ಹೊಟೇಲಿಗರಿಂದ ಶಾಂತಿಯುತ ಪ್ರತಿಭಟನೆ; ಸರಕಾರದ ನಡೆಗೆ ಭಾರೀ ಆಕ್ರೋಶ
Team Udayavani, Apr 10, 2021, 10:49 AM IST
ಮುಂಬಯಿ: ಮಹಾರಾಷ್ಟ್ರ ಸರಕಾರ ಹೊಟೇಲಿಗರ ಸಮಸ್ಯೆಗಳನ್ನು ಅರಿತು ಕೊಂಡು ಶೀಘ್ರದಲ್ಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ “ಯುನೈಟೆಡ್ ಹಾಸ್ಪಿಟಾಲಿಟಿ ಫೋರಂ ಆಫ್ ಮಹಾರಾಷ್ಟ್ರ’ ಎಚ್ಚರಿಕೆ ನೀಡಿದೆ.
ಎ. 30ರ ವರೆಗೆ ಹೊಟೇಲ್, ಬಾರ್, ರೆಸ್ಟೊರೆಂಟ್‌ಗಳನ್ನು ಮುಚ್ಚುವ ರಾಜ್ಯ ಸರಕಾರದ “ಹೊಟೇಲ್ ಉದ್ಯಮ ವಿರೋಧಿ ನೀತಿ’ಯ ವಿರುದ್ಧ ಗುರುವಾರ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಮುಂಬಯಿಯ 25 ಸಾವಿರಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಸಹಿತ ರಾಜ್ಯಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಹೊಟೇಲಿಗರು ಕೈಜೋಡಿಸಿದ್ದರು.
ಮುಂಬಯಿ ಸಹಿತ ಥಾಣೆ, ನವಿಮುಂಬಯಿ, ಪಾಲ^ರ್, ವಸಾಯಿ, ಭಿವಂಡಿ, ಪುಣೆ, ನಾಸಿಕ್ ಹಾಗೂ ರಾಜ್ಯಾದ್ಯಂತ ಹೊಟೇಲಿಗರು ತಮ್ಮ ಹೊಟೇಲ್‌ಗಳ ಮುಂದೆ ಕಾರ್ಮಿಕರೊಂ ದಿಗೆ ಫಲಕ ಹಿಡಿದುಕೊಂಡು ಶಾಂತಿಯುತ ಪ್ರತಿಭಟನೆ ನಡೆಸಿದರು. ಪುಣೆಯಲ್ಲೂ ಪುಣೆ ಹೊಟೇಲಿಗರ ಸಂಘ ಸಹಿತ ಹಲವಾರು ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿವೆ. ಮುಂಬಯಿ ಹೊಟೇಲಿಗರ ಪ್ರತಿಷ್ಟಿತ ಸಂಘಟನೆ ಆಹಾರ್, ವಸಾಯಿ ತಾಲೂಕು ಹೊಟೇಲ್ ಅಸೋಸಿಯೇಶನ್, ಥಾಣೆ ಹೊಟೇಲ್ ಮಾಲಕ ಸಂಘ, ನವಿಮುಂಬಯಿ ಹೊಟೇಲ್ ಅಸೋಸಿ ಯೇಶನ್, ಪಾಲ^ರ್ ಹೊಟೇಲ್ ಅಸೋಸಿಯೇಶನ್, ಭಿವಂಡಿ ಹೊಟೇಲ್ ಅಸೋಸಿಯೇಶನ್, ಡೊಂಬಿವಲಿ ಹೊಟೇಲ್ ಅಸೋಸಿಯೇಶನ್, ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲ್ ಅಸೋಸಿ ಯೇಶನ್ ಇನ್ನಿತರ ಸಂಘಟನೆಗಳಿಂದ ಸಹಿತ ರಾಜ್ಯದ ವಿವಿಧ ನಗರಗಳು, ಜಿಲ್ಲೆಗಳು, ಪಟ್ಟಣಗಳಲ್ಲೂ ಪ್ರತಿಭಟನೆಯ ಬಿಸಿ ತಟ್ಟಿದೆ.
