ತಲೆ ಎತ್ತಲಿದೆ ಸರ್ದಾರ್ ಪ್ರತಿಮೆಗಿಂತಲೂ ಎತ್ತರದ ಶಿವಾಜಿ ಪ್ರತಿಮೆ
Team Udayavani, Nov 7, 2018, 2:24 PM IST
ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಲೋಕಾರ್ಪಣೆಯೊಂದಿಗೆ ಇದೀಗ ಮುಂಬಯಿಯಲ್ಲಿ ಮಹಾರಾಷ್ಟ್ರ ಸರಕಾರ ಸ್ಥಾಪಿಸಲುದ್ದೇಶಿಸಿದ ಶಿವಾಜಿ ಪ್ರತಿಮೆ ವಿಚಾರವೂ ಮುನ್ನೆಲೆಗೆ ಬಂದಿದೆ. ಶಿವಾಜಿ ಪ್ರತಿಮೆ ಇನ್ನು ಮುಂದಿನ ಮೂರು ವರ್ಷಗಳಲ್ಲಿ ಸ್ಥಾಪಿಸಿದ್ದೇ ಆದಲ್ಲಿ ಅದೇ ಜಗತ್ತಿನ ಅತಿ ದೊಡ್ಡ ಪ್ರತಿಮೆಯಾಗಲಿದೆ. ಇದರಿಂದ ಅತಿ ಎತ್ತರದ ಪ್ರತಿಮೆ ಎಂಬ ಸರ್ದಾರ್ ಪ್ರತಿಮೆಯ ಹೆಗ್ಗಳಿಕೆ ಕೂಡ ಮೂರೇ ವರ್ಷಕ್ಕೆ ಸೀಮಿತ ವಾಗಲಿದೆ. ನೂತನ ಶಿವಾಜಿ ಪ್ರತಿಮೆ/ಸ್ಮಾರಕದಲ್ಲಿ ಏನೇನು ಇರಲಿದೆ? ಇದನ್ನು ಜಗತ್ತಿನ ಪ್ರಮುಖ ಸ್ಮಾರಕವನ್ನಾಗಿಸುವತ್ತ ಮಹಾರಾಷ್ಟ್ರ ಸರಕಾರ ಏನೇನು ಪ್ಲಾನ್ ಮಾಡಿಕೊಂಡಿದೆ ಎಂಬ ಕುರಿತ ವಿವರಗಳು ಇಲ್ಲಿವೆ.
ಹಳೇ ಯೋಜನೆಗೆ ಮರು ಜೀವ
ಅರಬ್ಬಿ ಸಮುದ್ರ ಮಧ್ಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣದ ಉದ್ದೇಶ ಇಂದು ನಿನ್ನೆಯದಲ್ಲ. ಅದು 1980ರ ದಶಕದ್ದು. ಪ್ರತಿಮೆ ನಿರ್ಮಿಸುವುದಾಗಿ ಪ್ರತಿ ಚುನಾವಣೆಗಳಾದಾಗಲೂ ರಾಜಕೀಯ ಪಕ್ಷಗಳು ಹೇಳುತ್ತಲೇ ಬರುತ್ತಿದ್ದವು. ಮಹಾರಾಷ್ಟ್ರದ ಮರಾಠಾ ಸಮುದಾಯ ಸ್ಮಾರಕ ನಿರ್ಮಾಣಕ್ಕೆ ಸರ್ಕಾರಗಳ ಮೇಲೆ ತೀವ್ರ ಒತ್ತಡವನ್ನೂ ಹಾಕುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಸರಕಾರ ಪ್ರತಿಮೆ ನಿರ್ಮಾಣಕ್ಕೆ ಉದ್ದೇಶಿಸಿದೆ. 2016ರಲ್ಲಿ ಇದರ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದರು. ಮುಂಬಯಿ ಕಡಲ ತೀರದಲ್ಲಿ ಪುಟ್ಟ ದ್ವೀಪದ ರೀತಿ ಸ್ಮಾರಕ ನಿರ್ಮಿಸುವ ಉದ್ದೇಶವಿದೆ. 2019ರಲ್ಲಿ ಸ್ಮಾರಕ ಕೆಲಸ ಮುಗಿಯಬೇಕೆನ್ನುವ ಯೋಜನೆ ಹಾಕಿದ್ದರೂ ಇನ್ನೂ ಕೆಲಸ ಆಗಿಲ್ಲ. 2021ರಲ್ಲಿ ಸ್ಮಾರಕ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಏತನ್ಮಧ್ಯೆ ಮೊನ್ನೆಯ ಘಟನೆಯೊಂದರಲ್ಲಿ ಬೋಟೊಂದು ಇದೇ ಜಾಗದಲ್ಲಿ ಅಪಘಾತಕ್ಕೀಡಾಗಿದ್ದು ಸುರಕ್ಷತೆ ದೃಷ್ಟಿಯಿಂದ ಸ್ಮಾರಕವನ್ನು ಸ್ಥಳಾಂತರಿಸುವ ಸಾಧ್ಯತೆಯೂ ಇದೆ.
