ಬಾಲಿವುಡ್‌ನ ಅಮರ್ ಇನ್ನಿಲ್ಲ
Team Udayavani, Apr 28, 2017, 2:49 AM IST
ಮುಂಬಯಿ: ದೇಶದ ಜನಮನಗಳಲ್ಲಿ ‘ಅಮರ್’ ಎಂದೇ ಮನೆಮಾತಾದ ಬಾಲಿವುಡ್‌ನ ಶ್ರೇಷ್ಠ ನಟ, ಸಂಸದ ವಿನೋದ್ ಖನ್ನಾ (70) ಗುರುವಾರ ಮುಂಬಯಿಯಲ್ಲಿ ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಮುಂಬಯಿಯ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯಲ್ಲಿ ಬೆಳಗ್ಗೆ 11.20ಕ್ಕೆ ಕೊನೆಯುಸಿರೆಳೆದರು ಎಂದು ಅವರ ಸಹೋದರ ಪ್ರಮೋದ್ ಖನ್ನಾ ಮಾಹಿತಿ ನೀಡಿದ್ದಾರೆ. ತೀವ್ರ ನಿರ್ಜಲೀಕರಣದಿಂದಾಗಿ ಮಾ. 31ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ. ಅವರು ಪತ್ನಿ ಕವಿತಾ ಖನ್ನಾ ಮತ್ತು ನಾಲ್ವರು ಮಕ್ಕಳಾದ ರಾಹುಲ್, ಅಕ್ಷಯ್, ಸಾಕ್ಷಿ ಮತ್ತು ಶ್ರದ್ಧಾರನ್ನು ಅಗಲಿದ್ದಾರೆ.
ಹಿಂದಿ ಸಿನಿಮಾ ಕ್ಷೇತ್ರದ ಹ್ಯಾಂಡ್‌ಸಮ್ ನಟ, ಅಭಿಮಾನಿಗಳ ಹೃದಯ ಸಮ್ರಾಟನಾಗಿ ಮೆರೆದ ಖನ್ನಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ತಮಿಳು ಸೂಪರ್‌ಸ್ಟಾರ್ ರಜನೀಕಾಂತ್, ಗಾಯಕಿ ಲತಾ ಮಂಗೇಶ್ಕರ್, ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಬಾಲಿವುಡ್ ನಟ-ನಟಿಯರು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಖನ್ನಾ ಅವರ ಅಂತ್ಯಕ್ರಿಯೆ ಮುಂಬಯಿಯಲ್ಲಿ ನಡೆಸಲಾಗಿದೆ.
5 ದಶಕಗಳ ಪಯಣ: ಪೋಷಕ ನಟನಾಗಿ ವೃತ್ತಿಜೀವನ ಆರಂಭಿಸಿ, ಕ್ರಮೇಣ ನಾಯಕನಟನಾಗಿ ಖ್ಯಾತಿ ಗಳಿಸಿದ ಕೆಲವೇ ಕೆಲವು ಸಾಧಕರಲ್ಲಿ ಖನ್ನಾ ಕೂಡ ಒಬ್ಬರು. ‘ಮನ್ ಕಿ ಮೀಟ್’ ಮೂಲಕ 1968ರಲ್ಲಿ ನಟನಾ ಬದುಕು ಆರಂಭಿಸಿದ ಖನ್ನಾ, ನಂತರ 5 ದಶಕಗಳ ಕಾಲ ಸಿನಿಮಾ ಕ್ಷೇತ್ರದ ಪಯಣ ಮುಂದುವರಿಸಿದರು. ಆರಂಭದಲ್ಲಿ ಖನ್ನಾ ಅವರು ಖಳನಾಯಕ ಅಥವಾ ಪೋಷಕ ನಟನ ಪಾತ್ರದಲ್ಲೇ ಕಾಣಿಸಿಕೊಂಡವರು. 1971ರಲ್ಲಿ ಗುಲ್ಜರ್‌ರ ‘ಮೇರೆ ಅಪ್ನೇ’ ಚಿತ್ರವು ಖನ್ನಾರೊಳಗಿನ ನಾಯಕನನ್ನು ಪರಿಚಯಿಸಿತು.
ಅಲ್ಲಿಂದೀಚೆಗೆ ಅವರು ಹಿಂದಿರುಗಿ ನೋಡಲೇ ಇಲ್ಲ. ಅನಂತರ ನಟಿಸಿದ ‘ಮೇರಾ ಗಾಂವ್ ಮೇರಾ ದೇಶ್’, ‘ರೇಶ್ಮಾ ಔರ್ ಶೇರಾ’, ‘ಇನ್ಸಾಫ್’, ‘ದಯಾವನ್’, ‘ಅಮರ್ ಅಕ್ಬರ್ ಆಂಥೋಣಿ’, ‘ಹೇರಾ ಫೇರಿ’, ‘ಮುಖದ್ದರ್ ಕಾ ಸಿಕಂದರ್’ ‘ಸತ್ಯಮೇವ ಜಯತೇ’ ಸೇರಿದಂತೆ ಎಲ್ಲ ಚಿತ್ರಗಳೂ ಅವರನ್ನು ಸ್ಮರಣೀಯರನ್ನಾಗಿಸಿತು. 2015ರಲ್ಲಿ ಬಿಡುಗಡೆಯಾದ ಶಾರುಖ್ ಅಭಿನಯದ ‘ದಿಲ್‌ವಾಲೆ’ ಖನ್ನಾ ಅವರ ಕೊನೇ ಚಿತ್ರ.
ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ಸಿನಿಮಾ ರಂಗದಿಂದ ಬ್ರೇಕ್ ಪಡೆದು 5 ವರ್ಷಗಳ ಕಾಲ ಗಾಯಬ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದ ಖನ್ನಾ, ಈ ಅವಧಿಯಲ್ಲಿ ಓಶೋ ರಜನೀಶ್ ಅವರ ಆಶ್ರಮ ಸೇರಿದ್ದರು. 80ರ ದಶಕದ ಅಂತ್ಯಕ್ಕೆ ಮತ್ತೆ ಚಿತ್ರರಂಗ ಪ್ರವೇಶಿಸಿ, ಇನ್ಸಾಫ್, ಸತ್ಯಮೇವ ಜಯತೇಯಂಥ ಹಿಟ್ ಚಿತ್ರಗಳನ್ನು ನೀಡಿ ತಾವೊಬ್ಬ ಶ್ರೇಷ್ಠ ನಟ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದ್ದರು.
4 ಬಾರಿ ಆಯ್ಕೆ: ಪಂಜಾಬ್‌ನ ಗುರುದಾಸ್‌ಪುರದಿಂದ ಬಿಜೆಪಿ ಸಂಸದನಾಗಿ 4 ಬಾರಿ ಆಯ್ಕೆಯಾಗಿದ್ದ ಖನ್ನಾ ಅವರು ಸಕ್ರಿಯ ರಾಜಕಾರಣಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ವಾಜಪೇಯಿ ನೇತೃತ್ವದ ಸರಕಾರ ಇದ್ದಾಗ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರಾಗಿದ್ದರು.
ಬಾಹುಬಲಿ-2 ಪ್ರೀಮಿಯರ್ ರದ್ದು
ಖನ್ನಾ ನಿಧನದ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಬಾಹುಬಲಿ- 2 ಪ್ರೀಮಿಯರ್ ಶೋವನ್ನು ರದ್ದುಮಾಡಲಾಗಿದೆ. ‘ನಮ್ಮ ಪ್ರೀತಿಯ ವಿನೋದ್ ಖನ್ನಾ ನಿಧನದಿಂದ ನಾವು ದುಃಖೀತರಾಗಿದ್ದೇವೆ. ಅವರ ಅಗಲುವಿಕೆಯು ನಮ್ಮೆಲ್ಲರಿಗೂ ಆಘಾತ ತಂದಿದೆ. ಅವರ ಗೌರವಾರ್ಥ ಇಂದಿನ ಬಾಹುಬಲಿ-2 ಪ್ರೀಮಿಯರ್ ಅನ್ನು ರದ್ದು ಮಾಡುತ್ತಿದ್ದೇವೆ’ ಎಂದು ನಿರ್ದೇಶಕ ರಾಜಮೌಳಿ ನೇತೃತ್ವದ ಚಿತ್ರತಂಡ ಅಧಿಕೃತ ಹೇಳಿಕೆ ಪ್ರಕಟಿಸಿದೆ.
ಏನಿದು ಮೂತ್ರಕೋಶದ ಕ್ಯಾನ್ಸರ್?
ಮಾನವನ ಶ್ರೋಣಿಯ ಸಮೀಪ ಮೂತ್ರ ಸಂಗ್ರಹವಾಗುವಂಥ ಬಲೂನ್ ಮಾದರಿಯ ಅಂಗವಿರುತ್ತದೆ. ಇದನ್ನು ಮೂತ್ರಕೋಶ ಎನ್ನುತ್ತಾರೆ. ಈ ತೆಳು ಚೀಲದೊಳಗಿನ ಕೋಶಗಳಲ್ಲೇ ಹೆಚ್ಚಾಗಿ ಕ್ಯಾನ್ಸರ್ ಉಂಟಾಗುವುದು. ಇಲ್ಲಿ ಕೆಲವೊಮ್ಮೆ ಅಸಹಜ ಕೋಶಗಳು ನಿಯಂತ್ರಣಕ್ಕೆ ಸಿಗದೆ ಬೆಳೆಯುತ್ತಾ ಸಾಗುವುದೇ ಕ್ಯಾನ್ಸರ್‌ಗೆ ಮೂಲವಾಗುತ್ತದೆ. ಮೂತ್ರಕೋಶದ ಕ್ಯಾನ್ಸರ್‌ಗೆ ಧೂಮಪಾನ ಪ್ರಮುಖ ಕಾರಣ ಎನ್ನುವುದು ತಜ್ಞರ ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.