ಸಾಮಾಜಿಕ ಅಂತರವಿರಲಿ, ಭಾವನಾತ್ಮಕ ಅಂತರವಲ್ಲ!
Team Udayavani, Mar 30, 2020, 2:04 PM IST
ನನ್ನ ಪ್ರೀತಿಯ ದೇಶವಾಸಿಗಳೇ… ಸಾಮಾನ್ಯವಾಗಿ ನಾನು ಮನ್ ಕೀ ಬಾತ್‌ನಲ್ಲಿ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತಿರುತ್ತೇನೆೆ. ಆದರೆ. ಇಂದು ದೇಶ ಮತ್ತು ಜಗತ್ತಿನ ಮನಸ್ಸಿನಲ್ಲಿ ಕೋವಿಡ್ 19 ಜಾಗತಿಕ ಮಹಾಮಾರಿಯಿಂದ ಎದುರಾಗಿರುವ ಈ ಭಯಂಕರ ಸಂಕಷ್ಟದ ವಿಷಯವಷ್ಟೇ ಓಡಾಡುತ್ತಿದೆ. ಇಂಥ ಸ್ಥಿತಿಯಲ್ಲಿ ನಾನು ಬೇರೆ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಾಗುವುದಿಲ್ಲ. ಆದರೆ, ಎಲ್ಲಕ್ಕಿಂತ ಮೊದಲು ನಾನು ಎಲ್ಲಾ ದೇಶವಾಸಿಗಳಿಗೂ ಕ್ಷಮೆ ಕೋರುತ್ತೇನೆ. ನೀವೆಲ್ಲ ಖಂಡಿತ ನನ್ನನ್ನು ಕ್ಷಮಿಸುತ್ತೀರಿ ಎಂದೂ ನನ್ನ ಅಂತರಾತ್ಮ ಹೇಳುತ್ತಿದೆ.
ಈಗ ತೆಗೆದುಕೊಳ್ಳಲಾಗಿರುವ ಕೆಲವು ನಿರ್ಣಯಗಳಿಂದಾಗಿ ನೀವೆಲ್ಲ ಅನೇಕ ರೀತಿಯ ಅಡ್ಡಿಗಳನ್ನು ಎದುರಿಸಬೇಕಾಗಿದೆ.
ಅದರಲ್ಲೂ, ನಮ್ಮ ಬಡ ಸಹೋದರ ಸಹೋದರಿಯರು
“ಇವರೆಂಥ ಪ್ರಧಾನ ಮಂತ್ರಿ? ನಮ್ಮನ್ನು ಇಂಥ ತೊಂದರೆಗೆ
ದೂಡಿದರಲ್ಲ’ ಎಂದು ಭಾವಿಸುತ್ತಿರಬಹುದು. ನಾನು ಅವರಿಗೆ ವಿಶೇಷವಾಗಿ ಕ್ಷಮೆಯಾಚಿಸುತ್ತೇನೆ. ಅದ್ಹೇಗೆ ಎಲ್ಲರನ್ನೂ ಮನೆಯಲ್ಲಿ ಕೂಡಿಹಾಕಿದ್ದಿರಲ್ಲ ಎಂದು ಕೆಲವರಿಗೆ ನನ್ನ ಮೇಲೆ ಕೋಪವೂ ಬಂದಿರಬಹುದು. ನನಗೆ ನಿಮ್ಮ ಸಮಸ್ಯೆಗಳು, ನಿಮ್ಮ ಅಸಮಾಧಾನಗಳೆಲ್ಲವೂ ಅರ್ಥವಾಗುತ್ತವೆ. ಆದರೆ, ಭಾರತದಂಥ 130 ಕೋಟಿ ಜನಸಂಖ್ಯೆಯಿರುವ ರಾಷ್ಟ್ರದ ಮುಂದೆ, ಕೊರೊನಾ ವಿರುದ್ಧದ ಹೋರಾಟಕ್ಕೆ ಈ ಹೆಜ್ಜೆ ಇಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಕೊರೊನಾ ವಿರುದ್ಧದ ಸಮರವು, ಬದುಕು ಮತ್ತು ಸಾವಿನ ನಡುವಿನ ಸಮರವಾಗಿದೆ. ಈ ಹೋರಾಟದಲ್ಲಿ ನಾವು ಗೆಲ್ಲಲೇಬೇಕಿದೆ. ಈ ಕಾರಣಕ್ಕಾಗಿಯೇ ಈ ಕಠೊರ ಹೆಜ್ಜೆ ಇಡುವುದು ಅಗತ್ಯವಾಗಿತ್ತು. ಈ ರೀತಿಯ ನಿರ್ಧಾರ ಕೈಗೊಳ್ಳಲು ಯಾರಿಗೂ ಮನಸ್ಸಿರುವುದಿಲ್ಲ. ಆದರೆ, ಪ್ರಪಂಚದ ಪರಿಸ್ಥಿತಿ ನೋಡಿದ ಮೇಲೆ ಅನಿಸುತ್ತಿದೆ- ಇದೊಂದೇ ದಾರಿ ಉಳಿದಿರುವುದು..‡. ನಿಮಗೆ ಏನೆಲ್ಲ ಅನಾನುಕೂಲತೆ ಆಗಿದೆಯೋ, ತೊಂದರೆಗಳು ಎದುರಾಗಿವೆಯೋ ಅದಕ್ಕೆಲ್ಲ ಕ್ಷಮೆ ಕೇಳುತ್ತೇನೆ.
ರೋಗದೊಂದಿಗೆ ಆರಂಭದಲ್ಲೇ ಸೆಣಸಬೇಕು ಗೆಳೆಯರೇ, ನಮ್ಮಲ್ಲಿ ಒಂದು ಮಾತಿದೆ-“”ಏವಂ ಏವ ವಿಕಾ ರಹಃ ಅಪೀ ತರುಣಹ ಸಾಧ್ಯತೇ ಸುಖಂ”. ಅಂದರೆ, ರೋಗ ಮತ್ತು ಅದರ ಪ್ರಕೋಪದೊಂದಿಗೆ ಆರಂಭದಲ್ಲೇ ಸೆಣಸಬೇಕು ಎಂದು. ಆಮೇಲೆ ಅದನ್ನು ತಡೆಯುವುದು ಅಸಾಧ್ಯವಾಗಿಬಿಡುತ್ತದೆ. ಆಗ ಚಿಕಿತ್ಸೆಯೂ ಕಷ್ಟವಾಗಿಬಿಡುತ್ತದೆ. ಈಗ ಇಡೀ ಹಿಂದೂಸ್ತಾನ, ಮತ್ತು ಪ್ರತಿಯೊಬ್ಬ ಹಿಂದೂಸ್ತಾನಿಯೂ ಇದನ್ನೇ ಮಾಡುತ್ತಿದ್ದಾನೆ.
ಸಹೋದರರೇ, ಸಹೋದರಿಯರೇ, ತಾಯಂದಿರೇ, ಹಿರಿಯರೇ…ಕೊರೊನಾ ಪ್ರಪಂಚವನ್ನು ಬಂಧಿಸಿಟ್ಟಿದೆ. ಜ್ಞಾನ, ವಿಜ್ಞಾನ, ಬಡವ, ಶ್ರೀಮಂತ, ದುರ್ಬಲ, ಬಲಿಷ್ಠ…ಎಲ್ಲರಿಗೂ ಅದು ಸವಾಲೊಡ್ಡುತ್ತಿದೆ. ಈ ವೈರಸ್ ಯಾವುದೇ ರಾಷ್ಟ್ರದ ಸೀಮೆಯೊಳಗೆ ಸೀಮಿತವಾಗಿಲ್ಲ, ಯಾವುದೇ ಪ್ರದೇಶ ಮತ್ತು ವಾತಾವರಣವನ್ನೂ ಲೆಕ್ಕಿಸುವುದಿಲ್ಲ. ಈ ವೈರಸ್ ಮನುಷ್ಯನನ್ನು ಸಮಾಪ್ತಗೊಳಿಸುವ, ಸಾಯಿಸುವ ಹಠ ಹಿಡಿದುನಿಂತಿದೆ. ಈ ಕಾರಣಕ್ಕಾಗಿಯೇ, ಇಡೀ ಮನುಕುಲವೇ ಒಂದಾಗಿ ಈ ವೈರಸ್ ಅನ್ನು ನಾಶಮಾಡಲು ಸಂಕಲ್ಪ ತೊಡಲೇಬೇಕಿದೆ.
