Indepth:1996ರಲ್ಲಿ ಜಯಾ ಸರ್ಕಾರ ಉರುಳಿಸಿದ್ದ ರಜನಿ “ಆಧ್ಯಾತ್ಮಿಕ ರಾಜಕೀಯ” ಯಶಸ್ವಿ ಆಗುತ್ತಾ
ಜನಪ್ರಿಯತೆ ಗಳಿಸಿದ್ದ ರಜನಿಕಾಂತ್ 1985ರಲ್ಲಿ ಶ್ರೀರಾಘವೇಂದ್ರ ಚಿತ್ರದಲ್ಲಿ ನಟಿಸಿದ್ದರು.
ನಾಗೇಂದ್ರ ತ್ರಾಸಿ, Dec 3, 2020, 5:18 PM IST
ಮಣಿಪಾಲ: ಚಿತ್ರರಂಗದ ಬೆಳ್ಳಿ ಪರದೆ ಮೇಲೆ ತನ್ನದೇ ಸ್ಟೈಲ್ ಮೂಲಕ ಪ್ರೇಕ್ಷಕರ ಮನಗೆದ್ದು ಸೂಪರ್ ಸ್ಟಾರ್ ಎಂದು ಬಿರುದು ಪಡೆದಿಕೊಂಡಿದ್ದ ರಜನಿಕಾಂತ್ ಅಲಿಯಾಸ್ ಶಿವಾಜಿರಾವ್ ಗಾಯಕ್ವಾಡ್ ಕೊನೆಗೂ ತಮಿಳುನಾಡಿನ ರಾಜಕಾರಣಕ್ಕೆ ಪ್ರವೇಶಿಸುವುದಾಗಿ ಅಧಿಕೃತವಾಗಿ ಘೋಷಿಸುವ ಮೂಲಕ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.
2017ರ ಡಿಸೆಂಬರ್ 31ರಂದು ರಾಜಕೀಯ ಪ್ರವೇಶಿಸುವ ನಿಟ್ಟಿನಲ್ಲಿ ರಜನಿ ಮಕ್ಕಳ್ ಮಂಡ್ರಂ ಹೆಸರಿನ ಮೂಲಕ ಚಟುವಟಿಕೆ ಆರಂಭಿಸಿದ್ದರು. ಆದರೆ ಅಧಿಕೃತವಾಗಿ ರಾಜಕೀಯ ಪ್ರವೇಶಿಸುವ ಸುಳಿವನ್ನು ಮುಂದೂಡುತ್ತಲೇ ಬಂದಿದ್ದರು. ಇದೀಗ ಗುರುವಾರ(ಡಿಸೆಂಬರ್ 03, 2020)ದಂದು 2021ರ ಜನವರಿಯಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ತಿಳಿಸಿದ್ದು, ಈ ಕುರಿತು ಡಿಸೆಂಬರ್ 31ರಂದು ಘೋಷಿಸುವುದಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ಕಾಲ ಬೆಳ್ಳಿಪರದೆ ಮೇಲೆ ನಟರಾಗಿ ಮಿಂಚಿದ್ದ 69ವರ್ಷದ ರಜನಿಕಾಂತ್ ರಾಜಕೀಯ ನೇತಾರರಾಗಲು ಮುಂದಾಗಿದ್ದಾರೆ. ರಾಜಕೀಯದಲ್ಲಿ ಬದಲಾವಣೆಯ ಅಗತ್ಯವಿದೆ. ಈ ವ್ಯವಸ್ಥೆ ಬದಲಾಗಬೇಕಿದೆ. ನಮಗೆ ಸತ್ಯಪರವಾದ, ನೇರವಂತಿಕೆ ಹಾಗೂ ಶುದ್ಧ ರಾಜಕೀಯದ ಅಗತ್ಯವಿದೆ. ನಮಗೆ ಜಾತಿ ಮತ್ತು ಧರ್ಮದ ಪ್ರಭಾವವಿಲ್ಲದ ರಾಜಕೀಯ ಬೇಕಾಗಿದೆ. ನಮಗೆ “ಆಧ್ಯಾತ್ಮಿಕ ರಾಜಕೀಯ” ಬೇಕು. ಇದು ನನ್ನ ರಾಜಕೀಯದ ಗುರಿ ಮತ್ತು ಹಾರೈಕೆ ಎಂಬುದಾಗಿ ರಜನಿಕಾಂತ್ ಹೇಳಿಕೊಂಡಿದ್ದರು.
