ಸೇಬಿನ ಮರದ ಕಥೆ ಹೇಳುವ ಪುಟ್ಟ ಪಟ್ಟಣ
ಗ್ರಾಂಥಮ್‌ನಲ್ಲಿದೆ ಐಸಾಕ್ ನ್ಯೂಟನ್‌ನ ಸಂಶೋಧನೆಯ ಕುರುಹು
Team Udayavani, Dec 12, 2020, 4:22 PM IST
ಭೌತಶಾಸ್ತ್ರಜ್ಞ, ಗಣಿತಜ್ಞ ಐಸಾಕ್ ನ್ಯೂಟನ್ ಬಗ್ಗೆ ಎಲ್ಲರಿಗೂ ಗೊತ್ತು. ಆತ ಸೇಬಿನ ಮರದ ಬುಡದಲ್ಲಿ ಕುಳಿತಿದ್ದಾಗ ತಲೆ ಮೇಲೆ ಬಿದ್ದ ಸೇಬಿನ ಕಾರಣವನ್ನು ಸಂಶೋಧನೆಯಿಂದ ಪತ್ತೆ ಹಚ್ಚಿ ಜಗತ್ತಿಗೆ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಪರಿಚಯಿಸಿರುವ ಬಗ್ಗೆ ಖಂಡಿತಾ ಎಲ್ಲರೂ ಓದಿರುತ್ತೇವೆ, ಕೇಳಿರುತ್ತೇವೆ. ಐಸಾಕ್ ನ್ಯೂಟನ್ ಈಗಿಲ್ಲ. ಆದರೆ ಆ ಸೇಬಿನ ಮರ, ಆತ ಹುಟ್ಟಿ ಬೆಳೆದ ಮನೆ ಇವತ್ತಿಗೂ ಇಂಗ್ಲೆಂಡ್‌ನಲ್ಲಿ ಆಕರ್ಷಣೆಯ ತಾಣವಾಗಿ ಉಳಿದಿದೆ.
ಜಗತ್ತಿನ ಮೂಲೆಮೂಲೆಯಿಂದ ಸಾವಿರಾರು ಸಂಶೋಧಕ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. 400 ವರ್ಷಗಳ ಆ ಸೇಬಿನ ಮರ ಹೇಗೆ ಉಳಿಯಲು ಸಾಧ್ಯ? ಇದು ಪಾವಡವೇ ಅಥವಾ ವಿಜ್ಞಾನಿಯೋರ್ವನ ಜೀವನದ ಭಾಗವನ್ನು ಜೀವಂತವಾಗಿಟ್ಟಿರುವುದು ವಿಜ್ಞಾನವೇ ಎನ್ನುವ ಕೌತುಕವೂ ಇದರಲ್ಲಿದೆ.
400 ವರ್ಷಗಳ ಹಿಂದಿನ ಈ ಮರವನ್ನು ನೋಡಬೇಕಾದರೆ ಇಂಗ್ಲೆಂಡ್ ದೇಶದ ಗ್ರಾಂಥಮ್ ಎನ್ನುವ ಪುಟ್ಟ ವಾಣಿಜ್ಯ ಪಟ್ಟದ ಸಮೀಪವಿರುವ “ವೂಲ್ಸ್ ತೋರ್ಪ್’ ಕುರುಬರ ಹಳ್ಳಿಗೆ ಬರಬೇಕು. ಈ ತಾಣ, ವಿಜ್ಞಾನಿಯ ಮನೆ ಮತ್ತು ಆ ಸೇಬಿನ ಮರ ವಿಜ್ಞಾನ ಬೆಳೆದ ಚರಿತ್ರೆಯ ಭಾಗವಾಗಿ ಉಳಿದಿದೆ. ಇದರೊಂದಿಗೆ ಪ್ರಪಂಚದ ಎಲ್ಲ ವೈಜ್ಞಾನಿಕ ಪ್ರಗತಿಗಳೂ ಮಿಳಿತವಾಗಿವೆ. ಬ್ರಿಟನ್ನಿಗರ ಇತಿಹಾಸ ಉಳಿಸಿ, ಕಾಪಾಡುವ ಪರಿಪಾಟಕ್ಕೆ ಈ ಮರ ಸಾಕ್ಷಿಯಾಗಿ ನಿಂತಿದೆ.
