ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ: ದಶಮಾನೋತ್ಸವ ಸಂಭ್ರಮ
Team Udayavani, Aug 24, 2018, 4:26 PM IST
ಮುಂಬಯಿ: ಜವಾಬ್ದಾರಿಯುತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ವಾಸ್ತವವನ್ನು ಮರೆಯದೆ ಸಾಮಾಜಿಕ ಜ್ವಲಂತ ಸಮಸ್ಯೆಗಳನ್ನು ಹೊರತರುವ ಕೆಲಸ ಮಾಡಬೇಕು. ಹಣಬಲ ಮತ್ತು ತೋಳ್ಬಲಗಳ ಪ್ರಭಾವದ ಸಂದಿಗ್ಧತೆಯ ನಡುವೆ ಪತ್ರಕರ್ತರು ವೃತ್ತಿಯನ್ನು ಪರಿಪಾಲಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಮಾಜದಲ್ಲಿನ ಅಂಕು- ಡೊಂಕುಗಳನ್ನು ಜನರ ಹಾಗೂ ಸರಕಾರದ ಮುಂದಿಡಲು ಪತ್ರಕರ್ತರಿದ ಮಾತ್ರ ಸಾಧ್ಯ ಎಂದು ಬೊರಿವಲಿ ಕ್ಷೇತ್ರದ ಸಂಸದ ಗೋಪಾಲ್ ಶೆಟ್ಟಿ ಅವರು ನುಡಿದರು.
ಆ. 22 ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ದಶಮಾ ನೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಪ್ರಾಂತೀಯ ಭಾಷೆಗಳ ಮೇಲೆ ಪಾಶ್ಚಾಮಾತ್ಯ ಭಾಷೆಗಳ ಸವಾರಿ ಮಹತ್ತರ ಪ್ರಭಾವ ಬೀರುತ್ತಿದೆ. ಸ್ಥಳೀಯ ಭಾಷೆಗಳು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ, ಸಂಸ್ಕಾರ, ಚದಾಚಾರಗಳು ಉಳಿದೀತು. ಇದನ್ನು ಸಂರಕ್ಷಿಸುವಲ್ಲಿ ವಿವಿಧ ಭಾಷೆಗಳ ಪತ್ರಕರ್ತರು ಸಂಘಟನೆಯ ಮೂಲಕ ಮುಂದಾಗಬೇಕು ಎಂದರು.
ದಶಮಾನೋತ್ಸವವನ್ನು ಉದ್ಘಾಟಿ ಸಿದ ಸಮಾಜ ಸೇವಕ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ಅವರು ಮಾತನಾಡಿ, ಮಹಾರಾಷ್ಟ್ರ ರಾಜ್ಯದ ಕರ್ಜತ್ ಕುಗ್ರಾಮದಲ್ಲಿನ ಆದಿವಾಸಿ ಮಕ್ಕಳ ಕಷ್ಟ -ಕಾರ್ಪಣ್ಯ ಮತ್ತು ಅದರ ಅಭಿವೃದ್ಧಿಗಾಗಿ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ನನ್ನ ನಿರ್ಧಾರ ಸ್ಥಳೀಯ ಮರಾಠಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದರಿಂದ ಅನುದಾನದ ಮಹಾಪೂರ ಹರಿದು ಬಂತು. ರಚನಾತ್ಮಕ ಕಾರ್ಯದೊಂದಿಗೆ ಪತ್ರಿಕಾ ಮಾಧ್ಯಮಗಳು ಸೇರಿಕೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಚದುರಿದ ಕನ್ನಡಿಗರನ್ನು ಒಂದೇ ಸೂರಿನಡಿ ಸಂಘಟಿಸುವ ಕಾರ್ಯ ವನ್ನು ಮುಂಬಯಿ ಪತ್ರಿಕೆಗಳು ಮಾಡಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯ ಮಹಾ ಸೇತುವೆ ದಶಮಾನೋತ್ಸವದಲ್ಲಿ ಅನಾವರಣ ಗೊಂಡಿದೆ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್. ಪೂಜಾರಿ ನುಡಿದರು.
ಪತ್ರಕರ್ತರ ಸಮ್ಮೇಳನದ ಮುಖಾಂ ತರ ಮೂಲಕ ರಾಷ್ಟ್ರೀಯ ಗಮನ ಸೆಳೆದ ಮುಂಬಯಿ ಪತ್ರಕರ್ತರು ಅಸಾಧಾರಣ ಸಾಧಕರಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಅವರು ಹೇಳಿದರು.
ಅತಿಥಿಗಳಾಗಿ ಪಾಲ್ಗೊಂಡ ಆರ್ಥಿಕ ತಜ್ಞ ಡಾ| ಆರ್.ಕೆ. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಮುಖ್ಯ ಸಲಹೆಗಾರ ಸಿಎ ಐ. ಆರ್. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಮಾತೃಭೂಮಿ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ, ಬಂಟರ ಸಂಘ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಅವರು ಮಾತನಾಡಿ ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಮುಂಬಯಿ ದಾನಿಗಳ ಅಭೂತಪೂರ್ವ ಸಹಕಾರದಿಂದ ಮುಂಬಯಿ ಪತ್ರಕರ್ತರ ಸಂಘ ಯಶಸ್ವಿಯಾಗಿ ದಶಮಾನೋತ್ಸವ ಆಚರಿಸುತ್ತಿದೆ. ದುಬಾರಿ ವೈದ್ಯಕೀಯ ವೆಚ್ಚಗಳಿಗೆ ಸಹಾಯ, ಅನ್ಯಾಯವಾದಾಗ ಪ್ರತಿಭಟನೆಯ ಮೂಲಕ ನ್ಯಾಯ ಒದಗಿಸಿದ ಆತ್ಮತೃಪ್ತಿ ನಮಗಿದೆ. ಸಂಸದ ಗೋಪಾಲ್ ಶೆಟ್ಟಿ ಅವರ ಆಶ್ವಾಸನೆಯಂತೆ ಪತ್ರಕರ್ತರ ವಸತಿ ಸೌಲಭ್ಯ ಶೀಘ್ರ ನೆರವೆರುವ ಭರವಸೆಯಿದೆ ಎಂದರು.
