ಮಂತ್ರಿ ವರ್ಸಸ್ ಮಂತ್ರಿ ; ಸದನದಲ್ಲೂ ಶಿವಸೇನೆ “ಹಾರಾಟ’
Team Udayavani, Apr 7, 2017, 3:45 AM IST
ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯೇಟು ನೀಡಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ಗೆ ಹಾರಾಟ ನಿಷೇಧ ಹೇರಿರುವ ವಿಚಾರ ಗುರುವಾರ ಸಂಸತ್‌ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ಇದು ಕೇಂದ್ರದ ಇಬ್ಬರು ಸಚಿವರ ನಡುವೆಯೇ ಮಾತಿನ ಚಕಮಕಿಗೆ ಕಾರಣವಾಗಿ, ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿ, ಕೊನೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ರ ಮಧ್ಯಪ್ರವೇಶದಿಂದಾಗಿ ತಿಳಿಯಾಯಿತು. ಗುರುವಾರ ಲೋಕಸಭೆಯಲ್ಲಿ ನಡೆದ ಈ ವಿದ್ಯಮಾನಗಳು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು. ಇದಾದ ಬಳಿಕ ಸಿಂಗ್ ಅವರು, ಗೀತೆ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿ ರಾಜು ಜತೆ ಮಾತುಕತೆ ನಡೆಸಿದ್ದು, ಸಂಸದನ ವಿರುದ್ಧದ ನಿಷೇಧ ವಾಪಸ್ ಪಡೆಯುವಂತೆ ಏರ್‌ಇಂಡಿಯಾಗೆ ಸೂಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಸದನದಲ್ಲಿ ಕೋಲಾಹಲ: ಲೋಕಸಭೆ ಕಲಾಪ ಆರಂಭವಾದ ಬಳಿಕ ಶಿವಸೇನೆ ಸಂಸದರು ಗಾಯಕ್ವಾಡ್ ಹಾರಾಟಕ್ಕೆ ಹೇರಲಾದ ನಿಷೇಧ ವಾಪಸ್ ಪಡೆಯುವಂತೆ ಆಗ್ರಹಿಸಿದರು. ಆದರೆ, ಇದಕ್ಕೆ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ಸೊಪ್ಪು ಹಾಕಲಿಲ್ಲ. ಇದರಿಂದ ಆಕ್ರೋಶಗೊಂಡ ಕೇಂದ್ರ ಸಚಿವ ಅನಂತ್ ಗೀತೆ ಸೇರಿದಂತೆ ಶಿವಸೇನೆ ಸದಸ್ಯರು ನೇರವಾಗಿ ಸಚಿವ ಗಜಪತಿ ರಾಜು ಕುಳಿತಿದ್ದಲ್ಲಿಗೆ ತೆರಳಿ, ಅವರಿಗೆ ಮುತ್ತಿಗೆ ಹಾಕಿದರು. ಅಲ್ಲದೆ, ಅವರ ಮೇಜಿನ ಮೇಲೆ ಭಾರಿ ಸದ್ದಿನೊಂದಿಗೆ ಬಡಿದು, ಬೆದರಿಸಲು ಯತ್ನಿಸಿದರು. ಸದನದಲ್ಲಿ ಇಂತಹುದೊಂದು ವಿದ್ಯಮಾನ ನಡೆಯುತ್ತಿದ್ದರೆ, ಕೇಂದ್ರದ ಹಲವು ಸಚಿವರು ಸೇರಿದಂತೆ ಲೋಕಸಭೆ ಸದಸ್ಯರು ಆಘಾತ ಹಾಗೂ ಅಚ್ಚರಿಯಿಂದ ವೀಕ್ಷಿಸುತ್ತಿದ್ದರು. ಪರಿಸ್ಥಿತಿ ಇನ್ನೇನು ಕೈಮೀರಲಿದೆ ಎಂಬುದನ್ನು ಅರಿತ ಕೂಡಲೇ ಸಚಿವ ರಾಜನಾಥ್ ಸಿಂಗ್, ಸಚಿವೆ ಸ್ಮತಿ ಇರಾನಿ ಸೇರಿದಂತೆ ಬಿಜೆಪಿಯ ಕೆಲವು ನಾಯಕರು ಅತ್ತ ಧಾವಿಸಿ, ಅವರನ್ನು ಸಮಾಧಾನಪಡಿಸಿದರು.