ಕ್ರಿಸ್ಮಸ್ ದಿನ ಹುಟ್ಟಿದ ಐಸಾಕ್‌ನ ತಂದೆ ಹೆಸರು ಐಸಾಕ್ ನ್ಯೂಟನ್, ತಾಯಿ ಹಾನ್ನಾ. ಐಸಾಕ್ ಹುಟ್ಟುವ ಎರಡು ತಿಂಗಳು ಮೊದಲೇ ತಂದೆ ಅಸುನೀಗಿದ. ಅದೇ ಕಾರಣಕ್ಕೆ ತಾಯಿ ಗಂಡನ ಹೆಸರನ್ನೇ ಮಗನಿಗೆ ಇಡುತ್ತಾಳೆ.
ಕುರಿಸಾಕಾಣಿಕೆ, ನೆಲ ಉಳುಮೆ ಜತೆಗೆ ಮಗನ ಪೋಷಣೆ ಜವಾಬ್ದಾರಿ ಹೊತ್ತ ಹನ್ನಾ ಮೂರು ವರ್ಷದವರೆಗೆ ಮನಗನ್ನು ಬೆಳೆಸಿ ಬಳಿಕ ತಾತನ ಸುಪರ್ದಿಗೆ ಆತನನ್ನು ಒಪ್ಪಿಸಿ ಮರು ಮದುವೆಯಾಗಿ ಹೊರಡುತ್ತಾಳೆ. ಮಗನನ್ನು ತ್ಯಜಿಸಿ ಬರಬೇಕು ಎನ್ನುವುದು ಮದುವೆಯ ಕರಾರು ಕೂಡ ಆಗಿತ್ತು ಎನ್ನಲಾಗಿದೆ. ಇಲ್ಲಿಂದ ಮುಂದೆ ಐಸಾಕ್‌ನಿಗೆ ಸಿಕ್ಕಿದ್ದು ಚಿಕ್ಕಪ್ಪನ ಮಾರ್ಗದರ್ಶನ ಮತ್ತು ತಾತನ ಪ್ರೀತಿ.
ಐಸಾಕ್ ಅಸಾಧಾರಣ ಬುದ್ಧಿವಂತ. ಮೊದಲು ಗ್ರಾಂಥಮ್ ಎಂಬ ಹತ್ತಿರದ ಪಟ್ಟಣದ ಕಿಂಗ್ಸ್ ಶಾಲೆಯಲ್ಲಿ ಹೈಸ್ಕೂಲ್ ಮುಗಿಸಿದ. ಈತನ ಅಸಾಧಾರಣ ಬುದ್ಧಿಮತ್ತೆ ಕೆಲವರಿಗೆ ಅರ್ಥವಾಗದೆ ಆತನಿಗೆ ಆಟಿಸಂ ಇದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವನು ಮುಂದಿನ ವಿದ್ಯಾಭ್ಯಾಸಕ್ಕೆ ಹೋದದ್ದು ಪ್ರಸಿದ್ಧ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿಗೆ. ಆದರೆ 1665ರಲ್ಲಿ ದೇಶದೆಲ್ಲೆಡೆ ಪ್ಲೇಗ್ ಕಾಣಿಸಿಕೊಂಡು ಈಗೀನ ಲಾಕ್‌ಡೌನ್‌ನಂತೆ ಎಲ್ಲವೂ ಮುಚ್ಚಿಹೋಯಿತು. ಐಸಾಕ್ ಓದು ನಿಲ್ಲಿಸಿ ಮನೆಗೆ ಬರಬೇಕಾಯ್ತು. ಹಳ್ಳಿಯ ಈ ಮನೆಯಲ್ಲಿ ಕಳೆವ ಬಿಡುವಿನ ವೇಳೆಯಲ್ಲಿ ಈತ ತನ್ನ ಕುಟುಂಬಕ್ಕೆ ಸಂಬಂಧವಿಲ್ಲದ ಗಣಿತ ಮತ್ತು ಭೌತ ಶಾಸ್ತ್ರದಲ್ಲಿ ಹಲವು ಪ್ರಯೋಗಗಳನ್ನು ನಡೆಸಿದ. ಈ ಕುರುಬರ ಮಗನೊಬ್ಬ ಮಾಡಿದ ಅದ್ಭುತ ಆವಿಷ್ಕಾರಗಳು ಹಲವು. ಹಾಗಾಗಿ ಆ ವರ್ಷ ಅಂದರೆ 1966 ನ್ನು “ಆನ್ನಸ್ ಮಿರಬುಲಿಸ್’ ಅರ್ಥಾತ್ ಅದ್ಭುತ ವರ್ಷವೆಂದೇ ಆತ ವರ್ಣಿಸುತ್ತಾನೆ.
ಐಸಾಕ್ ಇದ್ದದ್ದು ಸಣ್ಣ ಮನೆಯಲ್ಲಿ. ಈತನ ಕೊಠಡಿಯಲ್ಲಿದ್ದ ಸಣ್ಣ ಕಿಟಕಿಯಿಂದ ಹಾದು ಬಂದ ಬೆಳಕನ್ನು ಬಳಸಿ ಬೆಳಕಿನ ಬಣ್ಣ ಮತ್ತು ಬೆಳಕನ್ನು ಹೇಗೆ ನೇರವಾಗಿ ಹರಿಸಬಹುದು ಹಾಗೂ ಬೆಳಕಿಗೆ ಸಂಬಂಧಿಸಿದ ಹಲವು ಸಂಶೋಧನೆಗಳನ್ನು ನಡೆಸಿದ.
ಇಂಗ್ಲೆಂಡಿನಲ್ಲಿ ಬಹುಕಾಲ ಚಳಿಯ ವಾತಾವರಣವೇ ಇರುತ್ತದೆ. ಸೂರ್ಯನ ಬೆಳಕು ಬಹಳ ಕಡಿಮೆ. ಐಸಾಕ್ ನ್ಯೂಟನ್‌ನ ಕೋಣೆಗಿದ್ದ ಕಿಟಕಿಗಳು ಕೂಡ ಅತಿ ಸಣ್ಣವು. ಅಲ್ಲಿಂದ ಹೊರಗೆ ನೋಡಿದರೆ ಸಣ್ಣ ವನ. ಇಷ್ಟು ಬಿಟ್ಟರ ಅಲ್ಲಿ ಆತನ ಮೆದುಳನ್ನು ಪ್ರಚೋದಿಸುವ ಯಾವ ವಸ್ತುಗಳೂ ಇಲ್ಲ. ಅವನಿಗೆ ಹೆಚ್ಚು ಗೆಳೆಯರೂ ಇರಲಿಲ್ಲ ಎನ್ನಲಾಗಿದೆ.
ಅವನು ಗೋಡೆಯ ಮೇಲೆ ಮೂಡಿಸಿದ ಚಿತ್ರಗಳು, ಗಣಿತದ ಸೂತ್ರಗಳನ್ನೂ ಇಲ್ಲಿ ರಕ್ಷಿಸಿಡಲಾಗಿದೆ. ಆತ ಬರೆದ ಇಂಗ್ಲಿಷ್- ಲ್ಯಾಟಿನ್ ಭಾಷೆಯ ಹಸ್ತಾಕ್ಷರವೂ ಇಲ್ಲಿದೆ.
