ಕ್ರೂವ್ ಪುಟ್ಟ ಹಳ್ಳಿ ನಗರವಾಗಿ ಬೆಳೆದು ನಿಂತ ಸೋಜಿಗದ ಸಂಗತಿ
Team Udayavani, Feb 20, 2021, 5:48 PM IST
ಇಂಗ್ಲೆಂಡ್ ದೇಶದ ಒಂದು ಹಳ್ಳಿಯಾಗಿದ್ದ “ಕ್ರೂವ್'(Crewe) ಇಂದು ಬೆಳೆದು ಒಂದು ಸಮೃದ್ಧಿಯ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಪುಟ್ಟ ನಗರವಾಗಿ ಪರಿವರ್ತನೆಯಾದ ಕಥೆ ಇದು. ಇಂತಹ ಹಳ್ಳಿಗಳನ್ನು ನೋಡಿಯೇ ಮಹಾತ್ಮ ಗಾಂಧೀಜಿ ಅವರು ಭಾರತದ ಪ್ರತಿ ಹಳ್ಳಿಗಳ ಸ್ವರಾಜ್ಯದ, ಸಮೃದ್ಧಿಯ ಕನಸುಕಂಡಿದ್ದರೇನೊ ಎನ್ನಿಸುವ ಹಾಗೆ ಇಲ್ಲಿ ಆಧುನಿಕ ಸೌಲಭ್ಯಗಳು, ಅತ್ಯುತ್ತಮ ಶಿಕ್ಷಣ, ವ್ಯಾಪಾರ, ಉದ್ಯಮ, ಶ್ರೇಷ್ಠ ಸಾರಿಗೆ ವ್ಯವಸ್ಥೆಗಳೊಂದಿಗೆ ಆತಂಕವಿಲ್ಲದೆ ನಿಸರ್ಗದ ಮಡಿಲಿನಲ್ಲಿ ಜೀವನ ನಡೆಸಲು ಯೋಗ್ಯವಾದ ಸ್ಥಳ ನಿರ್ಮಾಣವಾಗಿದೆ.
“ಕ್ರೂವ್’ ಎಂಬ ಹೆಸರು ವೇಲ್ಸ್ ಪದವಾದ ಕ್ರಿಯೂನಿಂದ ಬಂದಿದೆ. ಇದರರ್ಥ “ಕ್ರಾಸಿಂಗ್’. ಹಲವು ರೈಲು ಮಾರ್ಗಗಳ ಕ್ರಾಸಿಂಗ್ ಇಲ್ಲಿ ಇರುವುದರಿಂದ ಈ ಊರಿಗೆ ಕ್ರೂವ್ ಎಂಬ ಹೆಸರು ಬಂದಿದೆ. ಇಂಗ್ಲೆಂಡ್ ದೇಶದ ರಾಜಧಾನಿ ಲಂಡನ್‌ನಿಂದ ಉತ್ತರಕ್ಕೆ 158 ಮೈಲಿ ದೂರದಲ್ಲಿ, ಮ್ಯಾಂಚೆಸ್ಟರ್ ನಗರದ ಕೇಂದ್ರದಿಂದ 28 ಮೈಲಿ ದೂರದಲ್ಲಿರುವ ಕ್ರೂವ್ ಎಲ್ಲ ಮಾರ್ಗಗಳ ರೈಲುಗಳ ಜಂಕ್ಷನ್ ಹೊಂದಿದ್ದು, ಇದರ ದ್ಯೋತಕವಾಗಿ ಇಲ್ಲಿ ಕ್ರೂವ್ ಹೆರಿಟೇಜ್ ಸೆಂಟರ್ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ.
