ಬಂಟರ ಸಂಘ ಮಹಿಳಾ ವಿಭಾಗ: ಶ್ರಾವಣ ಸಂಭ್ರಮ
Team Udayavani, Aug 26, 2018, 2:51 PM IST
ಮುಂಬಯಿ: ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಯಲ್ಲಿ ಇಡೀ ವಿಶ್ವಕ್ಕೆ ಗುರುಸ್ಥಾನದಲ್ಲಿರುವ ನಮ್ಮ ಭಾರತ ದೇಶದ ಆಚಾರ-ವಿಚಾರ, ಸಂಪ್ರ ದಾಯ, ಸಂಸ್ಕೃತಿ, ಸಂಸ್ಕಾರಗಳು ಬಹಳ ಮಹತ್ವಪೂರ್ಣವಾದುವು. ಅದರಲ್ಲೂ ಅರಸಿನ ಕುಂಕುಮದ ಆಚರಣೆಯು ದೇಶದ ಒಂದು ಸಂಸ್ಕಾರಭರಿತ ಸಂಪ್ರದಾಯದ ಆಚರಣೆಯಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ನುಡಿದರು.
ಆ. 21ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಜರಗಿದ ಅರಸಿನ ಕುಂಕುಮ-ಶ್ರಾವಣ ಸಂಭ್ರಮದ ಸಮಾ ರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಮಹಿಳಾ ವಿಭಾಗವು ಹಲವಾರು ವರ್ಷಗಳಿಂದ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದೆ. ಈ ವರ್ಷ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮತ್ತು ತಂಡದವರು ಹೊಸತೊಂದು ಪರಿಕಲ್ಪನೆಯ ಮೂಲಕ ಈ ಆಚರಣೆಗೆ ಜೀವ ತುಂಬಿದ್ದಾರೆ. ಸಂಭ್ರಮದ ಈ ಕಾರ್ಯಕ್ರಮವನ್ನು ಕಂಡು ಅತ್ಯಂತ ಸಂತಸವಾಗಿದೆ ಎಂದು ನುಡಿದು ಮಹಿಳಾ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಅವರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ನಾಸಿಕ್ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ಜಯರಾಮ ಶೆಟ್ಟಿ ಅವರು ಮಾತನಾಡಿ, ಅರಸಿನ ಮತ್ತು ಕುಂಕುಮ ಮುತ್ತೆ$çದೆ ಮಹಿಳೆಯರ ಮಾಂಗಲ್ಯ ಭಾಗ್ಯದ ಒಂದು ಅಂಗವಾಗಿದೆ. ಹುಟ್ಟಿನಿಂದ ಸಾವಿನ ತನಕ ಅರಸಿನ ಮತ್ತು ಕುಂಕುಮಕ್ಕೆ ವಿಶೇಷವಾದ ಪ್ರಾಮುಖ್ಯತೆ ಇದೆ. ರೋಗ ರುಜಿನಗಳಿಗೆ ಇವೆರಡೂ ರಾಮಬಾಣ ಎಂದು ಅರಸಿನ ಕುಂಕುಮ ಮಹತ್ವ ವಿವರಿಸಿದರು.
ಗೌರವ ಅತಿಥಿಯಾಗಿ ನಿರ್ವಾಣ ಸ್ಕಿನ್ ಆ್ಯಂಡ್ ಹೇರ್‌ಕೇರ್ ಪೊವಾಯಿ ಇದರ ನಿರ್ದೇಶಕಿ ಡಾ| ರೂಪಾ ಮಹೇಶ್ ಶೆಟ್ಟಿ ಅವರು ಮಾತನಾಡಿ, ಔಷಧ ಗುಣ ಹೊಂದಿರುವ ಅರಸಿನ ಕುಂಕುಮಕ್ಕೂ ನನ್ನ ವೃತ್ತಿಗೂ ಅವಿನಾಭಾವ ಸಂಬಂಧವಿದೆ. ದೇಹದ ಕಾಂತಿವೃದ್ಧಿಸುವ ಕಾರ್ಯವನ್ನು ಇವೆರಡೂ ಮಾಡುವುದಾಗಿ ನುಡಿದರು.