ಈ ಮನೆಯ ಮುಂದಿದ್ದ ವನದಲ್ಲಿ ಹಲವು ಸೇಬಿನ ಮರಗಳಿದ್ದವು. ಈಗಲೂ ಇಲ್ಲಿ ಸೇಬಿನ ಮರಗಳನ್ನು ಮತ್ತೆ ನೆಟ್ಟು ಬೆಳೆಸಿ¨ªಾರೆ. ಇವುಗಳಲ್ಲಿ ಕೆಲವು ಮರಗಳು ಬಿಡುವ ಹಣ್ಣುಗಳು ನೇರ ತಿನ್ನಲು ಯೋಗ್ಯವಲ್ಲ. ಇವನ್ನು ಬೇಯಿಸಿ ಖಾದ್ಯಗಳಲ್ಲಿ ಬಳಸಬಹುದು. ಅಂತಹ ಒಂದು ಸೇಬಿನ ಮರದ ಕೆಳಗೆ ವಿಶ್ರಾಂತಿ ಪಡೆಯುತಿದ್ದ ಐಸಾಕ್‌ನ ಮೇಲೆ ಹಣ್ಣೊಂದು ಬಿತ್ತು. ಈ ಘಟನೆಯ ಹಿಂದೆಯೇ ಸೇಬಿನ ಹಣ್ಣು ಮತ್ತು ಮೇಲಕ್ಕೆ ಎಸೆದ ವಸ್ತುಗಳು ನೇರ ಭೂಮಿಯ ಕಡೆಗೆ ಯಾಕೆ ಬೀಳುತ್ತವೆ ಎಂಬ ಪ್ರಶ್ನೆ ಹುಟ್ಟಿ, ಹೊಸ ವಿಚಾರಗಳು ಹೊಳೆದದ್ದೇ ಗುರುತ್ವಾಕರ್ಷಣೆಯ ಸಂಶೋಧನೆಗೆ ಕಾರಣವಾಯ್ತು ಎನ್ನಲಾಗಿದೆ. ನೂರಾರು ವರ್ಷಗಳ ಹಿಂದೆ ನಡೆದ ಘಟನೆಯಾದ ಕಾರಣ ಈ ಬಗ್ಗೆ ಎಲ್ಲಿಯೂ ನಿಖರ ದಾಖಲೆಗಳಿಲ್ಲ.
ನ್ಯೂಟನ್ ಓದುತ್ತಿದ್ದಾಗ ಯೂನಿವರ್ಸಿಟಿಯಲ್ಲಿ ತನ್ನ ಸಹೋದ್ಯೋಗಿಯೊಬ್ಬರೊಡನೆ ಹೇಗೆ ತನ್ನ ಮನೆಯ ಮುಂದಿನ ಸೇಬಿನ ಮರ ಗುರುತ್ವಾಕರ್ಷಣ ಶಕ್ತಿಯ ಬಗೆಗಿನ ಸಂಶೋಧನೆಗೆ ಕಾರಣವಾಯಿತು ಎಂದು ಹೇಳುವುದನ್ನು ಕೇಳಿಸಿಕೊಂಡ ಇತರರು ಈ ಸೇಬಿನ ಮರ ಪ್ರಸಿದ್ಧಿಗೆ ನಾಂದಿ ಹಾಡಿದರು.
ಐಸಾಕ್‌ನ ಸೇಬಿನ ಮರ
400 ವರ್ಷ ಬದುಕಿದ್ದು ಹೇಗೆ ?
ಸಾಮಾನ್ಯವಾಗಿ ಸೇಬಿನ ಮರಗಳು ನೂರು ವರ್ಷ ಬದುಕಬಲ್ಲವು. ವಾತಾವರಣದಲ್ಲಿ ಏರು ಪೇರಾದರೆ ಅದಕ್ಕೂ ಕಡಿಮೆ. ಇತ್ತೀಚೆಗೆ ಇಂಗ್ಲೆಂಡಿನಲ್ಲಿ 200 ವರ್ಷಗಳ ಕಾಲ ಬದುಕಿದ ಬ್ರಾಮ್ಲಿ ಎನ್ನುವ ತಳಿಯ ಸೇಬಿನ ಮರ ಅತಿ ಹಳೆಯ ಮರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಂದರೆ ಸೇಬಿನ ಮರದ ತಳಿಗಳ ಆಧಾರದಲ್ಲಿ ಅವುಗಳ ಆಯಸ್ಸನ್ನು ನಿರ್ಧರಿಸುತ್ತಾರೆ.