ಕೆಲವರಂತೂ ತಾವು ಲಾಕ್‌ಡೌನ್‌ನ ಪಾಲನೆ ಮಾಡಿ ಯಾರಿಗೋ ಉಪಕಾರಮಾಡುತ್ತಿದ್ದೇವೆ ಎಂದು ಭಾವಿಸುತ್ತಿದ್ದಾರೆ. ಅರೆ ಅಣ್ಣಾ…ಈ ಭ್ರಮೆಯಲ್ಲಿರುವುದು ಸರಿ ಅಲ್ಲವೇ ಅಲ್ಲ. ಈ ಲಾಕ್‌ಡೌನ್ ನಿಮ್ಮ ಸ್ವಯಂ ರಕ್ಷಣೆಗಾಗಿ ಇರುವುದು. ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು ಮತ್ತು ನಿಮ್ಮ ಪರಿವಾರದವರನ್ನು ರಕ್ಷಿಸಬೇಕು. ನೀವು ಮುಂದಿನ ಅನೇಕ ದಿನ ಇದೇ ರೀತಿಯ ಧೈರ್ಯ ತೋರಿಸಲೇಬೇಕಿದೆ. ಲಕ್ಷ್ಮಣ ರೇಖೆಯ ಪಾಲನೆ ಮಾಡಲೇಬೇಕಿದೆ.
ಲಕ್ಷ್ಣ ರೇಖೆಯ ಪಾಲನೆ ಮಾಡಿ
ಗೆಳೆಯರೇ, ಯಾರಿಗೂ ಕಾನೂನನ್ನು, ನಿಯಮಗಳನ್ನು ಮುರಿಯಲು ಇಷ್ಟವಿರುವುದಿಲ್ಲ ಎನ್ನುವುದು ನನಗೆ ಗೊತ್ತಿದೆ. ಆದರೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಏಕೆಂದರೆ, ಈಗಲೂ ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಇಂಥ ವ್ಯಕ್ತಿಗಳಿಗೆ ನಾನು ಹೇಳುವುದಿಷ್ಟೆ-
ಲಾಕ್‌ಡೌನ್ ನಿಯಮ ಮುರಿದರೆ ಕೋವಿಡ್ 19 ವೈರಸ್‌ನಿಂದ
ತಪ್ಪಿಸಿಕೊಳ್ಳುವುದು ಬಹಳ ಕಷ್ಟವಾಗಿಬಿಡುತ್ತದೆ. ಪ್ರಪಂಚದಾದ್ಯಂತ ಅನೇಕ ಜನರಿಗೆ ಇದೇ ರೀತಿಯ ತಪ್ಪು ಕಲ್ಪನೆ ಇತ್ತು. ಈಗ ಅವರೆಲ್ಲ ಪಶ್ಚಾತ್ತಾಪ ಪಡುತ್ತಿದ್ದಾರೆ.
ನಮ್ಮಲ್ಲಿ ಒಂದು ಮಾತಿದೆ- “ಆರೋಗ್ಯಂ ಪರಮ ಭಾಗ್ಯಂ, ಸ್ವಾಸ್ಥ್ಯಂ ಸರ್ವಾರ್ಥ ಸಾಧನಂ’. ಅಂದರೆ, “ಆರೋಗ್ಯವೇ ಅತಿ ದೊಡ್ಡ ಭಾಗ್ಯ. ಸ್ವಾಸ್ಥ್ಯವೇ ಪ್ರಪಂಚದಲ್ಲಿ ಎಲ್ಲಾ ಸುಖದ ಸಾಧನ’ ಎಂದು. ಇಂಥದ್ದರಲ್ಲಿ, ನಿಯಮ ಉಲ್ಲಂ ಸುವವರು ತಮ್ಮ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದೇ ಅರ್ಥ.
