ಸದನದಲ್ಲಿ ಸಿನೆಮಾ ಸದ್ದು; ಆಸ್ಕರ್, ಸೌತ್ ವರ್ಸಸ್ ಬಾಲಿವುಡ್, ಒಟಿಟಿಯದ್ದೇ ಚರ್ಚೆ
Team Udayavani, Mar 15, 2023, 7:05 AM IST
ಹೊಸದಿಲ್ಲಿ: ಪ್ರತೀ ಬಾರಿಯೂ ರಾಜಕೀಯ, ಪರಸ್ಪರ ವಾಗ್ಯುದ್ಧ, ಕೆಸರೆರಚಾಟಕ್ಕೆ ಸಾಕ್ಷಿಯಾಗುತ್ತಿದ್ದ ಸಂಸತ್‌ನಲ್ಲಿ ಮಂಗಳವಾರ ಪರಿಸ್ಥಿತಿ ಕೊಂಚ ಭಿನ್ನವಾ ಗಿತ್ತು. ಸದಸ್ಯರೆಲ್ಲರೂ ಕಲಾಪದಲ್ಲಿ “ಬಣ್ಣದ ಲೋಕ’ದ ಚರ್ಚೆಯಲ್ಲಿ ಮುಳುಗಿದ್ದು ಕಂಡುಬಂತು.
ದೇಶಕ್ಕೆ ಇದೇ ಮೊದಲ ಬಾರಿಗೆ ಎರಡು ಆಸ್ಕರ್ ಪ್ರಶಸ್ತಿಗಳು ಸಂದಿರುವ ಖುಷಿ ಮಂಗಳವಾರ ರಾಜ್ಯಸಭೆಯಲ್ಲಿ ಗೋಚರಿಸಿತು. ಆರ್‌ಆರ್‌ಆರ್ ಮತ್ತು ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರಗಳನ್ನು ನಿರ್ಮಿಸಿದವರಿಗೆ ಸಂಸದರು ಒಬ್ಬರಾದ ಮೇಲೆ ಒಬ್ಬರಂತೆ ಅಭಿನಂದಿಸಿದರು. ಅಷ್ಟೇ ಅಲ್ಲ, “ಒಟಿಟಿ ಪ್ಲಾಟ್‌ಫಾರಂ, ಸಿನೆಮಾ ಮಾರುಕಟ್ಟೆ, ಸೌತ್ ವರ್ಸಸ್ ಬಾಲಿವುಡ್, ಬಾಯ್ಕಟ್ ಸಂಸ್ಕೃತಿ’ ಸಹಿತ ಸಿನೆಮಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತೂ ಚರ್ಚೆ ನಡೆಯಿತು.
“ಈ ಸಾಧನೆಯು ಭಾರತೀಯ ಕಲಾವಿದರ ಅಭೂತಪೂರ್ವ ಪ್ರತಿಭೆ, ಅತ್ಯದ್ಭುತ ಕ್ರಿಯಾಶೀಲತೆ, ಬದ್ಧತೆಯನ್ನು ಪ್ರತಿಬಿಂಬಿಸಿದೆ. ಇದು ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವುದರ ಸಂಕೇತವೂ ಹೌದು’ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಹೇಳಿದರು.
ಸಂಸದೆ ಜಯಾ ಬಚ್ಚನ್ ಮಾತನಾಡಿ, “ಇದು ಆರಂಭ ಅಷ್ಟೆ. ಸಿನೆಮಾದ ಮಾರುಕಟ್ಟೆ ಭಾರತವೇ ಹೊರತು ಅಮೆರಿಕ ಅಲ್ಲ’ ಎಂದರು. ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, “ಆಸ್ಕರ್‌ನಲ್ಲಿನ ಈ ಸಾಧನೆ ಬಳಿಕ, ಇನ್ನಾದರೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಬಾಯ್ಕಟ್ ಸಂಸ್ಕೃತಿ(ಸಿನೆಮಾ ಬಹಿಷ್ಕರಿಸುವ ಪದ್ಧತಿ) ಕೊನೆಯಾಗಲಿ’ ಎಂದು ಆಶಿಸಿದರು.