ವಿಶ್ವದ ಅತಿ ಎತ್ತರದ ಪ್ರತಿಮೆ
ಶಿವಾಜಿ ಸ್ಮಾರಕದಲ್ಲಿ ಸ್ಥಾಪಿಸಲಾಗುವ ಪ್ರತಿಮೆ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿರಲಿದೆ. ಇದು ಅಮೆರಿಕದ ಸ್ವಾತಂತ್ರ್ಯ ಪ್ರತಿಮೆ ಮತ್ತು ಗುಜರಾತ್‌ನಲ್ಲಿ ಸ್ಥಾಪಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಉಕ್ಕಿನ ಪ್ರತಿಮೆ (182 ಮೀ.)ಗಿಂತಲೂ ದೊಡ್ಡದು. ಪಟೇಲ್ ಅವರ ಉಕ್ಕಿನ ಪ್ರತಿಮೆಗಿಂತಲೂ ದೊಡ್ಡದು. ಶಿವಾಜಿ ಸ್ಮಾರಕ 212.ಮೀ. ಎತ್ತರ (12 ಮಹಡಿ ಕಟ್ಟಡದಷ್ಟು ಎತ್ತರ)ವಿರಲಿದೆ. ಇದರಲ್ಲಿನ ಶಿವಾಜಿ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಯಾಗಿರಲಿದೆ. ಇಡೀ ಸ್ಮಾರಕ ಸಮುದ್ರ ಮಧ್ಯೆ 15.96 ಹೆಕ್ಟೇರ್ ವಿಸ್ತಾರದಲ್ಲಿ ಇರಲಿದೆ.
3700 ಕೋಟಿ ರೂ. ವ್ಯಯ
ಶಿವಾಜಿ ಸ್ಮಾರಕಕ್ಕಾಗಿ ಮಹಾರಾಷ್ಟ್ರ ಸರ್ಕಾರ 3533.46 ಕೋಟಿಗಳನ್ನು ವೆಚ್ಚಮಾಡಲು ಉದ್ದೇಶಿಸಿತ್ತು. ಆದರೆ ಸದ್ಯ ಇದರ ಯೋಜನಾ ವೆಚ್ಚ 150 ಕೋಟಿ ರೂ.ಗಳಷ್ಟು ಹೆಚ್ಚಾಗಿದ್ದು 3700 ಕೋಟಿ ರೂ. ಆಗಲಿದೆ ಎಂದು ಹೇಳಲಾಗಿದೆ. ಎರಡು ಹಂತಗಳಲ್ಲಿ ಸ್ಮಾರಕದ ಕೆಲಸ ನಡೆಯಲಿದೆ. ಮೊದಲ ಹಂತಕ್ಕೆ ಸುಮಾರು 2581 ಕೋಟಿ ರೂ. ವೆಚ್ಚವಾಗಲಿದೆ. ಬಹುಶಃ ಇನ್ನು ಸ್ಮಾರಕದಲ್ಲಿ ಶಿವಾಜಿ ಕುರಿತ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲು ಅನುಕೂಲವಾಗುವಂತೆ ಐಮ್ಯಾಕ್ಸ್ ಥಿಯೇಟರ್, ಅತಿಥಿಗಳ ಕೊಠಡಿ, ಹೆಲಿಪ್ಯಾಡ್, ಆಸ್ಪತ್ರೆ ಇತ್ಯಾದಿಗಳೂ ಇರಲಿವೆ.
