ಕೊನೆಗೂ ‘ಆ ದಿನ’ ಬರಲೇ ಇಲ್ಲ: ‘2ದಿನಗಳಲ್ಲಿ ಮರಳಿ ಬರುವೆ’ ಎಂದಿದ್ದ SPB ಬಾರದ ಲೋಕಕ್ಕೆ ಪಯಣ
Team Udayavani, Sep 26, 2020, 5:47 AM IST
ಚೆನ್ನೈಯಲ್ಲಿ ಎಸ್‌ಪಿಬಿ ಅವರನ್ನು ನೋಡಿ ದುಃಖ ವ್ಯಕ್ತಪಡಿಸುತ್ತಿರುವ ಕುಟುಂಬ ಸದಸ್ಯರು.
ಚೆನ್ನೈ: “ಐ ಆ್ಯಮ್ ಪರ್ಫೆಕ್ಟ್ಲೀ ಆಲ್‌ರೈಟ್… ನಾನು ಸಂಪೂರ್ಣವಾಗಿ ಆರೋಗ್ಯದಿಂದಿರುವೆ. ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ, ಮನೆಗೆ ವಾಪಸಾಗುತ್ತೇನೆ…”
ಕಳೆದ ತಿಂಗಳು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾದ ದಿನ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಇಂಥದ್ದೊಂದು ಆಶ್ವಾಸನೆ ನೀಡಿದ್ದ ಸ್ವರ ಸಾಮ್ರಾಟ ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೊನೆಗೂ ಹಿಂದಿರುಗಲೇ ಇಲ್ಲ.
ಎರಡು ದಿನಗಳಲ್ಲಿ ಮರಳುತ್ತೇನೆ ಎಂದಿದ್ದ ಸಂಗೀತ ದಿಗ್ಗಜ ಈಗ ಎಲ್ಲರನ್ನೂ ಕಣ್ಣೀರಲ್ಲಿ ಮುಳುಗಿಸಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಆಗಸ್ಟ್ 5ರಂದು ಕೋವಿಡ್ 19 ಪಾಸಿಟಿವ್ ವರದಿ ಬಂದ ಕಾರಣ ಎಸ್‌ಪಿಬಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಅಲ್ಲಿಂದಲೇ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ್ದ ಅವರು, “ನನಗೆ ಅತ್ಯಲ್ಪ ಪ್ರಮಾಣದ ಸೋಂಕಿನ ಲಕ್ಷಣಗಳಿವೆ. ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿ, ವಿಶ್ರಾಂತಿ ಪಡೆದರೆ ಸಾಕು ಎಂದು ವೈದ್ಯರು ಹೇಳಿದ್ದಾರೆ.
ಆದರೆ, ಕುಟುಂಬ ಸದಸ್ಯರಿಗೆ ನನ್ನ ಆರೋಗ್ಯದ ಬಗ್ಗೆ ಕಳವಳ ಇರುವ ಕಾರಣ, ನಾನು ಆಸ್ಪತ್ರೆಗೆ ಸೇರಲು ನಿರ್ಧರಿಸಿದೆ. ಸ್ವಲ್ಪ ನೆಗಡಿ, ಆಗಾಗ್ಗೆ ಕಾಣಿಸಿಕೊಳ್ಳುವ ಜ್ವರ ಹಾಗೂ ಎದೆ ಬಿಗಿತದಂಥ ಅನುಭವ ಆಗುತ್ತಿದೆ. ಅದು ಬಿಟ್ಟರೆ ನಾನು ಆರೋಗ್ಯವಾಗಿದ್ದೇನೆ. ಖಂಡಿತಾ 2 ದಿನ ಇಲ್ಲಿದ್ದು, ಮನೆಗೆ ಮರಳುತ್ತೇನೆ’ ಎಂದು ಹೇಳಿದ್ದರು.
ಆದರೆ, ಆ.13ರಂದು ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ, ವೈದ್ಯರು ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿದ್ದರು. ತದನಂತರ 52 ದಿನಗಳ ಕಾಲ ಕೋವಿಡ್ 19 ವಿರುದ್ಧ ಹೋರಾಟ ನಡೆಸಿದ ಎಸ್‌ಪಿಬಿ, ಶುಕ್ರವಾರ ಮಧ್ಯಾಹ್ನ 1.04 ನಿಮಿಷಕ್ಕೆ ಇಹಲೋಕಕ್ಕೆ ವಿದಾಯ ಹೇಳಿದರು.
ಫಲಿಸಲಿಲ್ಲ ಪ್ರಾರ್ಥನೆ: ಎಸ್‌ಪಿಬಿ ಆಸ್ಪತ್ರೆಗೆ ದಾಖಲಾದ ದಿನದಿಂದಲೇ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ದೇಶಾದ್ಯಂತ ಅವರ ಚೇತರಿಕೆಗಾಗಿ ಪ್ರಾರ್ಥನೆಗಳು ನಡೆದವು. ಸ್ವರ ಸಾಮ್ರಾಟ ಬದುಕಿಬರಲಿ, ಗಾನಕೋಗಿಲೆ ಮತ್ತೆ ಹಾಡಲಿ ಎಂದು ಸಂಗೀತಪ್ರೇಮಿಗಳು ದೇವರ ಮೊರೆಹೋದರು. ಆದರೆ, ಈ ಯಾವ ಪ್ರಾರ್ಥನೆಯೂ ಫಲಿಸಲಿಲ್ಲ.