ಆಧ್ಯಾತ್ಮಿಕ ರಾಜಕೀಯ ರಜನಿಕಾಂತ್ ಅವರ ಕೈಹಿಡಿಯುತ್ತದೆಯೇ?
ರಜನಿಕಾಂತ್ ಅವರಿಗೆ ಈ ಆಧ್ಯಾತ್ಮದ ರಾಜಕೀಯದ ಗುಂಗು ಹೇಗೆ ಬಂತು? ನಿಜಕ್ಕೂ ಇಂತಹ ರಾಜಕೀಯದಿಂದ ಯಶಸ್ಸು ಪಡೆಯಲು ಸಾಧ್ಯವಿದೆಯಾ? ಎಂಬ ಬಗ್ಗೆ ವಿಶ್ಲೇಷಿಸುವ ಮುನ್ನ ರಜನಿ ಅವರ ಆಧ್ಯಾತ್ಮಿಕ ರಾಜಕೀಯದ ಮೂಲದ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.
ಸತತ ಆ್ಯಕ್ಷನ್ ಹಾಗೂ ನೆಗೆಟೀವ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ರಜನಿಕಾಂತ್ 1985ರಲ್ಲಿ ಶ್ರೀರಾಘವೇಂದ್ರ ಚಿತ್ರದಲ್ಲಿ ನಟಿಸಿದ್ದರು. ಸಂತ ರಾಘವೇಂದ್ರ ಸ್ವಾಮಿ ಪಾತ್ರದಿಂದಾಗಿ ರಜನಿ ವಿಭಿನ್ನವಾಗಿ ಕಾಣಿಸಿಕೊಂಡಂತಾಗಿತ್ತು. ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಆ ಬಳಿಕ ಸುಮಾರು 20 ವರ್ಷಗಳ ನಂತರ ರಜನಿಕಾಂತ್ “ಬಾಬಾ”(ಪುನರ್ ಜನ್ಮ) ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರವೂ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ.
ಶ್ರೀರಾಘವೇಂದ್ರ ಮತ್ತು ಬಾಬಾ ಸಿನಿಮಾದ ಒಳನೋಟ ರಜನಿಕಾಂತ್ ಅವರನ್ನು ಆಧ್ಯಾತ್ಮಿಕ ರಾಜಕಾರಣಕ್ಕೆ ಮುಂದಡಿ ಇಡಲು ಸುಗಮ ಹಾದಿ ಮಾಡಿಕೊಟ್ಟಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಹೇಳುವ ರಜನಿ ತಮಿಳುನಾಡಿನಲ್ಲಿ ಆಧ್ಯಾತ್ಮಿಕ ರಾಜಕೀಯದ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಂದ ಹಾಗೆ ರಜನಿಕಾಂತ್ ಅವರ “ಆಧ್ಯಾತ್ಮಿಕ ರಾಜಕೀಯ”ವನ್ನು ಜನರು ಒಪ್ಪಿಕೊಳ್ಳುತ್ತಾರೋ ಅಥವಾ ತಲೈವರ್ ಅವರ ಎರಡು ಭಕ್ತಿ ಪ್ರಧಾನ ಸಿನಿಮಾ ಸೋತಂತೆ ನಿರೀಕ್ಷಿತ ಯಶಸ್ಸು ಪಡೆಯದಿರುವ ಸಾಧ್ಯತೆ ಇರಬಹುದೇ ಎಂಬುದು ಪ್ರಶ್ನೆಯಾಗಿದೆ.
