ಉದಯವಾಣಿ ಸಂದರ್ಶನ: ರಾಜ್ಯ ರಾಜಕಾರಣಕ್ಕೆ ಮರಳುವ ಪ್ರಶ್ನೆ ಇಲ್ಲ
Team Udayavani, Nov 9, 2020, 1:15 AM IST
ಮಂಗಳೂರು: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯ ಮಾತುಗಳು ಪಕ್ಷದೊಳಗೆ ಕೇಳಿಬರುತ್ತಿವೆ. ಅತ್ತ, ವಿಪಕ್ಷಗಳ ನಾಯಕರೂ ಉಪ ಚುನಾವಣೆ ಫಲಿ ತಾಂಶದ ಬಳಿಕ ಸಿಎಂ ಬದಲಾಗುತ್ತಾರೆಂಬ ಹೇಳಿಕೆ ನೀಡುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿರುವ ಬಿಜೆಪಿ ನಾಯಕರನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತೂ ಇದೆ. ಈ ಎಲ್ಲ ಬೆಳವಣಿಗೆ ಮತ್ತು ತಮ್ಮ ಖಾತೆಗೆ ಸಂಬಂಧಿಸಿದ ಅಭಿವೃದ್ಧಿ ವಿಚಾರ ಗಳ ಬಗ್ಗೆ ಕೇಂದ್ರ ರಸಗೊಬ್ಬರ ಖಾತೆ ಸಚಿವ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ.
ಕೃಷಿಗೆ ಬೇಡಿಕೆ ಹೆಚ್ಚಿದೆ. ರಸಗೊಬ್ಬರದ ಕೊರತೆ ತಪ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ?
ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಪೂರೈಸಲು ಈಗಾಗಲೇ ಪ್ರತ್ಯೇಕ ರಸಗೊಬ್ಬರ ನೀತಿ ರೂಪಿಸಲಾಗಿದೆ. ಈ ಬಾರಿ ಶೇ.20ರಷ್ಟು ಕೃಷಿ ಚಟು ವಟಿಕೆ ಜಾಸ್ತಿಯಾಗಿದೆ. ಆದರೆ ಕರ್ನಾಟಕ ಸಹಿತ ಎಲ್ಲಿಯೂ ರಸಗೊಬ್ಬರದ ಕೊರತೆ ಸೃಷ್ಟಿ ಯಾಗಿಲ್ಲ. ದೇಶದಲ್ಲಿ ರಸಗೊಬ್ಬರ ದಾಸ್ತಾನು, ಪೂರೈಕೆ ಮತ್ತು ಮಾರಾಟದ ಮೇಲೆ ಪೂರ್ಣ ನಿಗಾ ಇಡುವುದಕ್ಕೆ ಪ್ರತ್ಯೇಕ ಆ್ಯಪ್ ನಿರ್ಮಿಸಿದ್ದು, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದೆ.
ಯೂರಿಯಾ ಉತ್ಪಾದನೆ ಹೆಚ್ಚಳಕ್ಕೆ ಏನೆಲ್ಲ ಕ್ರಮಗಳಾಗಿವೆ?
ದೇಶಕ್ಕೆ ಬೇಕಾಗುವ ಶೇ. 70 ಯೂರಿಯಾ ನಮ್ಮಲ್ಲೇ ಉತ್ಪಾದನೆಯಾಗುತ್ತಿದೆ, ಉಳಿದ ಶೇ.30 ಮಾತ್ರ ಆಮದಾಗುತ್ತಿದೆ. ದೇಶೀಯ ಉತ್ಪಾದನೆಗೆ ಒತ್ತು ನೀಡಲು ಮುಚ್ಚಿದ್ದ ಸುಮಾರು 12.7ಲಕ್ಷ ಮೆ. ಟ. ಸಾಮರ್ಥ್ಯದ ನಾಲ್ಕು ಯೂರಿಯಾ ಕಾರ್ಖಾನೆಗಳನ್ನು ಪುನರಾರಂಭಿಸಲಾಗುತ್ತಿದೆ. ಆಂಧ್ರದ ರಾಮಗುಂಡಂ ಕಾರ್ಖಾನೆ ಡಿಸೆಂಬರ್‌ನಲ್ಲಿ ಪ್ರಾರಂಭಗೊಳ್ಳಲಿದ್ದರೆ, ಮುಂದಿನ ವರ್ಷಾ ರಂಭದಲ್ಲಿ ಗೋರಖ್‌ಪುರ ಮತ್ತು ಬಳಿಕ ಭರೋನಿ, ಸಿಂದ್ರಿ ಕಾರ್ಖಾನೆಗಳು ಕಾರ್ಯಾರಂಭಿಸಲಿವೆ.
