ಆಧಾರ್ ಜೋಡಣೆ ಮಾ.31ಕ್ಕೆ ವಿಸ್ತರಣೆ
Team Udayavani, Dec 8, 2017, 6:25 AM IST
ಹೊಸದಿಲ್ಲಿ: ಬ್ಯಾಂಕಿಂಗ್, ಮೊಬೈಲ್ ಸಂಪರ್ಕ, ಪಾನ್ ಕಾರ್ಡ್ ಹಾಗೂ ಸರಕಾರದ ವಿವಿಧ ಕಲ್ಯಾಣ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡುವ ದಿನಾಂಕವನ್ನು ಮಾ. 31ರ ವರೆಗೆ ವಿಸ್ತರಿಸುತ್ತೇವೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಗುರುವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಮುಂದೆ ಸರಕಾರ ಈ ಹೇಳಿಕೆ ನೀಡಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ), ಆಧಾರ್ ಜೋಡಣೆ ಮಾಡುವ ಬಗ್ಗೆ ಈ ಹಿಂದೆ ನಿಗದಿ ಮಾಡಲಾಗಿರುವ ದಿನಾಂಕವೇ ಅಂತಿಮ. ಅದರಲ್ಲಿ ಯಾವುದೇ ಬದಲು ಮಾಡಿಲ್ಲ ಎಂದಿದೆ.
ಸರಕಾರಿ ಸೌಲಭ್ಯಗಳಿಗೆ ಆಧಾರ್ ಜೋಡಣೆ ಮಾಡುವುದಕ್ಕೆ ಮಧ್ಯಾಂತರ ತಡೆಯಾಜ್ಞೆ ನೀಡಬೇಕು ಎಂದು ಆಗ್ರಹಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಪೀಠ ರಚನೆ ಮಾಡುವ ಕುರಿತ ನಿರ್ಧಾರಕ್ಕೆ ಮೊದಲೇ ಕೇಂದ್ರದಿಂದ ಸುಪ್ರೀಂ ಕೋರ್ಟ್‌ಗೆ ಹೇಳಿಕೆ ಸಲ್ಲಿಕೆಯಾಗಿದೆ. ಯೋಜನೆ ಗಳಿಗೆ ಮತ್ತು ಸೇವೆಗಳಿಗೆ ಆಧಾರ್ ಜೋಡಣೆ ಮಾಡುವುದರ ಮೇಲೆ ತಡೆ ವಿಧಿಸುವುದು ಸಾಧ್ಯವಾಗದು. ಏಕೆಂದರೆ ಹಲವು ವರ್ಷಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣು ಗೋಪಾಲ್ ಹೇಳಿದ್ದಾರೆ. ಸದ್ಯ ಡಿ.31ರ ಗಡುವು ಇದೆ. ಅದನ್ನು ಮಾ. 31ಕ್ಕೆ ವಿಸ್ತರಿಸುವ ಬಗ್ಗೆ ಶುಕ್ರವಾರವೇ ಅಧಿಕೃತ ಪ್ರಕಟನೆಯನ್ನು ಸರಕಾರ ಹೊರಡಿಸಲಿದೆ ಎಂದಿದ್ದಾರೆ. ಪ್ರಕರಣದ ಬಗ್ಗೆ ವಾದಿಸಲು ಸಿದ್ಧರಿರುವುದಾಗಿ ಅಟಾರ್ನಿ ಜನರಲ್ ಹೇಳಿದ್ದಾರೆ.
ದಿನಾಂಕ ನಿಗದಿ: ಆಧಾರ್ ಪರ- ವಿರೋಧದ ವಾದಗಳನ್ನು ಆಲಿಸಿದ ನ್ಯಾಯಪೀಠ, ಮುಂದಿನ ವಾರವೇ ಅರ್ಜಿಗಳ ಅಂತಿಮ ವಿಚಾರಣೆಗೆ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ರಚಿಸುವುದಾಗಿ ಹೇಳಿತು. ಜತೆಗೆ ದಿನಾಂಕವನ್ನೂ ನಿಗದಿ ಮಾಡುವುದಾಗಿ ತಿಳಿಸಿತು. ನ. 27 ರಂದು ನಡೆದಿದ್ದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪ್ರತ್ಯೇಕ ನ್ಯಾಯ ಪೀಠ ರಚಿಸುವುದಾಗಿ ಹೇಳಿತ್ತು.
ಯಾವುದೇ ಬದಲಿಲ್ಲ: ಈ ನಡುವೆ ಬ್ಯಾಂಕ್, ಮೊಬೈಲ್ ಸಂಪರ್ಕ, ಪಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವ ಬಗ್ಗೆ ಹಾಲಿ ಇರುವ ದಿನಾಂಕಗಳನ್ನು ಬದಲು ಮಾಡಲಾಗಿಲ್ಲ. ಜತೆಗೆ ಅದನ್ನು ಜೋಡಣೆ ಮಾಡಬೇಕು ಎಂಬ ನಿಯಮ ಕಾನೂನು ಪ್ರಕಾರವೇ ಇದೆ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ಸಾರ್ವಜನಿಕರು ನಂಬಬಾರದು. ಸುಪ್ರೀಂ ಕೋರ್ಟಿನಿಂದ ಯಾವುದೇ ತಡೆಯಾಜ್ಞೆ ನೀಡಲಾಗಿಲ್ಲ ಎಂದು ಪ್ರಾಧಿಕಾರ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.