ವಿಶ್ಲೇಷಣೆ: ಚೀನದ ಉದ್ಧಟತನದ ಹಿಂದೆ ಏನಿದೆ ಕಾರಣ?
Team Udayavani, Jul 4, 2020, 6:20 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಯಾವ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧ ಬಲವಾಗಿದೆಯೋ ಅವೆರಡೂ ರಾಷ್ಟ್ರಗಳ ನಡುವೆ ಸೌಹಾರ್ದವಿರುತ್ತದೆ ಎನ್ನುವ ಮಾತನ್ನು ಅಕ್ಷರಶಃ ಸುಳ್ಳು ಮಾಡುತ್ತಲೇ ಬಂದಿದೆ ಚೀನ.
ಭಾರತ ಮತ್ತು ಚೀನ ನಡುವೆ ಗಡಿ ಪ್ರದೇಶದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಎಲ್ಲಿಗೆ ತಲುಪಬಹುದು ಎನ್ನುವುದಕ್ಕೆ ಈಗಲೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ.
ಸರ್ಕಾರದ ಮಟ್ಟದಲ್ಲಿ ಹಾಗೂ ಹಿರಿಯ ಸೇನಾಧಿಕಾರದ ಸ್ತರಗಳಲ್ಲಿ ಚರ್ಚೆಗಳು ನಡೆದಿವೆಯಾದರೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿಯಂತ್ರಣಕ್ಕೆ ಬರಲು ಸಮಯ ಹಿಡಿಯಬಹುದು ಎನ್ನುತ್ತಿದ್ದಾರೆ.
ಏಕೆಂದರೆ ಇದನ್ನೆಲ್ಲ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳುವ ಮನಸ್ಥಿತಿಯಂತೂ ಪಿಎಲ್‌ಎದಿಂದ ಕಾಣಿಸುತ್ತಿಲ್ಲ.
ಯುದ್ಧ ಸಾಧ್ಯತೆ ಇಲ್ಲ
ಭಾರತ ಮತ್ತು ಚೀನದಂಥ ಬೃಹತ್ ಅಣ್ವಸ್ತ್ರ ಶಕ್ತಿಗಳು ನೇರಾನೇರ ಯುದ್ಧದಲ್ಲಿ ತೊಡಗುವುದು ಸಂಶಯವೇ ಸರಿ ಎಂದು ರಕ್ಷಣಾ ಪರಿಣತರು ಹೇಳುತ್ತಲೇ ಇದ್ದಾರೆ. ಆದರೆ ಇದೇ ವೇಳೆಯಲ್ಲೇ ಚೀನ ಗಾಲ್ವಾನ್ ಕಣಿವೆಯಲ್ಲಿ ಕ್ಯಾಂಪ್‌ಗಳನ್ನಷ್ಟೇ ಅಲ್ಲದೇ, ಬಹಳ ವೇಗವಾಗಿ ಮೂಲಸೌಕರ್ಯಾಭಿವೃದ್ಧಿಗೂ ಮುಂದಾಗಿದೆ.
ತನ್ನ ಭಾಗದಲ್ಲಿ ಅತಿವೇಗವಾಗಿ ಶಸ್ತ್ರಾಸ್ತ್ರ ಹಾಗೂ ಯುದ್ಧವಿಮಾನಗಳನ್ನು ಪೇರಿಸುತ್ತಿದೆ. ಪಾಕ್ ನೆಲೆಗಳಲ್ಲೂ ತನ್ನ ಉಪಸ್ಥಿತಿಯನ್ನು ಹೆಚ್ಚಿಸುತ್ತಿದೆ. ಇನ್ನು, ಪಾಕ್ ಪೋಷಿತ ಉಗ್ರರನ್ನು ಲಡಾಖ್‌ನಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಅತ್ತ ಟಿಬೆಟ್‌ನಲ್ಲಿನ ತನ್ನ ವಿಮಾನ ನೆಲೆಗಳಲ್ಲೂ ಯುದ್ಧ ವಿಮಾನಗಳನ್ನು ಚೀನ ಸನ್ನದ್ಧಗೊಳಿಸುತ್ತಿದೆ ಎಂದು ವರದಿಯಾಗುತ್ತಿದೆ.
