ನೀತಿಯುಕ್ತ ನಾಟಕ “ಒಯಿಕ್‌ಲಾ ದಿನ ಬರೋಡು’
Team Udayavani, Jan 3, 2017, 4:57 PM IST
ನಗರದ ಯಾಂತ್ರಿಕ ಒತ್ತಡದ ಬದುಕಿನಲ್ಲೂ ಸಾಂಸ್ಕೃತಿಕ ರಂಗದಲ್ಲಿ ತುಳು-ಕನ್ನಡಿಗರ ಸೇವೆ ಗುರುತರವಾದುದು. ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ ಕಾರ್ಯಕ್ರಮಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ನಾಡು-ನುಡಿ, ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುವ ವಿವಿಧ ಜಾತಿಯ, ಜಾತ್ಯತೀತ ಸಂಘ-ಸಂಸ್ಥೆಗಳು ಕಾರ್ಯವೆಸಗುತ್ತಾ ಬಂದಿವೆ. ಈ ನಿಟ್ಟಿನಲ್ಲಿ ರಂಗಭೂಮಿಯಲ್ಲಿ ಕಳೆದ 33 ವರ್ಷಗಳಿಂದ ಅವಿರತವಾಗಿ ತೊಡಗಿಸಿಕೊಂಡಿರುವ ಅಭಿನಯ ಮಂಟಪ ಮುಂಬಯಿ ಕಲಾ ತಂಡವು ಇತ್ತೀಚೆಗೆ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್ ಘೋಡ್‌ಬಂದರ್‌ರೋಡ್ ಥಾಣೆ ಇದರ ವಾರ್ಷಿಕೋತ್ಸವದ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ “ಒಯಿಕ್‌ಲಾ ದಿನ ಬರೋಡು’ ತುಳು ನಾಟಕವನ್ನು ಪ್ರದರ್ಶಿಸಿತು.
ಸಾಮಾಜಿಕ ಕಳಕಳಿಯೊಂದಿಗೆ ನೀತಿಭರಿತ ಸಂದೇಶವನ್ನು ಬಿತ್ತರಿಸುವ ಹಾಸ್ಯಮಯ ನಾಟಕವನ್ನು ರಮಾನಂದ ನಾಯಕ್ ಜೋಡುರಸ್ತೆ ರಚಿಸಿದ್ದು, ಅಭಿನಯ ಮಂಟಪದ ನಿರ್ದೇಶಕರಾದ ಕರುಣಾಕರ ಕೆ. ಕಾಪು ಅವರ ದಿಗªರ್ಶನ ಹಾಗೂ ತಂಡದ ಪ್ರಬುದ್ಧ ಕಲಾವಿದರ ಕೂಡುವಿಕೆಯಲ್ಲಿ ಯಶಸ್ವಿಯಾಗಿ ನಾಟಕವು ಮೂಡಿಬಂತು.
