ಯಾವ ಮೋಹನ ಮುರಳಿ ಕರೆಯಿತು…
Team Udayavani, Jan 16, 2018, 2:49 PM IST
“ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನ್ನು….ನಿಜ ಕಣ್ರಿ ಎಲ್ಲಿಯ ಮಾರ್ನಾಡು…ಎಲ್ಲಿಯ ಮರಾಠಿ ಮಣ್ಣು…’ ಕವಿ ಅಡಿಗರ ಕವನದ ಮೇಲಿನ ಸಾಲುಗಳು ರಂಗಭೂಮಿಯ ಮೇರು ಪರ್ವತ ಮೋಹನ್ ಮಾರ್ನಾಡ್ ಅವರ ಸಿದ್ಧಿ-ಸಾಧನೆಗೆ ಒಪ್ಪ ಹಚ್ಚಿದಂತಿದೆ. ಅಮ್ಮನೊಂದಿಗೆ ಆಟ, ಕೋಲ, ನಾಟಕ, ಬಲಿ, ನೇಮಗಳಿಗೆ ಹೊರಡಲು ತುದಿಕಾಲಲ್ಲಿ ನಿಂತಿರುತ್ತಿದ್ದ ಮೋಹನರ ಬದುಕು ತಿರುವು ಪಡೆದದ್ದು ಮಾತ್ರ ಮಾಯಾನಗರಿಯ ತೆಕ್ಕೆಯೊಳಗೆ.
ಹನ್ನೊಂದರ ಹರೆಯದ ಪೋರ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲದೊಂದಿಗೆ ಹೆಗಲ ಮೇಲೊಂದು ಜೋಳಿಗೆಯನ್ನು ಹೊತ್ತು ಬಂದವರು. “ಒಟ್ಟೆ ಬಿದ್ದ ನಾಲ್ಕು ಚಡ್ಡಿ… ಶಾಲೆಯಲ್ಲಿ ಬರೆದು ಸವೆದು ಉಳಿದಿದ್ದ ಒಂದಿಷ್ಟು ಕಡ್ಡಿ…ಹರಕಲು ಬಟ್ಟೆ…ಅಮ್ಮನ ಆಶೀರ್ವಾದ ತುಂಬಿದ್ದ ಒಂದು ತೊಟ್ಟೆ… ಬೆಟ್ಟದಷ್ಟು ಕನಸನ್ನು ಕಣ್ಣಿನಲ್ಲಿ ತುಂಬಿಕೊಂಡು…’ ಭಾರವಾದ ಹೆಜ್ಜೆಗಳೊಂದಿಗೆ ಮೋಹನರ ಯಾತ್ರೆ ಸಾಗಿ ಬಂದದ್ದು ಈಗ ಇತಿಹಾಸ.
ಮಾಯಾನಗರಿ ಬಾಲ ಮೋಹನರ ಕಣ್ಣಿಗೆ ಮೊದ ಮೊದಲು ದಿಗ್ಭ್ರಮೆ ಹುಟ್ಟಿಸಿದೆ. ಮಾಯಾಜಾಲದೊಳಗೆ ಬಂದು ಸಿಕ್ಕಿಹಾಕಿಕೊಂಡಿರುವ ಅನುಭವವಾಗಿದೆ. ಎತ್ತ ನೋಡಿದರತ್ತ ಗಗನಚುಂಬಿ ಕಟ್ಟಡಗಳು, ವಿಸ್ತಾರ ರಸ್ತೆಗಳು, ರೈಲು-ಬಸ್‌ಗಳು, ಎಲ್ಲೆಲ್ಲೂ ಜನಜಂಗುಳಿ ಇವೆಲ್ಲವನ್ನು ಕಂಡು ಮೂಕಸ್ಮಿತರಾಗಿದ್ದರು. ಭಾಷೆಯೂ ಬಾರದಿದ್ದ ಸಂದಿಗ್ಧ ಪರಿಸ್ಥಿತಿಯು ಮತ್ತೆ ಮತ್ತೆ ಮಾರ್ನಾಡನ್ನು ನೆನಪಿಸುತ್ತಿತ್ತು. ಆದರೂ ಧೃತಿಗೆಡದೆ ಕಂಡ ಕನಸನ್ನು ನನಸಾಗಿಸಲು ಮನಸ್ಸಿನಲ್ಲೇ ದೃಢ ನಿರ್ಧಾರಗೈದು ಮುಂದಣ ಹೆಜ್ಜೆಯನ್ನಿಟ್ಟ ಪರಿಣಾಮ ಇಂದು ಮುಂಬಯಿ ರಂಗಭೂಮಿ ಕ್ಷೇತ್ರದಲ್ಲಿ “ಮಾರ್ನಾಡಿನ ಮುತ್ತೂಂದು ಪಳಪಳ’ ನೇ ಮಿನುಗುವಂತಾಗಿದೆ.
