ಮಕ್ಕಳು ಶಿಕ್ಷಣದೊಂದಿಗೆ ಸುಸಂಸ್ಕೃತರಾಗಿ ಬೆಳೆಯಬೇಕು: ಸುವರ್ಣ
ಡೊಂಬಿವಲಿ ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ
Team Udayavani, Jul 24, 2019, 5:47 PM IST
ಡೊಂಬಿವಲಿ, ಜು. 23: ಶಿಕ್ಷಣವು ವ್ಯಾಪರೀಕರಣಗೊಂಡಿರುವುದಿಂದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹರಸಾಹಸ ಪಡುವಂಥಾಗಿದ್ದು, ಇಂತಹ ಸಂದರ್ಭದಲ್ಲಿ ಪಾಲಕರ ಆಸೆ-ಆಕಾಂಕ್ಷೆಗಳನ್ನು ಪೂರೈಸುವುದು ಪ್ರತೀ ಮಕ್ಕಳ ಕರ್ತವ್ಯವಾಗಿದೆ. ಮಕ್ಕಳಿಗೆ ಕೇವಲ ಶಿಕ್ಷಣವನ್ನು ನೀಡಿದರೆ ಸಾಲದು, ಶಿಕ್ಷಣದೊಂದಿಗೆ ಅವರನ್ನು ಸುಸಂಸ್ಕೃತರನ್ನಾಗಿ ಬೆಳೆಸುವ ಜವಾಬ್ದಾರಿ ಪಾಲಕ-ಪೋಷಕರ ಮೇಲಿದೆ. ಶಿಕ್ಷಣ ಮತ್ತು ಸಂಸ್ಕಾರ ಮಕ್ಕಳ ಬೆಳವಣಿಗೆಯಲ್ಲಿ ಬಹಳ ಮುಖ್ಯವಾಗಿದೆ. ಸಂಸ್ಕಾರಯುತ ಬದುಕು ನಮ್ಮದಾದಾಗ ಜೀವನ ಸಾರ್ಥಕಗೊಳ್ಳುತ್ತದೆ. ನಮ್ಮ ಸಂಸ್ಥೆಯಿಂದ ನೀಡಿದ ಶೈಕ್ಷಣಿಕ ನೆರವನ್ನು ಉತ್ತಮ ರೀತಿಯಲ್ಲಿ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಅಧ್ಯಕ್ಷ ಆರ್. ಕೆ. ಸುವರ್ಣ ನುಡಿದರು.
ಜು. 21 ರಂದು ಅಪರಾಹ್ನ ಡೊಂಬಿವಲಿ ಪಶ್ಚಿಮದ ಠಾಕೂರ್‌ವಾಡಿಯ ವೈಭವ ಮಂಗಳ ಕಾರ್ಯಾಲಯದಲ್ಲಿ ನಡೆದ ಸಿರಿನಾಡ ವೆಲ್ಫೇರ್ ಅಸೋಸಿಯೇಶನ್ ಡೊಂಬಿವಲಿ ಇದರ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಮತ್ತು ಉಚಿತ ಪುಸ್ತಕ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ನೆರವು ವಿತರಿಸುತ್ತಿದ್ದು, ದಾನಿಗಳು, ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರ ಯೋಗದಾನವನ್ನು ಮರೆಯು ವಂತಿಲ್ಲ. ಸಂಸ್ಥೆಯ ಸಮಾಜಪರ, ಶೈಕ್ಷಣಿಕ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ನುಡಿದು ಮಕ್ಕಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೋಹನೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ಜಾತಿ, ಮತ, ಭೇದವಿಲ್ಲದೆ ಒಂದೆ ಸೂರಿನಡಿ ಒಗ್ಗೂಡಿ ಸಸಮಾಜ ಸೇವೆಗೈಯುವ ಸಂಘದ ಸದಸ್ಯರ ಕಾರ್ಯವೈಖರಿ ಅಭಿನಂದನೀಯ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ವೈದ್ಯಕೀಯ, ಕ್ರೀಡಾ ಕ್ಷೇತ್ರಗಳಿಗೆ ಒತ್ತು ನೀಡಿ ನುಡಿದಂತೆ ನುಡಿದು ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದು ಅನುಷ್ಠಾನಗೊಳಿಸುವ ಪದಾಧಿಕಾರಿಗಳು ಅಭಿನಂದನಾರ್ಹರು. ನಾವು ರಾತ್ರಿಶಾಲೆಗಳಲ್ಲಿ ಕಲಿತು ಸಂಘರ್ಷ ಜೀವನವನ್ನು ನಡೆಸಿ ಯಶಸ್ವಿ ಉದ್ಯಮಿಗಳಾಗಿದ್ದೇವೆ. ಯುವ ಜನತೆ ವಿದ್ಯಾರ್ಜನೆಗೈಯುವಾಗ ಸಮಸ್ಯೆಗಳು ಎದುರಾದರೆ ಮಾನಸಿಕವಾಗಿ ಕುಗ್ಗದೆ ಶಿಕ್ಷಣವನ್ನು ಪೂರ್ಣಗೊಳಿಸಬೇಕು. ಸಂಸ್ಥೆಯಲ್ಲಿ ನಡೆಯುತ್ತಿರುವ ಕನ್ನಡ ಕಲಿಕಾವರ್ಗದ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು.
ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಸಿದ್ದಿ-ಸಾಧನೆಗಳನ್ನು ವಿವರಿಸಿದರು. ವಸಂತ ಸುವರ್ಣ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ತಿಳಿಸಿದರು. ಅತಿಥಿ-ಗಣ್ಯರುಗಳನ್ನು ಸಂಸ್ಥೆಯ ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.
ಕನ್ನಡ ಕಲಿಕಾ ತರಗತಿಯ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ಹಾಗೂ ಅತೀ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿದರು. ಕನ್ನಡ ಕಲಿಕಾ ತರಗತಿಯ ಶಿಕ್ಷಕಿ ಶೋಭಾ ಟಿ. ಪೂಜಾರಿ, ಸುನೀತಾ ಪಾಲನ್, ಶೋಭಾ ಶೆಟ್ಟಿ, ಸುಮತಿ ಮೊಗವೀರ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಡೊಂಬಿವಲಿ ಮಂಜುನಾಥ ವಿದ್ಯಾಲಯದ ಕನ್ನಡ ಮಾಧ್ಯಮ ಶಾಲೆಯ ಕಳೆದ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಮಕ್ಕಳನ್ನು ಅಭಿನಂದಿಸಲಾಯಿತು.
ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ತುಳು-ಕನ್ನಡಿಗರ ಮಕ್ಕಳಿಗೆ ವಿದ್ಯಾನಿಧಿ ಸಹಾಯ ಯೋಜನೆಯಿಂದ ಶೈಕ್ಷಣಿಕ ನೆರವು ವಿತರಿಸಲಾಯಿತು. ವೇದಿಕೆಯಲ್ಲಿ ಅತಿಥಿಗಳಾದ ಉದ್ಯಮಿ, ಸಮಾಜ ಸೇವಕ ಸುರೇಶ್ ಶೆಟ್ಟಿ, ಸಮಾಜ ಸೇವಕ ಜೈಸಿಂಗ್ ಪಾಟೀಲ್, ಸಲಹೆಗಾರರಾದ ರಾಜೀವ ಭಂಡಾರಿ, ಸಂಸ್ಥೆಯ ಕೋಶಾಧಿಕಾರಿ ಸದಾಶಿವ ಸಾಲ್ಯಾನ್, ಉಪಾಧ್ಯಕ್ಷ ಅಜೆಕಾರು ಜಯ ಶೆಟ್ಟಿ, ಜತೆ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉದಯಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿನೋದ್ ಕರ್ಕೇರ ಉಪಸ್ಥಿತರಿದ್ದರು.
ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಯುವ ವಿಭಾಗ, ಮಹಿಳಾ ವಿಭಾಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೋಶಾಧಿಕಾರಿ ಸದಾಶಿವ ಸಾಲ್ಯಾನ್ ಸಹಕರಿಸಿದರು. ವಸಂತ ಸುವರ್ಣ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನೂರಾರು ಮಕ್ಕಳಿಗೆ ಶೈಕ್ಷಣಿಕ ನೆರವು ಮತ್ತು ಉಚಿತ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ತುಳು-ಕನ್ನಡಿಗರು, ವಿದ್ಯಾರ್ಥಿಗಳು, ಪಾಲಕ-ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.