ಆರ್. ಆರ್. ಟ್ರಾವೆಲ್ಸ್‌ನ ಮಾಲಕ ರಾಜಾರಾಮನ ಕುಟುಂಬದ ಸುತ್ತ ಹೆಣೆದಿರುವ ಕಥೆಯಲ್ಲಿ, ಆತನ ಶ್ರೀಮಂತಿಕೆಯ ದರ್ಪದಿಂದ ಆಗುವ ಅನಾಹುತಗಳು, ಮಾತ್ರವಲ್ಲದೆ ಆತನ ಹಿರಿಯ ಮಗನ ಕೊಲೆಯ ರಹಸ್ಯ, ಸೊಸೆಯ ನಿಗೂಢ ನಡೆ, ಆರ್. ಆರ್. ಟ್ರಾವೆಲ್ಸ್‌ನ ಮ್ಯಾನೇಜರ್‌ನ ವಂಚನೆಯ ಬೆದರಿಕೆ, ರಾಜಾರಾಮನ ದಬ್ಟಾಳಿಕೆಗೆ ಮನನೊಂದು ಮದ್ಯವ್ಯಸನಕ್ಕೆ ಬಲಿಯಾದ ಅವನ ಇನ್ನೋರ್ವ ಮಗ, ತಂದೆಯ ಮೇಲೆ ಸೇಡು ತೀರಿಸಿಕೊಳ್ಳುವ ಪರಿ ಮಾತ್ರವಲ್ಲದೆ ರಾಜಾರಾಮನ ಮಗಳ ಪ್ರೇಮ ಪ್ರಕರಣ ಇವೆಲ್ಲವೂ ಕಥೆಯುದ್ದಕ್ಕೂ ಸಾಗುತ್ತಾ ರಹಸ್ಯಮಯ ತಿರುವು ಪಡೆದು, ಸಂಸಾರ ಮತ್ತೆ ಹೊಸತನದ ಛಾಯೆಯೊಂದಿಗೆ ಸಂತಸದಿಂದ ಒಂದಾಗುತ್ತದೆ ಎನ್ನುವ ಸನ್ನಿವೇಶಗಳು ನಾಟಕದುದ್ದಕ್ಕೂ ಹಾಸ್ಯದ ಹೊನಲಿನೊಂದಿಗೆ ರಂಜನೀಯವಾಗಿ ಮೂಡಿಬಂದಿದೆ.
ಪಾತ್ರ ವರ್ಗದಲ್ಲಿ ಆರ್. ಆರ್. ಟ್ರಾವೆಲ್ಸ್‌ನಮಾಲಕನ ಪಾತ್ರದಲ್ಲಿ ಕರುಣಾಕರ ಶೆಟ್ಟಿ ಹೆಬ್ರಿ ಅವರ ವಾಕ್ಚಾತುರ್ಯದ ಮೋಡಿ, ಅಭಿನಯದ ಪರಿ ಉತ್ತಮವಾಗಿ ಮೂಡಿ ಬಂದಿದೆ. ರಾಜರಾಮನ ಸೊಸೆ ಭಾಗೀರಥಿ ವಿಧವೆಯ ಪಾತ್ರದಲ್ಲಿ ರಂಗಭೂಮಿಯ ಉದಯೋನ್ಮುಖ ಪ್ರತಿಭೆ ಪ್ರತಿಮಾ ಬಂಗೇರ ಅವರ ಮನೋಜ್ಞ ಅಭಿನಯವು ನಾಟಕದುದ್ದಕ್ಕೂ ಪ್ರಶಂಸನೀಯವಾಗಿತ್ತು. ಪ್ರತಿಭಾನ್ವಿತ ಪ್ರಶಸ್ತಿ ಪುರಸ್ಕೃತ ನಟಿ ದೀಕ್ಷಾ ಎಲ್. ದೇವಾಡಿಗ ಅವರ ಅಭಿನಯ ಮಾತ್ರವಲ್ಲದೆ ನೃತ್ಯ ಸಂಯೋಜನೆಯಲ್ಲೂ ಕೈಯಾಡಿಸಿ ಮೆಚ್ಚುಗೆಗೆ ಪಾತ್ರರಾದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ಕಿರುತೆರೆ ಚಲನಚಿತ್ರ ನಟಿ ಕು| ಕಾಜಲ್ ಕುಂದರ್ ಜ್ಯೂಲಿಯ ಹಾಸ್ಯ ಪಾತ್ರದಲ್ಲಿ ಚುರುಕಿನ ಅಭಿನಯ ನೀಡಿ ರಂಜಿಸಿದ್ದಾರೆ. ಮಾತ್ರವಲ್ಲದೆ ನೃತ್ಯ ಸಂಯೋಜನೆಯನ್ನು ನೀಡಿದ್ದಾರೆ. ಉಳಿದಂತೆ ತಂಡದ ಪ್ರಬುದ್ಧ ಕಲಾವಿದರಾದ ಶ್ರೀಕಾಂತ್ ಶೆಟ್ಟಿ, ಯಕ್ಷಗಾನ ಹಾಗೂ ರಂಗನಟ ಶೈಲೇಶ್ ಪುತ್ರನ್, ಗೌತಮ್ ಮಾರೂರು, ಶ್ರೀನಿವಾಸ ಕಾವೂರು, ಭರತ್ ಶೆಟ್ಟಿ ಅತ್ತೂರು, ಹಿರಿಯ ನಟ ಭಾಸ್ಕರ್ ಎಂ. ಶೆಟ್ಟಿ ಅತ್ತೂರು, ಅಭಿನಯ ಚತುರ ಉದಯ ವೇಣೂರು, ಹಿರಿಯ ಪ್ರಬುದ್ಧ ಕಲಾವಿದ ಪಿ. ಬಿ. ಚಂದ್ರಹಾಸ್, ಬಹುಮುಖ ಪ್ರತಿಭಾನ್ವಿತ ಕಲಾವಿದ ರಂಗದ ಚಾಪ್ಲಿನ್ ಖ್ಯಾತಿಯ ಅಶೋಕ್ ಕುಮಾರ್ ಕೊಡ್ಯಡ್ಕ, ಕಿಶೋರ್
ಶೆಟ್ಟಿ ಪಿಲಾರ್, ಜಯಂತ್ ಸುವರ್ಣ, ಪ್ರಸಾದ್ ಶೆಟ್ಟಿ ಅವರು ತಮ್ಮ ತಮ್ಮ
ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಕಿನ ಸಂಯೋಜನೆಯೊಂದಿಗೆ ತಂಡದ ಶಿಸ್ತುಬದ್ಧ ಕಲಾವಿದರ ಅಭಿನಯಕ್ಕೆ ಕರುಣಾಕರ ಕೆ. ಕಾಪು ಅವರ ಶ್ರಮವು ಸಾರ್ಥಕವೆನಿಸಿತ್ತು. ಯುವ ಪ್ರತಿಭೆ ಸುದರ್ಶನ್ ಕೋಟ್ಯಾನ್ ಅವರ ಹಿನ್ನೆಲೆ ಸಂಗೀತದಲ್ಲಿ ರಾಜ್‌ಕುಮಾರ್ ಕಾರ್ನಾಡ್ ಮತ್ತು ದಿ| ಪ್ರವೀಣ್ ಬೈಕಂಪಾಡಿ ಅವರ ಸುಮಧುರ ಹಾಡುಗಳಿವೆ. ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ಸಾಹಿತ್ಯ ಮತ್ತು ವರ್ಣಾಲಂಕಾರದಲ್ಲಿ ಮಂಜುನಾಥ್ ಶೆಟ್ಟಿಗಾರ್ ಅವರ ಕೈಚಳಕ ಇವೆಲ್ಲವೂ ನಾಟಕದ ಯಶಸ್ಸಿಗೆ ಕಾರಣೀಭೂತವಾಗಿದೆ. ರಂಗಭೂಮಿಯಲ್ಲಿ ಹೊಸತನದ ಛಾಯೆಯೊಂದಿಗೆ ಪ್ರಯೋಗಾ ತ್ಮಕ ನಾಟಕಗಳನ್ನು ಪ್ರದರ್ಶಿಸುತ್ತಾ ಜನಮನ್ನಣೆಯನ್ನು ಪಡೆದಿರುವ ಅಭಿನಯ ಮಂಟಪ ಮುಂಬಯಿ ತಂಡದಿಂದ ಇನ್ನಷ್ಟು ಕಲಾಕುಸುಮಗಳು ಬೆಳಕು ಕಾಣಲಿ. ಯುವ ಪ್ರತಿಭೆಗಳಿಗೆ ಅವಕಾಶ ಸಿಗುವಂತಾಗಲಿ ಎಂಬುದೇ ನಮ್ಮ ಹಾರೈಕೆ.
ಪ್ರಭಾಕರ ಬೆಳುವಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.