ಡೊಂಬಿವಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ
Team Udayavani, Mar 28, 2017, 5:31 PM IST
ಡೊಂಬಿವಲಿ: ದಾಂಪತ್ಯ ಜೀವನ ಎನ್ನುವುದು ಒಂದು ದ್ವಿಚಕ್ರವಿದ್ದಂತೆ. ಸಮತೋಲನ ತಪ್ಪಿದರೆ ಅಪಘಾತ ನಿಶ್ಚಿತ. ಆದ್ದರಿಂದ ಆದರ್ಶ ಜೀವನ ಸಾಗಿಸಬೇಕಾದರೆ ಸಹನೆ ಹಾಗೂ ಪರಸ್ಪರ ತಿಳಿವಳಿಕೆಯ ಸಮತೋಲನ ಅಗತ್ಯ ಎಂದು ಚಿಣ್ಣರ ಬಿಂಬದ ವಿಶ್ವಸ್ತೆ ವಿನೋದಿನಿ ಹೆಗ್ಡೆ ಅವರು ಹೇಳಿದರು.
ಮಾ. 25ರಂದು ಸಂಜೆ ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ಡೊಂಬಿವಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-5ರ ಅಂಗವಾಗಿ ಸುವರ್ಣ ಮಹೋತ್ಸವ ಸಮಿತಿ ಮತ್ತು ಮಹಿಳಾ ವಿಭಾಗ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಇತರ ಸಂಘ-ಸಂಸ್ಥೆಗಳಿಗೆ ಮಾದರಿ
ಸ್ತ್ರೀ-ಪುರುಷರಲ್ಲಿ ಭೇದ-ಭಾವ ಸರಿಯಲ್ಲ. ಪ್ರತಿ ಮಹಿಳೆಗೆ ಪತಿಯಿಂದ ಸಿಗುವ ಪ್ರೀತಿಯೇ ಅಮೂಲ್ಯವಾಗಿರುತ್ತದೆ. ಡೊಂಬಿವಲಿ ಕರ್ನಾಟಕ ಸಂಘದ ವಿಶೇಷವಾಗಿ ಮಹಿಳಾ ವಿಭಾಗದ ಕಾರ್ಯಕ್ರಮ ಅಭಿನಂದನೀಯವಾಗಿದೆ. ಇಂತಹ ಕಾರ್ಯಕ್ರಮಗಳು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. ನನ್ನಂತಹ ಓರ್ವ ಕಲಾವಿದೆಯನ್ನು ಕರೆದು ಗೌರವಿಸಿದ್ದೀರಿ. ಪ್ರೀತಿ, ವಿಶ್ವಾಸ, ಗೌರವಕ್ಕೆ ಚಿರಋಣಿಯಾಗಿದ್ದೇನೆ ಎಂದರು.
ಸ್ತ್ರೀ ಪುರುಷರು ಸಂಸಾರದಲ್ಲಿ ಸೂರ್ಯ-ಚಂದ್ರರಿದ್ದಂತೆ.
ಅತಿಥಿಯಾಗಿ ಪಾಲ್ಗೊಂಡ ಕನ್ನಡ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ ಅವರು ಮಾತನಾಡಿ, ಸ್ತ್ರೀ ಮತ್ತು ಪುರುಷರನ್ನು ತುಲನೆ ಮಾಡುವುದು ಸರಿಯಲ್ಲ. ಸ್ತ್ರೀ ಪುರುಷರಿಗೆ ಪ್ರಕೃತಿದತ್ತವಾದ ಕೊಡುಗೆಯಿದ್ದು, ತುಲನಾತ್ಮಕ ದೃಷ್ಟಿಯಿಂದ ವಿಮರ್ಶಿಸಿದಾಗ ಸ್ತ್ರೀಯು ಶ್ರೇಷ್ಠಳು. ತಾಯಿಯ ಪ್ರೀತಿಯೆ ಬೇರೆ, ತಂದೆಯ ಪ್ರೀತಿಯೇ ಬೇರೆಯಾಗಿದ್ದು, ಸಂಸಾರವನ್ನು ಯಶಸ್ವಿಯಾಗಿ ನಡೆಸಲು ಸ್ತ್ರೀ ಪಾತ್ರ ಮಹತ್ತರವಾಗಿದೆ. ಸ್ತ್ರೀ ಪುರುಷರು ಸಂಸಾರದಲ್ಲಿ ಸೂರ್ಯ-ಚಂದ್ರರಿದ್ದಂತೆ. ಅಂದಿನ ಪುರಾಣ ಕಥೆಗಳಲ್ಲೂ ವಿಜ್ಞಾನ ಅಡಗಿತ್ತು ಎಂಬುದು ತಿಳಿದ ವಿಚಾರ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘದ ಜ್ಞಾನಜ್ಯೋತಿ ನಿರಂತರವಾಗಿ ಬೆಳಗಲಿ ಎಂದರು.
