ದೇಶಾದ್ಯಂತ ಸಮರವೀರರ ಶೌರ್ಯದ ಸ್ಮರಣೆ
Team Udayavani, Dec 17, 2021, 6:24 AM IST
ಹೊಸದಿಲ್ಲಿ/ಢಾಕಾ: “1971ರ ಯುದ್ಧದಲ್ಲಿ ಸಾಟಿಯಿಲ್ಲದ ಶೌರ್ಯದ ಅಧ್ಯಾಯವನ್ನು ಬರೆದ ವೀರ ಸೇನಾನಿಗಳ ಬಗ್ಗೆ ದೇಶದ ಪ್ರತಿಯೊಬ್ಬ ನಾಗರಿಕನೂ ಹೆಮ್ಮೆಪಡುತ್ತಾನೆ.’ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ವಿಜಯ ಪತಾಕೆ ಹಾರಿಸಿ 50 ವರ್ಷಗಳು ತುಂಬಿದ್ದು, ಇದರ ಹಿನ್ನೆಲೆ ದೇಶಾದ್ಯಂತ ನಡೆದ “ಸ್ವರ್ಣಿಂ ವಿಜಯ್ ವರ್ಷ’ದ ಆಚರಣೆಗಾಗಿ ಗುರುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾತುಗಳನ್ನಾಡಿದ್ದಾರೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತದ ಸಶಸ್ತ್ರ ಪಡೆಗಳ ಶೌರ್ಯ ಹಾಗೂ ತ್ಯಾಗವನ್ನೂ ಅವರು ಸ್ಮರಿಸಿದ್ದಾರೆ.
ವಿಜಯ್ ದಿವಸದ ಅಂಗವಾಗಿ ಪ್ರಧಾನಿ ಮೋದಿ ಗುರುವಾರ ದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ, ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ, ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಸಂಚರಿಸಿದ 4 ವಿಜಯ ಜ್ಯೋತಿಗಳನ್ನು ಒಂದುಗೂಡಿಸಿ, ಸ್ಮಾರಕದಲ್ಲಿನ ಶಾಶ್ವತ ಜ್ಯೋತಿಯೊಂದಿಗೆ ವಿಲೀನಗೊಳಿಸಿದರು.
ಕಳೆದ ವರ್ಷ ಮೋದಿ ಅವರೇ ಈ ಜ್ಯೋತಿಗಳನ್ನು ಬೆಳಗಿಸಿದ್ದರು. ಅನಂತರ 1971ರ ಯುದ್ಧದಲ್ಲಿ ಪರಮವೀರ ಚಕ್ರ ಮತ್ತು ಮಹಾ ವೀರ ಚಕ್ರದ ಪುರಸ್ಕೃತರ ಗ್ರಾಮಗಳೂ ಸೇರಿದಂತೆ ದೇಶದ ಮೂಲೆ ಮೂಲೆಗೂ ಈ ಜ್ಯೋತಿಗಳನ್ನು ಒಯ್ಯಲಾಗಿತ್ತು. ಗುರುವಾರ ಈ ನಾಲ್ಕೂ ಜ್ಯೋತಿಗಳು ಯುದ್ಧ ಸ್ಮಾರಕದ ಶಾಶ್ವತ ಜ್ಯೋತಿಯೊಂದಿಗೆ ಸಮ್ಮಿಳಿತಗೊಂಡವು. ಕಾರ್ಯಕ್ರಮದಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್, ಮೂರೂ ಪಡೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಈ ನಡುವೆ ಜಮ್ಮುವಿನ ಉಧಂಪುರ್‌ನಲ್ಲಿ “ಸ್ವರ್ಣಿಂ ವಿಜಯ್ ದ್ವಾರ್’ ಅನ್ನು ಲೋಕಾರ್ಪಣೆ ಮಾಡುವ ಮೂಲಕ ಭಾರತೀಯ ಸೇನೆಯ ನಾರ್ದರ್ನ್ ಕಮಾಂಡ್ 1971ರ ಯುದ್ಧವೀರರ ತ್ಯಾಗವನ್ನು ಸ್ಮರಿಸಿದೆ.
ಭಾರತದಿಂದ ರಕ್ಷಣ ಸಾಮಗ್ರಿ ಆಮದು :
ಸದ್ಯದಲ್ಲೇ ಬಾಂಗ್ಲಾದೇಶವು ಭಾರತದಿಂದ ಹಲವು ರಕ್ಷಣ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಿವೆ ಎಂದು ವಿದೇಶಾಂಗ ಕಾರ್ಯದರ್ಶಿ ಶ್ರಿಂಗ್ಲಾ ಹೇಳಿದ್ದಾರೆ. ಭಾರತ ಸರಕಾರವು ಬಾಂಗ್ಲಾಗೆ 500 ದಶಲಕ್ಷ ಡಾಲರ್ ಸಾಲ ಘೋಷಿಸಿದ್ದು, ಅದರಡಿ ಈ ಸಾಮಗ್ರಿಗಳನ್ನು ಬಾಂಗ್ಲಾ ಖರೀದಿಸಲಿದೆ ಎಂದೂ ಅವರು ತಿಳಿಸಿದ್ದಾರೆ. ಇದೇ ವೇಳೆ, ಉಭಯ ದೇಶಗಳಿಗೆ ತಮ್ಮ ಇಂಧನ ಅಗತ್ಯಗಳನ್ನು ಪೂರೈಸಲು ನೆರವಾಗುವಂಥ ಭಾರತ- ಬಾಂಗ್ಲಾ ಫ್ರೆಂಡ್‌ಶಿಪ್ ಪೈಪ್‌ಲೈನ್ ಯೋಜನೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಲೋಕಾರ್ಪಣೆಗೊಳ್ಳುವ ಸಾಧ್ಯತೆಯಿದೆ ಎಂದು ಶ್ರಿಂಗ್ಲಾ ಹೇಳಿದ್ದಾರೆ. 346 ಕೋಟಿ ರೂ. ವೆಚ್ಚದ ಈ ಯೋಜನೆಗೆ 2018ರಲ್ಲಿ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು.
