ದೇಶದ ಉನ್ನತಿಗಾಗಿರುವ ಕಾನೂನುಗಳಿಗೆ ವಿರೋಧ ವಿಷಾಧನೀಯ
Team Udayavani, Jan 26, 2022, 11:20 AM IST
ಮುಂಬಯಿ: ನಮ್ಮ ಹಕ್ಕಿನ ಬಗ್ಗೆ ನಾವು ಮಾತಾಡುವಾಗ ದೇಶಕ್ಕಾಗಿ ನಮ್ಮ ಕರ್ತವ್ಯ ಏನು ಎಂಬುದರ ಬಗ್ಗೆ ಮರೆಯಬಾರದು. ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಎಪ್ಪತ್ತೈದು ವರ್ಷಗಳು ಕಳೆದರೂ ಇಂದಿಗೂ ನಾವು ಭ್ರಷ್ಟಾಚಾರ, ಮೀಸಲಾತಿ ಇನ್ನಿತರ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರ ವಿರುದ್ಧ ನಾವು ಧ್ವನಿ ಎತ್ತಿದಾಗ ಮಾತ್ರ ಅದರ ನಿರ್ಮೂಲನೆ ಸಾಧ್ಯ. ದೇಶದ ಉದ್ಧಾರಕ್ಕಾಗಿ ಅದೆಷ್ಟು ಒಳ್ಳೆಯ ಕಾನೂನುಗಳನ್ನು ತಂದರೂ ವೋಟ್ ಬ್ಯಾಂಕಿನ ದೃಷ್ಟಿಯಿಂದ ಅದನ್ನು ವಿರೋಧಿಸುತ್ತಿರುವುದು ಉತ್ತಮವಾದ ಬೆಳವಣಿಗೆ ಅಲ್ಲ ಎಂದು ಸುಪ್ರೀಂಕೋರ್ಟ್‌ನ ಪ್ರಸಿದ್ಧ ನ್ಯಾಯವಾದಿ ಪ್ರಕಾಶ ಎಲ್. ಶೆಟ್ಟಿ ತಿಳಿಸಿದರು.
ಜ. 23ರಂದು ಬೆಳಗ್ಗೆ ಘಾಟ್‌ಕೋಪರ್ ಪಶ್ಚಿಮದ ಕನ್ನಡ ವೆಲ್ಫೇರ್ ಸೊಸೈಟಿಯ ಮಹೇಶ್ ಶೆಟ್ಟಿ ಬಾಬಾ ಗ್ರೂಪ್ ಆಡಿಟೋರಿಯಂನಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಮತ್ತು ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಮತ್ತು ಜವಾಬ್ದಾರಿ ಎಂಬ ವಿಷಯದ ಮೇಲೆ ಜರಗಿದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ, ಸ್ವಾತಂತ್ರ್ಯ ಎಂಬುದು ಸ್ವಇಚ್ಛೆಯಂತೆ ಬಳಸಿಕೊಳ್ಳುವುದಲ್ಲ. ಇಂದಿನ ಶಿಕ್ಷಣ ಪದ್ಧತಿ ಬದಲಾಗಬೇಕಾಗಿರುವುದು ಅನಿವಾರ್ಯವಾಗಿದೆ. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರಗಳ ಅರಿವಾದಾಗ ಮಾತ್ರ ಅವರು ಸುಸಂಸ್ಕೃತ ಪ್ರಜೆಗಳಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿ, ದೇಶದ ನ್ಯಾಯಾಂಗ ವ್ಯವಸ್ಥೆ ಬಗ್ಗೆಯೂ ವಿಚಾರ ಮಂಡಿಸಿ ಸುಭದ್ರ ಭಾರತದ ಕನಸಿಗೆ ಪ್ರತಿಯೋರ್ವ ಪ್ರಜೆಯ ಕೊಡುಗೆ ಮಹತ್ತರವಾಗಿದೆ ಎಂದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬಂಟರವಾಣಿ ಮಾಸಿಕದ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಮಾತನಾಡಿ, ಸ್ವಾತಂತ್ರ್ಯವನ್ನು ನಮ್ಮ ಸಂಸ್ಕಾರ, ಸಂಸ್ಕೃತಿಗೆ ಹಾನಿಯಾಗದಂತೆ ಬಳಸಿಕೊಳ್ಳಬೇಕು. ಇಂದಿನ ಯುವ ಜನಾಂಗ ನಮ್ಮ ಸಂಸ್ಕೃತಿ-ಸಂಸ್ಕಾರಗಳ ಕಡೆಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಆಧುನಿಕ ಕಾಲಘಟ್ಟದಲ್ಲಿ ಒಂದು ಅಥವಾ ಎರಡು ಮಕ್ಕಳಿಗೆ ಜನ್ಮವಿತ್ತು ಅವರಿಗೆ ಎಲ್ಲ ವಿಧದ ಸಂಪತ್ತನ್ನು ಕ್ರೋಢೀಕರಿಸುವಲ್ಲಿ ನಮ್ಮ
ಪೂರ್ಣ ಜೀವನವನ್ನೇ ಕಳೆಯುತ್ತೇವೆ. ಆದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವು ದರಲ್ಲಿ ನಾವು ಹಿಂದೆ ಬೀಳುತ್ತೇವೆ. ನಮ್ಮ ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದರೊಂದಿಗೆ ಭವಿಷ್ಯದಲ್ಲಿ ಅವರು ಜವಾಬ್ದಾರಿಯುತ ನಾಗರಿಕರಾಗುವಂತೆ ಪ್ರೇರೇಪಿಸುತ್ತಿದ್ದರು ಎಂದರು.