ಕ್ಷಮೆ ಕೇಳಿದ ಗಾಯಕ್ವಾಡ್: ಘಟನೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಲೋಕಸಭೆ ಕಲಾಪದಲ್ಲಿ ಪಾಲ್ಗೊಂಡ ಗಾಯಕ್ವಾಡ್ ಅವರು ಸಂಸತ್‌ನಲ್ಲಿ ಕ್ಷಮೆ ಯಾಚಿಸಿದರು. “ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಸಂಸತ್‌ಗೆ ಕ್ಷಮೆ ಯಾಚಿಸುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಏರ್‌ಇಂಡಿಯಾ ಸಿಬ್ಬಂದಿಯ ಕ್ಷಮೆ ಕೇಳುವುದಿಲ್ಲ. ನಾನು ಯಾರಿಗೂ ಹೊಡೆದಿಲ್ಲ, ಇದು ನನ್ನ ಮೇಲೆ ನಡೆದ ಅನ್ಯಾಯ. ನಾನು ಮಾಡಿದ ತಪ್ಪಾದರೂ ಏನು’ ಎಂದು ಪ್ರಶ್ನಿಸಿದ ಗಾಯಕ್ವಾಡ್, ಮಾಧ್ಯಮಗಳೇ ನನ್ನ ವಿರುದ್ಧ ವಿಚಾರಣೆ ನಡೆಸುತ್ತಿವೆ ಎಂದು ಆರೋಪಿಸಿದರು. ಜತೆಗೆ, ಏರ್‌ಇಂಡಿಯಾ ಸಿಎಂಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಿಸಿದರು.
ಉತ್ತರದಿಂದ ಅತೃಪ್ತಿ: ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮಾತನಾಡಿದ ಸಚಿವ ಗಜಪತಿ ರಾಜು, “ಸಮಸ್ಯೆಯನ್ನು ತಣ್ಣಗಾಗಿಸುವುದು ಮತ್ತ ಜಟಿಲಗೊಳಿಸುವುದು ಎರಡೂ ಗಾಯಕ್ವಾಡ್ ಕೈಯಲ್ಲಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ. ಇದು ಒಬ್ಬ ಸಂಸದಗೆ ಸಂಬಂಧಿಸಿದ ವಿಚಾರವಲ್ಲ, ಒಬ್ಬ ಪ್ರಯಾಣಿಕನಿಗೆ ಸಂಬಂಧಿಸಿದ್ದು. ವಿಮಾನ ಎನ್ನುವುದು ಜನರ ಹಾರಾಟಕ್ಕೆ ಇರುವ ಯಂತ್ರ. ಇಲ್ಲಿ ಸುರಕ್ಷತೆ ಅತಿ ಮುಖ್ಯ. ಅದರೊಂದಿಗೆ ರಾಜಿ ಮಾಡಿಕೊಳ್ಳಲಾಗದು,’ ಎಂದು ಹೇಳಿದರು. ಗಜಪತಿ ರಾಜು ಅವರ ಈ ಹೇಳಿಕೆಯು ಶಿವಸೇನೆ ಸಂಸದರನ್ನು ಕೆರಳಿಸಿತು. ಹೀಗಾಗಿ, ಅವರು ಸಚಿವ ರಾಜು ಅವರಿಗೆ ಮುತ್ತಿಗೆ ಹಾಕಿದರು.