ಗೌರವ ಅತಿಥಿಯಾಗಿ ಹೊಟೇಲ್ ರಾಧಾಕೃಷ್ಣ ಅಂಧೇರಿ ಇದರ ಮಾಲಕಿ ಅಂಬಾ ಗೋಪಾಲ್ ಶೆಟ್ಟಿ ಮಾತನಾಡಿ, ಬಂಟ ಮಹಿಳೆಯರು ಸಮುದಾಯದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮಹಿಳೆ ತಾಯಿಯಾಗಿ, ಗೃಹಿಣಿಯಾಗಿ, ಬಾಹ್ಯ ಪ್ರಪಂಚದ ಬಗ್ಗೆಯೂ ಚಿಂತನೆ ನಡೆಸುವ ಶಕ್ತಿ ಹೊಂದಿದ್ದಾಳೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರನ್ನು ರಂಜನಿ ಎಸ್. ಹೆಗ್ಡೆ ಅವರು ಸಮ್ಮಾನಿಸಿದರು. ಭೂಮಿಕಾ ಎಂ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ಪ್ರೇಮಾ ಜೆ. ಶೆಟ್ಟಿ, ಗೌರವ ಅತಿಥಿಗಳಾದ ಡಾ| ರೂಪಾ ಮಹೇಶ್ ಶೆಟ್ಟಿ ಹಾಗೂ ಅಂಬಾ ಗೋಪಾಲ್ ಶೆಟ್ಟಿ ಅವರಿಗೆ ದೀಪ, ಅರಸಿನ ಕುಂಕುಮ, ಅಕ್ಷತೆ, ಪುಷ್ಪ, ಚಂದನ, ಬಳೆಗಳು, ಪನ್ನೀರನ್ನಿತ್ತು ಷೋಡಶೋಪಚಾರ ಮಾಡಲಾಯಿತಲ್ಲದೆ, ಶಾಲು, ಸ್ಮರಣಿಕೆ, ಸಮ್ಮಾನ ಪತ್ರ, ಪುಷ್ಪಗುತ್ಛದೊಂದಿಗೆ ಸಮ್ಮಾನಿಸಲಾಯಿತು. ಪ್ರಶಾಂತಿ ಡಿ. ಶೆಟ್ಟಿ, ಅಮಿತಾ ಎಸ್. ಶೆಟ್ಟಿ, ಶಶಿಕಲಾ ಎಸ್. ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು.
ಜಾಗತಿಕ ಬಂಟರ ಸಂಘ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಸಂಘದ ಪದಾಧಿಕಾರಿಗಳು, ವಿಶ್ವಸ್ತರುಗಳು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಯುವ ವಿಭಾಗ, ಸಂಘದ ಉಪಸಮಿತಿಗಳು, ಪ್ರಾದೇಶಿಕ ಸಮನ್ವಯಕರು, ಕಾರ್ಯಾಧ್ಯಕ್ಷರುಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಗೌರವಿಸ ಲಾಯಿತು. ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ ಹೆಸರು ವಾಚಿಸಿದರು.