ಹಚ್ಚಹಸುರಿನ ನಿತ್ಯ ಹರಿದ್ವರ್ಣದ ಕಾಡುಗಳಿಂದ ಕಂಗೊ ಳಿಸುತ್ತಿರುವ ಮಾರ್ನಾಡು ಎಂಬ ಕುಗ್ರಾಮದಲ್ಲಿ ಹೊನ್ನಪ್ಪ ಶೆಟ್ಟಿ ಮತ್ತು ಸರಸ್ವತಿ ಶೆಟ್ಟಿ ದಂಪತಿಯ ಪುತ್ರರಾಗಿ 1962 ರಲ್ಲಿ ಜನಿಸಿದ ಮೋಹನರು ಮುಂಬಯಿಯಲ್ಲಿದ್ದುಕೊಂಡೇ ರಂಗಕರ್ಮಿಯಾದವರು. ಮುಂಬಯಿ ರಂಗಭೂಮಿ ಹಾಗೂ ರಂಗಶಿಕ್ಷಣದ ವಿದ್ಯಾರ್ಥಿಯಾಗಿ ಸೇರಿದ ಬಳಿಕ ಅವರಿಗೆ ದೊರೆತ ಸೈದ್ಧಾಂತಿಕತೆ, ಸಾತ್ವಿಕತೆ, ಬದ್ಧತೆ ಇತ್ಯಾದಿಗಳಿಂದ ಆದ ಪರಿಣಾಮದಿಂದಲೇ ಅವರ ಪ್ರಯೋಗಶೀಲತೆ, ಸೃಜನಶೀಲತೆ, ವಿಶೇಷತೆಗಳು ರಂಗದಲ್ಲಿ ಮೂಡಿಬರುವಂತಾಯಿತು.
ಪ್ರಾರಂಭದಲ್ಲಿ ಮೋಹನರು ಚರ್ಚ್‌ಗೇಟ್ ಸಮೀಪದ ಎಂಎಲ್‌ಎ ಕ್ಯಾಂಟಿಂನ್‌ನಲ್ಲಿ ಹಗಲಲ್ಲಿ ಉದ್ಯೋಗ ಪಡೆದು ರಾತ್ರಿಯ ಹೊತ್ತು ಫೋರ್ಟ್ ಬಜಾರ್‌ಗೆàಟ್‌ನಲ್ಲಿದ್ದ ಕರ್ನಾಟಕ ಫ್ರೀ ನೈಟ್ ಹೈಸ್ಕೂಲ್‌ನಲ್ಲಿ ಮೆಟ್ರಿಕ್ ಉತ್ತೀರ್ಣರಾದರು. ಹೊಟೇಲ್ ಕಾರ್ಮಿಕನಾಗಿದ್ದುಕೊಂಡೆ ಕನ್ನಡ ಭವನ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಸಿದ್ಧಾರ್ಥ್ ಕಾಲೇಜಿನಲ್ಲಿ ವಾಣಿಜ್ಯ ಪದವಿಯನ್ನು ಪೂರ್ಣಗೊಳಿಸಿದರು. ಎಷ್ಟಾದರೂ ಕಲೆಯ ಶಿಲೆಯಮೃತವಾಗಿರುವ ಕಾರ್ಕಳದ ಮಣ್ಣಿನಿಂದ ಬಂದ ಮೋಹ ನರಿಗೆ ಕಲೆ, ಸಾಹಿತ್ಯದ ಬಗ್ಗೆ ಎಳವೆಯಿಂದಲೇ ಅಪಾರ ಆಸಕ್ತಿ.