ಈ ಬಿಕ್ಕಟ್ಟಿನ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್‌ಗೆ ತೆರಳಿ, ಪರಿಸ್ಥಿತಿ ಅವಲೋಕಿಸುವ ಜತೆಗೇ, ಭಾರತೀಯ ಸೇನೆಗೆ ಮನೋಬಲ ತುಂಬುವ ಪ್ರಯತ್ನ ನಡೆಸಿರುವುದು ಶ್ಲಾಘನೆಗೆ ಪಾತ್ರವಾಗಿದೆ.
ನಿವೃತ್ತ ಚೀನಿ ಸೈನಿಕರಲ್ಲಿ ಜಿನ್‌ಪಿಂಗ್ ಬಗ್ಗೆ ಅಸಮಾಧಾನ
ಇತ್ತ ಭಾರತ ತನ್ನ ಸೈನಿಕರಿಗೆ ಮನೋಬಲ ತುಂಬುವ ಕೆಲಸ ಮಾಡುತ್ತಿರುವ ವೇಳೆಯಲ್ಲೇ, ಅತ್ತ ಜಿನ್‌ಪಿಂಗ್ ಸರಕಾರ ತನ್ನ ಸೈನಿಕರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಪಿಎಲ್‌ಎದಲ್ಲೇ ಅಸಮಾಧಾನ ಭುಗಿಲೇಳುತ್ತಿದ್ದು, ಈ ಬಗ್ಗೆ ಚೀನಿ ಸರ್ಕಾರಕ್ಕೂ ಆತಂಕ ಇದೆ ಎನ್ನಲಾಗುತ್ತದೆ. ಅದರಲ್ಲೂ ಜಿನ್‌ಪಿಂಗ್ ಆಡಳಿತದ ವಿರುದ್ಧ ಅತೀವ ಅಸಮಾಧಾನ ಹೊಂದಿರುವ ನಿವೃತ್ತ ಪಿಎಲ್‌ಎ ಸೈನಿಕರು, ಎಲ್ಲಿ ಶಸ್ತಾಸ್ತ್ರ ದಂಗೆಯೆಬ್ಬಿಸುತ್ತಾರೋ ಎಂಬ ಚಿಂತೆ ಚೀನಿ ನಾಯಕತ್ವಕ್ಕೆ ಕಾಡುತ್ತಿದೆ ಎಂದು ಚೀನದಿಂದ ಪಾರಾಗಿ, ವಿದೇಶದಲ್ಲಿ ಆಶ್ರಯ ಪಡೆದಿರುವ, ಜಾನ್ಲಿ ಯಾಂಗ್ ಎನ್ನುವವರು ವಾಷಿಂಗ್‌ಟನ್ ಪೋಸ್ಟ್‌ಗೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.
ಇವರು ಚೀನದ ಕಮ್ಯುನಿಸ್ಟ್ ಪಾರ್ಟಿ ಮಾಜಿ ನಾಯಕನ ಮಗನೂ ಹೌದು. ಇನ್ನು ಲಂಡನ್‌ನಲ್ಲಿರುವ ಏಷ್ಯನ್ ಸಮಾಜ-ರಾಜಕೀಯ ಅಧ್ಯಯನ ಸಂಸ್ಥೆ, “ನಿಬಿಟ್ಸ್’ನ ಮುಖ್ಯಸ್ಥ ರಿಚರ್ಡ್ ಪೀಟರ್‌ಸನ್ ಸಹ ಇದೇ ಮಾತನ್ನೇ ಹೇಳುತ್ತಾರೆ: “ಚೀನದ ಆಡಳಿತ ಪಕ್ಷದ ಮುಖ್ಯ ಬೆನ್ನೆಲುಬೇ ಚೀನಿ ಸೇನೆ. ಹೀಗಾಗಿ, ಭಾರತೀಯ ಸೈನಿಕರು ಚೀನಿ ಸೈನಿಕರನ್ನು ಸದೆಬಡಿದಿದ್ದಾರೆ ಎಂಬ ವಿಷಯವನ್ನು ಅದು ಜನರಿಗೆ ತಲುಪದಂತೆ ನೋಡಿಕೊಳ್ಳುತ್ತಿದೆ.