ಕೆಲವೊಮ್ಮೆ ಬದುಕನ್ನು ನಾಶ ಮಾಡುವ ಹೊಡೆತಗಳು ಹೊಸ ಬದುಕಿಗೆ ನಾಂದಿಯಾಗುತ್ತದೆ. ಈ ಮರಕ್ಕೂ ಆದದ್ದು ಅದೇ. ಗುರುತ್ವಾಕರ್ಷಣೆಯ ಸಂಶೋಧನೆಗೆ ಕಾರಣವಾದ ಈ ಸೇಬಿನ ಮರ, ಮರುವರ್ಷವೇ ಸಿಡಿಲಿಗೆ ತುತ್ತಾಗಿ ನೆಲಸಮವಾಯ್ತು. ಆದರೆ ಸಂಪೂರ್ಣ ಸಾಯಲಿಲ್ಲ. ಕಲಾವಿದನೊಬ್ಬ ಆ ಕಾಲದಲ್ಲಿ ಸಿಡಿಲ ಹೊಡೆತಕ್ಕೆ ತುತ್ತಾದ ಈ ಮರದ ಯಥಾವತ್ ಚಿತ್ರಣವನ್ನು ಮಾಡಿ ಚರಿತ್ರೆಯಲ್ಲಿ ದಾಖಲಿಸಿದ್ದಾನೆ. ಆಗಲೇ ಈ ಮರ ಸತ್ತಿತ್ತೆಂದೇ ಎಲ್ಲರೂ ಭಾವಿಸಿದರು. ಆದರೆ ಮರು ವಸಂತದಲ್ಲಿ, ಒಂದೆರಡು ಟೊಂಗೆಗಳು ಇನ್ನೂ ಜೀವಂತವಿದ್ದ ಬೇರುಗಳ ಮೂಲಕ ಟಿಸಿಲೊಡೆದವು. ಅದೇ ಬೇರಿನಿಂದ ಹೊಸ ಮರದ ಸೃಷ್ಟಿಯಾಯ್ತು. ನೆಲಕ್ಕೆ ಬಾಗಿ ಓರೆಕೋರೆಯಾಗಿ ಬೆಳೆದಿರುವ ಟೊಂಗೆಯನ್ನು ಈ ಮರದ ಬುಡದಲ್ಲಿ ಈಗಲೂ ನೋಡಬಹುದು. ಇದಕ್ಕೆ ಕವೆ ಕೋಲಿನ ಆಧಾರ ನೀಡಿ ಮರವಾಗಲು ಸಹಕರಿಸಲಾಗಿದೆ.
ಅಲ್ಲಿಂದ ಮುಂದೆ ಈ ಮರವನ್ನು ಕಾಪಾಡುವ ಎಲ್ಲ ಪ್ರಯತ್ನಗಳು ನಡೆದಿವೆ. ನೆಲ ಕಚ್ಚಿದ ಟೊಂಗೆಯ “ಕಾರ್ಬನ್ ಡೇಟಿಂಗ ಮತ್ತು ಡಿ.ಎನ್.ಎ. ಗಳ ಪ್ರಕಾರ ಈ ಮರದ ವಯಸ್ಸು ನಾಲ್ಕು ನೂರು ವರ್ಷಗಳಾಗಿರುವುದು ದೃಡಪಟ್ಟಿದೆ. ಈ ಸೇಬಿನ ಮರಕ್ಕೆ ಸಂದಿರುವ ಗೌರವ ಕಡಿಮೆಯಿಲ್ಲ. ಈ ಮರವನ್ನು ಇಂಗ್ಲೆಂಡ್ ದೇಶ ತನ್ನಹೆಮ್ಮೆಯ ಸ್ವತ್ತು ಎಂದು ಘೋಷಿಸಿಕೊಂಡಿದೆ.
ಬಾಹ್ಯಾಕಾಶದಲ್ಲಿ ಸೇಬಿನ
ಮರದ ಬೀಜಗಳು
ಈ ಮರದ ಬೀಜಗಳನ್ನು ಐಸಾಕ್ ನ್ಯೂಟನ್‌ನ ಗೌರವಾರ್ಥ ಇತ್ತೀಚೆಗೆ ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಲ್ಲಿ 6 ತಿಂಗಳ ಕಾಲ ಗಗನಯಾತ್ರಿ ಟಿಮ್ ಪೀಕ್‌ನೊಡನೆ ಕಳಿಸಿಕೊಡಲಾಯ್ತು. ಆರು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ಈ ಬೀಜಗಳಲ್ಲಿ ಏನಾದರೂ ಬದಲಾವಣೆಗಳಾಗಿರಬಹುದೇ ಎಂಬ ಸಂಶೋಧನೆ ಈಗ ನಡೆಯುತ್ತಿದೆ.
