ಅಮ್ಮನ ಬಗ್ಗೆ ನಾವು ಹೇಳಿದ್ದೆಲ್ಲಾ ಸುಳ್ಳು
Team Udayavani, Sep 24, 2017, 6:00 AM IST
ಮದುರೈ: “”ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ಹಿಂದೆ ನಾವು ಹೇಳಿದ್ದೆಲ್ಲಾ ಸುಳ್ಳೇ ಸುಳ್ಳು! ಜಯಾ ಆಸ್ಪತ್ರೆ ಸೇರಿದಾಗಿನಿಂದಲೂ ನಾವೆಲ್ಲರೂ ಚಿನ್ನಮ್ಮ(ಶಶಿಕಲಾ)ರ ಭಯದಿಂದ ಸುಳ್ಳು ಹೇಳುತ್ತಲೇ ಬಂದೆವು. ನಮ್ಮ ಮಾತು ಕೇಳಿದ ಜನ ಅಮ್ಮಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದೇ ಭಾವಿಸುತ್ತಿದ್ದರು!
ಇದು ಎಐಎಡಿಎಂಕೆ ಮುಖಂಡ ಹಾಗೂ ಸವಿವ ದಿಂಡಿಗಲ್ ಸಿ. ಶ್ರೀನಿವಾಸನ್ ಅವರ ಸ್ಫೋಟಕ ಹೇಳಿಕೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿ ಸೆ.22ಕ್ಕೆ ಸರಿಯಾಗಿ ಒಂದು ವರ್ಷ. ಈ ವೇಳೆ ದಿಂಡಿಗಲ್ ಶ್ರೀನಿವಾಸನ್ ಅವರೇ ಹೇಳಿದ ಮಾತುಗಳನ್ನು ಅವರ ಮಾತಲ್ಲೇ ಓದಿ…
“ಸತ್ಯ ಏನೆಂದರೆ ಜಯಲಲಿತಾ ಅವರನ್ನು ನೋಡಲು ಯಾರಿಗೂ ಅವಕಾಶವಿರಲಿಲ್ಲ. ನಮ್ಮನ್ನು ಸುತಾರಾಂ ಒಳಗೆ ಬಿಡುತ್ತಲೇ ಇರಲಿಲ್ಲ. ಶಶಿಕಲಾ ಹಾಗೂ ಅವರ ಸಂಬಂಧಿಗಳು ಮಾತ್ರ ಒಳಗೆ ಹೋಗಿ ಬರುತ್ತಿದ್ದರು. “ಅಮ್ಮ ಆರೋಗ್ಯವಾಗಿದ್ದಾರೆ. ನೀವು ಜನರ ಮುಂದೆ ಅದನ್ನೇ ಹೇಳಿ’ ಎಂದು ಹೇಳುತ್ತಿದ್ದರು. ಶಶಿಕಲಾ ಅವರಿಗೆ ಹೆದರಿ ನಾವು ಜನರ ಬಳಿ “ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ’ ಎಂದೇ ಹೇಳುತ್ತಿದ್ದೆವು’.
“ಅಮ್ಮ ಅಪೋಲೋ ಆಸ್ಪತ್ರೆಗೆ ದಾಖಲಾದಾಗ ಶಶಿಕಲಾ ಹಾಗೂ ಅವರ ಸಂಬಂಧಿ ಟಿ.ಟಿ.ವಿ. ದಿನಕರನ್ ಸಕಲ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ವಿತ್ತ ಸಚಿವ ಅರುಣ್ ಜೇಟ್ಲಿ, ತಮಿಳುನಾಡು ರಾಜ್ಯಪಾಲ ಸಿ.ಎಚ್.ವಿದ್ಯಾಸಾಗರ್ ರಾವ್ ಸೇರಿ ಆಸ್ಪತ್ರೆಗೆ ಭೇಟಿ ನೀಡಿದ ಯಾವುದೇ ಪ್ರಮುಖ ನಾಯಕರು ಐಸಿಯು ಒಳ ಹೋಗಿ ಅಮ್ಮನನ್ನು ನೋಡಿಕೊಂಡು ಬರಲಿಲ್ಲ. ಅವರು ಒಳ ಹೋಗಲು ಶಶಿಕಲಾ ಅವಕಾಶವನ್ನೇ ನೀಡಲಿಲ್ಲ.
ಬಂದವರೆಲ್ಲರೂ ಆಸ್ಪತ್ರೆಯ ಮುಖ್ಯ ವೈದ್ಯರ ಕಚೇರಿಯಲ್ಲಿ ಕುಳಿತು, ಚಹಾ ಕುಡಿದು ಅವರು ಹೇಳಿದಷ್ಟನ್ನು ಕೇಳಿ ಹೊರಬರುತ್ತಿದ್ದರು. ನಂತರ “ಜಯಲಲಿತಾ ಅವರ ಆರೋಗ್ಯ ಉತ್ತಮವಾಗಿದೆ’ ಎಂದು ಹೇಳಿಕೆ ನೀಡುತ್ತಿದ್ದರು’.
“ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದರು (ಈಗಲೂ ಅಲ್ಲೇ ಇದ್ದಾರೆ). ಇತ್ತ ಅವರ ಸಂಬಂಧಿ ಟಿ.ಟಿ.ವಿ. ದಿನಕರನ್ ತಾವು ಅಕ್ರಮವಾಗಿ ಸಂಪಾದಿಸಿದ ಹಣವನ್ನೆಲ್ಲಾ ಬಳಸಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ ಆರ್‌ಕೆ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಸ್ವತಃ ಸಿಎಂ ಆಗುವ ಇರಾದೆ ಹೊಂದಿದ್ದರು. ಈ ಕುತಂತ್ರದ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿತ್ತು. ಆದರೆ ಆಗಿನ ಸಮಯ, ಸಂದರ್ಭ ನಮ್ಮ ಕೈ-ಬಾಯಿ ಕಟ್ಟಿಹಾಕಿತ್ತು. ಆದರೆ ಈ ವೇಳೆ ನಮ್ಮ ಹಾಗೂ ತಮಿಳುನಾಡು ಜನತೆಯ ಪಾಲಿನ ದೇವರಂತೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ಉಪಚುನಾವಣೆಯನ್ನು ತಡೆಹಿಡಿದರು’.
ಸತ್ಯ ಹೇಳುವ ಸಮಯ ಬಂದಿದೆ:
ಶುಕ್ರವಾರ ರಾತ್ರಿ ಸಾರ್ವಜನಿಕ ಸಭೆಯೊಂದರಲ್ಲಿ ಈ ಮಾಹಿತಿ ಬಹಿರಂಗಪಡಿಸಿರುವ ಅರಣ್ಯ ಸಚಿವ ಶ್ರೀನಿವಾಸನ್, “ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ತಮಿಳುನಾಡು ಜನತೆ ಹಾಗೂ ಪಕ್ಷದ ಕಾರ್ಯಕರ್ತರ ಕ್ಷಮೆ ಕೋರಿದ್ದಾರೆ. “ಅಂದು ಪರಿಸ್ಥಿತಿಯ ಕೈಗೊಂಬೆಯಾಗಿದ್ದ ನಮಗೆ ಇಂದು ಸತ್ಯ ಬಹಿರಂಗಪಡಿಸುವ ಸಮಯ ಬಂದಿದೆ,’ ಎಂದ ಸಚಿವ, “ಐಸಿಯುನಲ್ಲಿದ್ದ ಜಯಲಲಿತಾ ಅವರನ್ನು ನೋಡಲು ನನ್ನನ್ನೂ ಸೇರಿ ಯಾರೊಬ್ಬರಿಗೂ ಅವಕಾಶ ಇರಲಿಲ್ಲ,’ ಎಂದಿದ್ದಾರೆ.
ಅಂದಹಾಗೆ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭ, ಅಂದರೆ 2016ರ ಸೆಪ್ಟೆಂಬರ್ ಅಂತ್ಯದಲ್ಲೂ ಸಚಿವ ಶ್ರೀನಿವಾಸನ್ “ಅಮ್ಮನನ್ನು ನೋಡಲು ಬಿಡುತ್ತಿಲ್ಲ’ ಎಂದು ಹೇಳಿಕೆ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹಾಗೆ ಹೇಳಿದ್ದ ಅವರು, ಮುಂದೆಂದೂ ಆ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಶಶಿಕಲಾ ಹಾಗೂ ಅವರ ಸಂಬಂಧಿಗಳು ಹುಟ್ಟಿಸಿದ್ದ ಭಯವೇ ಶ್ರೀನಿವಾಸನ್ ಸೇರಿದಂತೆ ಹಲವು ಮುಖಂಡರು ಮೌನವಾಗಿರಲು ಕಾರಣ ಎಂಬುದು ಸ್ವತಃ ಶ್ರೀನಿವಾಸನ್ ಹೇಳಿಕೆಯಿಂದ ಈಗ ಸ್ಪಷ್ಟವಾಗಿದೆ.
ಸಿಎಂ ಪಳನಿಸ್ವಾಮಿ ಬಗ್ಗೆಯೂ ಆಕ್ರೋಶ
“ಅಮ್ಮನನ್ನು ಯಾರು ಕೊಂದರು ಎಂದು ತಿಳಿದುಕೊಂಡು ಈಗ ಏನೂ ಆಗಬೇಕಿಲ್ಲ ಎಂದು ತಮಿಳುನಾಡಿನ ಜನ ಈಗಾಗಲೇ ಹೇಳಿದ್ದಾರೆ. ಆದರೆ ಅಮ್ಮನ ಸಾವಿಗೆ ಶಶಿಕಲಾ ಹಾಗೂ ಅವರ ಸಂಬಂಧಿಗಳೇ ಕಾರಣ. ಈ ವಿಷಯ ಗೊತ್ತಿದ್ದರಿಂದಲೇ ನಾವು ಅವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಕೈಗೊಂಡೆವು,’ ಎಂದು ಹೇಳಿರುವ ಸಚಿವ, ಸಿಎಂ ಪಳನಿಸ್ವಾಮಿ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಜಯಲಲಿತಾ ಅವರ ವಿಷಯದಲ್ಲಿ ಮುಖ್ಯಮಂತ್ರಿ ಎರಪ್ಪಾಡಿ ಪಳನಿಸ್ವಾಮಿ ಅವರ ವರ್ತನೆ ಸರಿಯಿಲ್ಲ. ಪ್ರಕಣದ ತನಿಖೆಗೆ ನ್ಯಾಯಾಂಗ ಸಮಿತಿ ರಚಿಸುವುದಾಗಿ ಹೇಳಿದ್ದ ಸಿಎಂ, ಈವರೆಗೂ ಆ ಬಗ್ಗೆ ಒಮ್ಮೆ ಕೂಡ ಮಾತನಾಡಿಲ್ಲ,’ ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.