ಆಸ್ತಿ ಹಕ್ಕುಗಳಿಗೆ ‘ಸ್ವಾಮಿತ್ವ’: ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲೂ ಅನುಷ್ಠಾನ
16 ಜಿಲ್ಲೆಗಳ, 16,580 ಹಳ್ಳಿಗಳಲ್ಲಿ ಡ್ರೋನ್ ಸಮೀಕ್ಷೆ
Team Udayavani, Aug 29, 2020, 7:12 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
– ಚನ್ನು ಮೂಲಿಮನಿ
ಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ತಲೆ ತಲಾಂತರದಿಂದ ವಾಸಿಸುತ್ತಿದ್ದರೂ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಹಕ್ಕುಪತ್ರ ನೀಡುವ ‘ಸ್ವಾಮಿತ್ವ’ ಯೋಜನೆ ರಾಜ್ಯದಲ್ಲಿ ಪ್ರಾರಂಭವಾಗಿದೆ.
ಕೇಂದ್ರ ಸರಕಾರದ ಈ ಸ್ವಾಮಿತ್ವ ಯೋಜನೆಯು ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಈಗಾಗಲೇ 82 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ 16 ಜಿಲ್ಲೆಗಳ 16,580 ಗ್ರಾಮಗಳಲ್ಲಿ ಡ್ರೋನ್ ಆಧಾರಿತ ಆಸ್ತಿ ಸರ್ವೇ ನಡೆಯಲಿದೆ.
ಗ್ರಾಮೀಣ ಭಾಗದಲ್ಲಿ ಅನೇಕರು ಪೂರ್ವಿಕರಿಂದ ಬಳುವಳಿಯಾಗಿ ಬಂದ ಜಮೀನು ಅಥವಾ ಮನೆಯಲ್ಲಿ ವಾಸಿಸುತ್ತಿದ್ದರೂ ತಮ್ಮ ಆಸ್ತಿಯ ಒಟ್ಟು ವಿಸ್ತೀರ್ಣ ಮತ್ತು ಹದ್ದುಬಸ್ತಿನ ಬಗ್ಗೆ ಯಾವುದೇ ದಾಖಲಾತಿಗಳಿಲ್ಲ.
ಗ್ರಾಮ ಪಂಚಾಯತ್‌ನ ದಾಖಲೆಗಳಲ್ಲಿ ಆಸ್ತಿ ಮಾಲಕತ್ವದ ಹೆಸರಿದ್ದರೂ ನಿಗದಿತ ಜಾಗದ ಮೇಲೆ ಸಾಲ ಪಡೆಯುವುದಾಗಲಿ, ಮಾರಾಟ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾಲಕತ್ವದ ಹಕ್ಕುಪತ್ರ ನೀಡುವ ‘ಸ್ವಾಮಿತ್ವ’ ಯೋಜನೆ ವರದಾನವಾಗಿದೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎಪ್ರಿಲ್‌ನಲ್ಲಿ ಚಾಲನೆ ನೀಡಿದ್ದರು. ರಾಜ್ಯದಲ್ಲಿ ಜು. 1ರಿಂದ ಪ್ರಾರಂಭಿಸಲಾಗಿತ್ತು.
ರಾಜ್ಯ ಸರಕಾರಗಳ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಭಾಗಿತ್ವದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದ 6.62 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಆಧಾರಿತ ಸರ್ವೇ ನಡೆಸಿ, ನಿಖರವಾದ ಸ್ಥಳ ಗುರುತಿಸಿ ಹಕ್ಕುಪತ್ರ ವಿತರಿಸುವುದು ಈ ಯೋಜನೆಯ ಗುರಿಯಾಗಿದ್ದು, ಇದಕ್ಕಾಗಿ ನೀಲನಕ್ಷೆ ಸಿದ್ಧ ಪಡಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 79 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ.
ಜಾಗೃತಿ ಕಾರ್ಯಕ್ರಮ
ಸರ್ವೇ ಆಫ್ ಇಂಡಿಯಾ ನೇತೃತ್ವದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ, ಕಂದಾಯ ಇಲಾಖೆ ಸಹಯೋಗದ ಜತೆಗೆ ಗ್ರಾ.ಪಂ. ಪಿಡಿಒ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಸರ್ವೇಯರ್‌ಗಳು ಮತ್ತು ಭಾರತೀಯ ಸರ್ವೇಕ್ಷಣ ಸಂಸ್ಥೆ ಅಧಿಕಾರಿಗಳು ಪೂರಕವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಯೋಜನೆ ಅನುಷ್ಠಾನಕ್ಕೂ ಮುನ್ನ ಪಿಡಿಒಗಳು ಮತ್ತು ಜನಪ್ರತಿನಿಧಿಗಳು ಪ್ರತೀ ಹಳ್ಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ.
