ಸಂಕಷದಲ್ಟಿ ರುವವರಿಗೆ ಆಸರೆಯಾದ ಪುಣೆ ಬಿಲ್ಲವ ಸಮಾಜ ಸೇವಾ ಸಂಘ
Team Udayavani, Oct 9, 2020, 8:08 PM IST
ಪುಣೆ, ಅ. 8: ಸಾಂಸ್ಕೃತಿಕ ನಗರವಾಗಿರುವ ಪುಣೆ ಐತಿಹಾಸಿಕ ನಗರವೂ ಹೌದು. ಮೂಲ ಭಾಷಿಕರೊಂದಿಗೆ ದೇಶದ ವಿವಿಧ ರಾಜ್ಯಗಳ ಎಲ್ಲ ಜಾತಿ, ಧರ್ಮಗಳ ಜನರಿಗೆ ಆಶ್ರಯ ನೀಡಿ, ತಮ್ಮ ಜೀವನ ರೂಪಿಸಿಕೊಳ್ಳಲು ನೆಲೆ ಕಲ್ಪಿಸಿಕೊಟ್ಟ ಪುಣ್ಯ ನೆಲ ಪುಣೆಯಾಗಿದೆ. ಸೌಹಾರ್ದ, ಪ್ರೀತಿ, ಸ್ವಾಭಿಮಾನ, ವಾತ್ಸಲ್ಯದೊಂದಿಗೆ ಇಲ್ಲಿ ನೆಲೆಸಿರುವ ತುಳುವರು, ಕನ್ನಡಿಗರು ಕೂಡಿ ಬಾಳುತ್ತಿರುವುದು ನಗರದ ಇನ್ನೊಂದು ವಿಶೇಷವಾಗಿದೆ. ಕಷ್ಟ ಬಂದಾಗ ಒಬ್ಬರಿಗೊಬ್ಬರು ಆಸರೆಯಾಗಿ ನಿಂತು ನಾವೆಲ್ಲರು ಒಂದೇ ಎಂಬ ಭಾವನೆಯೊಂದಿಗೆ ನಾಡು-ನುಡಿ-ಸಂಸ್ಕೃತಿಯ ಪೋಷಣೆಗೆ ನಿಂತಿರುವ ಸಮುದಾಯ, ಸಂಘ-ಸಂಸ್ಥೆಗಳಲ್ಲಿ ಪುಣೆ ಬಿಲ್ಲವ ಸಮಾಜ ಸೇವಾ ಸಂಘವೂ ಒಂದಾಗಿದೆ.
ಹಲವಾರು ವರ್ಷಗಳ ಹಿಂದೆಯೇ ಬಿಲ್ಲವರು ಪುಣೆಯಲ್ಲಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಅನಂತರದ ದಿನಗಳಲ್ಲಿ ನಗರದಲ್ಲಿ ಬಿಲ್ಲವರ ಸಂಖ್ಯೆ ಇಮ್ಮಡಿಯಾಗುತ್ತ ಹೋಯಿತು. ಇದನ್ನರಿತ ಸಮಾಜದ ಹಿರಿಯರು ತಮ್ಮ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಂಘ ಸ್ಥಾಪನೆ ಮಾಡಿ, ಅದರ ಮೂಲಕ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಬಿಲ್ಲವ ಸಮಾಜ ಸೇವಾ ಸಂಘವು ಕೊರೊನಾ ಮಹಾಮಾರಿಯಿಂದ ಘೋಷಿಸಲಾಗಿದ್ದ ಕಠಿನ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಸಮುದಾಯ ಬಾಂಧವರಿಗೆ ಮತ್ತು ಇತರ ಸಮಾಜದವರಿಗೆ ಮಾಡಿದ ಸಹಾಯ, ಸಹಕಾರ ಮೆಚ್ಚುವಂತಹದ್ದು.
ಸಂಘದ ಕಾರ್ಯವೈಖರಿ : ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತÌವನ್ನು ಅನುಸರಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿ ರುವ ಪುಣೆ ಬಿಲ್ಲವ ಸಮಾಜ ಸೇವಾ ಸಂಘವು ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಸಂಘದ ಪ್ರಸ್ತುತ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಉಪಾಧ್ಯಕ್ಷ ಸಂದೇಶ್ ಪೂಜಾರಿ ಮತ್ತು ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ಮೂಲಕ ಕೊರೊನಾ ಲಾಕ್‌ಡೌನ್ ಪ್ರಾರಂಭದ ದಿನಗಳಿಂದಲೂ ಸಮಾಜ ಬಾಂಧವರಿಗೆ ಎಲ್ಲ ರೀತಿಯ ಸಹಾಯ, ಸಹಕಾರವನ್ನು ನಿರಂತರವಾಗಿ ನೀಡುತ್ತಿದೆ.
