Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ
ತಿರುಮಲ ಅಪವಿತ್ರ.. ನೈರ್ಮಲ್ಯ ಪ್ರಕ್ರಿಯೆ ಆರಂಭಿಸಿದ್ದೇವೆ
Team Udayavani, Sep 21, 2024, 6:50 AM IST
ಅಮರಾವತಿ: ಅಗ್ಗದ ಬೆಲೆ, ಕಲಬೆರಕೆಯ ತುಪ್ಪವನ್ನು ಖರೀದಿಸಿ ಲಡ್ಡು ಪ್ರಸಾದ ತಯಾರಿಸುತ್ತಿದ್ದ ಹಿಂದಿನ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರಕಾರ ತಿರುಪತಿಯನ್ನು ಅಪವಿತ್ರಗೊಳಿಸಿದೆ. ಕ್ಷಮಿಸಲಾಗದಂಥ ತಪ್ಪು ಮಾಡಿರುವವರನ್ನು ಸುಮ್ಮನೆ ಬಿಡಲು ಸಾಧ್ಯವೇ? ಹೀಗೆಂದು ಪ್ರಶ್ನಿಸಿದ್ದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.
ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, “ಲಡ್ಡು ತಯಾರಿಕೆಯಲ್ಲಿ ಕಳಪೆ ಮಟ್ಟದ ತುಪ್ಪ ಬಳಸುವ ಮೂಲಕ ಜಗನ್ ಸರಕಾರ ಕೋಟ್ಯಂತರ ಭಕ್ತರಿಗೆ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಈಗ ನಾವು ತುಪ್ಪ ಪೂರೈಕೆದಾರರನ್ನು ಬದಲಿಸಿ, ಕರ್ನಾಟಕದ ನಂದಿನಿ ಬ್ರ್ಯಾಂಡ್‌ನ ತುಪ್ಪ ಖರೀದಿಸುತ್ತಿದ್ದೇವೆ. ಎಲ್ಲ ಜನರಿಗೂ ಅವರವರ ಧರ್ಮದ ಮೇಲೆ ಗೌರವವಿರುತ್ತದೆ. ಅಂಥದ್ದರಲ್ಲಿ ಕೋಟ್ಯಂತರ ಜನರು ಭೇಟಿ ನೀಡುವ ತಿರುಪತಿಯಲ್ಲೇ ಈ ರೀತಿ ಆಗಿದೆಯೆಂದರೆ, ತಪ್ಪಿತಸ್ಥರನ್ನು ಶಿಕ್ಷಿಸದೇ ಬಿಡಲು ಸಾಧ್ಯವೇ? ತಪ್ಪು ಮಾಡಿದವರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಲಡ್ಡು ಕಲಬೆರಕೆ ಪ್ರಕರಣ ಸಿಬಿಐ ತನಿಖೆಗೆ ಆದೇಶಿಸಿ: ಜಗನ್ ಸೋದರಿ ಆಗ್ರಹ
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಜಗನ್ ಸೋದರಿ, ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್.ಶರ್ಮಿಳಾ, “ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನಂಶ ಇರುವ ಆರೋಪದಲ್ಲಿ ಸತ್ಯ ಹೊರಗೆ ಬರಲೇಬೇಕು. ಏಕೆಂದರೆ, ಇದು ಕೋಟ್ಯಂ ತರ ಜನರಿಗೆ ಸಂಬಂಧಿಸಿದ ವಿಚಾರ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಕೋರಿ ನಾನು ಗೃಹ ಸಚಿವ ಅಮಿತ್ ಶಾರಿಗೆ ಪತ್ರ ಬರೆದಿದ್ದೇನೆ ಎಂದಿದ್ದಾರೆ.
