ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿ: ಪದಾಧಿಕಾರಿಗಳ ಪದಗ್ರಹಣ
Team Udayavani, Jan 19, 2018, 2:57 PM IST
ಮುಂಬಯಿ: ಬಂಟರ ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳು ಸಂಘದ ಬೆನ್ನೆಲುಬು ಇದ್ದಂತೆ. ಅದರಲ್ಲೂ ಸಿಟಿ ಪ್ರಾದೇಶಿಕ ಸಮಿತಿಯ ಯೋಗದಾನ ಸಂಘಕ್ಕೆ ಅಪಾರವಾಗಿದೆ. ನಮ್ಮ ಪೂರ್ವಜನ್ಮದ ಪುಣ್ಯದ ಫಲದಿಂದ ಬಂಟ ಸಮಾಜದಲ್ಲಿ ನಾವು ಹುಟ್ಟಿದ್ದೇವೆ. ಒಗ್ಗಟ್ಟು, ಒಮ್ಮತದಿಂದ ನಾವೆಲ್ಲರು ಒಂದಾಗಿ ಸಂಘವನ್ನು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಬೇಕು. ನಮ್ಮ ಪೂರ್ವಜರ ನಿಸ್ವಾರ್ಥ ಸೇವೆಯಿಂದ ಸಂಘವು ಇಂದು ಈ ಮಟ್ಟಕ್ಕೆ ಬೆಳೆದಿದೆ. ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಪರೋಪಕಾರದ ಸಿದ್ಧಾಂತ, ಸಕಾರಾತ್ಮಕ ಚಿಂತನೆ, ಸಹಕಾರ ಮನೋಭಾವ ನಮ್ಮದಾಗಿದ್ದು, ಅದರ ಮುಖಾಂತರ ಸಂಘದ ಯೋಜನೆ-ಯೋಚನೆಗಳನ್ನು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವಲ್ಲಿ ಪ್ರಾದೇಶಿಕ ಸಮಿತಿಗಳು ಶ್ರಮಿಸಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಹೇಳಿದರು.
ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ನಡೆದ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ ಅವರೋರ್ವ ಸಮಾಜಪರ ಚಿಂತಕರಾಗಿದ್ದು, ಅವರ ನೇತೃತ್ವದಲ್ಲಿ ಸಮಿತಿಯು ಇನ್ನಷ್ಟು ಬೆಳೆಯುತ್ತದೆ ಎಂಬ ಭರವಸೆ ನನಗಿದೆ. ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯತೆ ನಮಗಿದೆ. ಪ್ರತಿಯೊಂದು ಪ್ರಾದೇಶಿಕ ಸಮಿತಿಗಳಿಗೆ ಸ್ವಂತ ಕಚೇರಿಯನ್ನು ನಿರ್ಮಿಸಲು ನಾವೆಲ್ಲರು ಪ್ರಯತ್ನಶೀಲರಾಗೋಣ. ಸಂಘದ ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು. ಅದರಲ್ಲೂ ಪಶ್ಚಿಮ ವಿಭಾಗದಲ್ಲೊಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಇರಾದೆ ನಮ್ಮಲ್ಲಿದ್ದು,ಸಂಘದ ಇನ್ನಿತರ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದು ಸಿಟಿ ಪ್ರಾದೇಶಿಕ ಸಮಿತಿಯ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭಹಾರೈಸಿದರು.
ಸಮಾರಂಭದಲ್ಲಿ ಬಂಟರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷರು ನೂತನ ಕಾರ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ನೇಮಕಗೊಂಡ ಅನಿತಾ ಅಶೋಕ್ ಶೆಟ್ಟಿ ಅವರು ಮಾತನಾಡಿ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ತಲೆಬಾಗಿ ಶ್ರೀ ಕಟೀಲೇಶ್ವರಿಯ ಆಶೀರ್ವಾದದೊಂದಿಗೆ ಪದವಿಯನ್ನು ಸ್ವೀಕರಿಸಿದ್ದೇನೆ. ಅದಕ್ಕಾಗಿ ಎಲ್ಲರ ಸಹಕಾರ ಸದಾಯಿರಲಿ ಎಂದರು.
ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಕಲ್ಪನಾ ಕೃಷ್ಣ ಶೆಟ್ಟಿ ಅವರು ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ನನ್ನ ಪಾಲಿನ ಕರ್ತವ್ಯವವನ್ನು ಸಮರ್ಥವಾಗಿ ನಿಭಾಯಿಸಿದ ಆತ್ಮತೃಪ್ತಿ ನನಗಿದೆ. ನೂತನ ಕಾರ್ಯಾಧ್ಯಕ್ಷೆ ಅನಿತಾ ಎ. ಶೆಟ್ಟಿ ಅವರಿಗೆ ಎಲ್ಲಾ ರೀತಿಯ, ಸಹಕಾರ, ಪ್ರೋತ್ಸಾಹ ನೀಡಲು ಸದಾ ಸಿದ್ಧಳಿದ್ದೇನೆ ಎಂದು ಹೇಳಿದರು.
ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಅವರು ಮಾತನಾಡಿ, ಬಂಟರ ಸಂಘದಲ್ಲಿ ಇಲ್ಲಿಯವರೆಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯರಾಗಿ ನೇಮಕಗೊಂಡರು ಹೆಚ್ಚಿನವರು ಸಿಟಿ ಪ್ರಾದೇಶಿಕ ಸಮಿತಿಯಲ್ಲಿ ಕಾರ್ಯನಿರ್ವಹಿಸಿದವರಾಗಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ. ಬಂಟರ ಸಂಘಕ್ಕೆ ಮಹಿಳಾ ವಿಭಾಗದ ಕೊಡುಗೆ ಅಪಾರವಾಗಿದೆ. ನಿರ್ಗಮನ ಕಾರ್ಯಾಧ್ಯಕ್ಷೆ ಕಲ್ಪನಾ ಶೆಟ್ಟಿ ಅವರ ಕಾರ್ಯ ಅಭಿನಂದನೀಯ. ನೂತನ ಕಾರ್ಯಾಧ್ಯಕ್ಷೆಯಾಗಿ ನೇಮಕಗೊಂಡ ಅನಿತಾ ಎ. ಶೆಟ್ಟಿ ಅವರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಗಮನ ಸೆಳೆಯುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ನುಡಿದು ನೂತನ ಸಮಿತಿಯನ್ನು ಅಭಿನಂದಿಸಿದರು.
ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ಪ್ರತೀಕ್ ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು. ಅತಿಥಿ-ಗಣ್ಯರುಗಳನ್ನು ಸಂಘದ ಪದಾಧಿಕಾರಿಗಳು,ಮಾಜಿ ಅಧ್ಯಕ್ಷರು, ಕಾರ್ಯಾಧ್ಯಕ್ಷರುಗಳನ್ನು ಸಿಟಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಗೌರವಿಸಿದರು. ಸುಚಿತಾ ಶೆಟ್ಟಿ ಪ್ರಾರ್ಥನೆಗೈದರು. ಸಿಟಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯ-ಸದಸ್ಯೆಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಿತಿಯ ಸದಸ್ಯರಿಂದ, ಮಕ್ಕಳಿಂದ ಭಜನೆ, ನೃತ್ಯವೈವಿಧ್ಯ ನಡೆಯಿತು. ಮಾಹಿಮ್ ವಿಶ್ವನಾಥ್ ಶೆಟ್ಟಿ ಮತ್ತು ಬಳಗದವರಿಂದ ರಸಮಂಜರಿ ಜರಗಿತು. ಸುಚಿತಾ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮವನ್ನು ಅಶೋಕ್ ಪಕ್ಕಳ ನಡೆಸಿಕೊಟ್ಟರು. ಅಶೋಕ್ ಶೆಟ್ಟಿ ಪಾಂಗಾಳ ವಂದಿಸಿದರು.
ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಮಧ್ಯ ಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ಇಂದ್ರಾಳಿ ದಿವಾಕರ ಶೆಟ್ಟಿ ಮೊದಲಾದವರ ಉಪಸ್ಥಿತಿಯಲ್ಲಿ ಸಮಾರಂಭವು ಜರಗಿತು.
ಸಿಟಿ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಸಂಚಾಲಕ ಭುಜಂಗ ಆರ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಶಿವರಾಮ್ ಎನ್. ಶೆಟ್ಟಿ, ಕಾರ್ಯದರ್ಶಿ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ, ಜತೆ ಕಾರ್ಯದರ್ಶಿ ಮನೋಹರ್ ಶೆಟ್ಟಿ, ಜತೆ ಕೋಶಾಧಿಕಾರಿ ಮಹಾಬಲ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನಿತಾ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಚಿತಾ ಶೆಟ್ಟಿ, ಕಾರ್ಯದರ್ಶಿ ವಿನೋದಾ ಶೆಟ್ಟಿ, ಕೋಶಾಧಿಕಾರಿ ಯಮುನಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ವಿ. ಶೆಟ್ಟಿ, ಉಪಕಾರ್ಯಾಧ್ಯಕ್ಷ ಸಾಗರ್ ಶೆಟ್ಟಿ, ಕಾರ್ಯದರ್ಶಿ ಆದಿತ್ಯ ಶೆಟ್ಟಿ, ಕೋಶಾಧಿಕಾರಿ ಪೂಜಾ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಎಸ್. ಶೆಟ್ಟಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ತನುಜಾ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ವಿ. ಶೆಟ್ಟಿ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಶೆಟ್ಟಿ, ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ಎಂ. ಶೆಟ್ಟಿ, ಐಟಿ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಆರ್. ಶೆಟ್ಟಿ, ಸಲಹೆಗಾರರುಗಳಾದ ಕೃಷ್ಣ ವಿ. ಶೆಟ್ಟಿ, ರಾಘು ಪಿ. ಶೆಟ್ಟಿ, ಇನ್ನ ಜಯರಾಮ ಶೆಟ್ಟಿ, ಪ್ರಸಾದ್ ಶೆಟ್ಟಿ, ಅನಿಲ್ ಶೆಟ್ಟಿ ಏಳಿಂಜೆ, ಅಶೋಕ್ ಪಕ್ಕಳ ಇವರು ಸಮಾರಂಭದಲ್ಲಿ ಪದವಿ ಸ್ವೀಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ದಕ್ಷ ಸಂಘಟಕ ಐಕಳ ಹರೀಶ್ ಶೆಟ್ಟಿ, ಕಬಡ್ಡಿ ಜಯ ಶೆಟ್ಟಿ, ಜಯರಾಮ ಶೆಟ್ಟಿ ಇನ್ನ ಮೊದಲಾದವರು 12 ವರ್ಷಗಳ ಹಿಂದೆ ಬಂಟರ ಸಂಘಕ್ಕೆ ನನ್ನನ್ನು ಪರಿಚಯಿಸಿದರು. ಆನಂತರ ನಾನು ಸಂಘದಲ್ಲಿ ಸಕ್ರಿಯನಾದೆ. ಹಲವು ಹುದ್ಧೆಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಆತ್ಮತೃಪ್ತಿ ನನಗಿದೆ. ಇದೀಗ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷನನ್ನಾಗಿ ನೇಮಿಸಿರುವುದು ಸಂತೋಷ ತಂದಿದೆ. ಸಮಾಜ ಸೇವೆಗೈಯಲು ಇದೊಂದು ನನಗೆ ಉತ್ತಮ ಅವಕಾಶ ಸಿಕ್ಕಿದೆ. ನನ್ನ ಸಮಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಬಾಂಧವರಿಗೆ ಸಹಕರಿಸುತ್ತೇನೆ. ಸಮಿತಿಯ ಹಾಗೂ ಸಂಘದ ಸಹಕಾರ, ಪ್ರೋತ್ಸಾಹ ಸದಾಯಿರಲಿ
– ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ (ಕಾರ್ಯಾಧ್ಯಕ್ಷರು : ಸಿಟಿ ಪ್ರಾದೇಶಿಕ ಸಮಿತಿ).