ಒಗ್ಗಟ್ಟಿನ ಮಂತ್ರ ಜಪಿಸಿದ ಹೊಟೇಲಿಗರು :
ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದ ಹೊಟೇಲ್ ಉದ್ಯಮವು ಪ್ರಸ್ತುತ ವರ್ಷದ ಮೂರು ತಿಂಗಳಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣುವ ಷ್ಟರಲ್ಲೇ ರಾಜ್ಯ ಸರಕಾರ ಮತ್ತೂಮ್ಮೆ ಲಾಕ್‌ಡೌನ್ ಘೋಷಿಸಿರುವುದರಿಂದ ರಾಜ್ಯದ ಹೊಟೇಲ್ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಲು ನಿರ್ಧರಿಸಿವೆ. ಈ ಸಂಬಂಧ ನಗರದ ಪ್ರಮುಖ ಹೊಟೇಲ್ ಸಂಘಟನೆಗಳಾದ ಆಹಾರ್, ಹೊಟೇಲ್ ಆ್ಯಂಡ್ ರೆಸ್ಟೋ ರೆಂಟ್ ಅಸೋಸಿಯೇಶನ್ ಆಫ್ ವೆಸ್ಟರ್ನ್ ಇಂಡಿಯಾ, ನ್ಯಾಶನಲ್ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಘಟನೆಗಳು ಒಂದಾಗಿ ಎ. 5ರಂದು ನಗರದ ಟ್ರೈಡೆಂಟ್ ಹೊಟೇಲ್‌ನಲ್ಲಿ ಸಭೆ ನಡೆಸಿದ್ದು, ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಹೋರಾಟ ನಡೆಸಲು “ಯುನೈಟೆಡ್ ಹಾಸ್ಪಿಟಾಲಿಟಿ ಫೋರಂ ಆಫ್ ಮಹಾರಾಷ್ಟ್ರ’ ಎಂಬ ನೂತನ ಸಂಘಟನೆಯೊಂದನ್ನು ಸ್ಥಾಪಿಸಿವೆ.
ರಾಜ್ಯದ ಎಲ್ಲ ಹೊಟೇಲ್ ಸಂಘಟನೆಗಳ ಬಲ :
ನಗರದ ಹೊಟೇಲಿಗರ ಪ್ರಮುಖ ಸಂಘಟನೆಯಾಗಿರುವ “ಆಹಾರ್’ ಸಂಘಟನೆಯು ಅಧ್ಯಕ್ಷ ಶಿವಾನಂದ ಶೆಟ್ಟಿ ನೇತೃತ್ವದಲ್ಲಿ ಮಹಾರಾಷ್ಟ್ರದ ಎಲ್ಲ ಹೊಟೇಲ್ ಸಂಘಟನೆಗಳನ್ನು ಒಗ್ಗೂಡಿಸಿ ಎ. 6ರಂದು ಬಂಟರ ಸಂಘದಲ್ಲಿ ಸಭೆ ನಡೆಸಿದ್ದು, ವಿವಿಧ ನಗರಗಳ ಸುಮಾರು 25 ಹೊಟೇಲ್ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಗುರುವಾರದ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಿ ಯಶಸ್ಸನ್ನು ಕಂಡಿದ್ದಾರೆ. ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಹೊಟೇಲಿಗರು ಶೀಘ್ರದಲ್ಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ. ಹಲವು ಹೊಟೇಲ್ ಉದ್ಯಮಿಗಳು ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕರು-ಹೊಟೇಲಿಗರ ಸಮಸ್ಯೆಗಳಿಗೆ ಯಾರು ಹೊಣೆ :
ಸರಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹೊಟೇಲಿಗರು ವ್ಯವಹಾರ ನಡೆಸುತ್ತಿದ್ದರು. ಈ ಮಧ್ಯೆ ಏಕಾಏಕಿ ಮತ್ತೆ ಹೊಟೇಲ್‌ಗಳನ್ನು ಮುಚ್ಚುವಂತೆ ಸರಕಾರ ಆದೇಶಿಸಿರುವುದು ಹೊಟೇಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಲಾಕ್‌ಡೌನ್ ಮುನ್ನ ಹೊಟೇಲ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸರಕಾರ ಸಂವಹನ ನಡೆಸಿಲ್ಲ. ಹೊಟೇಲ್ ಕಾರ್ಮಿಕರಿಗೆ ವೇತನ, ಬಾಡಿಗೆ ಶುಲ್ಕ, ಲೈಸನ್ಸ್ ಶುಲ್ಕ ಭರಿಸುವುದು ಯಾರು ಎಂಬುದನ್ನು ಸರಕಾರ ಸೂಚಿಸಿಲ್ಲ. ಹಿಂದಿನ ಲಾಕ್‌ಡೌನ್ ಸಂದರ್ಭದಲ್ಲೂ ಹೊಟೇಲಿಗರು ಮತ್ತು ಕಾರ್ಮಿಕ ವರ್ಗಕ್ಕೆ ತುಂಬಾ ಅನ್ಯಾಯವಾಗಿದ್ದು, ಹಲವು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ತಿಳಿಸಿದ್ದಾರೆ.