ಮರಾಠ ಸಾಂಪ್ರದಾಯಿಕ ವಾಸ್ತುಶಿಲ್ಪ
ಮರಾಠ ಸಾಂಪ್ರದಾಯಿಕ ವಾಸ್ತು ಶಿಲ್ಪದಿಂದ ಪ್ರೇರಣೆ ಪಡೆದು ಈ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ತುಲಜ ಭವಾನಿ ದೇಗುಲ, ರಾಯಗಢ ಕೋಟೆಯ ಪ್ರವೇಶ ದ್ವಾರ, ಇತರ ಮರಾಠ ಆಳ್ವಿಕೆಯ ಪ್ರದೇಶದ ಮಹತ್ವದ ಅಂಶಗಳು, ನಿವಾಸಗಳ ಮಾದರಿಗಳನ್ನು ಇಟ್ಟುಕೊಂಡು ಸ್ಮಾರಕ ವನ್ನು ನಿರ್ಮಿಸಲಾಗುತ್ತಿದೆ. ಇಜಿಐಎಸ್ ಇಂಡಿಯಾ ಕಂಪನಿ ಈ ಸ್ಮಾರಕದ ವಾಸ್ತುಶಿಲ್ಪ ಯೋಜನೆಯನ್ನು ರೂಪಿಸಿದ್ದು, ಅತ್ಯಂತ ಸುಂದರ ವಾಗಿರುವಂತೆ ಶ್ರಮಿಸಲಿದೆ.
ಸ್ಮಾರಕ ಭೇಟಿಗೆ ದೋಣಿ ವ್ಯವಸ್ಥೆ
ಸಮುದ್ರ ಮಧ್ಯದ ಈ ಸ್ಮಾರಕವನ್ನು ಸಂದರ್ಶಿಸಲು ಪ್ರವಾಸಿಗರಿಗೆ ಅನುಕೂಲ ವಾಗುವಂತೆ ಮಹಾರಾಷ್ಟ್ರ ಸರ್ಕಾರ ನಾಲ್ಕು ಕಡೆಯಿಂದ ದೋಣಿಗಳ ವ್ಯವಸ್ಥೆ ಮಾಡಲಿದೆ. ಕೊಲಬಾ ರೇಡಿಯೋ ಕ್ಲಬ್, ನಾರಿಮನ್ ಪಾಯಿಂಟ್‌ನ ಎನ್‌ಸಿಪಿಎ, ನವಿ ಮುಂಬೈಯ ನೆರಾಲು ಸನಿಹದ ಸಾಗರ್ ಸಂಗಮ್ ಎಂಬಲ್ಲಿಂದ ದೋಣಿಗಳ ವ್ಯವಸ್ಥೆ ಮಾಡಲಿದೆ. ಮೊದಲ ಹಂತದ ಕೆಲಸದ ಬಳಿಕ ದಿನಕ್ಕೆ 10 ಸಾವಿರ ಪ್ರವಾಸಿಗರಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಇರಲಿದೆ. ಎರಡನೇ ಹಂತದ ಕಾಮಗಾರಿ ಮುಕ್ತಾಯ ಬಳಿಕ ದಿನಕ್ಕೆ15 ಸಾವಿರ ಪ್ರವಾಸಿಗರಿಗೆ ಸ್ಮಾರಕ ಭೇಟಿಗೆ ಅನುಕೂಲವಾಗಲಿದೆ.
ಸಂದರ್ಶಕರಿಗೆ ಶುಲ್ಕ ?
ಶಿವಾಜಿ ಸ್ಮಾರಕಕ್ಕೆ ಭೇಟಿ ನೀಡುವವರಿಗೆ ಶುಲ್ಕವನ್ನು ವಿಧಿಸುವ ಬಗ್ಗೆಯೂ ಸರಕಾರ ಚಿಂತನೆ ನಡೆಸುತ್ತಿದೆ. ಸ್ಮಾರಕ ವಿರುದ್ಧ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ದೂರಿನ ವಿಚಾರಣೆ ವೇಳೆ ಸರಕಾರ ಹೀಗೆ ಹೇಳಿದೆ. ರಾಜ್ಯ ಹಲವು ಯೋಜನೆಗಳಿಗೆ ಹಣಕಾಸು ಸಮಸ್ಯೆಗಳನ್ನು ಎದುರಿಸು ತ್ತಿದ್ದು, ಆದರೂ ಸ್ಮಾರಕಕ್ಕೆ ಕೋಟಿಗಟ್ಟಲೆ ಖರ್ಚು ಮಾಡುವುದರ ವಿರುದ್ಧ ಈ ದೂರು ದಾಖಲಾಗಿತ್ತು.
ಝಡ್ ಪ್ಲಸ್ ಭದ್ರತೆ!
ಇಡೀ ಸ್ಮಾರಕಕ್ಕೆ ಝಡ್ ಪ್ಲಸ್ ಭದ್ರತೆ ಒದಗಿಸುವ ಯೋಜನೆ ಮಹಾರಾಷ್ಟ್ರ ಸರ್ಕಾರದ್ದು. ಈ ಸ್ಮಾರಕ ನಿರ್ಮಾಣವಾಗುತ್ತಿರುವ ಪ್ರದೇಶದಿಂದಲೇ ಹಿಂದೆ ಪಾಕಿಸ್ತಾನ ಉಗ್ರರು ನುಸುಳಿ 26/11 ಮುಂಬಯಿ ದಾಳಿಗೆ ಕಾರಣವಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ಮಾರಕದಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳು ಇರಲಿವೆ.
