ಊರೆಲ್ಲ ಬೆಳಕಾಗೊ ದೀಪಾವಳಿ
Team Udayavani, Nov 14, 2020, 8:33 AM IST
ದೀಪಾವಳಿ ಹಬ್ಬ ಬರೀ ಬೆಳಕು ಬೀರುವುದಷ್ಟೇ ಅಲ್ಲ; ಸಂಬಂಧಗಳನ್ನು ಬೆಸೆಯುವ ಹಬ್ಬವೂ ಹೌದು. ಕುಟುಂಬದೊಂದಿಗಿನ ಬಾಂಧವ್ಯ ಗಟ್ಟಿಗೊಳಿಸುತ್ತಾ ಸಮಾಜದೊಂದಿಗಿನ ನಂಟನ್ನೂ ಬೆಸೆಯುವುದು ಈ ಹಬ್ಬದ ವೈಶಿಷ್ಟ್ಯಗಳಲ್ಲಿ ಒಂದು.
ಊರೆಲ್ಲ ಬೆಳಕಾಗೊ ದೀಪಾವಳಿ, ಉಲ್ಲಾಸ ತರುವಂಥ ದೀಪಾವಳಿ, ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ, ಲಕುಮಿ ಪೂಜೆ ಪ್ರಭಾವಳಿ…
ಚಿಕ್ಕಂದಿನಲ್ಲಿ ಕೇಳಿದ ಈ ಚಲನಚಿತ್ರ ಗೀತೆ ದೀಪಾವಳಿ ಹಬ್ಬದ ಸಡಗರ- ಸಂಭ್ರಮದ ಚಿತ್ರಣವನ್ನು ನನ್ನ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿಸಿದೆ.
ಪ್ರತಿವರ್ಷ ಅಶ್ವಯುಜ ಕೃಷ್ಣ ಪಕ್ಷದ ತ್ರಯೋದಶಿಯಂದು ಮಾಡುವ ಗಂಗಾಪೂಜೆಯಿಂದ (ನೀರು ತುಂಬುವ ಹಬ್ಬ) ಪ್ರಾರಂಭವಾಗುವ ಹಬ್ಬದ ಸಂಭ್ರಮ, ನರಕ ಚತುರ್ದಶಿಯ ಅಭ್ಯಂಜನ, ಅಮಾವಾಸ್ಯೆಯ ಲಕ್ಷ್ಮೀಪೂಜೆ, ಕಾರ್ತಿಕ ಮಾಸದ ಬಲಿಪಾಡ್ಯಮಿ, ಬಿದಿಗೆ, ತದಿಗೆಗಳವರೆಗೂ ಉಂಟು. ಹೀಗೆ ದೀಪಾವಳಿ ಎಲ್ಲ ಹಬ್ಬಗಳ ರಾಜನಾಗಿ ಮೆರೆಯುತ್ತದೆ.
“ತಲೆತಲಾಂತರದಿಂದ ತೈಲವರೆಯುತ ಬಂದು, ಸೊಡರು ಕುಡಿಯಾಡಿಸಿದೆ ಮಣ್ಣ ಪಣತಿ, ನೆಲಬಾನಿಗೊಂದೇ ದೀಪಾವಳಿಯ ಸೇತುವೆಯ ನಿಲಿಸಿ ಉದ್ಘಾಟಿಸಲಿ ಜ್ಯೋತಿಷಂ ಜ್ಯೋತಿಃ’ ಎನ್ನುವ ಕವಿಮಾತು ಎಲ್ಲ ಬೆಳಕಿಗೂ ಮೂಲವಾದ ಬೆಳಕು ಜ್ಞಾನದ ಜ್ಯೋತಿಯಾಗಿ ಬೆಳಗಿ, ನಮ್ಮೆಲ್ಲರ ಬದುಕಿನಲ್ಲಿ ಅಭ್ಯುದಯವನ್ನು ತರಲಿ ಎಂಬ ಹಾರೈಕೆಯಾಗಿ ಕಾಣುತ್ತದೆ.