ಕರ್ನಾಟಕದಲ್ಲಿ ಹೊಸ ಯೂರಿಯಾ ಕಾರ್ಖಾನೆ ಪ್ರಾರಂಭಿಸಲಾಗುತ್ತದೆಯೇ?
ರಾಜ್ಯದಲ್ಲಿ ಕೇಂದ್ರದ ಕಡೆಯಿಂದ ಯೂರಿಯಾ ಕಾರ್ಖಾನೆ ಪ್ರಾರಂಭಿಸುವ ಪ್ರಸ್ತಾವವಿಲ್ಲ. ರಾಜ್ಯ ಸರಕಾರವು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿ ಸುವುದಕ್ಕೆ ಅವಕಾಶ ಕೋರಿತ್ತು. ಯೂರಿಯಾ ಉತ್ಪಾದನೆಗೆ ನೀರು, ಗ್ಯಾಸ್ ಮತ್ತು ರೈಲು ಸಂಪರ್ಕ ಆವಶ್ಯಕವಾಗಿರುವ ಕಾರಣ ದಾವಣಗೆರೆಯಲ್ಲಿ ಕಾರ್ಖಾನೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆೆ. ಈಗ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವು ಖಾಸಗಿ ಸಹಭಾಗಿತ್ವದಲ್ಲಿ ಆರಂಭ ಮಾಡುವುದಕ್ಕೆ ಮುಂದಕ್ಕೆ ಬಂದಿದೆ.
ಶಿರಾಡಿ ಘಾಟಿ ಸುರಂಗ ಏನಾಯಿತು?
ಮಂಗಳೂರಿನ ಸರ್ವತೋಮುಖ ಅಭಿವೃದ್ಧಿ ಗಮನದಲ್ಲಿರಿಸಿಕೊಂಡು ನಾನು ಮುಖ್ಯಮಂತ್ರಿ ಯಾಗಿದ್ದಾಗ ಶಿರಾಡಿ ಘಾಟಿ ಸುರಂಗ ಮಾರ್ಗ ನಿರ್ಮಾಣದ ಪ್ರಸ್ತಾವನೆ ಮಾಡಿದ್ದೆ. ಜಪಾನಿನ ಜೈಕಾ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡು 5 ಕೋ.ರೂ. ವೆಚ್ಚದಲ್ಲಿ ಸರ್ವೇ ಕಾರ್ಯಕ್ಕೂ ತೀರ್ಮಾನಿಸಿದ್ದೆ. ಆದರೆ ಯೋಜನೆ ನನೆಗುದಿಗೆ ಬಿದ್ದಿತ್ತು. ಕೇಂದ್ರ ಸಚಿವನಾದ ಬಳಿಕ ಈ ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಇದರ ಶೀಘ್ರ ಅನುಷ್ಠಾನಕ್ಕೆ ಸಿಎಂ ಯಡಿಯೂರಪ್ಪ, ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ಮಾತುಕತೆ ನಡೆಸಲಾಗಿದೆ.
ಈ ಭಾಗದವರಾಗಿ ದಕ್ಷಿಣ ಕನ್ನಡಕ್ಕೆ ಕನಸಿನ ಯೋಜನೆ ತರಬೇಕೆಂಬ ಬಯಕೆ ಇದೆಯೇ?