ಬುಡದ ಸುತ್ತ 2 ಅಡಿಗಳ ಬಿದಿರ ಬೇಲಿ ನಿರ್ಮಿಸಿ, ಈ ಮರವನ್ನು ಮುಟ್ಟದಂತೆ, ಎಲೆ ಕಾಯಿಗಳನ್ನು ಕೀಳದಂತೆ ಫಲಕ ಹಾಕಿದ್ದಾರೆ. ಬೇಸಗೆಯ ಪ್ರತಿವಾರ ಸಾವಿರಾರು ಜನ ಈ ಮರದ ದರ್ಶನಕ್ಕೆ ಬರುತ್ತಾರೆ.
ಇಡೀ ಹಳ್ಳಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಯಾತ್ರಿಕರ ಸೌಕರ್ಯಗಳಿಗೆ ಅನುಕೂಲ ಕಲ್ಪಿಸಿ ಸ್ವತ್ಛವಾಗಿ ಸುಂದರವಾಗಿ ಉಳಿಸಲಾಗಿದೆ. ಈ ಸ್ಥಳದ ಪ್ರಶಾಂತತೆ ಮನಸ್ಸಿಗೆ ಮುದಕೊಡುತ್ತದೆ. ಇಡೀ ಪ್ರಪಂಚದ ದಾರ್ಶನಿಕರ ಮತ್ತು ವಿಜ್ಞಾನಿಗಳ ನಡುವೆ ಕ್ರಾಂತಿಯ ಆಂದೋಲನವನ್ನೇ ಮಾಡಿದ ಐಸಾಕ್ ನ್ಯೂಟನ್‌ನ ಮೆದುಳಿನ ಶಕ್ತಿಯ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.
400 ವರ್ಷ ಹಳೆಯ ಈ ಸೇಬಿನ ಮರದ ಡಿ.ಎನ್.ಎ. ಪಡೆದು ಸಂರಕ್ಷಿಸಲಾಗಿದೆ. ಮುಂದೆ ಪ್ರಕೃತಿಯ ವಿಕೋಪಕ್ಕೆ ಈ ಮರ ತುತ್ತಾದರೆ ಮತ್ತೆ ಅಲ್ಲಿ ಅದೇ ಮರವನ್ನು ಬೆಳೆಸಲಾಗುತ್ತದೆ.
ಜಗತ್ತಿನ ನಾನಾ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಈ ಮರದ ಕಸಿಯನ್ನು ಪಡೆದು ತಮ್ಮ ಕ್ಯಾಂಪಸ್‌ಗಳಲ್ಲಿ ಬೆಳೆಸಿ ವೈಜ್ಞಾನಿಕ ಚರಿತ್ರೆಯ ತುಣುಕುಗಳನ್ನು ಜಗತ್ತಿನಾದ್ಯಂತ ಹರಡಿದ್ದಾರೆ.