ಇತ್ತ ಭಾರತವು ಚೀನದ ಆ್ಯಪ್ ಗಳನ್ನು ನಿಷೇಧಿಸಿದರೆ, ಅತ್ತ ಚೀನ ಮಾಡಿದ್ದೇನು ಗಮನಿಸಿದ್ದೀರಾ? ಅದು, ತನ್ನ ಸೈನಿಕರ ಸಾವಿನ ಕುರಿತ ವಿದೇಶಿ ವರದಿಗಳು ಚೀನಿ ನಾಗರಿಕರಿಗೆ ತಲುಪದಂತೆ ನೋಡಿಕೊಳ್ಳುತ್ತಿದೆ. ಚೀನ-ಭಾರತ ಗಡಿ ಬಿಕ್ಕಟ್ಟಿನ ಬಗ್ಗೆ ನಿರಂತರ ವರದಿಗಳನ್ನು ಪ್ರಕಟಿಸುತ್ತಿದ್ದ ವಿಯಾನ್ ಎನ್ನುವ ಸುದ್ದಿ ಮಾಧ್ಯಮವನ್ನು ಜಿನ್‌ಪಿಂಗ್ ಆಡಳಿತ ಬ್ಲಾಕ್ ಮಾಡಿದೆ.
ಅಲ್ಲದೇ, ಭಾರತೀಯ ಸುದ್ದಿ ಜಾಲತಾಣಗಳು ಚೀನಿ ಸಾರ್ವಜನಿಕರಿಗೆ ಸಿಗದಂತೆ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ, ವಿಪಿಎನ್ ಮೂಲಕ ಈಗಲೂ ಚೀನಿಯರು ವಿದೇಶಿ ಸುದ್ದಿಗಳನ್ನು ಓದುತ್ತಾರಾದರೂ, ಇದಕ್ಕೂ ಈಗ ಚೀನ ಕತ್ತರಿಹಾಕಲು ಪ್ರಯತ್ನಿಸುತ್ತಿದೆ. ಒಟ್ಟಲ್ಲಿ, ಚೀನ ಈಗ ಸಂಪೂರ್ಣವಾಗಿ ಉತ್ತರ ಕೊರಿಯಾ ಮಾದರಿಯ ಆಡಳಿತ ವೈಖರಿಯತ್ತ ವಾಲುತ್ತಿದೆ” ಎನ್ನುತ್ತಾರೆ ಪೀಟರ್ಸನ್.
ವೇಗ ಪಡೆದ ಭಾರತದ ಸಿದ್ಧತೆ
ಭಾರತ ಸಹ ಅತ್ಯಂತ ವೇಗವಾಗಿ ಗಡಿ ಭಾಗದಲ್ಲಿ ಶಸ್ತ್ರಾಸ್ತ್ರಗಳನ್ನು, ಸೇನೆಯನ್ನು ನಿಯೋಜಿಸುತ್ತಿದೆ. ಈಗ ರಕ್ಷಣಾ ಇಲಾಖೆ ರಷ್ಯಾದಿಂದ ಯುದ್ಧವಿಮಾನಗಳ ಖರೀದಿಗೂ ಅನುಮತಿ ನೀಡಿದೆ. ಮುಂದಿನ ತಿಂಗಳಾಂತ್ಯಕ್ಕೆ ಫ್ರಾನ್ಸ್‌ನಿಂದ ಆರು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿಯಲಿವೆ.
ಅತ್ತ ಅಮೆರಿಕ ಸಹ ಚೀನವನ್ನು ದೃಷ್ಟಿಯಲ್ಲಿಟ್ಟುಕೊಂಡು ಜರ್ಮನಿಯಲ್ಲಿದ್ದ ತನ್ನ ಸಮರ ನೌಕೆಗಳನ್ನು ದಕ್ಷಿಣ ಚೀನದಲ್ಲಿ ನಿಯೋಜಿಸಿದೆ. ಹಾಗಿದ್ದರೆ, ನಿಜಕ್ಕೂ ಯುದ್ಧ ಸಂಭವಿಸುವುದೇ ಎನ್ನುವ ಚರ್ಚೆಯೂ ಆರಂಭವಾಗಿದೆ.