ರಜನಿ ಕರೆ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿತ್ತು!
1995ರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆಯಲ್ಲಿತ್ತು. ಈ ಸಂದರ್ಭದಲ್ಲಿ ಜಯಲಲಿತಾ ಎಐಎಡಿಎಂಕೆ ಹಿರಿಯ ಸದಸ್ಯ, ಸಿನಿಮಾ ನಿರ್ಮಾಪಕ ಆರ್ ಎಂ ವೀರಪ್ಪನ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದ್ದರು. ಆಗ ಆರ್ ಎಂ ಜತೆ ಮಾತುಕತೆ ನಡೆಸಿದ್ದ ರಜನಿಕಾಂತ್ ಮುಂದಿನ ಚುನಾವಣೆಯಲ್ಲಿ ಜಯಲಲಿತಾ ಗೆಲುವು ಸಾಧಿಸಿದರೆ ತಮಿಳುನಾಡನ್ನು ದೇವರು ಕೂಡಾ ಕಾಪಾಡಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದ್ದರು!
ಜಯಲಲಿತಾ ಸರ್ಕಾರದ ಭ್ರಷ್ಟಾಚಾರ ಜಗಜ್ಜಾಹೀರಾಗಿತ್ತು. ಇಂತಹ ವೇಳೆಯಲ್ಲಿ ರಜನಿಕಾಂತ್ ನೀಡಿದ್ದ ಹೇಳಿಕೆಯನ್ನು ತಮಿಳುನಾಡು ಜನರು ಕೂಡಾ ಸ್ವಾಗತಿಸಿದ್ದರು. ಅದರ ಪರಿಣಾಮ 1996ರ ತಮಿಳುನಾಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆಯಲ್ಲಿ ಜಯಲಲಿತಾ ಜತೆ ಕಾಂಗ್ರೆಸ್ ಕೈಜೋಡಿಸಲು ಮುಂದಾಗಿದ್ದರಿಂದ ಬಂಡಾಯವೆದ್ದ ಕಾಂಗ್ರೆಸ್ ಹಿರಿಯ ಮುಖಂಡ ಜಿಕೆ ಮೂಪ್ ನಾರ್ ಪಕ್ಷದಿಂದ ಹೊರಬಂದು ಸ್ವಂತ ಪಕ್ಷ (ತಮಿಳ್ ಮನಿಲಾ ಕಾಂಗ್ರೆಸ್-ಟಿಎಂಸಿ) ಸ್ಥಾಪಿಸಿದ್ದರು.
ಚುನಾವಣೆಯಲ್ಲಿ ಜಿಕೆ ಮೂಪನಾರ್ ನೇತೃತ್ವದ ಟಿಎಂಸಿ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿತ್ತು. ಇದರಿಂದ ಚುನಾವಣೆಯಲ್ಲಿ ಮತಗಳು ವಿಭಜನೆಯಾಗುವ ಮೂಲಕ ಜಯಲಿಲಿತಾ ಹಾಗೂ ಎಐಎಡಿಎಂಕೆ ಹೀನಾಯ ಸೋಲು ಕಾಣುವಂತಾಗಿತ್ತು. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಎಐಎಡಿಎಂಕೆ ಕೇವಲ 4 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇದಕ್ಕೆ ಕಾರಣ ಡಿಎಂಕೆ, ಟಿಎಂಸಿ ಮೈತ್ರಿಗೆ ಮತಚಲಾಯಿಸಿ ಎಂದು ರಜನಿಕಾಂತ್ ಬಹಿರಂಗವಾಗಿ ಕರೆಕೊಟ್ಟಿದ್ದು!