ಕಳೆದ ಮೂರು ವರ್ಷಗಳಲ್ಲಿ ಸಿಟಿ ಪ್ರಾದೇಶಿಕ ಸಮಿತಿಯು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ. ಅದರಲ್ಲ ಕ್ಷತ್ರೀಯ ದೇಹದಾಡ್ಯì ಸ್ಪರ್ಧೆಯನ್ನು ನಡೆಸಿ ದೇಶ-ವಿದೇಶಗಳ ಬಂಟರ ಗಮನ ಸೆಳೆದಿದ್ದೇವೆ. ಸಂಘದ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ, ಪ್ರಶಸ್ತಿ ಗಳಿಸಿದ್ದೇವೆ. ಮುಂದಿನ ಕಾರ್ಯಾವಧಿಗೆ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ನಲ್ಯಗುತ್ತು ಪ್ರಕಾಶ್ ಶೆಟ್ಟಿ ಅವರಿಗೆ ಎಲ್ಲಾ ರೀತಿಯ ಸಹಕಾರ ನನ್ನಿಂದ ಲಭಿಸಲಿದೆ. ನಾವೆಲ್ಲರು ಒಂದಾಗಿ ಪ್ರಾದೇಶಿಕ ಸಮಿತಿಯನ್ನು ಆದರ್ಶ ಸಮಿತಿಯನ್ನಾಗಿ ಪರಿವರ್ತಿಸೋಣ
-ದೊಡ್ಡಗುತ್ತು ಭುಜಂಗ ಶೆಟ್ಟಿ (ನಿರ್ಗಮನ ಕಾರ್ಯಾಧ್ಯಕ್ಷರು : ಸಿಟಿ ಪ್ರಾದೇಶಿಕ ಸಮಿತಿ).
ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳಲ್ಲಿ ಸ್ಪರ್ಧೆ ಬೇಡ. ಎಲ್ಲಾ ಪ್ರಾದೇಶಿಕ ಸಮಿತಿಗಳಿಗೆ ಸ್ವಂತ ಕಚೇರಿ, ಶಿಕ್ಷಣ ಸಂಸ್ಥೆ, ಸದಸ್ಯತ್ವ ನೋಂದಣಿಯ ಅಗತ್ಯತೆಯಿದ್ದು, ಅದರ ಕಡೆಗೆ ನಾವು ಗಮನ ಹರಿಸಬೇಕು. ಸಿಟಿ ಪ್ರಾದೇಶಿಕ ಸಮಿತಿಯಲ್ಲಿ ಬಹಳಷ್ಟು ಮಂದಿ ಸಮಾಜಪರ ಚಿಂತಕರಿದ್ದಾರೆ. ನಾವೆಲ್ಲರು ಒಂದಾಗಿ ಒಮ್ಮತ ಹಾಗೂ ಒಗ್ಗಟ್ಟಿನಿಂದ ಪ್ರಾದೇಶಿಕ ಸಮಿತಿಗಳನ್ನು ಬಲಪಡಿಸುತ್ತಾ, ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿದಾಗ ನಮ್ಮ ಸೇವೆಗೆ ಅರ್ಥ ಬರುತ್ತದೆ
– ಡಾ| ಪ್ರಭಾಕರ ಶೆಟ್ಟಿ ಬಿ. (ಸಮನ್ವಯಕರು : ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳು).
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.