ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ತ.ನಾಡು ಒತ್ತಡ
Team Udayavani, Mar 29, 2018, 6:30 AM IST
ನವದೆಹಲಿ/ಸೇಲಂ: ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಎಂಬಿ) ರಚಿಸಬೇಕು ಎಂದು ಎಐಎಡಿಎಂಕೆ ಸಂಸದರು ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಆರಂಭವಾಗುತ್ತಿದ್ದಂತೆಯೇ ಸ್ಪೀಕರ್ ಸುಮಿತ್ರಾ ಮಹಾಜನ್ ಪೀಠದ ಮುಂಭಾಗ ಬ್ಯಾನರ್‌ಗಳನ್ನು ಹಿಡಿದ ಸಂಸದರು ಮಂಡಳಿ ರಚಿಸುವಂತೆ ಒತ್ತಾಯಿಸಿದರು. ಹೀಗಾಗಿ ಇತರ ಸದಸ್ಯರ ಮಾತು ಕೇಳಿಸದಂತಾಯ್ತು. “ಕಲಾಪದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದೀರಿ’ ಎಂದು ಸ್ಪೀಕರ್ ಆಕ್ಷೇಪಿಸಿದರೂ ಪ್ರಯೋಜನವಾಗಲಿಲ್ಲ.
ಇನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಲು ಮುಂದಾದರೂ ಸಾಧ್ಯವಾಗಲಿಲ್ಲ. ಇದೇ ವೇಳೆ ಟಿಡಿಪಿ ಸಂಸದರು ತಾವು ಕುಳಿತಲ್ಲಿಂದಲೇ, ಘೋಷಣಾ ಫಲಕಗಳನ್ನು ಹಿಡಿದು ಎದ್ದು ನಿಂತು ಮೌನವಾಗಿ ಪ್ರತಿಭಟನೆ ನಡೆಸಿದ್ದರು.
ಗೊಂದಲ ನಿವಾರಿಸಿ: ಈ ನಡುವೆ, ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಿ, ತಮಿಳುನಾಡು ಜನತೆ ಹಾಗೂ ಕಾವೇರಿ ನದಿ ಪಾತ್ರದಲ್ಲಿರುವ ರೈತರಲ್ಲಿ ಮೂಡಿರುವ ಗೊಂದಲ ನಿವಾರಿಸಿ ಎಂದು ತಮಿಳುನಾಡು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಸೇಲಂನಲ್ಲಿ ಮಾತನಾಡಿದ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಕೇಂದ್ರ ಸರ್ಕಾರ ನಮ್ಮ ಮನವಿಯನ್ನು ಮನ್ನಿಸಿ ಕೂಡಲೇ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನೀರು ಕಾರ್ಯನಿರ್ವಹಣಾ ಸಮಿತಿ ರಚಿಸಿ ರಾಜ್ಯದ ಜನತೆ ಮತ್ತು ರೈತರಿಗೆ ಉತ್ತಮ ಸಂದೇಶ ರವಾನಿಸುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ಗಡ್ಕರಿ ಭೇಟಿ ಮಾಡಿದ ಬಿಜೆಪಿ ನಿಯೋಗ
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ತಮಿಳುನಾಡು ಬಿಜೆಪಿ ನಿಯೋಗ ಬುಧವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಶೀಘ್ರ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಹಾಗೂ ವಿವಾದಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಿ ಎಂದು ಮನವಿ ಮಾಡಿದೆ. ಅಲ್ಲದೇ, ಗೋದಾವರಿಯಿಂದ ಹರಿದು ಹೋಗುವ ಹೆಚ್ಚುವರಿ ನೀರನ್ನು ಕಾವೇರಿಗೆ ಹರಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಸಚಿವರು ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ನಿಯೋಗದ ಸದಸ್ಯರಲ್ಲೊಬ್ಬರಾದ ರಾಜ್ಯಸಭಾ ಸದಸ್ಯ ಎಲ್. ಗಣೇಶನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.