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶ 1996ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮೊತ್ತ ಮೊದಲ ಬಾರಿಗೆ ಯಾವುದೇ ಮೈತ್ರಿ ಇಲ್ಲದೇ ಭಾರತೀಯ ಜನತಾ ಪಕ್ಷ ಒಂದು ಸ್ಥಾನದಲ್ಲಿ ಜಯ ಸಾಧಿಸಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಎಐಎಡಿಎಂಕೆ ಎಲ್ಲಾ ಸ್ಥಾನಗಳನ್ನು ಕಳೆದುಕೊಂಡಿತ್ತು. ಕಾಂಗ್ರೆಸ್ ಕೂಡಾ ಹೀನಾಯ ಸೋಲು ಕಂಡಿದ್ದು, ಬಿಜೆಪಿ ಏಕೈಕ ಅತೀ ದೊಡ್ಡ (161 ಸ್ಥಾನ)ಪಕ್ಷವಾಗಿ ಹೊರಹೊಮ್ಮಿದ್ದು, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
2006, 2022 ಮತ್ತು 2016ರ ಚುನಾವಣೆಯ ಸಂದರ್ಭದಲ್ಲಿ ರಜನಿಕಾಂತ್ ತನ್ನ ಅಭಿಮಾನಿಗಳಲ್ಲಿ ತಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ 2016ರ ಡಿಸೆಂಬರ್ 5ರಂದು ಜಯಲಲಿತಾ ನಿಧನದ ನಂತರ ರಜನಿಕಾಂತ್ ಮತ್ತೆ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದರು.
ಆಧ್ಯಾತ್ಮಿಕ ರಾಜಕೀಯ v/s ಬಿಜೆಪಿ:
ರಜನಿಕಾಂತ್ ಅವರ ಆಧ್ಯಾತ್ಮಿಕ ರಾಜಕೀಯದ ಹೇಳಿಕೆ ಗಮನಿಸಿದರೆ ಇದು ಬಿಜೆಪಿ ಸಿದ್ಧಾಂತದ ಮತ್ತೊಂದು ಮುಖದಂತೆ ಕಾಣಿಸುತ್ತದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ನಂಟನ್ನು ಕೂಡಾ ಕಡೆಗಣಿಸಲು ಸಾಧ್ಯವಿಲ್ಲ. 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಅವರು ಚೆನ್ನೈಗೆ ಪ್ರಚಾರಕ್ಕಾಗಿ ಆಗಮಿಸಿದ್ದಾಗ ಅವರು ರಜನಿ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಆಧ್ಯಾತ್ಮಿಕ ರಾಜಕೀಯದ ಬಗ್ಗೆ ವಿಸ್ತೃತ ಚರ್ಚೆ ನಡೆದಿರುವುದಾಗಿ ಮನಿಥಾ ನೇಯ ಮಕ್ಕಳ್ ಕಚ್ಚಿ ಅಧ್ಯಕ್ಷ ಎಂಎಚ್ ಜವಾಹಿರುಲ್ಲಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
2021 ಜಿದ್ದಾಜಿದ್ದಿನ ಅಖಾಡವಾಗಲಿದೆ:
2021ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಗೆ ಕಾರಣವಾಗಲಿದೆ. ಅದಕ್ಕೆ ಕಾರಣ ಭಾರತೀಯ ಜನತಾ ಪಕ್ಷ(ಅಮಿತ್ ಶಾ ರಣತಂತ್ರ) ಈಗಾಗಲೇ ತಮಿಳುನಾಡಿನತ್ತ ಚಿತ್ತ ನೆಟ್ಟಿದೆ. ಅಲ್ಲದೇ ರಜನಿಕಾಂತ್ ಕೂಡಾ ರಾಜಕೀಯ ಪ್ರವೇಶ ಮಾಡುತ್ತಿದ್ದು, ಡಿಎಂಕೆ, ಎಐಎಡಿಎಂಕೆ, ಪಿಎಂಕೆ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳಿವೆ. ಜತೆಗೆ ಕಾಂಗ್ರೆಸ್, ಎಡಪಕ್ಷ, ಒವೈಸಿ ಪಕ್ಷಗಳು ಅಖಾಡಕ್ಕಿಳಿಯಲಿವೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಅಧಿಕಾರದ ಗದ್ದುಗೆ ಯಾರ ಪಾಲಾಗಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.