ಇಲ್ಲಿ ಉಗಿ, ಡೀಸೆಲ್ ಮತ್ತು ವಿದ್ಯುತ್ ರೈಲುಗಳು ಕಾಣಸಿಗುತ್ತವೆ. ಹೈ ಸ್ಪೀಡ್ ರೈಲ್ ಏಖ2 ಪ್ರಗತಿಯಲ್ಲಿದ್ದು, 2027ರ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ರೈಲ್ವೇ ಮತ್ತು ರೋಲ್ಸ್ ರಾಯ್ ಎಂಜಿನಿಯರಿಂಗ್ ಕಾರ್ಯಗಳ ಕಾರ್ಯತಂತ್ರದ ಉಪಸ್ಥಿತಿಯು ಕ್ರೂವ್ ಅನ್ನು ಶತ್ರುಗಳ ವಾಯುದಾಳಿಗೆ ಗುರಿಯಾಗಿಸಿತ್ತು. ಹೀಗಾಗಿ ಈ ಪ್ರಾಂತ್ಯ 35 ನಾಗರಿಕರನ್ನು ಹಾಗೂ ರೈಲ್ವೇ ನಿಲ್ದಾಣದ ಸಮೀಪವಿರುವ ಐವತ್ತು ಮನೆಗಳನ್ನು ಕಳೆದುಕೊಳ್ಳಬೇಕಾಯಿತು.
ಶಿಕ್ಷಣ ವ್ಯವಸ್ಥೆ ಅತ್ಯಾಧುನಿಕವಾಗಿದ್ದು, ಎಲ್ಲ ಹಂತದ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ ಪ್ರಾಥಮಿಕ, ಮಾಧ್ಯಮಿಕ, ಸರಕಾರಿ ಶಾಲೆಗಳು ಹೇರಳವಾಗಿದ್ದು, ಎಲ್ಲ ವರ್ಗದ ಮಕ್ಕಳು ಈ ಶಾಲೆಗಳಲ್ಲಿ ಒಂದಾಗಿ ಉಚಿತವಾಗಿ ಓದುವುದು ಒಂದು ಅದ್ಭುತವೇ ಸರಿ. ಬೆಂಟ್ಲೇ ಸಹಯೋಗದೊಂದಿಗೆ ಟೆಕ್ನಿಕಲ್ ಕಾಲೇಜು ಕೂಡ ಪ್ರಾರಂಭವಾಗಿದೆ.”ಕ್ರೂವ್ ಅಲೆಕ್ಸಾಂಡ್ರಾ’ ಸ್ಥಳೀಯ ಫುಟ್ಬಾಲ್ ಕ್ರೀಡಾಂಗಣವಾಗಿದ್ದು ಪ್ರಖ್ಯಾತ ಪುಟ್ಬಾಲ್ ಆಟಗಾರರಾದ ಜಪ್ ತೋಮಸ್, ಕ್ರೇಗ್ ಹಿಗ್ನೆಟ್ ಮೊದಲಾದವರು ಬೆಳೆದ ಮನೆಯಾಗಿದೆ. ಈ ದೇಶದಲ್ಲಿ ವೈದ್ಯಕೀಯ ಸೇವೆಯು ಸಹ 13 ವರ್ಷದ ಮಕ್ಕಳವರೆಗೆ ಉಚಿತವಾಗಿದ್ದು, ಎಲ್ಲರೂ ಎನ್‌ಎಚ್‌ಎಸ್ ಎಂಬ ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಪಡೆಯಬಹುದಾಗಿದೆ. ಸ್ಥಳೀಯ ಆಸ್ಪತ್ರೆ ಲೈಟನ್ ಎಲ್ಲ ವೈದ್ಯಕೀಯ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿದ್ದು ಕೋವಿಡ್ ವಿರುದ್ಧ ಹೋರಾಡುವಲ್ಲಿಯೂ ಸಕ್ರಿಯವಾಗಿದೆ.