ನಾಲ್ಕನೇ ತರಗತಿಯಲ್ಲಿರುವಾಗಲೇ “ಮಿಸ್ ರಾಗಿಣಿ’ ನಾಟಕದ ಅಭಿನಯಕ್ಕೆ ಪುರಸ್ಕಾರವನ್ನು ಪಡೆದಿದ್ದ ಇವರ ರಂಗಾಸಕ್ತಿಗೆ ಪೂರಕವಾಗಿ ಕನ್ನಡ ಭವನ ಕಾಲೇಜು ಅವರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿತು. ಮೋಹನರ ರಂಗಾಸಕ್ತಿ, ಪ್ರತಿಭೆಯನ್ನು ಕಂಡು ವಿದ್ವಾನ್ ನಾಗರಹಳ್ಳಿ ಪ್ರಹ್ಲಾದಾಚಾರ್ಯರು ತಮ್ಮ ನಿರ್ದೇಶನದ “ಸಾಮ್ರಾಟ್ ಅಶೋಕ’ ನಾಟಕದಲ್ಲಿ ಅಶೋಕನ ಪಾತ್ರವನ್ನು ನೀಡಿದರು. ಈ ಪಾತ್ರವೇ ಮೋಹನರ ಜೀವನವನ್ನು ಬದಲಾಯಿಸಿತು. ಮೋಹನ ಎಂಬ ಪುಟ್ಟ ಪೋರನ ದಿಟ್ಟತನದ ಸಂಭಾಷಣೆಯ ತುಣುಕುಗಳು, ಪಾತ್ರಕ್ಕೆ ಜೀವತುಂಬುತ್ತಿದ್ದ ಅವರ ಪ್ರತಿಭಾ ಸಂಪನ್ನತೆ, ಸನ್ನಿವೇಶಕ್ಕೆ ತಕ್ಕಂತೆ ಪದಗಳ ಬಳಕೆಯನ್ನು ಕಂಡು ಮುಂದೊಂದು ದಿನ ಮೋಹನ ರಂಗಭೂಮಿ ಕ್ಷೇತ್ರದಲ್ಲಿ ಮೋಹನನಾಗಿ ಮೆರೆಯುತ್ತಾನೆ ಎಂದು ಅಂದೇ ಪ್ರಹ್ಲಾದಾಚಾರ್ಯರು ನುಡಿದ ಮಾತು ಇಂದು ದಿಟವಾಗಿದೆ.
ಮೋಹನರ ಬಾಳಿನ ದಿಕ್ಕನ್ನು ಬದಲಾಯಿಸಿದ ಕನ್ನಡ ಭವನ ಕಾಲೇಜು ಅವರಿಗೆ ಸಾಕಷ್ಟು ಶ್ರೇಯಸ್ಸು ಲಭಿಸುವಂತೆ ಮಾಡಿತ್ತು. ಮೋಹನರು ಆಗಲೇ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ
ಪ್ರಶಸ್ತಿ, ಬಹುಮಾನಗಳನ್ನು ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಪದವಿ ಶಿಕ್ಷಣ ಮುಗಿಸಿ ಚಾರ್ಟೆಟ್ ಅಕೌಂಟೆಂಟ್ ಸಂಸ್ಥೆಯೊಂದರಲ್ಲಿ ಸಹಾಯಕರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಇದರೊಂದಿಗೆ ಸಾಹಿತ್ಯ, ಸಂಗೀತ, ರಂಗಭೂಮಿ, ಸಿನೆಮಾ ಇನ್ನಿತರ ಕ್ಷೇತ್ರಗಳಲ್ಲೂ ಕೈಯಾಡಿಸಲು ಪ್ರಾರಂಭಿಸಿದರು. ಆ ಕಾಲದಲ್ಲಿ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೈತುಂಬ ಸಂಬಳ ಬರುತ್ತಿದ್ದ ಉದ್ಯೋಗವನ್ನೇ ತನ್ನನ್ನು ರಂಗಭೂಮಿಗೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳಲು ತ್ಯಜಿಸಿರುವುದು ಮೋಹನರ ರಂಗಸಾಕ್ತಿಯನ್ನು ಸೂಚಿಸುತ್ತದೆ.
