ಬಿಜೆಪಿ ಬಂಗಾಲಕ್ಕೆ ಕಾಲಿಡದು: ದೀದಿ
Team Udayavani, Mar 21, 2021, 7:05 AM IST
ಹಲ್ದಿಯಾ: ಬಿಜೆಪಿ ಜಗತ್ತಿನ ಅತೀ ದೊಡ್ಡ ಸುಲಿಗೆಕೋರರ ಪಕ್ಷ. ಅಂಥವರಿಗೆ ಬಂಗಾಲ ಪ್ರವೇಶಿಸಲು ಖಂಡಿತಾ ಅವಕಾಶ ಮಾಡಿಕೊಡುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಹಲ್ದಿಯಾದಲ್ಲಿನ ಟಿಎಂಸಿ ರ್ಯಾಲಿಯಲ್ಲಿ ಅವರು, “ಪಿಎಂ ಕೇರ್ಸ್ ನಿಧಿಗೆ ಬಂದ ಹಣ ಎಲ್ಲಿಗೆ ಹೋಗಿದೆ? ಬಿಜೆಪಿ ಈ ಬಗ್ಗೆ ಇದುವರೆಗೆ ಬಾಯ್ಬಿಟ್ಟಿಲ್ಲ. ಇದರಲ್ಲಿಯೇ ಗೊತ್ತಾಗುತ್ತೆ, ಅವರೆಷ್ಟು ಚಾಣಾಕ್ಷ ಸುಲಿಗೆಕೋರರು ಎಂದು. ಗಲಭೆಗಳನ್ನು ಆಯೋಜಿಸುವ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು. ಗಲಭೆ ಮುಕ್ತ ಬಂಗಾಲಕ್ಕೆ ಟಿಎಂಸಿಯನ್ನೇ ಜನ ಆರಿಸಬೇಕು’ ಎಂದು ಹೇಳಿದರು.
ಇಡಿ, ಸಿಬಿಐ ನೋಟಿಸ್ ಪರ್ವ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ. ಬಂಗಾಲದಲ್ಲಿ ಸಿಬಿಐ, ಇಡಿ ನೋಟಿಸ್ ತಾಪವೂ ಹೆಚ್ಚಾಗಿದೆ. ದೀದಿ ಸರಕಾರದಲ್ಲಿದ್ದ ಟಾಪ್ ಅಧಿಕಾರಿಗಳಿಗೆ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಟಿಸ್‌ಗಳು ತಲುಪಿವೆ. ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಆಫೀಸರ್ ಪುರಕಾಯಸ್ಥ, ಸಿಎಂ ಪ್ರಿನ್ಸಿಪಲ್ ಸೆಕ್ರೆಟರಿ ಗೌತಮ್ ಸನ್ಯಾಲ್‌ಗೆ ಮೆಟ್ರೋ ಡೈರಿ ಕೇಸ್ ಮತ್ತು ಇದೇ ಕೇಸ್‌ಗೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಪಿ. ಗೋಪಾಲಿಕಾ ಅವರಿಗೆ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ತಲುಪಿದೆ.
ಬಿ.ಎಲ್. ಸಂತೋಷ್, ಸಿ.ಟಿ. ರವಿ ಟ್ವೀಟ್ ದಾಳಿ :
“ನಮಗೆ ಬಿಜೆಪಿ ಬೇಡ, ಮೋದಿ ಮುಖವನ್ನೂ ನೋಡಬಯಸುವುದಿಲ್ಲ…’ ಹೀಗೆ ಪೂರ್ವ ಮಿಡ್ನಾಪುರದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಆರೋಪಕ್ಕೆ ಟ್ವಿಟರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿರುಗೇಟು ನೀಡಿದ್ದು, “ನಿರ್ಗಮಿಸುತ್ತಿರುವ ನಾಯಕಿಯ ವಿದಾಯದ ಮಾತುಗಳಿವು… ಸಾರ್ವಜನಿಕ ಸಭೆಗಳಲ್ಲಿ ಈಕೆಯ ಸಮತೋಲನ ತಪ್ಪಿದ ಮಾತುಗಳು ಮಹಿಳಾ ಮತದಾರರಿಗೂ ಮನದಟ್ಟಾಗಿದೆ’ ಎಂದಿದ್ದಾರೆ. ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೂಡ, “ಬೇಗ ಚೇತರಿಸಿಕೊಳ್ಳಿ ದೀದಿ… ನಿಮ್ಮ ಕಾಲಿಗಷ್ಟೇ ಪೆಟ್ಟಾಗಿದ್ದಲ್ಲ, ವಿವೇಕಕ್ಕೂ ಘಾಸಿ ಆದಂತಿದೆ’ ಎಂದು ತಿರುಗೇಟು ನೀಡಿದ್ದಾರೆ.