ಗೆಳೆಯರೇ, ಈ ಹೋರಾಟದಲ್ಲಿ ಅನೇಕ ಯೋಧರು ತಮ್ಮ ಮನೆಯಲ್ಲಿರದೇ, ಮನೆಯ ಹೊರಗೆ ಇದ್ದುಕೊಂಡು ಕೊರೊನಾ ವೈರಸ್‌ನ ವಿರುದ್ಧ ಹೋರಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ನಮ್ಮ ನರ್ಸಿಂಗ್ ಸಹೋದರಿಯರು, ಸಹೋದರರು, ವೈದ್ಯರು, ಪ್ಯಾರಾಮೆಡಿಕ್ ಸಿಬ್ಬಂದಿ ಮತ್ತು ಕೊರೊನಾದ ವಿರುದ್ಧ ಗೆಲುವು ಸಾಧಿಸಿರುವಂಥ ಗೆಳೆಯರಿಂದ ನಾವು ಇಂದು ಪ್ರೇರಣೆ ಪಡೆಯಬೇಕಿದೆ. ಕಳೆದ ಕೆಲವು ದಿನಗಳಿಂದ ನಾನು ಇಂಥ ಕೆಲವರಿಗೆ ಫೋನ್ ಮಾಡಿದ್ದೇನೆ, ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ, ಅವರೊಂದಿಗೆ ಮಾತನಾಡಿ ನನ್ನ ಉತ್ಸಾಹವೂ ಹೆಚ್ಚಿದೆ.
ನಮ್ಮ ಈ ಗೆಳೆಯರೆಲ್ಲ, ನಿಮ್ಮನ್ನು, ಇಡೀ ದೇಶವನ್ನು ಈ ಸಂಕಷ್ಟದಿಂದ ಹೊರತರಲು ಒಂದಾಗಿದ್ದಾರೆ. ಇವರು ಹೇಳುವ ಮಾತುಗಳನ್ನು ಕೇಳಿಸಿಕೊಳ್ಳುವುದಷ್ಟೇ ಅಲ್ಲ, ಅದನ್ನು ಅನ್ವಯಿಸಿಕೊಳ್ಳಬೇಕಿದೆ. ನಾನಿಂದು ವೈದ್ಯರ ತ್ಯಾಗ, ತಪಸ್ಸು, ಸಮರ್ಪಣೆಯನ್ನು ನೋಡಿದಾಗ, ನನಗೆ ಆಚಾರ್ಯ ಚರಕರು ವೈದ್ಯರ ವಿಷಯದಲ್ಲಿ ಬಹಳ ಸ್ಪಷವಾಗಿ ಹೇಳಿದ ಮಾತು ನೆನಪಾಗುತ್ತಿದೆ. ಅದನ್ನು ನಾವಿಂದು ವೈದ್ಯರ, ನರ್ಸ್‌ಗಳ ಜೀವನದಲ್ಲಿ ನೋಡುತ್ತಿದ್ದೇವೆ. “ನ ಆತ್ಮಾರ್ಥಂ ನಪಿ ಕರ್ಮಾರ್ಥಂ, ಅತ ಭೂತದಯಾಂ ಪ್ರತಿಃ. ವರ್ತತೇ ಯತ್ ಚಿಕಿತ್ಸಾಯಾಂಸ ಸರ್ವಂ ಇತಿ ವರ್ತತೇ”. ಅಂದರೆ, ಧನ ಮತ್ತು ಇತರೆ ಯಾವುದೇ ವಿಶೇಷ ಕಾಮನೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಲ್ಲ, ಬದಲಾಗಿ, ರೋಗಿಯ ಸೇವೆಗಾಗಿ ದಯಾಭಾವನೆಯಿಟ್ಟು ಕೊಂಡು ಯಾರು ಕೆಲಸ ಮಾಡುತ್ತಾರೋ, ಅವರು ಸರ್ವಶ್ರೇಷ್ಠ ಚಿಕಿತ್ಸಕರಾಗಿರುತ್ತಾರೆ. ಗೆಳೆಯರೇ, ಮಾನವೀಯತೆಯಿಂದ ತುಂಬಿರುವ ಪ್ರತಿ ನರ್ಸ್‌ಗಳಿಗೂ ಇಂದು ನಾನು ನಮಿಸುತ್ತೇನೆ. ನೀವೆಲ್ಲರೂ ಯಾವ ಸೇವಾ ಭಾವನೆಯೊಂದಿಗೆ ಕೆಲಸ ಮಾಡುತ್ತಿದ್ದೀರೋ ಅದಕ್ಕೆ ತುಲನೆಯೇ ಇಲ್ಲ. ಸಂಯೋಗ ಏನೆಂದರೆ, ಈ ವರ್ಷ, ಅಂದರೆ 2020ನ್ನು ಇಡೀ ಪ್ರಪಂಚ ಇಂಟರ್‍ನಾéಷನಲ್ ಇಯರ್ ಆಫ್ ನರ್ಸ್ ಆ್ಯಂಡ್ ಮಿಡ್ ವೈಫ್ ಎಂದು ಆಚರಿಸುತ್ತಿದೆ. ಆ ಆಚರಣೆಯು 200 ವರ್ಷದ ಹಿಂದೆ, ಅಂದರೆ 1820ರಲ್ಲಿ ಹುಟ್ಟಿದ ಫ್ಲೋರೇನ್ಸ್ ನೈಟಿಂಗೇಲ್‌ಗೆ ಸಂಬಂಧಿಸಿದ್ದಾಗಿದೆ. ನೈಟಿಂಗೇಲ್, ಅವರು ಮಾನವ ಸೇವೆಗೆ, ನರ್ಸಿಂಗ್‌ಗೆ ಹೊಸ ಗುರುತು ತಂದುಕೊಟ್ಟವರು, ಈ ಸೇವೆಯನ್ನು ಒಂದು ಹೊಸ ಎತ್ತರಕ್ಕೆ ಕೊಂಡೊಯ್ದವರು. ಪ್ರಪಂಚದ ಪ್ರತಿ ನರ್ಸ್‌ಗಳ ಸೇವಾ ಭಾವನೆಗೆ ಸಮರ್ಪಿತವಾಗಿರುವ ಈ ವರ್ಷವು ನಿಶ್ಚಿತವಾಗಿಯೂ ಇಡೀ ನರ್ಸಿಂಗ್ ಸಮುದಾಯಕ್ಕೆ ಬಹುದೊಡ್ಡ ಪರೀಕ್ಷೆಯ ಸಮಯವಾಗಿ ಎದುರಾಗಿದೆ. ನೀವೆಲ್ಲರೂ ಈ ಪರೀಕ್ಷೆಯಲ್ಲಿ ಸಫಲರಾಗುವುದಷ್ಟೇ ಅಲ್ಲದೇ, ಅನೇಕರ ಜೀವನವನ್ನೂ ಉಳಿಸುತ್ತೀರಿ ಎಂದು ನನಗೆ ವಿಶ್ವಾಸವಿದೆ. ನೀವು ನರ್ಸ್‌ಗಳೇ ಆಗಿರಲಿ, ವೈದ್ಯರೇ ಆಗಿರಲಿ, ಪ್ಯಾರಾ ಮೆಡಿಕಲ್ ಸಿಬ್ಬಂದಿಯಾಗಿರಲಿ, ಆಶಾ ಕಾರ್ಯಕರ್ತರು, ಸ್ವತ್ಛತಾ ಕಾರ್ಯಕರ್ತರಾಗಲಿ… ನಿಮ್ಮ ಆರೋಗ್ಯದ ಬಗ್ಗೆಯೂ ದೇಶವಾಸಿಗಳಿಗೆ ಬಹಳ ಚಿಂತೆಯಿದೆ. ನೀವು ಈ ಹೋರಾಟದಲ್ಲಿ ಮತ್ತಷ್ಟು ಆತ್ಮವಿಶ್ವಾಸದೊಂದಿಗೆ ದೇಶದ ನೇತೃತ್ವ ವಹಿಸಲಿ ಎಂಬ ಕಾರಣಕ್ಕಾಗಿ, ಇಂಥ 20 ಲಕ್ಷಕ್ಕೂ ಅಧಿಕ
ಗೆಳೆಯರಿಗೆ 50 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆಯ ಘೋಷಣೆ ಮಾಡಿದೆ ಸರಕಾರ.