ಮೋಹನರು ಹಿಂದಿ ಧಾರವಾಹಿಯೊಂದರ ಆಡಿಟ್‌ಗಾಗಿ ಬೆಂಗಳೂರಿಗೆ ತೆರಳಿದ ಸಂದರ್ಭದಲ್ಲಿ ಅಲ್ಲಿ ಕನ್ನಡ ಸಿನೆಮಾ ರಂಗದವರ ಒಡನಾಟವಾಯಿತು. 1985ರಲ್ಲಿ “ಕಥಾಧಾರೆ’ ಎಂಬ ಧಾರವಾಹಿಗೆ ಚಿತ್ರಕಥೆೆ, ಸಂಭಾಷಣೆ, ಅಭಿನಯ, ನಿರ್ದೇಶಗೈಯುವ ಅವಕಾಶ ಮೋಹನರಿಗೆ ಲಭಿಸಿತು. ಇದೆಲ್ಲವನ್ನು ಸಮರ್ಥವಾಗಿ ನಿಭಾಯಿಸಿದ ಮೋಹನರು ಮುಂದೆ ಕನ್ನಡ ಚಿತ್ರರಂಗದ ರಮೇಶ್ ಭಟ್, ಪ್ರಕಾಶ್ ರೈ, ಲಂಬೂ ನಾಗೇಶ್ ಮೊದಲಾದ ಪ್ರಸಿದ್ಧ ನಟರಿಗೆ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವುದು ಅವರ ವಿದ್ವತ್ತು ಮತ್ತು ಪ್ರೌಢಿಮೆಗೆ ನಿದರ್ಶನವಾಗಿದೆ.
ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಪಕ್ಕದ ವಿಭಾಗದಲ್ಲಿ ವೀಡಿಯೋಕಾನ್ ಜಾಹೀರಾತಿಗಾಗಿ ಪದ್ಯವೊಂದರ ಅಗತ್ಯವಿತ್ತು. ಇದನ್ನರಿತ ಮೋಹನರು ತತ್‌ಕ್ಷಣ ಪದ್ಯವೊಂದನ್ನು ರಚಿಸಿ ಅವರಿಗೆ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಈ ಕಾರಣದಿಂದಲೇ ಜಾಹೀರಾತು ವಿಭಾಗದವರು ಮೋಹನರ ಆಪ್ತರಾದರು. ಮುಂಬಯಿಯ ಅಂಬಾನಿ ಮಾಲಕತ್ವದ “ಮುದ್ರಾ ಜಾಹೀರಾತು’ ಸಂಸ್ಥೆ ಇವರಿಗೆ ಆಹ್ವಾನ ನೀಡಿತು.
ಅನಂತರದ ದಿನಗಳಲ್ಲಿ ಮೋಹನರ ಬದುಕಿಗೊಂದು ಅರ್ಥ ದೊರಕುತ್ತಾ ಹೋಯಿತು. ಜಾಹೀರಾತು ಸಂಸ್ಥೆಯಲ್ಲಿ ಲೇಖನ, ಕಾಫಿರೈಟ್, ಕಂಠದಾನ ಇತ್ಯಾದಿಗಳಲ್ಲಿ ಅಪಾರ ಅನುಭವವನ್ನು ಪಡೆದು ತಮ್ಮದೇ ಆದ “ಮಾರ್ನಾಡ್ ಅಸೋಸಿಯೇಟ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ನೂರಾರು ಮಂದಿ ಉದ್ಯೋಗಿಗಳಿರುವ ಈ ಸಂಸ್ಥೆಯು ಪ್ರಸ್ತುತ ಎಲ್ಲ ಭಾಷೆಗಳ ಜಾಹೀರಾತು ಚಿತ್ರೀಕರಣಕ್ಕೆ ಪ್ರಸಿದ್ಧಿಯನ್ನು ಹೊಂದಿರುವುದು ಕನ್ನಡಿಗರಿಗೆ ಹೆಮ್ಮೆ. “ಕಥಾಧಾರೆ’ ಕನ್ನಡ ಧಾರಾವಾಹಿ ಸೇರಿದಂತೆ “ಸ್ವಾಮಿ ಸ್ವಾಮಿ’ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಿಂದಿಯ “ಚಾಣಕ್ಯ’ ಧಾರಾವಾಹಿಗೆ ಸಂಗೀತ ನೀಡಿದ್ದಲ್ಲದೆ, “ಕಯರ್’ ಧಾರವಾಹಿಯ ಸಹನಿರ್ದೇಶನದೊಂದಿಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.