ನಾವು ಪೂರೈಸಿದ ತುಪ್ಪ ಗುಣಮಟ್ಟ ಸರಿಯಿತ್ತು: ತಮಿಳುನಾಡು ಕಂಪೆನಿ
ಚೆನ್ನೈ: “ತಿರುಪತಿ ದೇವಸ್ಥಾನಕ್ಕೆ ನಾವು ಪೂರೈಕೆ ಮಾಡಿದ್ದ ತುಪ್ಪವು ಗುಣಮಟ್ಟದ ಪರೀಕ್ಷೆಗಳನ್ನು ಪಾಸು ಮಾಡಿತ್ತು’ ಎಂದು ತಮಿಳುನಾಡು ಮೂಲದ ಕಂಪೆನಿ ಹೇಳಿದೆ. ದಿಂಡಿಗಲ್ ಮೂಲದ ಎಆರ್ ಡೇರಿ ಕಳೆದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ತುಪ್ಪ ಪೂರೈಕೆ ಮಾಡಿತ್ತು. ತಿರುಪತಿಗೆ ತುಪ್ಪ ಪೂರೈಕೆ ಮಾಡಿದ್ದ ಸಮಯದಲ್ಲಿ ಅದನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ನಮ್ಮ ತುಪ್ಪವನ್ನು ತಿರುಪತಿಗೆ ನೀಡಲಾಗುತ್ತಿಲ್ಲ. ಆದರೆ ಎಲ್ಲೆಲ್ಲಿನ ನಮ್ಮ ಸಂಸ್ಥೆಯ ತುಪ್ಪ ದೊರೆಯುತ್ತಿದೆಯೋ ಅದು ಗುಣಮಟ್ಟ ಪರೀಕ್ಷೆಗಳಿಗೆ ಒಳಪಟ್ಟಿದೆ ಎಂದು ಎಆರ್ ಡೇರಿ ಸಂಸ್ಥೆಯ ವಕ್ತಾರ ಹೇಳಿದ್ದಾರೆ. ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿ ಕೊಬ್ಬು ಬಳಕೆ ಮಾಡಲಾಗಿದೆ ಎಂಬ ವಿವಾದದಲ್ಲಿ ಕಂಪೆನಿಯ ಹೆಸರು ಕೇಳಿಬಂದ ಬೆನ್ನಲ್ಲೇ ಈ ಹೇಳಿಕೆಯನ್ನು ಕಂಪೆನಿ ನೀಡಿದೆ.
ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಇರುವ ವಿಚಾರ ಆಘಾತಕಾರಿ ಹಾಗೂ ಗಂಭೀರ ವಿಚಾರ. ಈ ಬಗ್ಗೆ ಸಮಗ್ರ ತನಿಖೆ ನಡೆದು, ತಪ್ಪಿತಸ್ಥರು ಶಿಕ್ಷೆ ಅನುಭವಿಸುವಂತಾಗಬೇಕು.-ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ತಿರುಪತಿ ಪ್ರಸಾದದಲ್ಲಿ ಕಲಬೆರಕೆಯಾಗಿರುವ ವಿಚಾರ ಆಘಾತ ತಂದಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ತಿಮ್ಮಪ್ಪನ ಭಕ್ತರಿದ್ದಾರೆ. ಈ ವಿವಾದವು ಎಲ್ಲ ಭಕ್ತರ ಭಾವನೆಗಳಿಗೂ ಘಾಸಿ ಉಂಟುಮಾಡಿದೆ.-ರಾಹುಲ್ ಗಾಂಧಿ, ವಿಪಕ್ಷ ನಾಯಕ
ಪ್ರಕರಣದ ಬಗ್ಗೆ ಸಮಗ್ರ ವರದಿಯನ್ನು ಆಂಧ್ರಪ್ರದೇಶ ಸರಕಾರದಿಂದ ತರಿಸಿ ಕೊಂಡು, ಅದನ್ನು ಪರಿಶೀಲಿಸುತ್ತೇವೆ. ಬಳಿಕ ಆಹಾರ ಸುರಕ್ಷತ ಪ್ರಾಧಿಕಾರದ ನಿಯಮದ ಅನ್ವಯ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.-ಜೆ.ಪಿ.ನಡ್ಡಾ, ಆರೋಗ್ಯ ಸಚಿವ
ಲಡ್ಡು ಅಪವಿತ್ರ ಪ್ರಕರಣ ನಿಜವಾಗಿದ್ದರೆ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ. ಸುಳ್ಳೆಂದಾದರೆ ತಮ್ಮ ನಂಬಿಕೆಯೊಂದಿಗೆ ಆಟವಾಡಿದವರನ್ನು ತಿರುಪತಿಯ ಭಕ್ತರು ಎಂದಿಗೂ ಕ್ಷಮಿಸಲ್ಲ.-ಪವನ್ ಖೇರಾ, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.