ಬಿರಿಯಾನಿ ಪ್ರಿಯರ ಫೇಸ್‌ಬುಕ್ ಕ್ಲಬ್!
Team Udayavani, Jul 22, 2017, 3:53 PM IST
ಬಿರಿಯಾನಿ ಅಂದ್ರೆ ಫುಡ್ಡೀಗಳ ಬಾಯಿಗೆ ರಸಗವಳ. ಕೆಲವರಿಗೆ ಅದರ ಪರಿಮಳದಲ್ಲಿಯೇ ಹೊಟ್ಟೆ ತುಂಬೋದೂ ಉಂಟು. ಇಂಥ ಬಿರಿಯಾನಿಯನ್ನೇ ಉಸಿರನ್ನಾಗಿಸಿಕೊಂಡ ಗ್ರೂಪ್ ಒಂದು ಬೆಂಗ್ಳೂರಲ್ಲಿ ಇದೆ. ಮಹಾನಗರದ ಮೂಲೆಯಲ್ಲಿ ಎಲ್ಲೇ ಸ್ಪೆಷಲ್ ಬಿರಿಯಾನಿ ಸಿಗಲಿ, ಅದರ ವಾಸನೆ ಇವರಿಗೆ ಥಟ್ಟನೆ ಗೊತ್ತಾಗುತ್ತೆ! ತಡಮಾಡದೆ, ತಂಡೋಪತಂಡವಾಗಿ ಧಾವಿಸಿ, ಅದರ ಟೇಸ್ಟ್ ನೋಡಿ ಬಂದರೇನೇ ಇವರಿಗೆ ಸಮಾಧಾನ.
ಬೆಂಗ್ಳೂರು ಬಿರಿಯಾನಿ ಕ್ಲಬ್‌ನ ರುಚಿಯ ಪಯಣವೇ ಒಂದು ರೋಚಕ ಕತೆ. ಈ ಕ್ಲಬ್‌ನ ಸದಸ್ಯರು ಕೇವಲ ಬಿರಿಯಾನಿ ಟೇಸ್ಟ್ ನೋಡಿ ಬರೋದಿಲ್ಲ. ಅಲ್ಲಿಂದ ಬಂದಾದ ಮೇಲೆ ಅದರ ರುಚಿಯ ವಿಮರ್ಶೆಯನ್ನೂ ಮಾಡ್ತಾರೆ. ಅದಕ್ಕಂತಲೇ ಇವರು “ಬೆಂಗ್ಳೂರು ಬಿರಿಯಾನಿ ಕ್ಲಬ್’ ಎನ್ನುವ ಫೇಸ್‌ಬುಕ್ ಪೇಜ್ ಅನ್ನೇ ಮಾಡ್ಕೊಂಡಿದ್ದಾರೆ.
ಏನಿದು ಕ್ಲಬ್? ಯಾರಿದರ ಬಾಸ್?
ಈ ಕ್ಲಬ್‌ಗ ಜನ್ಮಕೊಟ್ಟವರು ಸಾಫ್ಟ್ವೇರ್ ಕ್ಷೇತ್ರದಲ್ಲಿರುವ ರೇಣುಕೇಶ್ ಬಿಂಗೇರಿ, ವಿನಯ್ ನಾಗರಾಜ್, ನವನೀತ್ ತಿಮ್ಮಪ್ಪ ಮತ್ತು ವಿದ್ಯಾರ್ಥಿ ವಿನಯ್ ಶೆಟ್ಟಿ ಎಂಬ “ಚತುರ್’ ಚತುರರು! ಬಿರಿಯಾನಿ ಇಷ್ಟಪಡುವವರನ್ನು ಒಟ್ಟಿಗೆ ಸೇರಿಸಿ, ಬಿರಿಯಾನಿ ಈವೆಂಟ್ ಏರ್ಪಡಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ತಿಂಗಳಿಗೆ ಒಮ್ಮೆ ಈ ಕ್ಲಬ್‌ನ ಸದಸ್ಯರು ರುಚಿ ರುಚಿ ಬಿರಿಯಾನಿ ಸಿಗುವ ಒಂದು ಹೋಟೆಲ್‌ಗೆ ಈ ಕ್ಲಬ್ ಭೇಟಿ ನೀಡುತ್ತಾರೆ.
ಏನು ಸ್ಪೆಷಾಲಿಟಿ?
ಫೇಸ್‌ಬುಕ್‌ನಲ್ಲಿ ಬಿರಿಯಾನಿ ಕ್ಲಬ್‌ನ ಪುಟಕ್ಕೆ ಭೇಟಿ ಕೊಟ್ಟರೆ, ಅಲ್ಲಿ ಈ ಖಾದ್ಯದ ಇತಿಹಾಸದಿಂದ ಹಿಡಿದು ವರ್ತಮಾನದ ತನಕ ಪ್ರತಿ ಅಪ್‌ಡೇಟ್‌ಗಳೂ ಕಾಣಸಿಗುತ್ತವೆ. ಬಿರಿಯಾನಿ ಹುಟ್ಟಿದ್ದೆಲ್ಲಿ? ಇದಕ್ಕೆ ಎಷ್ಟು ಶತಮಾನಗಳ ಇತಿಹಾಸವಿದೆ? ಯಾವ ಬಿರಿಯಾನಿ ಯಾವ ಥರದ ಟೇಸ್ಟ್ ಕೊಡುತ್ತೆ? ಯಾವ ರಾಜ್ಯ, ನಗರಗಳಲ್ಲಿ ಯಾವ ಬಿರಿಯಾನಿ ಫೇಮಸ್ಸು? ಇವೆಲ್ಲದರ ಮಾಹಿತಿಗಳೂ ಅಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ. ಇದರಲ್ಲಿ ಬರೋಬ್ಬರಿ 3,200 ಸದಸ್ಯರು ಇದ್ದು, ಇವರಲ್ಲಿ ಯಾರೇ ಹೋಟೆಲ್ಲುಗಳಿಗೆ ಹೋಗಿ ಬಿರಿಯಾನಿ ತಿಂದರೂ ಅದರ ಬಗ್ಗೆ ಬರೆದುಕೊಳ್ಳುತ್ತಾರೆ. ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಅಲ್ಲದೆ, ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಬಿರಿಯಾನಿ ಕುರಿತು ಏನೇ ಮಾಹಿತಿ ಬಂದರೂ ಅದನ್ನು ಹಂಚಿಕೊಳ್ಳುತ್ತಾರೆ.
