ದ್ರೋಹ ಬಗೆದ ಸರಕಾರ : ಕೇಂದ್ರದ ವಿರುದ್ಧ ಸೋನಿಯಾ ಟೀಕೆ
Team Udayavani, Apr 30, 2018, 6:00 AM IST
ಹೊಸದಿಲ್ಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರವು ಜನರಿಗೆ ದ್ರೋಹ ಬಗೆಯುತ್ತಿದ್ದು, NDA ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದ ಬೇರುಗಳು ಗಟ್ಟಿಯಾಗಿವೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಆರೋಪಿಸಿದ್ದಾರೆ. ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ರವಿವಾರ ನಡೆದ ‘ಜನಾಕ್ರೋಶ Rally’ಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. ನಮ್ಮ ಪಕ್ಷವು ಸತ್ಯ, ಪ್ರೀತಿ ಮತ್ತು ಅಹಿಂಸೆಯ ಭಾರತವನ್ನು ನಿರ್ಮಿಸಲು ಎಲ್ಲವನ್ನೂ ತ್ಯಾಗ ಮಾಡಿದರೆ, ಈಗ ಸುಳ್ಳು, ದ್ವೇಷ, ಹಿಂಸಾಚಾರವೇ ದೇಶವನ್ನು ಆಳುತ್ತಿದೆ. ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ, ಚುನಾವಣಾ ಲಾಭಕ್ಕಾಗಿ ಸಮುದಾಯಗಳನ್ನು ವಿಭಜಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನ್ಯಾಯಾಂಗವು ಹಿಂದೆಂದೂ ಕಂಡಿರದಂಥ ಬಿಕ್ಕಟ್ಟಿಗೆ ಸಿಲುಕಿದೆ. ಮಾಧ್ಯಮಗಳು ಎಂದಿನಂತೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಸೂಕ್ಷ್ಮವನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ದೇಶದ ಜನರ ಹಿತಾಸಕ್ತಿಯಿಂದಾದರೂ ನಾವು ಇದರ ವಿರುದ್ಧ ಹೋರಾಡುತ್ತೇವೆ ಎಂದು ಸೋನಿಯಾ ಹೇಳಿದ್ದಾರೆ. ಕಾಂಗ್ರೆಸ್‌ನ 2019ರ ಲೋಕಸಭೆ ಚುನಾವಣಾ ಪ್ರಚಾರದ ವೇದಿಕೆ ಎಂದೇ ವಿಶ್ಲೇಷಿಸಲಾದ ಈ ಜನಾಕ್ರೋಶ RAllyಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ರಾಜ್ಯಗಳ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.
ಇವರೆಂಥಾ ಪ್ರಧಾನಿ?: ಕೇಂದ್ರ ಸರಕಾರವು ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ, ರೈತರನ್ನು ನಿರ್ಲಕ್ಷಿಸುತ್ತಿದೆ, ಜನರ ಮೇಲೆ ಪರಿಣಾಮ ಬೀರುತ್ತಿರುವಂಥ ವಿಚಾರಗಳ ಬಗ್ಗೆ ಮೌನ ವಹಿಸಿದೆ. ಕಾರ್ಪೊರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡುವ ಸರಕಾರ, ದೇಶದ ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಚೀನ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಡೋಕ್ಲಾಂ ಬಿಕ್ಕಟ್ಟು ಕುರಿತು ಒಂದೇ ಒಂದು ಪದವನ್ನೂ ಮಾತನಾಡಿಲ್ಲ. ಇವರೆಂಥಾ ಪ್ರಧಾನಿ ಎಂದೂ ರಾಹುಲ್ ಪ್ರಶ್ನಿಸಿದ್ದಾರೆ.
ಲೋಕಸಭೆಯಲ್ಲೂ ಗೆಲುವು ನಮ್ಮದೇ
ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಅಸೆಂಬ್ಲಿ ಚುನಾವಣೆಯಲ್ಲಿ ಮಾತ್ರ ವಲ್ಲ, 2019ರ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಸಮಾಜದ ಎಲ್ಲ ವರ್ಗಗಳ ಜನರನ್ನೂ ಒಂದುಗೂ ಡಿಸುವ ಮತ್ತು ಪ್ರೀತಿಯನ್ನು ಹರಡುವ ಕೆಲಸ ಮಾಡಿದೆ. ಆದರೆ, ಬಿಜೆಪಿ ಮತ್ತು ಆರೆಸ್ಸೆಸ್ ದ್ವೇಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರ ಸಿಂಹದ ಮರಿಗಳಿದ್ದಂತೆ. ಅವರು ಸತ್ಯಕ್ಕಾಗಿ ಮತ್ತು ದೇಶಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಪ್ರಜಾಪ್ರಭುತ್ವ ಅಪಾಯದಲ್ಲಿದೆ
Rallyಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಜನರ ಭದ್ರತೆ, ಸುರಕ್ಷತೆಯ ಭೀತಿ, ನಿರುದ್ಯೋಗ ಸಮಸ್ಯೆ, ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಜನರನ್ನು ಆತಂಕಕ್ಕೆ ದೂಡಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ನಿಸ್ಸಾರಗೊಳಿಸುವ ಮೂಲಕ ಮೋದಿ ಸರಕಾರವು ಪ್ರಜಾಪ್ರಭುತ್ವವನ್ನೇ ಅಪಾಯಕ್ಕೆ ತಳ್ಳಿದೆ. ವಿಪಕ್ಷಗಳ ಅವಿಶ್ವಾಸ ಗೊತ್ತುವಳಿಯ ಚರ್ಚೆ ಆಗಬಾರದು ಎಂಬ ಉದ್ದೇಶಕ್ಕೆ ಸಂಸತ್ ಕಲಾಪವನ್ನೇ ವ್ಯರ್ಥಗೊಳಿಸಲಾಗಿದೆ. ಇದೆಲ್ಲವೂ ಅಪಾಯದ ಸೂಚಕ. ಪ್ರಜಾಸತ್ತೆ ಎನ್ನುವುದು ದೇಶದ ಸಂವಿಧಾನದ ಕೊಡುಗೆ. ಅದನ್ನು ಬಲಗೊಳಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದೂ ಹೇಳಿದರು ಸಿಂಗ್.
ಇದು ಜನಾಕ್ರೋಶ Rally ಅಲ್ಲ, ಅಧಿಕಾರ ಕಳೆದುಕೊಂಡ ಒಂದು ಪರಿವಾರ ನಡೆಸುತ್ತಿರುವ ‘ಪರಿವಾರ್ ಆಕ್ರೋಶ Rally’. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ಮನೆಗೆ ಕಳುಹಿಸುತ್ತಿರುವಾಗ, ಕಾಂಗ್ರೆಸ್ ನಾಯಕರು ಮಾತ್ರ ಜನಾಕ್ರೋಶ ಎಂಬ ಹೆಸರಲ್ಲಿ ನಾಟಕ ಶುರುಮಾಡಿದ್ದಾರೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