ಆದರೆ ರಕ್ಷಣಾ ಪರಿಣತ ಅನಿರ್ಬಾನ್ ಚೌಧರಿಯವರು ಈ ಬಗ್ಗೆ ಹೇಳುವುದು ಹೀಗೆ- “ಸುದ್ದಿವಾಹಿನಿಗಳಲ್ಲಿ ಚೀನ ಮತ್ತು ಭಾರತದ ಶಸ್ತ್ರಾಸ್ತ್ರಗಳು, ಅಣ್ವಸ್ತ್ರಗಳು, ಯುದ್ಧವಿಮಾನಗಳ ತುಲನೆ ಮಾಡಲಾಗುತ್ತಿದೆ. ಕೆಲವು ವಾಹಿನಿಗಳಂತೂ ಚೀನದ ಬಳಿ ಭಾರತಕ್ಕಿಂತ ಹೆಚ್ಚು ಆಧುನಿಕ ಶಸ್ತ್ರಾಸ್ತ್ರಗಳು ಇವೆ ಎಂದು ಒತ್ತಿ ಹೇಳುತ್ತಿವೆ.
ಆದರೆ, ಯುದ್ಧವೆನ್ನುವುದು ಅತ್ಯಂತ ದುಬಾರಿ ಮತ್ತು ದುರಂತಮಯ ಪರಿಸ್ಥಿತಿಯಾಗಿ ಪರಿಣಮಿಸುತ್ತದೆ ಎನ್ನುವುದು ಚೀನಕ್ಕೂ ಸ್ಪಷ್ಟವಾಗಿ ಗೊತ್ತಿದೆ. ಜಗತ್ತಿನ ಅತ್ಯಂತ ಬಲಿಷ್ಠ ಸೇನೆಗಳಲ್ಲಿ ಭಾರತೀಯ ಸೇನೆಯೂ ಒಂದು.
ಸತ್ಯವೇನೆಂದರೆ, ಭಾರತೀಯ ಸೇನೆ ಸ್ವಾತಂತ್ರ್ಯಾನಂತರದಿಂದ ನಿರಂತರವಾಗಿ ಅತ್ತ ಪಾಕಿಸ್ತಾನ, ಇತ್ತ ಚೀನ ಹಾಗೂ ಇನ್ನೊಂದೆಡೆ ಪಾಕ್ ಪೋಷಿತ ಉಗ್ರರು ಎದುರೊಡ್ಡುವ ಸವಾಲುಗಳನ್ನು ಸಕ್ಷಮವಾಗಿ ಎದುರಿಸುತ್ತಲೇ ಬಂದಿದೆ.
ಈ ಕಾರಣಕ್ಕಾಗಿಯೇ, ಭಾರತೀಯ ಸೇನೆಯ ಗುಪ್ತಚರ ಸಾಮರ್ಥ್ಯಗಳಾಗಿರಲಿ, ನೆಟ್‌ವರ್ಕ್ ಆಗಲಿ, ಯುದ್ಧ ತಂತ್ರಗಳಾಗಿರಲಿ ಈಗ ಅತಿ ಬಲಿಷ್ಠವಾಗಿ ಬದಲಾಗಿವೆ. ಇನ್ನೊಂದೆಡೆ ಚೀನಿ ಸೈನಿಕರಿಗೆ ಟಿಬೆಟ್, ಹಾಂಕಾಂಗ್‌ನಂಥ ದುರ್ಬಲ ರಾಷ್ಟ್ರ /ಪ್ರದೇಶಗಳ ಮೇಲೆ ದಬ್ಟಾಳಿಕೆ ಮಾಡಿಯಷ್ಟೇ ಅನುಭವವಿದೆ.” ಎನ್ನುತ್ತಾರೆ.
ಚೀನ: ಅತ್ತ ವ್ಯಾಪಾರ, ಇತ್ತ ಜಗಳ
ಯಾವ ರಾಷ್ಟ್ರಗಳ ನಡುವೆ ವ್ಯಾಪಾರ ಸಂಬಂಧ ಬಲವಾಗಿದೆಯೋ ಅವೆರಡೂ ರಾಷ್ಟ್ರಗಳ ನಡುವೆ ಸೌಹಾರ್ಧವಿರುತ್ತದೆ ಎನ್ನುವ ಮಾತನ್ನು ಅಕ್ಷರಶಃ ಸುಳ್ಳು ಮಾಡುತ್ತಲೇ ಬಂದಿದೆ ಚೀನ. ಭಾರತವೆಂದಷ್ಟೇ ಅಲ್ಲ, ತನ್ನ ಇತರೆ ದೊಡ್ಡ ವ್ಯಾಪಾರ ಮಿತ್ರ ರಾಷ್ಟ್ರಗಳೊಂದಿಗೂ ಚೀನ ತಂಟೆ ಮಾಡುತ್ತಲೇ ಬಂದಿದೆ. ಅದರಲ್ಲೂ ಕೋವಿಡ್-19 ಹಾವಳಿ ಆರಂಭವಾದಾಗಿನಿಂದ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಜತೆಗಿನ ಅದರ ಸಂಬಂಧ ಬಿಗಡಾಯಿಸಿದೆ.
