ನಟಿ ಕಿಡ್ನ್ಯಾಪ್‌ಗೆ ರಾಜಕೀಯ ತಿರುವು: ಶಾಸಕರ ವಿಚಾರಣೆ?
Team Udayavani, Jul 14, 2017, 3:05 AM IST
ಕೊಚ್ಚಿ/ತಿರುವನಂತಪುರ: ದಕ್ಷಿಣ ಭಾರತ ಸಿನಿಮಾ ಕ್ಷೇತ್ರವನ್ನು ನಡುಗಿಸಿದ ಬಹು ಭಾಷಾ ನಟಿ ಅಪಹರಣ, ಲೈಂಗಿಕ ಕಿರುಕುಳ ಪ್ರಕರಣಕ್ಕೆ ಈಗ ರಾಜಕೀಯ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಕೇರಳದ ಇಬ್ಬರು ಪ್ರಭಾವಿ ಹಾಲಿ ಶಾಸಕರನ್ನು ವಿಚಾರಣೆಗೆ ಗುರಿಪಡಿಸಲು ಮುಂದಾಗಿದೆ. ಅಲುವಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅನ್ವರ್ ಸಾದತ್ ಮತ್ತು ಎಲ್‌ಡಿಎಫ್ ಶಾಸಕ, ನಟ ಮುಕೇಶ್‌ರನ್ನು ವಿಚಾರಣೆಗೆ ಒಳಪಡಿಸಲಿದೆ. ಫೆ.17ರಂದು ನಟಿಯ ಅಪಹರಣ, ಲೈಂಗಿಕ ಕಿರುಕುಳ ನಡೆದ ಬಳಿಕ ಕಾಂಗ್ರೆಸ್ ಶಾಸಕ, ನಟ ಮುಕೇಶ್ ಜತೆ ಮೂರೂವರೆ ಗಂಟೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ. ಸದ್ಯ ಕಾಂಗ್ರೆಸ್ ಶಾಸಕ ಫ್ರಾನ್ಸ್ ಪ್ರವಾಸದಲ್ಲಿರುವುದರಿಂದ ಅವರು ತಕ್ಷಣಕ್ಕೆ ವಿಚಾರಣೆ ಲಭ್ಯರಿರಲಾರರು ಎಂದು ಹೇಳಲಾಗಿದೆ.
ಪೊಲೀಸರ ವಶದಲ್ಲಿರುವ, ಪ್ರಕರಣದ ಮುಖ್ಯ ಸೂತ್ರಧಾರ ಪಲ್ಸರ್ ಸುನಿ ಕೊಲ್ಲಂ ಕ್ಷೇತ್ರದ ಶಾಸಕ ಮುಕೇಶ್ ಅವರ ಕಾರು ಚಾಲಕನಾಗಿದ್ದ. 2013ರಲ್ಲಿ ದಿಲೀಪ್ ಅಭಿನಯದ ‘ಸೌಂಡ್ ತೋಮಾ’ ಸಿನಿಮಾ ಚಿತ್ರೀಕರಣ ವೇಳೆ ಪ್ರಕರಣದ ಸಂಚು ರೂಪಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಆದರೆ ಮುಕೇಶ್, ‘ಪಲ್ಸರ್ ಸುನಿಯನ್ನು ದಿಲೀಪ್‌ಗೆ ಪರಿಚಯ ಮಾಡಿಕೊಟ್ಟದ್ದು ತಾವಲ್ಲ’ ಎಂದಿದ್ದಾರೆ.
ಕಾವ್ಯಾ ಮಾಧವನ್ ವಿಚಾರಣೆ?: ಇದೇ ವೇಳೆ ವಿವಾದ ಕುರಿತು ದಿಲೀಪ್ ಪತ್ನಿ ಕಾವ್ಯಾ ಮಾಧವನ್, ಅವರ ತಾಯಿಯನ್ನು ಎಸ್‌ಐಟಿ ವಿಚಾರಣೆಗೆ ಗುರಿಪಡಿಸಲಿದೆ. ಪ್ರಮುಖ ಆರೋಪಿ ಪಲ್ಸರ್ ಸುನಿ ಜತೆ ಅವರಿಬ್ಬರೂ ನಿಕಟ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆವ ಸಾಧ್ಯತೆ ಇದೆ.
ನಮ್ಮ ನಡುವೆ ವೈಯಕ್ತಿಕ ಸಮಸ್ಯೆಗಳಿದ್ದವು ಎಂದ ನಟಿ
ಅಪಹರಣ, ಲೈಂಗಿಕ ಕಿರುಕುಳಕ್ಕೆ ಒಳಗಾದ ಬಹುಭಾಷಾ ನಟಿ ಗುರುವಾರ ತ್ರಿಶ್ಶೂರ್‌ನಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಟ ದಿಲೀಪ್ ಜತೆ ತಾನು ಯಾವುದೇ ರೀತಿಯ ರಿಯಲ್ ಎಸ್ಟೇಟ್, ಹಣಕಾಸಿನ ವಹಿವಾಟು ಹೊಂದಿರಲಿಲ್ಲ. ಆದರೆ, ನಮ್ಮ ನಡುವೆ ವೈಯಕ್ತಿಕ ಸಮಸ್ಯೆಗಳಿದ್ದವು ಎಂದಿದ್ದಾರೆ. ಪ್ರಕರಣ ಸಂಬಂಧ ತನಿಖಾ ತಂಡದ ಮುಂದೆ ತಾವು ಯಾರ ಹೆಸರನ್ನೂ ಹೇಳಿರಲಿಲ್ಲ. ಅವರನ್ನು ಬಂಧಿಸಿದ್ದು ತಮಗೆ ಆಘಾತ ತಂದಿದೆ ಎಂದಿದ್ದಾರೆ. “ಹಲವು ಸಿನಿಮಾಗಳಲ್ಲಿ ದಿಲೀಪ್ ಜತೆಗೆ ನಟಿಸಿದ್ದರೂ ಅವರ ಜತೆಗೆ ಉತ್ತಮ ಬಾಂಧವ್ಯವಿತ್ತು. ಆದರೆ ನಂತರದ ದಿನಗಳಲ್ಲಿ ಅದು ವೈಷಮ್ಯಕ್ಕೆ ತಿರುಗಿತ್ತು. ಆದರೆ ಅದನ್ನು ಯಾರ ಬಳಿಯೂ ಹೇಳಿಕೊಂಡಿ ರಲಿಲ್ಲ. ಸದ್ಯ ಯಾವುದೇ ಸುದ್ದಿವಾಹಿನಿ ಅಥವಾ ಮಾಧ್ಯಮಕ್ಕೆ ಸಂದರ್ಶನ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಪ್ರಕರಣದಲ್ಲಿ ತಮ್ಮನ್ನು ಸಿಕ್ಕಿ ಹಾಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದಿಲೀಪ್ ಹೇಳಿಕೊಂಡಿದ್ದಾರೆ. ಹಾಗಿದ್ದಲ್ಲಿ, ಅವರು ಶೀಘ್ರವೇ ಆರೋಪಮುಕ್ತರಾಗಿ ಬರಲಿ’ ಎಂದು ತಿಳಿಸಿದ್ದಾರೆ. ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ, ಫೋಟೋ ಅಪ್‌ಲೋಡ್ ಮಾಡಿದ್ದು ತಾವಲ್ಲ. ತಾವು ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ಖಾತೆ ಹೊಂದಿಲ್ಲ ಎಂದಿದ್ದಾರೆ ಅವರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.