PM Modi US tour: ಭಾರತ-ಅಮೆರಿಕ ಐತಿಹಾಸಿಕ ರಕ್ಷಣಾ ಒಪ್ಪಂದ?
ಮೋದಿ ಅಮೆರಿಕ ಭೇಟಿ ವೇಳೆ ಘೋಷಣೆ ಸಾಧ್ಯತೆ
Team Udayavani, Jun 15, 2023, 7:45 AM IST
ನವದೆಹಲಿ/ವಾಷಿಂಗ್ಟನ್:ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಸಮೀಪಿಸುತ್ತಿದ್ದಂತೆಯೇ ಭಾರತದೊಂದಿಗೆ ಐತಿಹಾಸಿಕ ರಕ್ಷಣಾ ಒಪ್ಪಂದವೊಂದನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ನವದೆಹಲಿಗೆ ಬಂದಿಳಿದಿದ್ದಾರೆ. ಜತೆಗೆ, ಈ ಭೇಟಿಯ ಹಿಂದೆ ಅಮೆರಿಕ ನಿರ್ಮಿತ ಸಶಸ್ತ್ರ ಡ್ರೋನ್‌ಗಳ ಮಾರಾಟದ ಚಿಂತನೆಯೂ ಇದೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಪ್ರಮುಖ ವಿದೇಶಾಂಗ ನೀತಿ ಸಲಹೆಗಾರರಾಗಿರುವ ಜೇಕ್ ಅವರು ಭಾರತದೊಂದಿಗೆ ಪ್ರಮುಖ ತಂತ್ರಜ್ಞಾನ ಒಪ್ಪಂದದ ಕುರಿತು ಚರ್ಚಿಸಲಿದ್ದಾರೆ. ಭಾರತದಲ್ಲೇ ಜೆಟ್ ಎಂಜಿನ್‌ಗಳನ್ನು ನಿರ್ಮಾಣ ಮಾಡಲು ಏರೋನಾಟಿಕ್ಸ್ ದಿಗ್ಗಜ ಬೆಂಗಳೂರಿನಲ್ಲಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿ. (ಎಚ್‌ಎಎಲ್)ನೊಂದಿಗೆ ಅಮೆರಿಕದ ಜನರಲ್ ಎಲೆಕ್ಟ್ರಿಕ್ ಕಂಪನಿ ಸಹಭಾಗಿತ್ವ ಹೊಂದುವ ಒಪ್ಪಂದ ಇದಾಗಿದೆ. ಮೋದಿಯವರ ಅಮೆರಿಕ ಭೇಟಿ ವೇಳೆ ಈ ಒಪ್ಪಂದದ ಬಗ್ಗೆ ಉಭಯ ದೇಶಗಳು ಘೋಷಿಸುವ ನಿರೀಕ್ಷೆ ಇದೆ. ಭಾರತಕ್ಕೆ ತಂತ್ರಜ್ಞಾನಗಳ ವಿನಿಮಯವನ್ನೂ ಈ ಒಪ್ಪಂದ ಒಳಗೊಂಡಿರಲಿದ್ದು, ಇದಕ್ಕೆ ಅಮೆರಿಕ ಕಾಂಗ್ರೆಸ್‌ನ ಅನುಮತಿ ಅಗತ್ಯ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಈ ಒಪ್ಪಂದವು ಯಶಸ್ವಿಯಾದರೆ, ಭಾರತ ಮತ್ತು ಅಮೆರಿಕದ ರಕ್ಷಣಾ ಬಾಂಧವ್ಯದಲ್ಲಿ ದೊಡ್ಡಮಟ್ಟಿನ ಬದಲಾವಣೆ ಆಗಲಿದೆ.
ಈ ಹಿಂದೆಯೂ ರಕ್ಷಣಾ ತಂತ್ರಜ್ಞಾನ ವಿನಿಮಯ ನಿಟ್ಟಿನಲ್ಲಿ ಡಿಫೆನ್ಸ್ ಟ್ರೇಡ್ ಆ್ಯಂಡ್ ಟೆಕ್ನಾಲಜಿ ಇನೀಷಿಯೇಟಿವ್ (ಡಿಟಿಟಿಐ) ಎಂಬ ಒಪ್ಪಂದಕ್ಕೆ ಯತ್ನಿಸಲಾಗಿತ್ತಾದರೂ, ಅದು ಸಂಪೂರ್ಣ ಯಶಸ್ವಿಯಾಗಿರಲಿಲ್ಲ.
ಇದೇ ವೇಳೆ, ಅಮೆರಿಕದಿಂದ ಬೃಹತ್ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಈ ಹಿಂದೆ ಭಾರತ ಆಸಕ್ತಿ ತೋರಿತ್ತು. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ ಅದು ಕೈಗೂಡಿರಲಿಲ್ಲ. ಈಗ ಅದನ್ನು ಮುಂದಕ್ಕೆ ಒಯ್ಯಲು ಅಮೆರಿಕ ಉತ್ಸುಕತೆ ತೋರಿದೆ. ಮೋದಿ-ಬೈಡೆನ್ ಭೇಟಿ ವೇಳೆ ಸಶಸ್ತ್ರ ಡ್ರೋನ್ ಖರೀದಿ, ಶಸ್ತ್ರಾಸ್ತ್ರಗಳ ಜಂಟಿ ನಿರ್ಮಾಣ, ರಕ್ಷಣಾ ವಾಹನಗಳ ಸಹ ಉತ್ಪಾದನೆ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ಧತೆಗಳ ಪರಿಶೀಲನೆ
ಪ್ರಧಾನಿ ಮೋದಿಯವರ ಅಮೆರಿಕ ಪ್ರವಾಸದ ಸಿದ್ಧತೆಗಳ ಕುರಿತು ಬುಧವಾರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ಸಮಾಲೋಚನೆ ನಡೆಸಿದ್ದಾರೆ.
ಮಂಗಳವಾರವಷ್ಟೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಸುಲ್ಲಿವನ್, ಸೆಮಿಕಂಡಕ್ಟರ್‌ಗಳು, ಮುಂದಿನ ತಲೆಮಾರಿನ ಟೆಲಿಕಮ್ಯೂನಿಕೇಷನ್, ಕೃತಕ ಬುದ್ಧಿಮತ್ತೆ ಸೇರಿ 7 ಪ್ರಮುಖ ತಂತ್ರಜ್ಞಾನಗಳ ವಲಯದಲ್ಲಿ ಸಹಭಾಗಿತ್ವದ ಸಾಧಿಸುವ ಕುರಿತು ಚರ್ಚಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.