ವಿಕ್ಟರಿ ಪರೇಡ್‌ನಲ್ಲಿ ರಾಷ್ಟ್ರಪತಿ ಕೋವಿಂದ್ ಭಾಗಿ :
ಮೂರು ದಿನಗಳ ಬಾಂಗ್ಲಾ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ಢಾಕಾದಲ್ಲಿ ನಡೆದ ವಿಕ್ಟರಿ ಡೇ ಪರೇಡ್‌ನಲ್ಲಿ ಗೌರವ ಅತಿಥಿಯಾಗಿ ಭಾಗಿಯಾದರು. ಭಾರತದ ಮೂರೂ ಪಡೆಗಳ 122 ಯೋಧರ ತಂಡವು ಪರೇಡ್‌ನಲ್ಲಿ ಹೆಜ್ಜೆ ಹಾಕಿದ್ದು, ಬಾಂಗ್ಲಾ ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನಿ ಶೇಖ್ ಹಸೀನಾ, ಸಚಿವರು ಮತ್ತಿತರ ಗಣ್ಯರು ಸಾಕ್ಷಿಯಾದರು. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಟಿ. ಆಶಾ ಜ್ಯೋತಿರ್ಮಯಿ ಅವರು ಬಾಂಗ್ಲಾ ವಾಯುಪಡೆಯ ಸ್ಕೈಡೈವರ್‌ಗಳೊಂದಿಗೆ ಜಂಟಿ ಸ್ಕೈಡೈವಿಂಗ್ ಮಾಡಿದ್ದು, ನೆರೆದಿದ್ದವರು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ, 1971ರ ಯುದ್ಧದಲ್ಲಿ ಬಳಸಲಾದ ಮಿಗ್-21 ವಿಮಾನದ ಪ್ರತಿಕೃತಿಯನ್ನು ಕೋವಿಂದ್ ಅವರು ಬಾಂಗ್ಲಾ ಅಧ್ಯಕ್ಷ ಅಬ್ದುಲ್ ಹಮೀದ್ ಅವರಿಗೆ ಉಡುಗೊರೆಯಾಗಿ ನೀಡಿದರು. ನೈಜ ಮಿಗ್ 21 ಯುದ್ಧವಿಮಾನವನ್ನು ಬಾಂಗ್ಲಾದೇಶದ ರಾಷ್ಟ್ರೀಯ ಮ್ಯೂಸಿಯಂನಲ್ಲಿ ಇಡಲಾಗಿದೆ.
ಇಂದು ನವೀಕೃತ ಶ್ರೀ ರಮಣ ಕಾಳಿ ಮಂದಿರ ಲೋಕಾರ್ಪಣೆ :
ಢಾಕಾದಲ್ಲಿ ನವೀಕರಣಗೊಂಡಿರುವ ಐತಿಹಾಸಿಕ ಶ್ರೀ ರಮಣ ಕಾಳಿ ಮಂದಿರವನ್ನು ಶುಕ್ರವಾರ ರಾಷ್ಟ್ರಪತಿ ಕೋವಿಂದ್ ಲೋಕಾರ್ಪಣೆ ಮಾಡಲಿದ್ದಾರೆ. ಬಾಂಗ್ಲಾ ವಿಮೋಚನ ಯುದ್ಧದ ವೇಳೆ ಈ ಮಂದಿರವನ್ನು ಪಾಕಿಸ್ಥಾನಿ ಪಡೆಗಳು ಧ್ವಂಸಗೊಳಿಸಿದ್ದವು. “ಆಪರೇಷನ್ ಸರ್ಚ್‌ಲೈಟ್’ ಎಂಬ ಕಾರ್ಯಾಚರಣೆ ನಡೆಸಿ ಪಾಕ್ ಸೈನಿಕರು, ಈ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಲ್ಲದೇ ಅಲ್ಲಿದ್ದ ಹಲವು ಭಕ್ತರನ್ನೂ ಕೊಂದು ಹಾಕಿದ್ದರು. ಈ ಮಂದಿರದ ನವೀಕರಣಕ್ಕೆ ಭಾರತವೂ ನೆರವಿನ ಹಸ್ತ ಚಾಚಿತ್ತು. ಈಗ ಈ ದೇಗುಲವನ್ನು ಕೋವಿಂದ್ ಅವರು ಉದ್ಘಾಟಿಸುತ್ತಿರುವುದು ಎರಡೂ ದೇಶಗಳಿಗೆ ಭಾವನಾತ್ಮಕ ಕ್ಷಣವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
1971ರ ಇಂಡೋ-ಪಾಕ್ ಯುದ್ಧವು ಭಾರತದ ಸೇನಾ ಇತಿಹಾಸದಲ್ಲೇ ಸುವರ್ಣ ಅಧ್ಯಾಯವಾಗಿದೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ತ್ಯಾಗವು ಸ್ಮರಣೀಯವಾದದ್ದು. –ರಾಜನಾಥ್ ಸಿಂಗ್, ರಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.