ಸದನದಲ್ಲಿ ಕೋಲಾಹಲ ಮುಂದುವರಿದ ಕಾರಣ ಹಲವು ಬಾರಿ ಕಲಾಪವನ್ನು ಮುಂದೂಡಬೇಕಾಯಿತು. ಕೊನೆಗೆ, ಸಚಿವ ರಾಜನಾಥ್‌ಸಿಂಗ್ ಮಾತನಾಡಿ, “ವಿಮಾನಯಾನ ಸಚಿವರು ಸಂಬಂಧಪಟ್ಟ ಎಲ್ಲರೊಂದಿಗೂ ಚರ್ಚಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದಾರೆ,’ ಎಂಬ ಭರವಸೆಯನ್ನು ನೀಡಿದರು.
ಔತಣಕೂಟಕ್ಕೆ ಬಹಿಷ್ಕಾರ ಹಾಕುವ ಬೆದರಿಕೆ
“ವಿಮಾನಯಾನ ಕಂಪನಿಗಳು ಗಾಯಕ್ವಾಡ್‌ರನ್ನು ಕಪ್ಪುಪಟ್ಟಿಗೆ ಸೇರಿಸಲು, ಅವರೇನು ಭಯೋತ್ಪಾದಕರೇ’ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಪ್ರಶ್ನಿಸಿದ್ದಾರೆ. “ಸರಣಿ ಅಪರಾಧ ಕೃತ್ಯ ಎಸಗಿದವರು, ರೇಪಿಸ್ಟ್‌ಗಳು, ಪ್ರತ್ಯೇಕವಾದಿಗಳು ವಿಮಾನದಲ್ಲಿ ಪ್ರಯಾಣಿಸಬಹುದಾದರೆ, ನಮ್ಮ ಸಂಸದನೇಕೆ ಪ್ರಯಾಣಿಸಬಾರದು, ಏರ್‌ಇಂಡಿಯಾ ಮುಖ್ಯ ವ್ಯವಸ್ಥಾಪಕ ನಿರ್ದೇಶಕರ ಉದ್ದೇಶವಾದರೂ ಏನು’ ಎಂದೂ ಕೇಳಿದ್ದಾರೆ ರಾವುತ್. ಸಂಸತ್‌ನಲ್ಲಿ ಸಚಿವರು ನೀಡಿರುವ ಪ್ರತಿಕ್ರಿಯೆಯು ತೃಪ್ತಿದಾಯಕವಾಗಿಲ್ಲ. ಏ.10ರೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ, ನಾವು ಎನ್‌ಡಿಎ ಔತಣಕೂಟಕ್ಕೆ ಬಹಿಷ್ಕಾರ ಹಾಕುತ್ತೇವೆ ಎಂದೂ ಅವರು ಬೆದರಿಕೆ ಹಾಕಿದ್ದಾರೆ. ಜತೆಗೆ, ಗಾಯಕ್ವಾಡ್ ವಿರುದ್ಧದ ನಿಷೇಧದ ಹಿಂದೆ ಕಾಣದ ಕೈಗಳ ಪಿತೂರಿಯಿದೆ. ಅದನ್ನು ನಾವು ಸೂಕ್ತ ಸಮಯ ಬಂದಾಗ ಹೊರಗೆಳೆಯುತ್ತೇವೆ ಎಂದು ಅವರು ಬಿಜೆಪಿಯ ಹೆಸರೆತ್ತದೆ ಆರೋಪಿಸಿದರು.