ಇದೇ ಸಂದರ್ಭದಲ್ಲಿ ಸುರೇಂದ್ರ ಕುಮಾರ್ ಹೆಗ್ಡೆ ದಂಪತಿ ಹಾಗೂ ಸಂಘದ ಅಭಿವೃದ್ಧಿಯ ಹರಿಕಾರರಲ್ಲಿ ಪ್ರಮುಖರಾದ ಜಗತ್ಪಾಲ ಎಸ್. ಶೆಟ್ಟಿ ಮತ್ತು ಪ್ರೊ| ಡಿ. ಬಿ. ಕುಂದರಗೆ ಅವರನ್ನು ಗಣ್ಯರ ಸಮ್ಮುಖದಲ್ಲಿ ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿಮಲಾ ವಿ. ಶೆಟ್ಟಿ ಅವರು, ಸಂಘದ ಮಹಿಳಾ ವಿಭಾಗದ ಸಾಧನೆಗಳನ್ನು ವಿವರಿಸಿ, ಸ್ತ್ರೀ ಮತ್ತು ಪುರುಷರು ಒಂದೇ ರಥದ ಎರಡು ಗಾಲಿಗಳಿದ್ದಂತೆ. ಬಾಳೆಂಬ ರಥ ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಇಬ್ಬರಲ್ಲೂ ಇದೆ ಎಂದರು.
ಹೇಮಾ ಹೆಗಡೆ, ಚಂಚಲಾ ಸಾಲ್ಯಾನ್, ಶುಭಾ ನಾಗರಾಜ್ ಪ್ರಾರ್ಥನೆಗೈದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸನತ್ ಕುಮಾರ್ ಜೈನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಮಾಧುರಿಕಾ ಬಂಗೇರ ವಂದಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡಾ| ದಿಲೀಪ್ ಕೋಪರ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಕುಲಾಲ್. ಕೋಶಾಧಿಕಾರಿ ಚಿತ್ತರಂಜನ್ ಆಳ್ವ, ಉಪ ಕಾರ್ಯಾಧ್ಯಕ್ಷ ಸುಕುಮಾರ್ ಶೆಟ್ಟಿ, ಜತೆ ಕಾರ್ಯದರ್ಶಿ ಗಣೇಶ್ ಶೆಟ್ಟಿ ಐಕಳ, ಜತೆ ಕೋಶಾಧಿಕಾರಿ ಲೋಕನಾಥ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಇಂ. ಸತೀಶ್ ಆಲಗೂರ, ಮಹಿಳಾ ವಿಭಾಗದ ಕೋಶಾಧಿಕಾರಿ ಆಶಾ ಎಲ್. ಶೆಟ್ಟಿ, ಜತೆ ಕಾರ್ಯದರ್ಶಿ ವಿದ್ಯಾ ಆಲಗೂರ, ಜತೆ ಕೋಶಾಧಿಕಾರಿ ಗೀತಾ ಮೆಂಡನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾಷಣ ಸ್ಪರ್ಧೆ,
ರಂಗೋಲಿ ಸ್ಪರ್ಧೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸುನಯನಾ ನಾಗರಾಳ, ಜ್ಯೋತ್ಸಾ$° ದೇವಾಡಿಗ ಅವರಿಂದ ನೃತ್ಯ, ನೃತ್ಯರೂಪಕ ನಡೆಯಿತು. ವಿದ್ಯಾವತಿ ಆಲಗೂರ ಕಾರ್ಯಕ್ರಮ ನಿರ್ವಹಿಸಿದರು. ನಿರ್ಣಾಯಕರಾಗಿ ಕರುಣಾಕರ ಶೆಟ್ಟಿ, ದಯಾಮಣಿ ಶೆಟ್ಟಿ ಎಕ್ಕಾರು, ರವಿರಾಜ ಹೆಗಡೆ ಸಹಕರಿಸಿದರು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.