ಸಂಸ್ಥೆಯೊಂದು ಈ ಮನೆಯನ್ನು ಮತ್ತು ಸೇಬಿನ ಮರದ ಕಾಳಜಿಯನ್ನು ವಹಿಸಿಕೊಂಡಿದೆ. ಈ ಸ್ಥಳದ ಹಿರಿಮೆ ಅರಿತ ಹಿರಿಯರು, ಕಿರಿಯರು ಯಾವುದೇ ಶುಲ್ಕವಿಲ್ಲದೆ ಸಂದರ್ಶಕರಿಗೆ ವಿಜ್ಞಾನಿ ಮನೆಯ ಮತ್ತು ಸೇಬಿನ ಮರದ ಚರಿತ್ರೆಯನ್ನು ನಗುಮೊಗದಿಂದ ವಿವರಿಸುತ್ತಾರೆ. ಹಿಂದೆ ಈ ಮನೆಯ ಭಾಗವಾಗಿದ್ದ ಇನ್ನೊಂದು ಕಟ್ಟಡದಲ್ಲಿ ಐಸಾಕ್ ಕಂಡುಹಿಡಿದ ಹತ್ತು ಹಲವು ವೈಜ್ಞಾನಿಕ ಸಂಶೋಧನೆಗಳನ್ನು ಮುಟ್ಟಿ ನೋಡಿ, ಆಡಿ ಸಂತಸ ಪಡಲು ಮಾಡೆಲ್‌ಗಳನ್ನು ಮಾಡಲಾಗಿದೆ. ಸೇಬಿನ ಮರ ಮತ್ತು ಐಸಾಕ್ ಮನೆಯ ದರ್ಶನಕ್ಕೆ ಬರುವ ಜನರಿಗೆ ಪ್ರವೇಶ ಶುಲ್ಕವಿದೆ. ಮಕ್ಕಳಿಗೆ ಆಗಾಗ ಕ್ರೀಡೆಗಳನ್ನೂ ಏರ್ಪಡಿಸುತ್ತಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಸರಳ ಪ್ರಯೋಗಗಳ ಮಾದರಿಗಳನ್ನು ಇಡಲಾಗಿದೆ.
ಹತ್ತಿರದಲ್ಲೇ ಒಂದು ಸಣ್ಣ ರೆಸ್ಟೋರೆಂಟ್ ಇದ್ದು, ಇಲ್ಲಿ ಕುಳಿತು ಅರೆಕ್ಷಣ ಐಸಾಕ್ ನ್ಯೂಟನ್‌ನ ಸಾಧನೆಗಳನ್ನು ಮೆಲುಕುಹಾಕುತ್ತ ಅಲ್ಲಿನ ಖಾದ್ಯಗಳನ್ನು ಮೆಲ್ಲಬಹುದು.
ಈ ಇಡೀ ಸ್ಥಳದ ಸರಳತೆ ಬೆರಗು ಮೂಡಿಸುವಂತಿದೆ. ಹಚ್ಚಹಸುರಾಗಿ ನಗುವ ಈ ಸೇಬಿನ ಮರ ಎಲ್ಲದಕ್ಕೂ ಸಾಕ್ಷಿಯಾಗಿ ನಳ ನಳಿಸುತ್ತದೆ.
ಗ್ರಾಂಥಮ್ ನಗರದ ಪಾರ್ಕ್‌ನಲ್ಲಿ ಸೇಬುಹಣ್ಣನ್ನು ಹಿಡಿದಿರುವ ಶಿಲ್ಪವೊಂದನ್ನು ನಿರ್ಮಿಸಲಾಗಿದೆ. ಇದರಿಂದ ಮುನ್ನೂರು ಗಜದ ಅಳತೆಯಲ್ಲಿ ಐಸಾಕ್ ನ್ಯೂಟನ್ ಓದಿದ ಐದು ನೂರು ವರ್ಷ ಹಳೆಯ ‘ಕಿಂಗ್ಸ್ ಸ್ಕೂಲ್ ‘ ಶಾಲೆಯಿದೆ. ಅದು ಈ ನಗರದ ಜೀವಾಳವೂ ಹೌದು.
ಈ ನಗರ ಇಂಗ್ಲೆಂಡಿನ ಉಕ್ಕಿನ ಮಹಿಳೆ, ಪ್ರಥಮ ಮಹಿಳಾ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಹುಟ್ಟಿ ಬೆಳೆದ ಊರೂ ಹೌದು. ಪಟ್ಟಣ ಮಧ್ಯೆ ಇರುವ ಪುಟ್ಟ ಮ್ಯೂಸಿಯಂನಲ್ಲಿ ಈ ಸ್ಥಳದ ಚರಿತ್ರೆಯೊಂದಿಗೆ ಇವರಿಬ್ಬರ ಬಗ್ಗೆ ಹಲವು ವಸ್ತುಗಳ ಲಭ್ಯವಿವೆ.
– ಡಾ| ಪ್ರೇಮಲತಾ ಬಿ., ಇಂಗ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.