ವಿವಿಧ ಕ್ಷೇತ್ರಗಳಲ್ಲಿ ಸೇವೆ : ಬಿಲ್ಲವ ಸಮಾಜ ಬಾಂಧವರ ಆರೋಗ್ಯ, ಶಿಕ್ಷಣ ಅಥವಾ ಇನ್ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಸಂಘವು ಕ್ಷಿಪ್ರವಾಗಿ ಸ್ಪಂದಿಸಿದೆ. ಅಲ್ಲದೆ ಸಾಂಸ್ಕೃತಿಕ, ಕ್ರೀಡೆ, ಪ್ರತಿಭಾ ಸ್ಪರ್ಧೆಗಳು ಸಹಿತ ಇನ್ನಿತರ ವ್ಯಕ್ತಿತ್ವ ವಿಕಸನದಂತಹ ಕಮ್ಮಟಗಳನ್ನು ಆಯೋಜಿಸಿ ಯುವ ಜನತೆಗೆ ಪ್ರೋತ್ಸಾಹ ನೀಡಿದ ಸಂಘವು ಕಳೆದ ಆರು ತಿಂಗಳುಗಳಿಂದ ನೂರಾರು ಕುಟುಂಬಗಳಿಗೆ ಲಕ್ಷಾಂತರ ರೂ. ಮೌಲ್ಯದ ಆಹಾರ ಕಿಟ್‌ಗಳನ್ನು ವಿತರಿಸಿ ಸಹಕರಿಸಿದೆ.
ಆಹಾರ ಸಾಮಗ್ರಿ ವಿತರಣೆ : ಕೋವಿಡ್ ದಿಂದ ಜನಜೀವನ ಅಸ್ತವ್ಯಸ್ತ ಜತೆಗೆ ಜನತೆ ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದೊದಗಿತ್ತು. ಅಂತಹ ಸಮಯದಲ್ಲಿ ಅವರಿಗೆ ನೆರವಿನ ಹಸ್ತವನ್ನು ನೀಡಿ ಸಹಕರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿತ ಪುಣೆ ಬಿಲ್ಲವ ಸಂಘವು ಎ. 4ರಂದು ಈ ಯೋಜನೆಗೆ ಚಾಲನೆ ನೀಡಿತು. ನೂರಾರು ಮಂದಿಗೆ ದಿನೋಪಯೋಗಿ ಆಹಾರ ಸಾಮಗ್ರಿಗಳನ್ನು ಪುಣೆಯ ಸ್ವಾರ್ ಗೇಟ್ ಬಳಿಯ ಖಡಕ್‌ಮಾಲ್‌ನಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮ ಹಸ್ತಾಂತರಿಸಿತು.
ನಿರ್ಗತಿಕರ ಕೇಂದ್ರಗಳಿಗೆ ಸಹಾಯ : ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡದೆ, ನಗರದ ಮೂಲೆಮೂಲೆಯಲ್ಲಿರುವ ಸಮಾಜ ಬಾಂಧವರಿಗಲ್ಲದೆ ಇನ್ನಿತರ ಕನ್ನಡಿಗರಿಗೂ ಸಹಕರಿಸಿದ ಪುಣೆ ಬಿಲ್ಲವ ಸಮಾಜ ಸೇವಾ ಸಂಘವು ನಗರದಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ, ವಿಶೇಷವಾಗಿ ವಲಸೆ ಕಾರ್ಮಿಕರ ಆಶ್ರಯ ತಾಣಗಳ ಸೆಂಟ್ರಲ್ ಅಡುಗೆ ಕೇಂದ್ರಗಳಿಗೆ ಆಹಾರದ ಕಿಟ್‌ಗಳನ್ನು ಕಲೆಕ್ಟರ್ ಕಚೇರಿಯ ಅಧಿಕಾರಿಗಳ ಸಹಾಯದಿಂದ ರವಾನಿಸಿದೆ.