ಒಟಿಟಿಗೆ ಮೆಚ್ಚುಗೆ: ಕೆಲವು ಸಂಸದರು, ದೇಶದಲ್ಲಿ ಒಟಿಟಿ ಪ್ಲಾಟ್‌ಫಾರಂ ವ್ಯಾಪ್ತಿ ಹೆಚ್ಚಿದ ಕಾರಣ, ಎಲಿಫೆಂಟ್ ವಿಸ್ಪರರ್ಸ್‌ನಂಥ ಚಿತ್ರಗಳಿಗೆ ವೇದಿಕೆ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟರು. ಇನ್ನು, ಜಯಾ ಬಚ್ಚನ್, ಜಾನ್ ಬ್ರಿಟ್ಟಾಸ್, ರಾಜೀವ್ ಶುಕ್ಲಾ, ಶಂತನು ಸೇನ್ ಸೇರಿದಂತೆ ಕೆಲ ಸದಸ್ಯರು, ಇದು ಇಡೀ ಭಾರತದ ಗೆಲವು. ಇಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಎಂಬ ಮಾತೇ ಬರಬಾರದು ಎಂದರು. ಇದಕ್ಕೂ ಮೊದಲು ಮಾತನಾಡಿದ ಎಂಡಿಎಂಕೆ, ಎಐಎಡಿಎಂಕೆ, ಆಂಧ್ರ ಬಿಜೆಪಿ ನಾಯಕರು, “ದಕ್ಷಿಣದ ಸಿನೆಮಾಗೆ ಪ್ರಶಸ್ತಿ ಬಂದಿದೆ’ ಎಂಬಂತೆ ಮಾತಾಡಿದರು.
2ನೇ ದಿನವೂ ಕೊಚ್ಚಿಹೋದ ಕಲಾಪ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಕುರಿತು ನೀಡಿದ ಹೇಳಿಕೆಯು ಸತತ 2ನೇ ದಿನವೂ ಸಂಸತ್ ಕಲಾಪವನ್ನು ವ್ಯರ್ಥಗೊಳಿಸಿತು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು “ರಾಹುಲ್‌ಗಾಂಧಿ ಕ್ಷಮೆ ಕೇಳಬೇಕು’ ಎಂದು ಘೋಷಣೆ ಕೂಗಿದರೆ, ವಿಪಕ್ಷಗಳ ಸದಸ್ಯರು, “ಹಿಂದಿನ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೋ ಗೊತ್ತಿಲ್ಲ, ಈ ಜನ್ಮದಲ್ಲಿ ಹಿಂದುಸ್ಥಾನದಲ್ಲಿ ಹುಟ್ಟಿದೆ’ ಎಂಬ ಪ್ರಧಾನಿ ಮೋದಿಯವರ ಹೇಳಿಕೆಗಳಿರುವ ಫಲಕಗಳನ್ನು ಹಿಡಿದು ಘೋಷಣೆ ಕೂಗತೊಡಗಿದರು. ಎರಡೂ ಸದನಗಳಲ್ಲಿ ಪರಿಸ್ಥಿತಿ ಹೀಗೇ ಮುಂದುವರಿದ ಕಾರಣ ಕೊನೆಗೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಇದಕ್ಕೂ ನೀವೇ ಕ್ರೆಡಿಟ್ ತಗೋಬೇಡಿ!: ಖರ್ಗೆ
ಆಸ್ಕರ್ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸುತ್ತಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿಯನ್ನು ಕಾಲೆಳೆದ ಪ್ರಸಂಗ ಮಂಗಳವಾರ ನಡೆಯಿತು. ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, “ಭಾರತಕ್ಕೆ ಎರಡು ಆಸ್ಕರ್ ಸಂದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಆದರೆ ನನ್ನ ದೊಂದು ಮನವಿಯಿದೆ- ಆಸ್ಕರ್ ಪಡೆದಿದ್ದಕ್ಕೂ ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳದಿರಲಿ. ಇದನ್ನು ನಾವೇ ಮಾಡಿದ್ದು, ನಾವೇ ನಿರ್ಮಿಸಿದ್ದು, ನಾವೇ ಬರೆದಿದ್ದು, ಮೋದಿಜಿಯೇ ನಿರ್ದೇಶಿಸಿದ್ದು ಎಂದೆಲ್ಲ ಹೇಳಬೇಡಿ. ಇದು ನನ್ನ ಏಕೈಕ ಕೋರಿಕೆ’ ಎಂದು ಹೇಳಿದರು. ಆಗ ಸದನದಲ್ಲಿದ್ದವರೆಲ್ಲ ಜೋರಾಗಿ ನಕ್ಕರು.
ಬ್ರ್ಯಾಂಡ್ ಇಂಡಿಯಾ’ದ ಉದಯವಾಗಿದೆ. ಇದು ಆರಂಭವಷ್ಟೆ. ಭಾರತಕ್ಕೆ ಜಗತ್ತಿನ “ಕಂಟೆಂಟ್ ಹಬ್’ ಆಗುವ ಎಲ್ಲ ಸಾಮರ್ಥ್ಯವೂ ಇದೆ. ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು.
-ಅನುರಾಗ್ ಠಾಕೂರ್, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.