ದಿನನಿತ್ಯದ ಹೀರೋಗಳು
ಕೋವಿಡ್ 19 ವೈರಸ್ ವಿರುದ್ಧದ ಈ ಯುದ್ಧದಲ್ಲಿ ನಮ್ಮ ಆಸುಪಾಸಲ್ಲೇ ಇರುವ ಅನೇಕ ಜನರು ಹೋರಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲೂ ಅವರು ಎಲ್ಲರಿಗಿಂತ ಮುಂದೆ ನಿಂತಿದ್ದಾರೆ. ನನಗೆ ನಮೋ ಆ್ಯಪ್‌ನಲ್ಲಿ ಬೆಂಗಳೂರಿನ ನಿರಂಜನ್ ಸುಧಾಕರ್ ಹೆಬ್ಟಾಳೆಯವರು ಒಂದು ಸಂದೇಶ ಕಳುಹಿಸಿದ್ದಾರೆ- “ಈ ರೀತಿಯ ಜನರೆಲ್ಲರೂ ನಿತ್ಯ ಜೀವನದ ಹೀರೋಗಳು’ ಎಂದು ಅವರು ಬರೆದಿದ್ದಾರೆ. ಈ ಮಾತು ಖಂಡಿತ ಸತ್ಯ. ಇವರಿಂದಾಗಿಯೇ ನಮ್ಮ ನಿತ್ಯದ ಬದುಕು ಆರಾಮವಾಗಿ ನಡೆಯುತ್ತಿರುತ್ತದೆ.
ನೀವೊಮ್ಮೆ ಕಲ್ಪಿಸಿಕೊಳ್ಳಿ, ನಿಮ್ಮ ಮನೆಯ ನಲ್ಲಿಯಲ್ಲಿ ನೀರು ಬರುವುದು ನಿಂತು ಹೋದರೆ, ಅಥವಾ ವಿದ್ಯುತ್ ಅಚಾನಕ್ಕಾಗಿ ಕಡಿತಗೊಂಡರೆ ಹೇಗಿರುತ್ತದೆ ಎಂದು. ಈ ದಿನ ನಿತ್ಯದ ಹೀರೋಗಳೇ ನಮ್ಮ ಕಷ್ಟಗಳನ್ನು ದೂರ ಮಾಡುವವರು. ನಿಮ್ಮ ಮನೆಯ ಸನಿಹವಿರುವ ಪುಟ್ಟ ಅಂಗಡಿಯ ಬಗ್ಗೆ ಯೋಚಿಸಿ ನೋಡಿ. ಈ ಕಠಿಣ ಸಮಯದಲ್ಲೂ ಆ ಅಂಗಡಿಯವರೂ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಏಕಾಗಿ? ಏಕೆಂದರೆ, ನಿಮಗೆ ಅಗತ್ಯ ವಸ್ತುಗಳು ಸಿಗುವಲ್ಲಿ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ. ಇದೇ ರೀತಿಯಲ್ಲೇ ದೇಶಾದ್ಯಂತ ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಯಲ್ಲಿ ಅಡ್ಡಿಗಳು ಬರಬಾರದು ಎಂಬ ಕಾರಣಕ್ಕಾಗಿ ದಿನ ರಾತ್ರಿ ದುಡಿಯುತ್ತಿರುವ ಡ್ರೈವರ್‌ಗಳು ಹಾಗೂ ಕೆಲಸಗಾರರ ಬಗ್ಗೆಯೂ ಯೋಚಿಸಿ.