ದೌಡಾಯಿಸಿದ ಅಭಿಮಾನಿಗಳು: ಗುರುವಾರ ರಾತ್ರಿ ಎಸ್‌ಪಿಬಿ ಆರೋಗ್ಯ ಸ್ಥಿತಿ ಕ್ಷೀಣಿಸಿದೆ ಎಂಬ ವರದಿಗಳು ಬರಲಾರಂಭಿಸಿದೊಡನೆಯೇ ಚೆನ್ನೈನ ಎಂಜಿಎಂ ಆಸ್ಪತ್ರೆಯ ಮುಂದೆ ಅಭಿಮಾನಿಗಳ ದಂಡೇ ಆಗಮಿಸಿತ್ತು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಎಸ್‌ಪಿಬಿ ನಿಧನರಾದ ಸುದ್ದಿಯನ್ನು ಆಸ್ಪತ್ರೆಯು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ, ಅಭಿಮಾನಿಗಳ ರೋದನ ಮುಗಿಲುಮುಟ್ಟಿತ್ತು.
ಇದೇ ವೇಳೆ, ಕೋವಿಡ್ 19 ನೆಗೆಟಿವ್ ಬಂದಿರುವ ಕಾರಣ ಪಾರ್ಥಿವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಆಸ್ಪತ್ರೆಯು ಘೋಷಿಸುತ್ತಿದ್ದಂತೆ, ದೇಶದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ನುಂಗಂಬಾಕಂನಲ್ಲಿರುವ ಅವರ ಮನೆಯತ್ತ ದೌಡಾಯಿಸತೊಡಗಿದರು.
ಸಂಗೀತ ಗಾರುಡಿಗನಿಗೆ ಅಂತಿಮ ನಮನ ಸಲ್ಲಿಸಲೆಂದು ಬಂದಿದ್ದ ಭಾವುಕ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಇಂದು ಬೆಳಗ್ಗೆ 10.30ರ ಬಳಿಕ ಅಂತ್ಯಕ್ರಿಯೆ
ಶುಕ್ರವಾರ ಸಂಜೆ ಎಂಜಿಎಂ ಆಸ್ಪತ್ರೆಯು ಎಸ್‌ಪಿಬಿ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿತ್ತು. 4 ಗಂಟೆ ವೇಳೆಗೆ ಕೋಡಂಬಾಕಂನ ಕಾಮ್‌ಧಾರ್ ನಗರದಲ್ಲಿರುವ ಅವರ ಮನೆಗೆ ಪಾರ್ಥಿವ ಶರೀರವನ್ನು ತರಲಾಯಿತು.
ಅಲ್ಲಿ ಅದಾಗಲೇ ನೆರೆದಿದ್ದ ಸಾವಿರಾರು ಮಂದಿ ಅಗಲಿದ ಸಂಗೀತ ದಿಗ್ಗಜನ ಅಂತಿಮ ದರ್ಶನ ಪಡೆದರು. ನಂತರ ರಾತ್ರಿಯೇ ಪಾರ್ಥಿವ ಶರೀರವನ್ನು ಚೆನ್ನೈ ಹೊರವಲಯದ ತಿರುವಳ್ಳೂರು ಜಿಲ್ಲೆಯ ರೆಡ್ ಹಿಲ್ಸ್‌ನಲ್ಲಿರುವ ತೋಟದ ಮನೆಗೆ ಕೊಂಡೊಯ್ಯಲಾಯಿತು. ಶನಿವಾರ ಬೆಳಗ್ಗೆ 10.30ರ ಬಳಿಕ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಎಸ್‌ಪಿಬಿ ನಿಧನದಿಂದ ಭಾರತೀಯ ಸಂಗೀತ ಲೋಕವು ಒಂದು ಮಧುರ ಧ್ವನಿಯನ್ನು ಕಳೆದುಕೊಂಡಿದೆ. ಅವರು “ಹಾಡುವ ಚಂದಿರ’ ಎಂದೇ ಹೆಸರಾಗಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ.
– ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಎಸ್‌ಪಿಬಿ ಅಗಲಿಕೆ ಯಿಂದಾಗಿ ನಮ್ಮ ಸಾಂಸ್ಕೃತಿಕ ಜಗತ್ತೇ ಬಡವಾಗಿದೆ. ದೇಶಾದ್ಯಂತ ಮನೆಮಾತಾಗಿದ್ದ ಅವರು ತಮ್ಮ ಇಂಪಾದ ಧ್ವನಿಯಿಂದ ದಶಕಗಳ ಕಾಲ ಸಂಗೀತ ಪ್ರೇಮಿಗಳ ಮನತಣಿಸಿದ್ದರು.
– ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.