ದೇಶಸ್ಥ ಸಂಪ್ರದಾಯದ ನಮ್ಮ ಮನೆಯಲ್ಲಿ ಬಗೆ- ಬಗೆಯ ತಿಂಡಿ- ತಿನಿಸುಗಳ ತಯಾರಿಯಿಂದಲೇ ದೀಪಾವಳಿಯ ಪ್ರಾರಂಭವಾಗುತ್ತದೆ. ನೀರು ತುಂಬುವ ಹಬ್ಬದಂದು ಮನೆಯ ಮುಂದೆ ಆಕಾಶ ಬುಟ್ಟಿಯನ್ನು ಕಟ್ಟಿ, ಸಂಜೆ ಗಂಗಾಪೂಜೆ ಮಾಡುವಷ್ಟರಲ್ಲಿ ಮನೆಯಲ್ಲಿ ತಯಾರಿಸಲಾಗುವ ಹಲವು ಬಗೆಯ ಉಂಡೆ, ಚಕ್ಕುಲಿ, ಚಿರೋಟಿಗಳು “ದೀಪಾವಳಿಯ ಫರಾಳ’ ವೆಂದೇ ವಿಶೇಷತೆಯನ್ನು ಪಡೆದಿವೆ.
ನರಕ ಚತುರ್ದಶಿಯಂದು ಸೂರ್ಯೋದಯಕ್ಕೂ ಮೊದಲು ದೀಪ ಬೆಳಗಿಸಿ, ಆರತಿ ಮಾಡಿಸಿಕೊಂಡು, ಅಭ್ಯಂಜನ ಮಾಡುವ ಪದ್ಧತಿ, ಅಮಾವಾಸ್ಯೆಯಂದು ಮಾಡುವ ಲಕ್ಷ್ಮೀಪೂಜೆ, ಬಲಿಪಾಡ್ಯಮಿಯಂದು ಮಾಡುವ ಪಾಂಡವರ ಪೂಜೆಯೊಂದಿಗೆ ದೀಪಾವಳಿ ಹಬ್ಬದ ಆಚರಣೆ
ಮುಗಿಯದೆ, ಸಹೋದರ-ಸಹೋದರಿಯರ ಬಾಂಧ್ಯವದ ಸಂಕೇತವಾಗಿ ಬಿದಿಗೆ ಮತ್ತು ತದಿಗೆಗಳಿಗೂ ಮುಂದುವರಿಯುತ್ತದೆ.
ಹಬ್ಬಕ್ಕೆಂದೇ ತಯಾರಿಸಿದ ತಿಂಡಿ- ತಿನಿಸುಗಳನ್ನು ಸಂಬಂಧಿಗಳು ಮತ್ತು ಸ್ನೇಹಿತರೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ಧತಿಯೂ ನಮ್ಮಲ್ಲಿದೆ. ಹೀಗೆ ಐದಾರು ದಿನಗಳವರೆಗೆ ಆಚರಿಸಲ್ಪಡುವ ದೀಪಾವಳಿ ಹಬ್ಬದ ಆಚರಣೆಯ ಪೌರಾಣಿಕ ಹಿನ್ನೆಲೆ, ಶಾಸ್ತ್ರೋಕ್ತ ಪೂಜೆ, ಅದರೊಂದಿಗೆ ಜತೆಯಾಗಿರುವ ನಂಬಿಕೆಯೂ ವಿಶೇಷವಾಗಿದೆ.