ಸಾವಿರಾರು ರೇಡಿಯೋ ಮತ್ತು ದೂರದರ್ಶನ ಜಾಹೀ ರಾತುಗಳಿಗೆ ಕಂಠದಾನ ಮಾಡಿದ ಶ್ರೇಯಸ್ಸು ಇವರಿಗಿದೆ. “ಸುದ್ಧ’ ತುಳು ಚಿತ್ರದ ಸಂಭಾಷಣೆ ಮತ್ತು ನಿರ್ಮಾಣವನ್ನು ಮೋಹನ್ ಅವರು ನಿರ್ವಹಿಸಿದ್ದು, ಈ ಚಿತ್ರವು 2006 ನೇ ಸಾಲಿನ ಎಂಟನೇ ಏಷ್ಯನ್ ಚಲನಚಿತ್ರೋತ್ಸವದಲ್ಲಿ ಭಾರತೀಯ ವಿಭಾಗದ ಶ್ರೇಷ್ಠ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ರಂಗಭೂಮಿ ಕ್ಷೇತ್ರದಲ್ಲೂ ಇವರ ಸಾಧನೆ ಅಪಾರವಾಗಿದೆ. ಕಲಾಜಗತ್ತು ರೂವಾರಿ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ “ಭೂತದ ಇಲ್ಲ್’ ನಾಟಕದಲ್ಲಿ ಬ್ರಾಹ್ಮಣನ ಪಾತ್ರವು ಅಂದಿನ ಕಾಲದಲ್ಲಿ ಇವರಿಗೆ ಸಾಕಷ್ಟು ಹೆಸರನ್ನು ತಂದು ಕೊಟ್ಟಿತು. ಆನಂತರ ಕಲಾಜಗತ್ತಿನ ಬರ್ಸ, ಬೊಳ್ಳ, ಬದಿ ಮೊದಲಾದ ನಾಟಕಗಳಲ್ಲಿ ಪ್ರಧಾನ ನಟರಾಗಿ ಯಶಸ್ಸನ್ನು ಸಾಧಿಸಿದ್ದರು.
ವಿಶೇಷ ಸಾಧನೆ ಎಂದರೆ 1995 ರಲ್ಲಿ 40 ಕಲಾವಿದರಿಂದ “ಟಿಪ್ಪು ಸುಲ್ತಾನ್’ ಎಂಬ ನಾಟಕವನ್ನು ಪ್ರದರ್ಶಿಸಿ, ಸ್ವತಃ ಟಿಪ್ಪುವಿನ ಪಾತ್ರವನ್ನು ನಿರ್ವಹಿಸಿ ಒಳ ಮತ್ತು ಹೊರನಾಡಿನಲ್ಲಿ ಕ್ರಾಂತಿ ಎಬ್ಬಿಸಿದ್ದರು. 1990 ರಲ್ಲಿ ವ್ಯಾಸರಾವ್ ನಿಂಜೂರರ “ನಲ್ವತ್ತರ ನಲುಗು’ ನಾಟಕವನ್ನು ನಿರ್ದೇಶಿಸಿದ್ದರು. ಈ ನಾಟಕವು ಎಂಟು ಪ್ರದರ್ಶನವನ್ನು ಕಂಡಿದೆ. ಸುಮಾರು 425ಕ್ಕೂ ಅಧಿಕ ನಾಟಕಗಳಲ್ಲಿ ಪ್ರಧಾನ ಪಾತ್ರಗಳಿಗೆ ಜೀವ ತುಂಬಿರುವ ಇವರಿಗೆ ರಾಷ್ಟ್ರೀಯ ನಾಟಕ ಸ್ಪರ್ಧೆಗಳಲ್ಲೂ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