ರಾಡಾರ್ ಕಣ್ತಪ್ಪಿಸುವ ವ್ಯವಸ್ಥೆ
ಶತ್ರು ರಾಡಾರ್‌ಗೆ ಗುರುತಿಸಲು ಸಾಧ್ಯವಾಗದಂತೆ “ಆ್ಯಂಟಿ ರಾಡಾರ್’ ವ್ಯವಸ್ಥೆ ಇರಲಿದೆ. ಇದು ಭಯೋತ್ಪಾದಕ ದಾಳಿ ತಡೆಯಲೂ ವ್ಯವಸ್ಥೆ ಇರಲಿದೆ.
ಪ್ರತ್ಯೇಕ ಭದ್ರತಾ ವ್ಯವಸ್ಥೆ
ಎನ್ ಎಸ್‌ಜಿ ಕಮಾಂಡೋಗಳು, ಮುಂಬೈ ಪೊಲೀಸ್, ಕರಾ ವಳಿ ಕಾವಲು ಪಡೆ ಸಹಿತ ಬಹುಹಂತದ ರಕ್ಷಣಾ ವ್ಯವಸ್ಥೆ ಇರಲಿದೆ.
ಬಂಕರ್‌ಗಳು
ಸ್ಮಾರಕದ ಮೇಲೆ ದಾಳಿ ತಡೆವ ನಿಟ್ಟಿನಲ್ಲಿ ಶಾಶ್ವತ ಬಂಕರ್ ವ್ಯವಸ್ಥೆ, ಸ್ಮಾರಕದ ಎಲ್ಲಾ ಕಡೆ 24 ತಾಸು ಚಾಲನೆಯಲ್ಲಿರುವ ಅತ್ಯಾಧುನಿಕ ಸೀಸಿಟೀವಿ ವ್ಯವಸ್ಥೆ ಇರಲಿದೆ.
ಸ್ಮಾರಕ ವಿರುದ್ಧ ಅಪಸ್ವರ
ಇದೀಗ ಸರ್ದಾರ್ ಸ್ಮಾರಕಕ್ಕೆ ವಿರೋಧ ವ್ಯಕ್ತವಾದ ರೀತಿಯಲ್ಲೇ ಶಿವಾಜಿ ಸ್ಮಾರಕಕ್ಕೂ ವಿರೋಧ ವ್ಯಕ್ತವಾಗಿದೆ. ಒಂದನೆಯದು ಇಷ್ಟೊಂದು ವೆಚ್ಚದಲ್ಲಿ ಸ್ಮಾರಕ ನಿರ್ಮಾಣದ ಅಗತ್ಯವೇ ಇಲ್ಲ ಎಂಬುದು. ಎರಡನೆಯದು ಸ್ಮಾರಕ ನಿರ್ಮಾಣದಿಂದ ಮೀನುಗಾರಿಕೆಗೆ ಹಾನಿಯಾಗುತ್ತದೆ ಎಂದು ಸ್ಮಾರಕ ನಿರ್ಮಾಣ ಪ್ರಸ್ತಾವನೆಯಾದಾಗ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಸ್ಮಾರಕ ಸಮುದ್ರದಲ್ಲಿ ನಿರ್ಮಾಣವಾದರೆ ಆ ಸ್ಥಳದಲ್ಲಿ ಮೀನುಗಾರಿಕೆ ನಿಷೇಧಿಸುವ ಕ್ರಮವನ್ನು ಸರಕಾರ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನೊಂದು ಸ್ಮಾರಕ ನಿರ್ಮಾಣದಿಂದ ಸಮುದ್ರದಲ್ಲಿನ ಜೈವಿಕ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು. ಈ ಬಗ್ಗೆ ಪರಿಸರ ಸಂಘಟನೆಯೊಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಮೆಟ್ಟಿಲೇರಿತ್ತು. ಮಹಾರಾಷ್ಟ್ರ ಸರ್ಕಾರ ಪರಿಸರ ಇಲಾಖೆ ಅನುಮತಿ ಕೇಳಿದ್ದು, ಅನುಮತಿಯೊಂದಿಗೆ ಈ ಕುರಿತ ವಿವಾದಗಳು ದೂರವಾದಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.