ಹಬ್ಬದ ಕುರಿತಾದ ಈ ವಿಶೇಷ ಮಾಹಿತಿಯನ್ನು ಅರಿತುಕೊಳ್ಳುವುದರೊಂದಿಗೆ ದೀಪಾವಳಿಯೆನ್ನುವುದು ದೀಪಗಳನ್ನು ಬೆಳಗಿಸುವ ಹಬ್ಬದೊಂದಿಗೆ ನಮ್ಮ ಬದುಕಿನಲ್ಲಿ ಜತೆಯಾಗುವ ಸಂಬಂಧಗಳನ್ನು ಗಟ್ಟಿಗೊಳಿಸಿ, ಭಾಂದವ್ಯವನ್ನು ಬೆಳಗಿಸುತ್ತದೆ ಎಂಬ ತಿಳಿವನ್ನು ಮೂಡಿಸುತ್ತದೆ.
ಮಗಳ ಮದುವೆ ಮಾಡಿ, ಮೊದಲ ವರ್ಷದ ದೀಪಾವಳಿಗೆಂದು ಮಗಳು- ಅಳಿಯನನ್ನು ಕಾತರದಿಂದ ಎದುರು ನೋಡುವ ತವರು ಮನೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮೊದಲ ಸ್ಥಾನವನ್ನು ಪಡೆಯುತ್ತದೆ ಎಂದರೆ ಅತಿಶಯವೆನಿಸುವುದಿಲ್ಲ. ಬಗೆಬಗೆಯ ಸಿಹಿತಿನಿಸುಗಳನ್ನು ಉಣಬಡಿಸಿ, ಉಡುಗೊರೆಗಳನ್ನು ನೀಡಿ ಹೊಸ ಅಳಿಯನ ಆತಿಥ್ಯವನ್ನು ಮಾಡುವುದು, ಮದುವೆಯಲ್ಲಿ ಮಾಡದೇ ಉಳಿದ ಆದರಾತಿಥ್ಯವನ್ನು ಪೂರ್ಣಗೊಳಿಸುವ ಪ್ರಯತ್ನ ಆಗುವುದಲ್ಲದೆ, ಎರಡೂ ಮನೆಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ.
ಭಾವನ ಬಿದಿಗೆ, ಅಕ್ಕನ ತದಿಗೆ ಎಂದು ಕರೆಸಿಕೊಳ್ಳುವ ಬಿದಿಗೆ-ತದಿಗೆಗಳು ಮನೆಮಕ್ಕಳ ಸೋದರತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲೂ ಮಹತ್ವದ ಪಾತ್ರ ವಹಿಸುತ್ತವೆ. ಸ್ನೇಹಿತರನ್ನು, ಸಂಬಂಧಿಗಳನ್ನು ಮನೆಗೆ ಆಹ್ವಾನಿಸಿ ಆದರಿಸುವುದು, ವರ್ತಕ ಮತ್ತು ಗ್ರಾಹಕರ ನಡುವಿನ ಸಂಬಂಧ ಗಟ್ಟಿಗೊಳಿಸುವುದೂ ಇದೇ ಹಬ್ಬ.
ವ್ಯಾಪಾರಿಗಳು ವಿಶ್ವಾಸಾರ್ಥವಾಗಿ ತಮ್ಮ ಗ್ರಾಹಕರಿಗೆ ಉಡುಗೊರೆಗಳನ್ನು ನೀಡುವುದು, ಖಾಸಗಿ ಕಂಪೆನಿಗಳು ದೀಪಾವಳಿಯ ಬೋನಸ್ ನೀಡುವುದು ಮೊದಲಿನಿಂದಲೂ ರೂಢಿಯಲ್ಲಿವೆ. ದಿನಕಳೆದಂತೆ ಸಡಿಲಗೊಳ್ಳುವ, ಬಣ್ಣ ಕಳೆದುಕೊಂಡು ಮಾಸುವ ಸಂಬಂಧದ ಎಳೆಗಳಿಗೆ ಹೊಳಪನ್ನು ಒದಗಿಸುವ ಶಕ್ತಿಯನ್ನು ದೀಪಾವಳಿಯ ದೀಪದ ಜ್ಯೋತಿಯಲ್ಲಿ ಕಾಣಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.