ಸರಕಾರಿ ನೌಕರರಿಗೆ ವೇತನ ನೀಡಬೇಡಿ :
ಲಾಕ್‌ಡೌನ್ ಸಂದರ್ಭ ಹೊಟೇಲಿಗರಿಂದ ಎಲ್ಲ ರೀತಿಯ ಶುಲ್ಕಗಳನ್ನು ಸರಕಾರ ಕಡ್ಡಾಯವಾಗಿ ಪಡೆದು ಸರಕಾರಿ ನೌಕರರಿಗೆ ವೇತನ ನೀಡುತ್ತಿದೆ. ಸರಕಾರಿ ನೌಕರರ ವೇತನವನ್ನು 6-7 ತಿಂಗಳುಗಳ ಕಾಲ ನೀಡುವುದನ್ನು ನಿಲ್ಲಿಸಿ. ಆಗ ಅವರಿಗೂ ಲಾಕ್‌ಡೌನ್ ಕಷ್ಟ ಏನು ಎಂಬುವುದು ಅರಿವಾಗುತ್ತದೆ. ಕೊರೊನಾ ಹೆಸರಿನಲ್ಲಿ ಹೊಟೇಲ್ ಮತ್ತು ವ್ಯಾಪಾರಿ ವರ್ಗದವರ ಮೇಲೆ ದಬ್ಟಾಳಿಕೆ ನಡೆಸುವುದು ಸುಲಭವಾಗಿದೆ. ಕೊರೊನಾ ಬಗ್ಗೆ ನಮಗೂ ಭಯವಿದೆ. ನಾವು ಮನೆಯಲ್ಲಿದ್ದು ಕೊರೊನಾ ಚಿಕಿತ್ಸೆ ಪಡೆದಿದ್ದೇವೆ. ಒಂದು ಕಡೆ ಹೊಟೇಲಿಗರಿಗೆ ಸರಕಾರ ಯಾವುದೇ ರಿಯಾಯಿತಿ ನೀಡುವುದಿಲ್ಲ. ಇನ್ನೊಂದೆಡೆ ವ್ಯವಹಾರ ಮಾಡುವ ಹಕ್ಕನ್ನು ಕಸಿದುಕೊಳ್ಳುತ್ತಿರುವುದು ಅನ್ಯಾಯವಾಗಿದೆ ಎಂದು ಹೊಟೇಲ್ ಉದ್ಯಮಿ ಸಂತೋಷ್ ಪುತ್ರನ್ ಹೇಳಿದ್ದಾರೆ.
