ಶಾರದಾ ಚಿಟ್‌ಫಂಡ್ ಹಗರಣ: ಚಿದು ಪತ್ನಿ ವಿರುದ್ಧ ಕೇಸು
Team Udayavani, Jan 12, 2019, 4:10 AM IST
ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಕುಟುಂಬಕ್ಕೆ ಮತ್ತೂಂದು ಆಘಾತ ಎದುರಾಗಿದೆ. ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ವಿರುದ್ಧ ಸಿಬಿಐ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ. ಹಗರಣದಲ್ಲಿ ಭಾಗಿಯಾಗಿರುವ ಶಾರದಾ ಸಮೂಹ ಕಂಪನಿಯಿಂದ 1.4 ಕೋಟಿ ರೂ. ಸ್ವೀಕರಿಸಿದ ಆರೋಪ ನಳಿನಿ ಮೇಲಿದೆ. ವಂಚನೆ ಉದ್ದೇಶ ಹಾಗೂ ಶಾರದಾ ಸಮೂಹ ಕಂಪನಿಗಳ ಹಣಕಾಸು ಅಕ್ರಮದಲ್ಲಿ ನಳಿನಿ ಅವರು ಶಾರದಾ ಗ್ರೂಪ್ ಮಾಲಕರಾಗಿದ್ದ ಸುದೀಪ್ತ ಸೇನ್ ಹಾಗೂ ಇತರೆ ಆರೋಪಿಗಳ ಜತೆಗೆ ಶಾಮೀಲಾಗಿದ್ದರು ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಆರೋಪಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಮಾತಂಗ್ ಸಿನ್ಹ ಪರಿತ್ಯಕ್ತ ಪತ್ನಿ ಮನೋರಂಜನ್ ಸಿನ್ಹ ಅವರೇ ನಳಿನಿ ಅವರನ್ನು ಸೇನ್‌ಗೆ ಪರಿಚಯಿಸಿದ್ದರು. ಸೇನ್ ವಿರುದ್ಧ ಹಲವು ತನಿಖಾ ಸಂಸ್ಥೆಗಳು ನಡೆಸುತ್ತಿದ್ದ ತನಿಖೆಯನ್ನು ನಿರ್ವಹಿಸುವಂತೆ ನಳಿನಿಗೆ ಸೂಚಿಸಲಾಗಿತ್ತು. ಇದಕ್ಕಾಗಿ 2010-12ರ ಅವಧಿಯಲ್ಲಿ ಕಂಪನಿಯಿಂದ 1.4 ಕೋಟಿ ರೂ. ಪಡೆದಿದ್ದರು ಎಂದೂ ಕೋಲ್ಕತ್ತಾದ ಕೋರ್ಟ್‌ಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ವಿಚಾರಣೆಗೆ ಅನುಮತಿ: ಇದೇ ವೇಳೆ ಮಾಜಿ ಸಚಿವ ಚಿದಂಬರಂ ಮತ್ತು ಪುತ್ರ ಕಾರ್ತಿ ಚಿದಂಬರಂ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಏರ್‌ಸೆಲ್-ಮ್ಯಾಕ್ಸಿಸ್ ಡೀಲ್ ಪ್ರಕರಣದಲ್ಲಿ ಹಾಲಿ ಮತ್ತು ಮಾಜಿ ಐವರು ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಪಡೆದುಕೊಳ್ಳಲಾಗಿದೆ ಎಂದು ಸಿಬಿಐ ದಿಲ್ಲಿಯ ಕೋರ್ಟ್‌ಗೆ ಮಾಹಿತಿ ನೀಡಿದೆ. ಇದೇ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಕಾರ್ತಿ ಪಡೆದಿದ್ದ ಮಧ್ಯಾಂತರ ಜಾಮೀನನ್ನು ದೆಹಲಿ ಕೋರ್ಟ್ ಫೆ.1ರ ವರೆಗೆ ವಿಸ್ತರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.