ಪಟ್ಟಣದಲ್ಲಿ ಅನೇಕ ಉದ್ಯಾನವನಗಳಿದ್ದು “ಕ್ವೀನ್ಸ್ ಪಾರ್ಕ್’ ಅತ್ಯಂತ ಬೃಹದಾಕಾರವಾಗಿದೆ ಹಾಗೂ 2010ರಲ್ಲಿ ಇದನ್ನು 6.5 ಮಿಲಿಯನ್ ಪೌಂಡ್ ಖರ್ಚು ಮಾಡಿ ಇದನ್ನು ಪುನರುಜ್ಜೀವನಗೊಳಿಸಲಾಗಿದೆ. ಇಲ್ಲಿ ನಡಿಗೆ ಮಾರ್ಗ, ಮಕ್ಕಳ ಆಟದ ಪ್ರದೇಶ, ಹಸುರು ಹಾಸಿನ ಗಾಲ್ಫ್ ಆಟದ ಮೈದಾನ, ಬೋಟಿಂಗ್ ಸರೋವರಗಳನ್ನು ಹೊಂದಿದ್ದು ಆಕರ್ಷಕ ತಾಣವಾಗಿ ನಿರ್ಮಾಣಗೊಳಿಸಲಾಗಿದೆ. ವಿರಾಮಕ್ಕಾಗಿ ಇರುವ ಪ್ರಮುಖ ಸ್ಥಳ ಲೈಫ್ಸ್ಟೈಲ್ ಸೆಂಟರ್ ಈಜುಗೋಳ, ಜಿಮ್, ಯೋಗ, ಏರೋಬಿಕ್ಸ್, ಬಾಡಿ ಪಂಪ್, ಗ್ರೂಪ್ ಸೈಕ್ಲಿಂಗ್ ಮೊದಲಾದ ವ್ಯಾಯಾಮ ಮಾಡಲು ಸುಸಜ್ಜಿತವಾಗಿದ್ದು ಬೃಹತ್ ಗ್ರಂಥಾಲಯವನ್ನು ಒಳಗೊಂಡಿದೆ. ಇಲ್ಲಿ ಯಾವುದೇ ಸ್ಥಳದಲ್ಲಿ ಏನನ್ನಾದರೂ ವಸ್ತುಗಳನ್ನು ಮರೆತು ಬಂದರೆ ಅವನ್ನು ಜೋಪಾನವಾಗಿ ಇಟ್ಟು ಮರಳಿಸುವುದು ವಿಶೇಷವೇ ಸರಿ.
ಕ್ರೂವ್ ಪಟ್ಟಣಕ್ಕೆ ಕಳಸ ಪ್ರಧಾನವಾಗಿರುವ ರೋಲ್ಸ್ ರಾಯ್ಸ್ 1946 ರಿಂದ 2008 ರವರೆಗೆ ನೆಲೆಯಾಗಿತ್ತು. ಈಗ ಅದು ಪಟ್ಟಣದ ಪಶ್ಚಿಮದಲ್ಲಿರುವ ಪಿಮ್ಸ್ ಲೇನ್‌ನಲ್ಲಿರುವ ಬೆಂಟ್ಲೇ ಕಾರ್ಖಾನೆಯಾಗಿ ಪ್ರಪಂಚದಲ್ಲಿ ಅತ್ಯಂತ ಬೆಲೆಬಾಳುವ ಕಾರುಗಳಲ್ಲಿ ಒಂದಾದ “ಬೆಂಟ್ಲೇ ಮೋಟಾರ್ ಕಾರು’ಗಳನ್ನು ಉತ್ಪಾದಿಸುತ್ತಿದೆ. ಜಗತ್ತಿನ ಮೂಲೆಮೂಲೆಯಿಂದ ಪ್ರತಿಭೆಗಳನ್ನು ಇದು ತನ್ನತ್ತ ಸೆಳೆಯುತ್ತಿದೆ. ನಮ್ಮ ಭಾರತೀಯ ಮೂಲದ ಟೆಕ್ ಮಹಿಂದ್ರಾ ಮೊದಲಾದ ಕಂಪೆನಿಗಳು ಭಾರತೀಯರನ್ನು ಇಲ್ಲಿ ಉನ್ನತ ಹುದ್ದೆ ಗಳಲ್ಲಿ ನೇಮಿಸಿದ್ದಾರೆ. ನಲವತ್ತಕ್ಕೂ ಹೆಚ್ಚು ಕನ್ನಡದ ಕುಟುಂಬಗಳು ಈ ಊರಿನಲ್ಲಿ ವಾಸಿಸುತ್ತಿದ್ದು ಬೆಂಟ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ.
– ವೇದಮಾತಾ ವಿ. ಕಮತದ, ಕ್ರೂವ್, ಇಂಗ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.