ಮಿಷನ್ ರೋಜಿ ರೋಟಿ ಅಭಿಯಾನ :
ಸರಕಾರದ ಮಲತಾಯಿ ಧೋರಣೆಯಿಂದ ಕೆಲಸ ಕಳೆದುಕೊಂಡಿರುವ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹಿಂದಿರುಗಲು ಪ್ರಾರಂಭಿಸಿದ್ದು, ಇದು 2020ರ ಪುನರಾವರ್ತನೆಯಾದಂತಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಗ್ರಾಮಗಳಿಗೆ ಹಿಂದಿರುಗುತ್ತಿದ್ದಾರೆ. ಹೊಟೇಲಿಗರು ಕಾರ್ಮಿಕರಿಗೆ ಮನೆ ಮತ್ತು ನಿಯಮಿತ ವೇತನ ನೀಡುವ ಸ್ಥಿತಿಯಲ್ಲಿಲ್ಲ. ಕಳೆದ ವರ್ಷ ಏಳು ತಿಂಗಳ ಲಾಕ್‌ಡೌನ್ ಬಳಿಕ ಅನೇಕ ಹೊಟೇಲಿಗರು ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಸಾಲ ಪಡೆದಿದ್ದು, ಅದನ್ನು ಮರುಪಾವತಿ ಮಾಡಲು ಹರಸಾಹಸ ಪಡುವುದರೊಂದಿಗೆ ಈ ವರೆಗೆ 15ಕ್ಕೂ ಹೆಚ್ಚು ಹೊಟೇಲ್ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಸ್ತುತ ಹೊಟೇಲ್ ಉದ್ಯಮವನ್ನು ಉಳಿಸಲು “ಯುನೈಟೆಡ್ ಹಾಸ್ಪಿಟಾಲಿಟಿ ಫೋರಂ ಆಫ್ ಮಹಾರಾಷ್ಟ್ರ’ ಸಂಘಟನೆಯು “ಮಿಷನ್ ರೋಜಿ ರೋಟಿ ಅಭಿಯಾನ’ ವನ್ನು ಪ್ರಾರಂಭಿಸಲು ಮುಂದಾಗಿದೆ.
ಹೊಟೇಲ್ ಉದ್ಯಮಿ ಮೇಲೆ ಪೊಲೀಸರ ಹಲ್ಲೆಗೆ ಖಂಡನೆ :
ಮಂಗಳವಾರ ದಹಿಸರ್ ಪೂರ್ವದ ಹನುಮಾನ್ ಹೊಟೇಲ್‌ಗೆ ನುಗ್ಗಿ ಹೊಟೇಲ್ ಮಾಲಕ ಧೀರಾಜ್ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆಗೈದ ಪಾನಮತ್ತ ಪೋಲಿಸ್ ಜಗ್‌ತಪ್ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ್ ಆಗ್ರಹಿಸಿದೆ. ವಲಯ 10ರ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಮತ್ತು ಮಾಜಿ ಕಾರ್ಯಾಧ್ಯಕ್ಷರಾದ ಎರ್ಮಾಳ್ ಹರೀಶ್ ಶೆಟ್ಟಿ ಮತ್ತು ರವೀಂದ್ರ ಎಸ್. ಶೆಟ್ಟಿ ನಿಯೋಗವು ಜಿಲ್ಲಾಧಿಕಾರಿ ಮಿಲಿಂದ್ ಬೋರೆಕರ್, ಹೆಚ್ಚುವರಿ ಪೋಲಿಸ್ ಆಯುಕ್ತ ದಿಲೀಪ್ ಸಾವಂತ್, ವಲಯ 12ರ ಉಪ ಪೋಲಿಸ್ ಆಯುಕ್ತ ಡಿ.ಎಸ್. ಸ್ವಾಮಿ ಇವರಿಗೆ ಮನವಿ ಸಲ್ಲಿಸಿದೆ. ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ, ಶಾಸಕ ಸುನೀಲ್ ರಾಣೆ ಇವರು ಹೊಟೇಲ್ ಮಾಲಕರ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ. ಸಮವಸ್ತ್ರವಿಲ್ಲದೆ ಜಗ್‌ತಪ್ ಹೊಟೇಲ್‌ನ ಶಟರ್ ಮೇಲೆತ್ತಿ ಏಕಾಏಕಿ ಒಳನುಗ್ಗಿ ಮಾಲಕನ ಕಾಲರ್‌ಪಟ್ಟಿ ಹಿಡಿದು ಹೊರಕ್ಕೆಳೆದು ಕಪಾಳಮೋಕ್ಷ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.