ಸಿಎಎ ಜಾರಿ ಇಲ್ಲ, ರೈತರ ಸಾಲ ಮನ್ನಾದ ಆಶ್ವಾಸನೆ :
ಅಸ್ಸಾಂ ಚುನಾವಣೆಗಾಗಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಇಲ್ಲ, ರೈತರ ಸಾಲಮನ್ನಾ, ಅಕ್ರಮ ವಲಸಿಗರನ್ನು ಗುರುತಿಸುವಿಕೆಗೆ ಆದ್ಯತೆ ನೀಡುವ ವಚನ ನೀಡಿದೆ. ಕಾಂಗ್ರೆಸ್ ಮುಖಂಡ ರಾಹುಲ್‌ಗುವಾಹಾಟಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇದಕ್ಕೂ ಮೊದಲು ವಿವಿಧೆಡೆ ಮಾತನಾಡಿದ ಅವರು, ಸಂಸ್ಕೃತಿ ಮೇಲೆ ಕಾಂಗ್ರೆಸ್ ದಾಳಿಗೈಯುತ್ತಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. “ಅಸ್ಸಾಂ ಸಂಸ್ಕೃತಿ, ಭಾಷೆ ಮತ್ತು ಸಹೋದರತ್ವದ ಮೇಲೆ ದಾಳಿ ಮಾಡುವ ಆಲೋಚನೆ ಇರುವುದು ಬಿಜೆಪಿಗೆ ಮಾತ್ರ. ನಾವು ನಿಮ್ಮ ಸಂಸ್ಕೃತಿಯ, ನಿಮ್ಮ ಹೆಗ್ಗುರುತುಗಳನ್ನು ರಕ್ಷಿಸುತ್ತೇವೆ. ಇದು ನಿಮ್ಮದೇ ರಾಜ್ಯ. ನಾಗಪುರದವರು ಬಂದು ಆಡಳಿತ ನಡೆಸಲು ನೀವು ಬಿಡಬಾರದು’ ಎಂದರು.
ಕೇರಳದಲ್ಲಿ ಎನ್‌ಡಿಎ 3 ನಾಮಪತ್ರ ತಿರಸ್ಕೃತ :
ತಲಶ್ವರಿ, ಗುರುವಾಯೂರು ದೇವಿಕುಲಮ್ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರವನ್ನು ಚುನಾವಣ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ದೇವಿಕುಲಂ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಎಐಎಡಿಎಂಕೆ ಅಭ್ಯರ್ಥಿ ಆರ್.ಎಂ. ಧನಲಕ್ಷ್ಮಿ, ತಲಶ್ವೆರಿಯಲ್ಲಿ ಬಿಜೆಪಿ ಅಭ್ಯರ್ಥಿ ಎನ್. ಹರಿದಾಸ್, ಗುರುವಾಯೂರು ಕ್ಷೇತ್ರದ ಅಭ್ಯರ್ಥಿ ನಿವೇದಿತಾಗೆ ಈ ಹಿನ್ನಡೆ ಆಗಿದೆ. ದಾಖಲೆಗಳಲ್ಲಿ ದೋಷವಿದ್ದ ಕಾರಣ ನಾಮಪತ್ರ ತಿರಸ್ಕರಿಸಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಮೀಕ್ಷೆ: ಎಲ್‌ಡಿಎಫ್ ಮೇಲುಗೈ :
ಕೇರಳದಲ್ಲಿ ಮಾತೃಭೂಮಿ, ಸಿ-ವೋಟರ್ ಸಂಸ್ಥೆ ನಡೆಸಿದ ಚುನಾವಣ ಪೂರ್ವ ಸಮೀಕ್ಷೆಯಲ್ಲಿ ಸಿಪಿಎಂ ನೇತೃತ್ವದ ಎಡಪಕ್ಷಗಳು ಮೇಲುಗೈ ಸಾಧಿಸಿವೆ. ಆಡಳಿತರೂಢ ಎಲ್‌ಡಿಎಫ್ಗೆ 75-83 ಸ್ಥಾನಗಳು, ಯುಡಿಎಫ್ಗೆ 56-64 ಸ್ಥಾನಗಳು, ಎನ್‌ಡಿಎ ಮೈತ್ರಿಕೂಟಕ್ಕೆ 0-2 ಸ್ಥಾನಗಳು ಲಭಿಸಲಿವೆ ಎಂದು ಸಮೀಕ್ಷೆ ಹೇಳಿದೆ.
ಯುಡಿಎಫ್ ಪ್ರಣಾಳಿಕೆ: ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶನಿವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಿಂಚಣಿ ಕಲ್ಯಾಣ ನಿಧಿ 3 ಸಾವಿರಕ್ಕೆ ಹೆಚ್ಚಳ, ಇದಕ್ಕಾಗಿ ಪ್ರತ್ಯೇಕ ಆಯೋಗ ರಚನೆ, ಶಬರಿಮಲೆ ಅಯ್ಯಪ್ಪನ ಧಾರ್ಮಿಕ ಪರಂಪರೆ ಸಂರಕ್ಷಣೆಗೆ ವಿಶೇಷ ಕಾನೂನು, 40-60 ವಯಸ್ಸಿನ ಗೃಹಿಣಿಯರಿಗೆ ನ್ಯಾಯ ಸ್ಕೀಮ್ ಅಡಿಯಲ್ಲಿ 2,000 ರೂ. ಮಾಸಿಕ ನಿಧಿ… ಇವು ಪ್ರಣಾಳಿಕೆಯ ಹೈಲೈಟ್ಸ್.