ಗಣ್ಯರ ಉಪಸ್ಥಿತಿಯಲ್ಲಿ ವಾರ್ಷಿಕ ವಿವಿಧ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಅಧ್ಯಕ್ಷ ಪದ್ಮನಾಭ ಎಸ್. ಶೆಟ್ಟಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯ ಲಕ್ಷ್ಮೀ ಜೆ. ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ಸದಸ್ಯೆಯರು ಬಂಟಗೀತೆ ಹಾಡಿದರು. ಭೂಮಿಕಾ ಎಂ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ದರು. ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಆಶಾ ವಿ. ರೈ, ಜೊತೆ ಕಾರ್ಯದರ್ಶಿ ಮನೋರಮಾ ಎನ್. ಬಿ. ಶೆಟ್ಟಿ, ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮಹಿಳಾ ವಿಭಾಗದಿಂದ ಭಜನ ಕಾರ್ಯಕ್ರಮ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಭಾಂಡೂಪ್‌ನ ನೃತ್ಯ ವಿದ್ಯಾಲಯದ ಶೈಲಜಾ ಮಧುಸೂದನ್ ಬಳಗದವರಿಂದ ಸುಂದರ ಕಾಂಡ ನೃತ್ಯ ರೂಪಕ ನೆರವೇರಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ಅವರು ಆಯೋಜಿಸಿದ ಅಡುಗೆ ಸ್ಪರ್ಧೆಯಲ್ಲಿ ಅರುಣಪ್ರಭಾ ಬಿ. ಶೆಟ್ಟಿ ಪ್ರಥಮ, ಶಾಂತಾ ಶೆಟ್ಟಿ ದ್ವಿತೀಯ, ಸುಚಿತಾ ಕೆ. ಶೆಟ್ಟಿ ತೃತೀಯ ಬಹುಮಾನ ಪಡೆದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಬಂಟರ ಸಂಘ ಮಹಿಳಾ ವಿಭಾಗಕ್ಕೆ ಪ್ರಸ್ತುತ ನಲ್ವತ್ತು ವರ್ಷಗಳು ತುಂಬುತ್ತಿದ್ದು, ಈ ಸಮಯದಲ್ಲಿ ವಿಭಾಗದ ಕಾರ್ಯಾಧ್ಯಕ್ಷೆಯರು ಸಲ್ಲಿಸಿದ ಸೇವೆಯನ್ನು ನೆನಪಿಸುವುದು ನಮ್ಮ ಧರ್ಮ ಮತ್ತು ಕರ್ತವ್ಯವೂ ಹೌದು. ವಿಭಾಗವು ಪ್ರತಿ ವರ್ಷ ಅರಸಿನ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸುತ್ತಾ ನಮ್ಮ ಮುಂದಿನ ಪೀಳಿಗೆಗೆ ಧರ್ಮ-ಸಂಸ್ಕೃತಿಯ ಅರಿವನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ಅರಸಿನ ಕುಂಕುಮ ಎನ್ನುವುದು ಭಾಗ್ಯದ ಸಂಕೇತವಾಗಿದೆ. ಹೆಣ್ಣು ಸೃಷ್ಟಿರೂಪಿಣಿಯಾಗಿದ್ದಾಳೆ, ಪ್ರಕೃತಿಗೂ ಹೆಣ್ಣಿಗೂ ಯಾವುದೇ ವ್ಯತ್ಯಾಸವಿಲ್ಲ. ಸದಾ ಸುಖ-ಸೌಭಾಗ್ಯದ ಬದುಕನ್ನು ಬಯಸುತ್ತಿರುವ ಸುಮಂಗಲೆಯರು ಅರಸಿದ ಕುಂಕುಮ ಹಚ್ಚುವ ಮೂಲಕ ಶುಭಹಾರೈಸುವುದು ರೂಢಿಯಲ್ಲಿದೆ. ಮಹಿಳೆಯಲ್ಲಿ ಪ್ರೀತಿ, ಐಕ್ಯತೆ ಹೆಚ್ಚಾಗಲು ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ. ನಮ್ಮ ಪುರುಷ ವರ್ಗ ಮಹಿಳೆಯರ ಕಾರ್ಯ ಚಟುವಟಿಕೆಗಳಿಗೆ ತುಂಬು ಪ್ರೋತ್ಸಾಹ ನೀಡುತ್ತಿದೆ.
-ರಂಜನಿ ಸುಧಾಕರ ಹೆಗ್ಡೆ, ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗದ ಬಂಟರ ಸಂಘ ಮುಂಬಯಿ
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.