ನಿಷೇಧ ಹೇರಿದ್ರೆ ಕೆಲಸ ಮಾಡೋದು ಹೇಗೆ?: ಸ್ಪೀಕರ್ ಪ್ರಶ್ನೆ
ವಿಮಾನ ಹಾರಾಟಕ್ಕೆ ನಿಷೇಧ ಹೇರಿದರೆ ಸಂಸದರಿಗೆ ತಮ್ಮ ಕರ್ತವ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. ನಾನೇನೂ ಜಡ್ಜ್ ಅಲ್ಲ. ಈ ವಿಚಾರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ. ಆದರೆ, ಇದನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾಗಿ ಸುಮಿತ್ರಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. “ಸಂಸದರು ಸಂಸತ್‌ಗೆ ಬರಬೇಕಾಗುತ್ತದೆ. ಜತೆಗೆ, ಸಾಕಷ್ಟು ಸಭೆಗಳಲ್ಲೂ ಭಾಗವಹಿಸಬೇಕಾಗುತ್ತದೆ. ಎಲ್ಲ ಕಡೆಗೂ ರೈಲು, ಬಸ್ಸಲ್ಲಿ ಪ್ರಯಾಣಿಸಿ, ವಾಪಸಾಗಲು ಆಗುವುದಿಲ್ಲ. ಹೀಗಿರುವಾಗ ಅವರು ವಿಮಾನದಲ್ಲೇ ಪ್ರಯಾಣಿಸಬೇಕಾಗುತ್ತದೆ. ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿದರೆ ಸಂಸದರು ತಮ್ಮ ಕರ್ತವ್ಯಗಳನ್ನು ಪೂರೈಸುವುದಾದದೂ ಹೇಗೆ,’ ಎಂದು ಪ್ರಶ್ನಿಸಿದ್ದಾರೆ ಸುಮಿತ್ರಾ.
ಏರ್‌ಪೋರ್ಟ್‌ಗಳಲ್ಲಿ ಬಿಗಿಭದ್ರತೆ:
ನಿಷೇಧ ವಾಪಸ್ ಪಡೆಯದಿದ್ದರೆ ಮುಂಬೈ ಮತ್ತು ಪುಣೆ ವಿಮಾನನಿಲ್ದಾಣಗಳಲ್ಲಿ ಏರ್‌ಇಂಡಿಯಾ ವಿಮಾನಗಳ ಹಾರಾಟಕ್ಕೆ ಅಡ್ಡಿಪಡಿಸುತ್ತೇವೆ ಎಂದು ಶಿವಸೇನೆ ಕಾರ್ಯಕರ್ತರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈ ಎರಡೂ ಏರ್‌ಪೋರ್ಟ್‌ಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ನಮ್ಮ ಸಿಬ್ಬಂದಿಯ ಸುರಕ್ಷತೆಯೇ ನಮಗೆ ಮುಖ್ಯ. ಹಾಗಾಗಿ, ಅವರಿಗೇನೂ ತೊಂದರೆ ಆಗದಂತೆ ಅಗತ್ಯ ಭದ್ರತೆ ಕೈಗೊಂಡಿದ್ದೇವೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಇದೇ ವೇಳೆ, ವಿಮಾನಯಾನ ನೌಕರರ ಸಂಘವು ಏರ್‌ಇಂಡಿಯಾಗೆ ಬೆಂಬಲ ಸೂಚಿಸಿದ್ದು, ವಿಮಾನ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದೆ.
ಶಿವಸೇನೆಯ ನಾಯಕನಾಗಿ ನಾನು ನಮ್ಮ ಸಂಸದರ ಹಕ್ಕುಗಳನ್ನು ಕಾಪಾಡಬೇಕಿದೆ. ನಾನು ಯಾರೊಂದಿಗೂ ದುರ್ವರ್ತನೆ ತೋರಿಲ್ಲ. ನಾನು ಮತ್ತು ಸಚಿವ ಗಜಪತಿ ರಾಜು ಇಬ್ಬರೂ ಸಚಿವರು. ಮುಂದೆಯೂ ನಾವು ಎನ್‌ಡಿಎ ಮಿತ್ರರಾಗಿ ಉಳಿಯುತ್ತೇವೆ.
– ಅನಂತ್ ಗೀತೆ, ಶಿವಸೇನೆ ನಾಯಕ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.