2017ರಲ್ಲಿ ಅಮೆರಿಕ ಹಾಗೂ ಚೀನ ನಡುವೆ ಒಟ್ಟಾರೆ ವ್ಯಾಪಾರವು 583 ಶತಕೋಟಿ ಡಾಲರ್ ತಲುಪಿದ್ದರೆ, ಯುರೋಪ್‌ನೊಂದಿಗೆ 573 ಶತಕೋಟಿ ಡಾಲರ್ ತಲುಪಿತ್ತು. ಇನ್ನು 2019ರಲ್ಲಿ ಜಪಾನ್‌ನೊಂದಿಗೆ 303 ಶತಕೋಟಿ ಡಾಲರ್, ಹಾಂಗ್‌ಕಾಂಗ್‌ನೊಂದಿಗೆ 286 ಶತಕೋಟಿ ಡಾಲರ್ ಹಾಗೂ ತೈವಾನ್‌ನೊಂದಿಗೆ 200 ಶತಕೋಟಿ ಡಾಲರ್ ವಹಿವಾಟು ನಡೆಸಿದೆ ಚೀನ. ಫಿಲಿಪ್ಪೀನ್ಸ್ ಮತ್ತು ವಿಯೆಟ್ನಾಂ ಕೂಡ ಚೀನದೊಂದಿಗೆ ಉತ್ತಮ ವ್ಯಾಪಾರ ಸಂಬಂಧ ಹೊಂದಿವೆ.
ಆದರೆ, ಭಾರತ ಸೇರಿದಂತೆ, ಇವೆಲ್ಲ ರಾಷ್ಟ್ರಗಳೊಂದಿಗೆ ಚೀನದ ರಾಜಕೀಯ ಬಿಕ್ಕಟ್ಟು ಮುಂದುವರಿಯುತ್ತಿರುವುದಲ್ಲದೇ, ಅದರ ತೀವ್ರತೆ ಹೆಚ್ಚುತ್ತಲೇ ಸಾಗಿದೆ. ಅಂದರೆ ಚೀನಿ ಆರ್ಥಿಕತೆಗೂ, ರಾಜಕೀಯಕ್ಕೂ ತಾಳಮೇಳವೇ ಇಲ್ಲ ಎಂದಾಯಿತು. ಆದರೆ, ಈ ರೀತಿ ವ್ಯಾಪಾರ ರಾಷ್ಟ್ರಗಳೊಂದಿಗೆ ಸಂಬಂಧ ಹದಗೆಡಿಸಿಕೊಳ್ಳಲು ಚೀನಿ ಆಡಳಿತವೇಕೆ ಹಿಂಜರಿಯುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಬಗ್ಗೆ ಖ್ಯಾತ ವಿತ್ತ ತಜ್ಞ ಆರ್. ಮುಕುಂದನ್ ಹೇಳುವುದು ಹೀಗೆ- “ಮೊದಲನೆಯದಾಗಿ, ಚೀನ ಈಗ ಹಿಂದಿನಂತೆ, ಪ್ರಪಂಚದ ಮೇಲೆ ಅವಲಂಬಿತವಾಗಿಲ್ಲ.