ಹಿರಿಯ ಸಾಂಸ್ಕೃತಿಕ ಚಿಂತಕ, ವಾಶಿ ಕನ್ನಡ ಸಂಘದ ಆಡಳಿತ ಮಂಡಳಿಯ ಸದಸ್ಯ ಗೋಪಿ ರಾವ್ ಮಾತನಾಡಿ, ಹೊರ ದೇಶಗಳಿಗೆ ನಮ್ಮ ದೇಶದ ಮೇಲೆ ಅಪಾರ ಗೌರವವಿದೆ. ನಮ್ಮ ದೇಶದ ಸಂಸ್ಕೃತಿಯನ್ನು ಅವರು ಅಳವಡಿಸಿಕೊಳ್ಳುವಾಗ, ನಾವು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವುದು ವಿಷಾಧನೀಯವಾಗಿದೆ. ಸುಭಾಷ್‌ಚಂದ್ರ ಬೋಸ್‌ರಂತಹ ಮಹನೀಯರನ್ನು ಹೊರದೇಶದ ಜನರು ಭಕ್ತಿ-ಗೌರವದಿಂದ ಸ್ಮರಿಸುತ್ತಾರೆ. ಆದರೆ ಭಾರತದಲ್ಲಿ ಅವರಿಗೆ ಸರಿಯಾದ ಸ್ಥಾನಮಾನ, ಗೌರವ ದೊರೆಯಲಿಲ್ಲ. ಕೆಲವೇ ಕೆಲವು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರೆ, ಅದೆಷ್ಟೋ ಮಹಾನ್ ವ್ಯಕ್ತಿಗಳನ್ನು ನಾವು ಇತಿಹಾಸ ಪುಟಗಳಲ್ಲಿ ಕಾಣಲು ಸಾಧ್ಯವಾಗುವುದಿಲ್ಲ. ನಮ್ಮ ಶಿಕ್ಷಣ ಪದ್ಧತಿಯ ದೋಷವೇ ಇದಕ್ಕೆ ಕಾರಣವಾಗಿದೆ. ನಮ್ಮ ಇತಿಹಾಸದಲ್ಲಿ ಮರೆಯಾಗಿರುವ ಅಂತಹ ನಾಯಕರನ್ನು ಸ್ಮರಿಸುವಂತಹ ಸಮಯ ಇದೀಗ ಬಂದಿದೆ ಎಂದರು.
ಲೇಖಕಿ ವೇದಾವತಿ ಭಟ್ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದರೂ ಮಹಿಳೆಯರು ಇಂದಿಗೂ
ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ವಿಷಾಧನೀಯ. ಮಹಿಳೆಯರಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎಂದರು. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್‌ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಪೃಥ್ವೀಶ್,
ಆದಿತ್ಯ ಭಟ್, ಶ್ರೀಕೃಷ್ಣ ಉಡುಪ, ನೀರಜ್ ರಾವ್, ಪ್ರತೀಕ್ಷಾ ಅವರು ಸ್ವಾತಂತ್ರ್ಯ ಹಾಗೂ ಜವಾಬ್ದಾರಿ ಎಂಬ ವಿಷಯದಲ್ಲಿ ಮಾತನಾಡಿದರು.
ಲೇಖಕಿ ಹೇಮಾ ಅಮೀನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಥಾಪಕ ವಿಶ್ವನಾಥ್ ದೊಡ್ಮನೆಯವರು ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಎಂ. ಶೆಟ್ಟಿ ಪ್ರಾರ್ಥನೆಗೈದರು. ರಂಗ ಕಲಾವಿದ ನಾರಾಯಣ್ ಶೆಟ್ಟಿ ನಂದಳಿಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕನ್ನಡ ವೆಲ್ಫೇರ್ ಸೊಸೈಟಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ ಅಧ್ಯಕ್ಷೆ ಶಾಂತಾ ನಾರಾಯಣ್ ಶೆಟ್ಟಿ, ಸಂಘದ ಸದಸ್ಯರು, ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಸದಸ್ಯರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಇದೀಗ ಸ್ವಾತಂತ್ರ್ಯೋತ್ಸವದ 75ನೇ ಸಂಭ್ರಮಾಚರಣೆ ಅಂಗವಾಗಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ಹಾಗೂ ಜವಾಬ್ದಾರಿ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡಿದ್ದೀರಿ. ದೇಶಪ್ರೇಮದ ಕಾರ್ಯಕ್ರಮಗಳು ಪ್ರಸ್ತುತ ಸಮಯದಲ್ಲಿ ತುಂಬಾ ಅಗತ್ಯವಿದೆ. ಭಾರತ ದೇಶವನ್ನು ವಿಶ್ವಗುರು ಆಗಿ ಮಾಡುವಲ್ಲಿ ಎಲ್ಲರ ಪಾತ್ರವೂ ಮುಖ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಲ್ಲದೆ, ಅವರ ದೇಶಪ್ರೇಮವನ್ನು ಕಂಡಾಗ ಸಂತೋಷವಾಗುತ್ತಿದೆ. ಇಂತಹ ಉತ್ತಮವಾದ ಕಾರ್ಯಕ್ರಮಗಳಿಗೆ ನಾವು ಸದಾ ಪ್ರೋತ್ಸಾಹ ನೀಡಬೇಕಾಗಿದೆ. ಕನ್ನಡ ವೆಲ್ಫೆàರ್ ಸೊಸೈಟಿ ಇಂತಹ ಕಾರ್ಯಕ್ರಮಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. –ನವೀನ್ ಶೆಟ್ಟಿ ಇನ್ನಾಬಾಳಿಕೆ, ಅಧ್ಯಕ್ಷರು, ಕನ್ನಡ ವೆಲ್ಪೇರ್ ಸೊಸೈಟಿ ಘಾಟ್‌ಕೋಪರ್
–ಚಿತ್ರ-ವರದಿ: ಸುಭಾಶ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.