ಕ್ಲಬ್ ಶುರುವಾಗಿದ್ದು ಹೇಗೆ?
ರೇಣುಕೇಶ್ ಅವರಿಗೆ ಬಿರಿಯಾನಿ ಕ್ಲಬ್ ಪರಿಕಲ್ಪನೆ ಹೊಳೆದಿದ್ದು ಈ ವರ್ಷದ ಏಪ್ರಿಲ್ 24ರ ಮಧ್ಯರಾತ್ರಿ! ಅವತ್ತೇ ಇವರು ಫೇಸ್‌ಬುಕ್ ಅಕೌಂಟನ್ನೂ ತೆರೆದರು. ರೇಣುಕೇಶ್ ಮೊದಲಿನಿಂದಲೂ ಆಹಾರಪ್ರಿಯರು. ವಿವಿಧ ರೆಸ್ಟೋರೆಂಟುಗಳಿಗೆ ಭೇಟಿ ನೀಡಿ, ಆಹಾರವನ್ನು ಸವಿದು, ತಮ್ಮ ಬ್ಲಾಗ್‌ನಲ್ಲಿ ಅದರ ವಿಮರ್ಶೆ ಮಾಡುತ್ತಿದ್ದರು. ಆ ಬರಹಗಳನ್ನೇ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲು ಮುಂದಾದರು. ನೋಡ್ತಾ ನೋಡ್ತಾ ಹತ್ತು, ಇಪ್ಪತ್ತು ಮಂದಿಯಿಂದ ಶುರುವಾದ ಕ್ಲಬ್ ಕೇವಲ ಮೂರೇ ತಿಂಗಳಲ್ಲಿ ಮೂರು ಸಾವಿರ ಸದಸ್ಯತ್ವದ ಗಡಿಯನ್ನು ದಾಟಿತು. ಇಲ್ಲಿಯ ತನಕ ಯಾವತ್ತೂ ಈ ಪುಟದಲ್ಲಿ ಯಾರೂ ಪೋಸ್ಟ್ ಹಾಕಿಯೇ ಇಲ್ಲ ಎಂಬ “ಶೂನ್ಯ’ ಆವರಿಸಿಲ್ಲ.
ವೃದ್ಧಾಶ್ರಮದ ಅಜ್ಜ- ಅಜ್ಜಿ ಜತೆಯೂ ಬಿರಿಯಾನಿ!
ಬೆಂಗ್ಳೂರು ಬಿರಿಯಾನಿ ಕ್ಲಬ್ ಈ ತಿಂಗಳು “ಶೇರ್ ದಿ ಲವ್’ ಈವೆಂಟ್ ಆಯೋಜಿಸಿದೆ. ವೃದ್ಧಾಶ್ರಮದಲ್ಲಿ ಇದ್ದವರನ್ನು ಬಿರಿಯಾನಿ ಹೋಟೆಲ್ಲುಗಳಿಗೆ ಕರೆದೊಯ್ದು, ಅವರಿಗೆ ಹೊಟ್ಟೆ ತುಂಬಾ ತಿನ್ನಿಸಿ, ಅವರೊಂದಿಗೆ ಕೆಲ ಕಾಲ ಕಳೆಯುವುದು “ಶೇರ್ ದಿ ಲವ್’ ಉದ್ದೇಶ.
ಈ ಹಿಂದೆ ಬಿರಿಯಾನಿ ಸವಿದಿದ್ದು…
1. ಈ ಕ್ಲಬ್‌ನ ಮೊದಲನೇ ಬಿರಿಯಾನಿ ಭೇಟಿಯಲ್ಲಿ 25 ಜನರು ಹೊಸಕೋಟೆಯ “ಮಣಿ ದಮ್ ಬಿರಿಯಾನಿ’ಗೆ ಭೇಟಿ ಕೊಟ್ಟಿತ್ತು.
2. ನಂತರ ಬಿರಿಯಾನಿ ಮೀಟ್ ನಡೆದಿದ್ದು, ಚಿಕ್ಕಪೇಟೆಯ ಎಸ್.ಜಿ.ಎಸ್.ನಲ್ಲಿ. ಇಲ್ಲಿ ದೊನ್ನೆ ಬಿರಿಯಾನಿ ಸವಿಯಲು 32 ಜನ ಸೇರಿದ್ದರು.
3. ಎಚ್‌ಎಸ್‌ಆರ್ ಲೇ ಔಟ್‌ನಲ್ಲಿರುವ ಬ್ರಾಡ್‌ವೇ ರೆಸ್ಟೋರೆಂಟ್‌ನಲ್ಲಿ ಇವರ ಮೂರನೇ ಬಿರಿಯಾನಿ ಸಮ್ಮೇಳನ ನಡೆಯಿತು! ಅಲ್ಲಿ ಬಂಬೂ ಬಿರಿಯಾನಿಯನ್ನು ಸವಿದವರು ಒಟ್ಟು 65 ಮಂದಿ!
– ಅನಿಲ್ ಕುಮಾರ್ ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.