2008ರ ನಂತರ ಪ್ರಪಂಚವು ಚೀನಿ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗುತ್ತಾ ಬಂದರೆ, ಚೀನ ಈಗ ಆಂತರಿಕ ಮಾರುಕಟ್ಟೆಯತ್ತ ಹೆಚ್ಚು ಗಮನಹರಿಸಲಾರಂಭಿಸಿದೆ. ಎಷ್ಟಿದ್ದರೂ 147 ಕೋಟಿ ಜನಸಂಖ್ಯೆಯಿರುವ ರಾಷ್ಟ್ರವದು. ಹೀಗಾಗಿ, ಅದು ಉತ್ಪಾದಿಸುವ ಪ್ರತಿಯೊಂದು ಉತ್ಪನ್ನಕ್ಕೂ ಚೀನದಲ್ಲೇ ಅಧಿಕ ಗ್ರಾಹಕರಿದ್ದಾರೆ.”
2019ರ ಮೆಕೆನ್ಸಿ ಗ್ಲೋಬಲ್ ಇನ್ಸ್‌ಟಿಟ್ಯೂಟ್‌ನ ಅಧ್ಯಯನ ವರದಿಯೂ ಇದನ್ನೇ ಹೇಳುತ್ತದೆ – “ಚೀನ ಮತ್ತು ಇತರೆ ರಾಷ್ಟ್ರಗಳ ನಡುವಿನ ಸಂಬಂಧ ಈಗ ಹೊಸ ಹಂತವನ್ನು ತಲುಪಿದೆ. ಇದುವರೆಗೂ ಚೀನದ ಆರ್ಥಿಕ ಶಕ್ತಿಗೆ ಅದರ ಉದ್ಯಮಗಳು ಹಾಗೂ ಹೂಡಿಕೆ ಮುಖ್ಯ ಇಂಧನವಾಗಿದ್ದವು. ಈಗ ಅದರ ಬೆಳವಣಿಗೆಯ ಹಿಂದೆ ದೇಶೀಯ ಕನ್ಸಂಪ್ಶನ್ ಚಾಲನಾ ಶಕ್ತಿಯಾಗಿದೆ. ಚೀನಿ ಗ್ರಾಹಕರೇ ಚೀನ ಆರ್ಥಿಕತೆಗೆ ಬಹಳ ಬಲ ತುಂಬುತ್ತಿದ್ದಾರೆ”.
ಹಾಗಿದ್ದರೆ, ಚೀನದ ಉದ್ಧಟತನವನ್ನು ಜಗತ್ತು ಇನ್ನೆಷ್ಟು ದಿನ ಸಹಿಸಿಕೊಳ್ಳುವುದು ಎನ್ನುವ ಪ್ರಶ್ನೆಗೆ ಮುಕುಂದನ್ ಅವರು ಹೇಳುವುದಿಷ್ಟು- “ಈಗ ಚೀನದ ಮೇಲೆ ಅನೇಕ ದೇಶಗಳಿಗೆ ಮುನಿಸಿದೆಯಾದರೂ, ಆ ದೇಶಗಳು ಡ್ರ್ಯಾಗನ್ ರಾಷ್ಟ್ರವನ್ನು ಎಷ್ಟು ಅವಲಂಬಿಸಿವೆಯೆಂದರೆ, ಅದನ್ನು ಎದುರು ಹಾಕಿ ಕೊಳ್ಳಲು ಧೈರ್ಯ ತೋರಿಸುತ್ತಿಲ್ಲ.
ಈ ಕಾರಣಕ್ಕಾಗಿಯೇ, ಚೀನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಾ ಹೋಗುವುದು.. ಅಂದರೆ, ದೇಶೀಯ ಉತ್ಪಾದನೆಗೆ ಬಲ ತುಂಬುತ್ತಾ ದೇಶಗಳು ಸ್ವಾವಲಂಬಿಯಾದಾಗ ಮಾತ್ರ ಜಿನ್‌ಪಿಂಗ್ ಆಡಳಿತಕ್ಕೆ ಅದರದ್ದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಲು ಸಾಧ್ಯವಾಗುತ್ತದೆ. ಈ ಕಾರಣಕ್ಕಾಗಿಯೇ, ನಮ್ಮಲ್ಲೂ ಆತ್ಮನಿರ್ಭರ ಭಾರತ ಎನ್ನುವುದು ಒಂದು ಪರಿಕಲ್ಪನೆಯಾಗಿ ಉಳಿಯದೇ, ತ್ವರಿತವಾಗಿ ಅನುಷ್ಠಾನಕ್ಕೆ ಬರುವುದು ಬಹಳ ಮುಖ್ಯ” ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.