ಸಮಾರಂಭದಲ್ಲಿ ಹಿರಿಯ ಸಾಧಕರನ್ನು ಸಮ್ಮಾನಿಸಲಾಯಿತು. ಪ್ರಾರಂಭದಲ್ಲಿ ಪುತ್ತೂರಿನ ಪತ್ರಕರ್ತ ಡಾ| ಶಿವಾನಂದ ಅವರಿಂದ ವಿಚಾರ ಮಂಡನೆ ನಡೆಯಿತು.
ಗೌರವ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಸಂಸ್ಥೆಯ ಸಿದ್ಧಿ- ಸಾಧನೆ ಗಳನ್ನು ವಿವರಿಸಿದರು. ಕಲಾಸೌರಭದ ಪದ್ಮನಾಭ ಸಸಿಹಿತ್ಲು ಪ್ರಾರ್ಥನೆಗೈದರು. ಗೌರವ ಕೋಶಾಧಿಕಾರಿ ಪ್ರೇಮನಾಥ್ ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಶೋಕ ಪಕ್ಕಳ, ವಿಚಾರ ಮಂಡನೆಯನ್ನು ದಯಾಸಾಗರ್ ಚೌಟ, ಸಭಾ ಕಾರ್ಯಕ್ರಮವನ್ನು ಹರೀಶ್ ಹೆಜ್ಮಾಡಿ ನಿರೂಪಿಸಿದರು. ವೇದಿಕೆಯಲ್ಲಿ ಉದ್ಯಮಿ ರಘುರಾಮ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯಾ ಪೂಜಾರಿ, ಆಹ್ವಾನಿತ ಸದಸ್ಯ ಸುರೇಶ್ ಶೆಟ್ಟಿ ಯೆಯ್ನಾಡಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಡಾ| ಶಿವ ಮೂಡಿಗೆರೆ ಮತ್ತಿರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ಪತ್ರಕರ್ತರಿಂದ ಮಹಿಷಾಸುರ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು.
ಗುರಿ ಹಾಗೂ ನಿಯಮದೊಂದಿಗೆ ದುಡಿಯುವ ಪತ್ರಕರ್ತರಿಗೆ ಎಲ್ಲರನ್ನು ಖುಷಿ ಪಡಿಸಲು ಸಾಧ್ಯವಿಲ್ಲ. ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ಸುದ್ದಿಗಳಿಂದ ಸಮಾಜ ಶುದ್ಧೀಕರಣವಾಗುತ್ತದೆ.
– ಕೆ. ಎಂ. ಶೆಟ್ಟಿ, ಕಾರ್ಯಾಧ್ಯಕ್ಷರು, ವಿ. ಕೆ. ಸಮೂಹ ಮುಂಬಯಿ
ಕನ್ನಡ ಭಾಷೆ, ಸಂಸ್ಕೃತಿ ವಿವಿಧ ಕಲಾಪ್ರಕಾರಗಳನ್ನು ಮುಂಬಯಿ ಪತ್ರಕರ್ತರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇವರ ಜನ ಸೇವೆಗೆ ಬಂಟರ ಸಂಘದ ಪೂರ್ಣ ಸಹಕಾರ ಇದೆ.
– ಚಂದ್ರಹಾಸ ಶೆಟ್ಟಿ,
ಉಪಾಧ್ಯಕ್ಷರು, ಬಂಟರ ಸಂಘ ಮುಂಬಯಿ
ರಕ್ತಪಾತವಿಲ್ಲದೆ ಹರಿತವಾದ ಲೇಖನಿಯ ಮೂಲಕ ಸರಕಾರವನ್ನು ಎಚ್ಚರಿಸುವ ಪತ್ರಕರ್ತರು ಸಮಾಜಮುಖೀ ಚಿಂತಕರು.
-ಕಡಂದಲೆ ಸುರೇಶ್ ಭಂಡಾರಿ, ಸ್ಥಾಪಕಾಧ್ಯಕ್ಷರು, ಭಂಡಾರಿ ಮಹಾಮಂಡಲ
ಹೊಟೇಲ್ ಉದ್ಯಮ, ರಾತ್ರಿಶಾಲೆಗಳು, ಕನ್ನಡ ಪತ್ರಿಕೋದ್ಯಮ ಮತ್ತು ಕನ್ನಡ ಸಂಸ್ಥೆಗಳು ಶತಮಾನಗಳಿಂದಲೂ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಕೆಗಾಗಿ ಮಹತ್ತರ ಯೋಗದಾನ ನೀಡಿದೆ.
– ಡಾ| ಜಿ. ಎನ್. ಉಪಾಧ್ಯ,
ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.