ಸಣ್ಣ ಪುಟ್ಟ ವ್ಯಾಜ್ಯಗಳಿದ್ದರೆ ಸ್ಥಳದಲ್ಲೇ ಹಿರಿಯರ ಸಮ್ಮುಖದಲ್ಲಿ ಬಗೆಹರಿಸಲಿದ್ದಾರೆ.
ಅನುಷ್ಠಾನ ಹೇಗೆ?
– ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಗ್ರಾ.ಪಂ.ನ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತಾರೆ.
– ಭೂಮಾಪಕರು ಗ್ರಾ.ಪಂ. ಅಧಿಕಾರಿಗಳ ಜತೆಗೂಡಿ ಗ್ರಾಮದ ಗಡಿ ಮತ್ತು ಪ್ರತೀ ಆಸ್ತಿಯನ್ನು ಮಾಲಕರ ಸಮ್ಮುಖದಲ್ಲೇ ಪರಿಶೀಲಿಸಿ ಬಿಳಿ ಬಣ್ಣ ಅಥವಾ ಸುಣ್ಣದಲ್ಲಿ ಗುರುತು ಮಾಡುತ್ತಾರೆ.
– ಗುರುತಿಸಿದ ಗಡಿಯ ಬಗ್ಗೆ ಗ್ರಾ.ಪಂ. ಸಭೆಯಲ್ಲಿ ಠರಾವು ಪಾಸ್ ಮಾಡಲಾಗುತ್ತದೆ.
– ಬಳಿಕ ಡ್ರೋನ್ ಆಧಾರಿತ ಸರ್ವೇ ನಡೆಸಿ ಸೊತ್ತುಗಳ ಫೋಟೋ ಸೆರೆ ಹಿಡಿಯಲಾಗುತ್ತದೆ.
– ಸೆರೆ ಹಿಡಿದ ಚಿತ್ರಗಳನ್ನು ಸಂಸ್ಕರಿಸಿ, ಸುಣ್ಣ ಅಥವಾ ಬಣ್ಣದಲ್ಲಿ ಗುರುತಿಸಲಾದ ಆಸ್ತಿಗಳ ನಕಾಶೆ ತಯಾರಿಸಲಾಗುತ್ತದೆ.
– ಗ್ರಾ.ಪಂ.ಗಳಲ್ಲಿ ನಮೂದಾಗಿರುವ ದಾಖಲಾತಿಗಳ ಜತೆ ಹೊಂದಾಣಿಕೆ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಬಳಿಕ ಗ್ರಾಮಸ್ಥರ ಜತೆ ಸಭೆ ನಡೆಸಿ ತಕರಾರುಗಳಿದ್ದರೆ ಇತ್ಯರ್ಥಪಡಿಸಲಾಗುತ್ತದೆ.
– ಎಲ್ಲವೂ ಸರಿಯಾದ ಬಳಿಕ ಸರಕಾರದ ದಾಖಲಾತಿಗೆ ರವಾನಿಸಲಾಗುತ್ತದೆ. ಆಗ ಹೆಸರು ಹಾಗೂ ಇನ್ನಿತರ ತಿದ್ದುಪಡಿಗೂ ಅವಕಾಶವಿದೆ. ದಾಖಲಾತಿ ಮುಗಿದ ಬಳಿಕ ಹಕ್ಕುಪತ್ರ ನೀಡಲಾಗುತ್ತದೆ.
ಏನಿದು ಸ್ವಾಮಿತ್ವ?
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯು ಸರ್ವೇ ಆಫ್ ಇಂಡಿಯಾ ನೇತೃತ್ವದಲ್ಲಿ svamitva (ಸರ್ವೇ ಆಫ್ ವಿಲೇಜಸ್ ಆ್ಯಂಡ್ ಮ್ಯಾಪಿಂಗ್ ವಿತ್ ಇಂಪ್ರೊವೈಸ್ಡ್ ಟೆಕ್ನಾಲಜಿ ಇನ್ ವಿಲೇಜಸ್ ಏರಿಯಾ) ಯೋಜನೆ ರೂಪಿಸಿದೆ. ಕರ್ನಾಟಕ, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಿಸಲಿದೆ.