ಜಯ ಅಮ್ಮನ ಅಲೆ ಇಲ್ಲಿ ಇನ್ನೂ ಜೀವಂತ! :
ಜಿದ್ದಾಜಿದ್ದಿ: ಆರ್. ಎಸ್. ರಾಜೇಶ್ (ಎಐಎಡಿಎಂಕೆ), ಜೆ.ಜೆ. ಎಬಿನೇಸರ್ (ಡಿಎಂಕೆ), ಡಾ| ಪಿ. ಕಾಳಿದಾಸ್ (ಎಎಂಎಂಕೆ)
ತಮಿಳುನಾಡಿನ ರಾಧಾಕೃಷ್ಣ ನಗರ, “ಅಮ್ಮ’ನಿಗೆ ಅಂತಿಮ ವರ್ಷಗಳಲ್ಲಿ ಸತತ 2 ಬಾರಿ ಗೆಲುವು ದಯಪಾಲಿಸಿದ ಕ್ಷೇತ್ರ. ಪ್ರಮುಖ 3 ಪಕ್ಷಗಳ ಅಭ್ಯರ್ಥಿಗಳೂ ಈ ಬಾರಿ ಇಲ್ಲಿ ಹೊಸ ಮುಖಗಳು!
ಹಾಗೆ ನೋಡಿದರೆ ಇಲ್ಲಿನ ಮತದಾರ 2001, 2006, 2011, 2015, 2016ರ ವಿಧಾನಸಭಾ ಚುನಾವಣೆಗಳಲ್ಲಿ ಭಾರೀ ಅಂತರದಲ್ಲಿ ಎಐಎಡಿಎಂಕೆ ಕೈಹಿಡಿದಿದ್ದಾನೆ. ಆದರೆ, ಅಮ್ಮನ ಅಗಲಿಕೆ ಬಳಿಕ ಆ ಪಕ್ಷದ ನಾಯಕತ್ವದ ನಂಬಿಕೆಯೇ ಕಳಕೊಂಡಂತಿದ್ದ ಇಲ್ಲಿನ ಜನತೆ, 2017ರ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್‌ರನ್ನು ಅಚ್ಚರಿಯಾಗಿ ಗೆಲ್ಲಿಸಿದ್ದರು.
ಆದರೆ ಈ 4 ವರ್ಷಗಳಲ್ಲಿ ದಿನಕರನ್ ಇಲ್ಲಿ ಹೇಳಿಕೊಳ್ಳುವಂಥ ವರ್ಚಸ್ಸು ಹೆಚ್ಚಿಸಿಕೊಂಡಿಲ್ಲ. ಮಿಗಿಲಾಗಿ ಗೆದ್ದ ಬಳಿಕ ಕ್ಷೇತ್ರದತ್ತ ಮುಖ ಮಾಡಿಲ್ಲ. ಅಲ್ಲದೆ ಈ ಬಾರಿ ಗೆಲ್ಲಿಸಿದ ಕ್ಷೇತ್ರವನ್ನು ಬಿಟ್ಟು ದಿನಕರನ್, ಕೋವಿಲ್‌ಪತ್ತಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಎಐಎಡಿಎಂಕೆ ತನ್ನ ಭದ್ರಕೋಟೆಯಲ್ಲಿ ಮತ್ತೆ ಮೇಲುಗೈ ಸಾಧಿಸಲು ವಿಪುಲ ಅವಕಾಶ ಹೊಂದಿದೆ. ಈ ಕಾರಣಕ್ಕಾಗಿ ಸ್ಥಳೀಯ ಪ್ರಭಾವಿ ಅಭ್ಯರ್ಥಿ, ಚೆನ್ನೈ ಪೂರ್ವದ ಜಿಲ್ಲಾಧ್ಯಕ್ಷ ಆರ್.ಎಸ್. ರಾಜೇಶ್‌ರನ್ನು ಕಣಕ್ಕಿಳಿಸಿದೆ. ಡಿಎಂಕೆ ಕೂಡ ಸ್ಥಳೀಯ ಮುಖಂಡನನ್ನೇ ಮುಂದಿಟ್ಟಿದೆ. ದುಡಿಯುವ ವರ್ಗ, ಪರಿಶಿಷ್ಟ ಜಾತಿ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಹಿಂದುಳಿದ ಜನಾಂಗದ ಜನರ ಮತಗಳು ಇಲ್ಲಿ ನಿರ್ಣಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.