ಬಿಲ್ಲವ ಸಮಾಜದ ಬಂಧುಗಳಿಗೆ ವಿಶೇಷ ಸಹಕಾರ : ಲಾಕ್‌ಡೌನ್‌ನಿಂದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೀಡಾದ ಸಮುದಾಯದ ಕುಟುಂಬಗಳ ವಿವರಗಳನ್ನು ಕಲೆಹಾಕಿದ ಬಿಲ್ಲವ ಸಂಘದ ಅಧ್ಯಕ್ಷರು, ಸಮಿತಿ ಸದಸ್ಯರ ಜತೆಗೂಡಿ ಸಮಾಜದ ದಾನಿಗಳ ಸಹಕಾರದೊಂದಿಗೆ 400ಕ್ಕಿಂತಲೂ ಹೆಚ್ಚು ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದ್ದಾರೆ. ಸಂಬಂಧಿತ ಅಧಿಕಾರಿಗಳ ವಿಶೇಷ ಅನುಮತಿಯನ್ನು ಪಡೆದ ಪದಾಧಿಕಾರಿಗಳು ಹೊಟ್ಟೆಗಿಲ್ಲದೆ ಪರದಾಡುತ್ತಿದ್ದ ಕಾರ್ಮಿಕರ ಮನೆ-ಮನೆಗಳಿಗೆ ಆಹಾರದ ಕಿಟ್‌ಗಳನ್ನು ತಲುಪಿಸಿದ್ದರು. ದೂರವಾಣಿಯ ಮೂಲಕ ಸಮಾಜ ಬಾಂಧವರ ಯೋಗಕ್ಷೇಮ ವನ್ನು ನಿರಂತರವಾಗಿ ವಿಚಾರಿಸುತ್ತಿದ್ದ ಸಂಘವು ಅಧ್ಯಕ್ಷರ ಮುತುವರ್ಜಿಯಲ್ಲಿ ಊರಿನಲ್ಲಿಯೂ ಸಮಾಜ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ತನ್ನ ಔದಾರ್ಯವನ್ನು ಮೆರೆಯಿತು.
ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ : ಲಾಕ್‌ಡೌನ್‌ನಿಂದ ಶಿಕ್ಷಣ ವ್ಯವಸ್ಥೆ ಸಂಪೂರ್ಣ ವಾಗಿ ಸ್ಥಗಿತಗೊಂಡ ಸಂದರ್ಭದಲ್ಲಿ ಪುಣೆ ಬಿಲ್ಲವ ಸಂಘವು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೂ ಶ್ರಮಿಸಿದೆ. ಪುಣೆಯಲ್ಲಿ ನೆಲೆಸಿ ರುವ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಸಂಯೋಜಿಸಿದ ಸಂಘವು ಆತಂಕಕ್ಕೀಡಾದ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾನಸಿಕವಾಗಿ ಧೈರ್ಯ ತುಂಬಿದೆ. ಪುಣೆಯ ಹೆಸರಾಂತ ಸಲಹೆಗಾರ್ತಿ ಅನಿಂದಿತಾ ಗರ್ಗ್ ಈ ಶಿಬಿರವನ್ನು ನಡೆಸಿಕೊಟ್ಟಿದ್ದು, ಸುಮಾರು 65 ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿ ಇದರ ಪ್ರಯೋಜನ ವನ್ನು ಪಡೆದುಕೊಂಡಿದ್ದರು.
ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಸಂಘವು ಆದಷ್ಟು ಹತ್ತಿರದಿಂದ ಸಮಾಜದ ಬಡವರ ಕಷ್ಟಗಳಿಗೆ ಸ್ಪಂದಿಸಿದೆ. ಈ ಸಂದರ್ಭದಲ್ಲಿ ಜಾತಿ, ಧರ್ಮವನ್ನು ಮೀರಿ ಸಹಕರಿಸಲಾಗಿದೆ. ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಸಂಘವು ಸಮಾಜ ಬಾಂಧವರ ಜತೆಯಲ್ಲಿ ಸದಾ ಇರಲಿದೆ. ಎಲ್ಲ ಉದ್ಯಮಗಳಿಗಿಂತ ಹೆಚ್ಚಿನ ತೊಂದರೆ ಹೊಟೇಲ್ ಉದ್ಯಮಕ್ಕೆ ತಟ್ಟಿದೆ. ನಮ್ಮ ಸಮಾಜದವರು ಕೂಡ ಈ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲವೂ ಶೀಘ್ರದಲ್ಲಿಯೇ ಸಹಜ ಸ್ಥಿತಿಗೆ ಮರಳಲಿದೆ ಎಂಬ ವಿಶ್ವಾಸ ನಮ್ಮಲ್ಲಿರಬೇಕು. ಕೊರೊನಾ ಆದಷ್ಟು ಬೇಗ ನಮ್ಮನ್ನು ಬಿಟ್ಟುಹೋಗಲಿ. ಸರ್ವರೂ ಭಯದಿಂದ ಹೊರಗೆ ಬಂದು ಕಷ್ಟವೋ ಸುಖವೋ ಮೊದಲಿನಂತೆ ತಮ್ಮ ತಮ್ಮ ಸ್ವಂತ ದುಡಿಮೆಯಿಂದ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಬೇಕಾಗಿದೆ. -ವಿಶ್ವನಾಥ್ ಪೂಜಾರಿ ಕಡ್ತಲ, ಅಧ್ಯಕ್ಷರು: ಬಿಲ್ಲವ ಸಮಾಜ ಸೇವಾ ಸಂಘ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.