ಸಮಸ್ಯೆ ಏನಿತ್ತು?
ಗ್ರಾಮೀಣ ಪ್ರದೇಶಗಳ ಬಹುತೇಕ ಜನರ ಬಳಿ ತಮ್ಮ ಆಸ್ತಿಯ ಒಟ್ಟು ವಿಸ್ತೀರ್ಣ ಮತ್ತು ಮೌಲ್ಯ, ಹದ್ದುಬಸ್ತಿನ ಬಗ್ಗೆ ದಾಖಲಾತಿಗಳಿಲ್ಲ. ಗ್ರಾ.ಪಂ.ನಲ್ಲಿ ಹೆಸರಿದ್ದರೂ ನಿಗದಿತ ಜಾಗದ ಮೇಲೆ ಸಾಲ ಪಡೆಯಲು, ಮಾರಾಟ ಮಾಡಲು ಆಗುತ್ತಿಲ್ಲ. ಈ ಯೋಜನೆಯಿಂದ ಈ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುತ್ತಾರೆ ಧಾರವಾಡ ತಾಲೂಕು ಭೂಮಾಪಕ ಎಸ್.ಎಫ್. ಸಿದ್ದನಗೌಡರ.
ಯಾವ್ಯಾವ ಜಿಲ್ಲೆ?
ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ವಿಜಯಪುರ, ಗದಗ, ದಾವಣಗೆರೆ, ಕಲಬುರಗಿ, ಹಾಸನ, ಕೊಪ್ಪಳ, ಮೈಸೂರು, ರಾಯಚೂರು, ರಾಮನಗರ, ತುಮಕೂರು ಮತ್ತು ಯಾದಗಿರಿ.
ಅನುಕೂಲಗಳೇನು?
– ಡ್ರೋನ್ ಆಧಾರಿತ ಸರ್ವೇಯಿಂದ ನಕ್ಷೆ ನಿಖರ.
– ಆಸ್ತಿ ತೆರಿಗೆ ನಿರ್ಧಾರಕ್ಕೆ ಸಹಾಯಕ.
– ಕರ ಸಂಗ್ರಹದಿಂದ ಗ್ರಾಮ ಪಂಚಾಯತ್‌ಗಳಿಗೆ ಆರ್ಥಿಕ ಸದೃಢತೆ.
– ದಾಖಲೆಗಳ ಖಾತ್ರಿಯಿಂದ ಸಾಲ ಪಡೆಯಲು ಮತ್ತು ಮಾರಾಟಕ್ಕೆ ಅನುಕೂಲ.
– ಸರಕಾರಿ ಆಸ್ತಿ ಪರಭಾರೆ ಮಾಡಿದ್ದರೆ ವಶಪಡಿಸಿಕೊಳ್ಳಲು ನೆರವು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು , ರಾಜ್ಯದ 16 ಜಿಲ್ಲೆಗಳಲ್ಲಿ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದ ಜನತೆಗೆ ಆಸ್ತಿ ದಾಖಲೆ ಪಡೆಯಲು ಇದು ಉಪಯೋಗಕಾರಿ.
– ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವರು
ಯೋಜನೆಯಡಿ ಪ್ರಾಥಮಿಕ ಹಂತದಲ್ಲಿ 83 ಹಳ್ಳಿಗಳಲ್ಲಿ ಸಮೀಕ್ಷೆ ಕಾರ್ಯ ಆರಂಭಿಸಲಾಗಿದೆ. ಬಳಿಕ ಮುಂದಿನ ಹಂತದಲ್ಲಿ ವಿಸ್ತರಣೆ ಮಾಡಲಾಗುವುದು.
– ಎಲ್.ಕೆ. ಅತೀಕ್, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ
ಕೇಂದ್ರದ ಯೋಜನೆ ಕುರಿತು ಮಾರ್ಗಸೂಚಿ ಬಂದಿದೆ. ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ. ಗ್ರಾ.ಪಂ. ಸಿಬಂದಿ ಸಹಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಕಾರ್ಯಗತವಾಗಲಿದೆ.
– ನಜ್ಮಾ ಪೀರಜಾದೆ, ಧಾರವಾಡ ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.