ನೀವು ನೋಡಿರಬಹುದು, ಸರಕಾರವು ಬ್ಯಾಂಕಿಂಗ್ ಸೇವೆಗಳನ್ನು ಚಾಲೂ ಇಟ್ಟಿದೆ.ಬ್ಯಾಂಕಿಂಗ್ ಕ್ಷೇತ್ರದಲ್ಲಿರುವ ನಮ್ಮ ಜನ ಅತ್ಯಂತ ಉತ್ಸಾಹದಿಂದ, ಮನಃಸ್ಫೂರ್ತಿಯಾಗಿ ಕೆಲಸ ಮಾಡುತ್ತಾ ಈ ಹೋರಾಟದ ನೇತೃತ್ವ ವಹಿಸಿಕೊಂಡಿದ್ದಾರೆ. ಸಂಕಷ್ಟದ ಈ ಸಮಯದಲ್ಲಿ ಇವರ ಸೇವೆ ಚಿಕ್ಕದಲ್ಲವೇ ಅಲ್ಲ. ಬ್ಯಾಂಕಿನ ಸಿಬ್ಬಂದಿಗೆ ನಾವು ಎಷ್ಟೇ ಧನ್ಯವಾದ ಅರ್ಪಿಸಿದರೂ ಅದು
ಕಡಿಮೆಯೇ. ಇನ್ನು, ಬಹಳಷ್ಟು ಸಂಖ್ಯೆಯಲ್ಲಿ ನಮ್ಮ ಗೆಳೆಯರು ಇ-ಕಾಮರ್ಸ್‌ಗೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಡೆಲಿವರಿ ವ್ಯಕ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಠಿಣ ಸಮಯದಲ್ಲೂ ಇವರೆಲ್ಲ ಕಿರಾಣಿ ಸಾಮಾನು ಪೂರೈಕೆಯಲ್ಲಿ ನಿರತರಾಗಿದ್ದಾರೆ.
ಈ ಲಾಕ್‌ಡೌನ್ ಸಮಯದಲ್ಲೂ ನೀವು ಮನೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ್ದರೆ, ಫೋನ್, ಇಂಟರ್ನೆಟ್ ಬಳಸುತ್ತಿದ್ದರೆ….ಇದನ್ನೆಲ್ಲ ಚಾಲೂ ಇಡುವುದಕ್ಕಾಗಿ ಒಬ್ಬರಲ್ಲ ಒಬ್ಬರು ತಮ್ಮ ಬದುಕನ್ನು ಮೀಸಲಿಟ್ಟಿದ್ದಾರೆ ಎಂದರ್ಥ. ಈ ಸಮಯದಲ್ಲಿ ನೀವು ಆಸಾನಾಗಿ ಡಿಜಿಟಲ್ ಪೇಮೆಂಟ್ ಮಾಡುತ್ತಿದ್ದೀರಲ್ಲ, ಇದರ ಹಿಂದೆಯೂ ಅನೇಕಾನೇಕ ಜನರು ಕೆಲಸ ಮಾಡುತ್ತಿದ್ದಾರೆ. ಇವತ್ತು ಎಲ್ಲಾ ದೇಶವಾಸಿಗಳ ಪರವಾಗಿ, ಈ ಎಲ್ಲಾ ಜನರಿಗೂ ಆಭಾರ ವ್ಯಕ್ತಪಡಿಸುತ್ತೇನೆ. ಅಲ್ಲದೇ ಇವರೆಲ್ಲರೂ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಿ, ತಮ್ಮ ಮತ್ತು ತಮ್ಮ ಪರಿವಾರದ ಕಾಳಜಿ ಮಾಡಿಕೊಳ್ಳಲಿ ಎಂದು ವಿನಂತಿಸುತ್ತೇನೆ.
ಅಪರಾಧಿಗಳಂತೆ ನೋಡದಿರಿ
ನನ್ನ ಪ್ರೀತಿಯ ದೇಶವಾಸಿಗಳೇ, ಕೋವಿಡ್ 19 ವೈರಸ್‌ನ “ಸಂಭಾವ್ಯ’ ಸೋಂಕಿತರು ಅಥವಾ ಯಾರಿಗೆಲ್ಲ ಮನೆಯಲ್ಲಿ (ಕ್ವಾರಂಟೈನ್) ಇರಲು ಹೇಳಲಾಗಿದೆಯೋ, ಇಂಥ ವ್ಯಕ್ತಿಗಳೊಂದಿಗೆ ಕೆಲವರು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ನನಗೆ ತಿಳಿದುಬಂದಿದೆ. ಇಂಥದ್ದನ್ನೆಲ್ಲ ಕೇಳಿ ನನಗೆ ಅತ್ಯಂತ ನೋವಾಗಿದೆ. ಇದು ನಿಜಕ್ಕೂ ದೌರ್ಭಾಗ್ಯಕರ ವಿಚಾರ. ನಾವು ನೆನಪಿಡಬೇಕಾದದ್ದು ಏನೆಂದರೆ, ಈ ಪರಿಸ್ಥಿತಿಯಲ್ಲಿ ನಾವು ಪರಸ್ಪರ ಸಾಮಾಜಿಕ ಅಂತರಕಾಯ್ದುಕೊಳ್ಳಬೇಕೇ ಹೊರತು ಭಾವನಾತ್ಮಕ ಅಂತರ ಅಥವಾ ಹ್ಯೂಮೇನ್ ಡಿಸ್ಟೆನ್ಸ್ (ಮಾನವೀಯ ಅಂತರ) ಅಲ್ಲ.
