್ನೇ ಇಡಲಾಗುತ್ತದೆ. ಆದರೆ ಸಮರನೌಕೆಗಳನ್ನು ಮಹಿಳೆಯ ರೂಪದಲ್ಲೇ ಕರೆಯಲಾಗುತ್ತದೆ. ಅಂದರೆ ನಾವು ಭೂಮಿಯನ್ನು ತಾಯಿ ಎಂದು ಕರೆದಂತೆ. ಈಗಿನ ಐಎನ್‌ಎಸ್ ವಿಕ್ರಾಂತ್, ಕೊಚ್ಚಿ ಶಿಪ್‌ಯಾರ್ಡ್‌ಗೆ ಒಂದು ರೀತಿ ಮಗಳಿದ್ದ ಹಾಗೆ. ನಾವು ತವರಿನಿಂದ ಕಳುಹಿಸುತ್ತಿದ್ದೇವೆ ಎಂದೂ ಮಧು ನಾಯರ್ ಹೇಳಿದ್ದಾರೆ. ಅಲ್ಲದೆ ಈ ಹಸ್ತಾಂತರ ಪ್ರಕ್ರಿಯೆ ನಮಗೊಂದು ರೀತಿಯ ವಿವಾಹ ಕಾರ್ಯಕ್ರಮವಿದ್ದಂತೆ ಎಂದೂ ಸಂತಸ ವ್ಯಕ್ತಪಡಿಸಿದ್ದಾರೆ.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.