ನಮಗೆ ಬಹು ತುರ್ತಾಗಿ ಬೇಕಾಗಿರುವುದು ಅತ್ಯುತ್ತಮ ಸಾರಿಗೆ ಸಂಪರ್ಕ. ಶಿರಾಡಿ ಘಾಟಿ ಸುರಂಗ ಮಾರ್ಗವಾದರೆ ಆ ಕೊರತೆ ದೂರವಾಗು ತ್ತದೆ. ಜನವರಿಯ ಅನಂತರ ಇಲ್ಲಿ ಕುಡಿಯುವ ನೀರು ಉಳಿತಾಯಕ್ಕೆ ವೆಂಟೆಡ್ ಡ್ಯಾಂಗಳ ಅಗತ್ಯವಿದ್ದು, ಅದಕ್ಕೆ ನಾನು ಸಿಎಂ ಆಗಿದ್ದಾಗ ಯೋಜನೆ ರೂಪಿಸಿದ್ದೆ. ಆದರೆ ಅನಂತರ ಯಾರೂ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನ ಮಾಡಿಲ್ಲ. ಹೀಗೆ ಹಲವು ಯೋಜನೆ ತರುವ ಪ್ರಯತ್ನ ಮಾಡಿದ್ದೇನೆ.
ಮತ್ತೆ ರಾಜ್ಯ ರಾಜಕಾರಣಕ್ಕೆ ಬರುವಿರಾ?
ನಾನೊಬ್ಬ ಸಂತೃಪ್ತ ರಾಜಕಾರಣಿ. ಕುಗ್ರಾಮ ದಿಂದ ಬಂದು ರಾಜಕಾರಣದಲ್ಲಿ ಬಹುತೇಕ ಎಲ್ಲ ರೀತಿಯ ಅವಕಾಶಗಳನ್ನು ಪಡೆದಿದ್ದೇನೆ. ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ತೊಡಗಿ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಕೇಂದ್ರ ಸಚಿವ -ಈ ರೀತಿ ಉನ್ನತ ಸ್ಥಾನಮಾನಗಳು ನನ್ನ ಪಾಲಿಗೆ ಲಭಿಸಿವೆ. ಹೀಗಾಗಿ ಯಾವುದೇ ಸ್ಥಾನಮಾನದ ಆಸೆ ಆಕಾಂಕ್ಷೆಗಳಿಲ್ಲ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಪ್ರಶ್ನೆಯಿಲ್ಲ. ನಮ್ಮಲ್ಲಿ ಮೇಜು ಗುದ್ದಿ ಮಾತನಾಡುವ ರಾಜಕಾರಣಿಗಳಿದ್ದಾರೆ. ನಾನು ಅಂಥವನಲ್ಲ.
ಎತ್ತಿನಹೊಳೆ ಯೋಜನೆ ವಿವಾದವಾದ ಬಳಿಕ ನೀವು ದ.ಕ. ಸಂಪರ್ಕ ಕಡಿಮೆಗೊಳಿಸಿ ರುವುದು ನಿಜವೇ?
ರಾಜ್ಯದ ಸಿಎಂ ಆಗಿ ಸಮುದ್ರಕ್ಕೆ ಹರಿದು ಹೋಗುವ ನೀರು ಜನತೆಗೆ ಕುಡಿಯಲು ಸಿಗಲಿ ಎಂದು ಯೋಚಿಸಿದ್ದು ತಪ್ಪೇ? ಈ ಯೋಜನೆಯಿಂದ ಇಲ್ಲಿನ ಪರಿಸರಕ್ಕೆ ಅಥವಾ ಇನ್ನಿತರ ತೊಂದರೆಗಳಿಲ್ಲ. ಆದರೆ ಜಿಲ್ಲೆಯ ನೀರನ್ನು ಬೇರೆಡೆಗೆ ತಿರುಗಿಸಿದರು ಎನ್ನುವ ಅಪವಾದವನ್ನು ನನ್ನ ಮೇಲೆ ಹೊರಿಸಿದ್ದಾರೆ. ಇದು ನೋವು ತಂದಿದೆ. ವಾಸ್ತವವಾಗಿ ದಕ್ಷಿಣ ಕನ್ನಡದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಕೆಲವು ಬೆಳವಣಿಗೆಗಳಿಂದ ನೋವು ಉಂಟಾಗಿದ್ದರೂ ದಕ್ಷಿಣ ಕನ್ನಡದ ಅಭಿವೃದ್ಧಿಗೆ ಸದಾ ಶ್ರಮಿಸುತ್ತೇನೆ.
ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.