ಇಂಥ ಜನರು ಅಪರಾಧಿಗಳಲ್ಲ. ಇವರೆಲ್ಲರೂ ಇತರರನ್ನು ವೈರಸ್ ನಿಂದ ಬಚಾವು ಮಾಡುವುದಕ್ಕಾಗಿ, ಪ್ರತ್ಯೇಕವಾಗಿದ್ದು ಸ್ವಯಂ- ದಿಗ್ಬಂಧನ ಹಾಕಿಕೊಂಡವರು. ವಿದೇಶದಿಂದ ಬಂದ ಕೆಲವರಂತೂ ತಮ್ಮಲ್ಲಿ ವೈರಸ್‌ನ ಯಾವ ಲಕ್ಷಣಗಳು ಕಾಣಿಸದಿದ್ದರೂ ಸ್ವ-ದಿಗ್ಬಂಧನ ಹಾಕಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ, ಇನ್ನೊಬ್ಬ ವ್ಯಕ್ತಿ ಈ ವೈರಸ್ ಸೋಂಕಿಗೆ ತುತ್ತಾಗದಿರಲಿ ಎನ್ನುವುದನ್ನು ಅವರು ಸುನಿಶ್ಚಿತಗೊಳಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ, ಅವರು ಇಷ್ಟು ಜವಾಬ್ದಾರಿ ತೋರಿಸುತ್ತಿರುವಾಗ ಅವರೊಂದಿಗೆ ಕೆಟ್ಟದಾಗಿ ವರ್ತಿಸುವುದು ಯಾವ ರೀತಿಯಿಂದಲೂ ಸರಿಯಲ್ಲ. ಬದಲಾಗಿ, ಅವರಿಗೆೆ ಸಹಾನುಭೂತಿಯೊಂದಿಗೆ ಸಹಯೋಗ ನೀಡುವ ಅಗತ್ಯವಿದೆ. ಆಗಲೇ ಹೇಳಿದಂತೆ, ಕೊರೊನಾದೊಂದಿಗೆ ಹೋರಾಡುವ ಪರಿಣಾಮಕಾರಿ ಮಾರ್ಗವೆಂದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಆದರೆ, ಇದರರ್ಥ, ಭಾವನಾತ್ಮಕ ಅಂತರವನ್ನು ಕಡಿತಗೊಳಿಸುವುದು
ಎಂದಲ್ಲ. ವಾಸ್ತವದಲ್ಲಿ ಈ ಸಮಯವು ನಮ್ಮ ಎಲ್ಲಾ ಹಳೆಯ ಸಾಮಾಜಿಕ ಸಂಬಂಧಗಳಲ್ಲಿ ಹೊಸ ಜೀವ ತುಂಬಲು ಬಳಕೆಯಾಗಿಬೇಕಿದೆ. ಆ ಸಂಬಂಧಗಳಿಗೆ ನವ ಚೈತನ್ಯ ತುಂಬಬೇಕಾದ ಸಮಯವಿದು. ನಾನು ಇನ್ನೊಮ್ಮೆ ಹೇಳುತ್ತೇನೆ, ಸೋಷಿಯಲ್ ಡಿಸ್ಟೆನ್ಸಿಂಗ್ ಹೆಚ್ಚಿಸಿ, ಎಮೋಷನಲ್ ಡಿಸ್ಟೆನ್ಸಿಂಗ್ ತಗ್ಗಿಸಿ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.