ಮೋಹನರದ್ದು ನಾಟಕಗಳನ್ನು ನೋಡುವುದೇ ಒಂದು ರೀತಿಯ ಕಣ್ಣಿಗೆ ಹಬ್ಬ. “ನಾಟಕಕ್ಕಾಗಿ ಜೀವ ಬಿಡಬಾರದು- ಜೀವ ಕೊಡಬೇಕು’ ಎಂದು ಹೇಳುವ ಇವರ ಧೋರಣೆ, ಒಲವು, ನಿಲುವು, ಕ್ರಿಯಾಶೀಲತೆ, ಸಹೃದಯ ಚಿಂತನೆಗಳು ಪಾತ್ರಗಳಲ್ಲಿ ಪಡಿಮೂಡುತ್ತವೆ. ಇವರ ಪಾತ್ರಗಳಲ್ಲಿ ಎದ್ದುಕಾಣುವುದು ಪ್ರಯೋಗಶೀಲತೆ. ಇವರ ಬದುಕೊಂದು ಪ್ರಯೋಗಶೀಲತೆಯಿಂದಲೇ ಕೂಡಿದೆ ಎಂದರೂ ತಪ್ಪಿಲ್ಲ. ಮೋಹನರು ಪಾತ್ರಗಳ ಸಾಧ್ಯತೆಗಳನ್ನು ವಿವಿಧ ಆಯಾಮಗಳಿಂದ ಶೋಧಿಸುತ್ತಾ, ಆ ಪಾತ್ರಗಳನ್ನು ಪರಿಪೂರ್ಣಗೊಳಿಸುವತ್ತ ಸದಾ ಪ್ರಯತ್ನಶೀಲರು. ಈ ಚಾಕಚಕ್ಯತೆ ಎಲ್ಲ ಕಲಾವಿದರಲ್ಲೂ ಇರುವುದಿಲ್ಲ. ಮೋಹನರು ಇದಕ್ಕೊಂದು ಅಪರೂಪದ ನಿದರ್ಶನ ಎಂದೇ ಹೇಳಬಹುದು.
ಮೋಹನರು ಪಾತ್ರಕ್ಕೆ ಪೂರ್ವ ಸಿದ್ಧತೆಗಳನ್ನು ನಡೆಸಿಕೊಳ್ಳುವ ರೀತಿ ಅಪರೂಪವಾದದ್ದು. ಅವರ ಪ್ರತಿಯೊಂದು ಪೂರ್ವಸಿದ್ಧತೆಯು ಹೊಸತನದಿಂದ ಕೂಡಿರುತ್ತದೆ. ಇವರ ರಂಗನಡೆಯನ್ನು ಅರಿತು, ಇವರಿಂದ ಕಲಿತವರು ಬಹಳಷ್ಟು ಮಂದಿ ಕಲಾವಿದರಿದ್ದಾರೆ. ದಿನಂಪ್ರತಿ ಮುಂಜಾನೆ 5 ಗಂಟೆಗೆ ಎದ್ದು ಆ ಪಾತ್ರಗಳ ಬಗ್ಗೆ ಪೂರ್ವಸಿದ್ಧತೆ ಮಾಡಿಕೊಳ್ಳುವ ಪರಿಪಾಠ ಇಂದಿಗೂ ಅವರಲ್ಲಿದೆ. ತನ್ನ ದೇಹಕ್ಕೆ ತಕ್ಕಂತೆ ಧ್ವನಿಯನ್ನು ಹೊಂದಿರುವ ಇವರು, ಪಾತ್ರದ ಚೌಕಟ್ಟನ್ನು ಅರಿತು ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಅಪಾರ ವಿದ್ವತ್ತನ್ನು ಹೊಂದಿದವರು. ನಾಟಕ ರಚನಕಾರರಾಗಿಯೂ ಮಿಂಚಿರುವ ಇವರು ಯಮಲೋಕೊಡು ಪಾಲಿಟಿಕ್ಸ್, ಕಕುಮಮ, ಬಲ್ಪುನಕುಲಾ ಗಿಡಪ್ಪುನಕುಲಾ ಇತ್ಯಾದಿ ಏಕಾಂಕ ನಾಟಕಗಳನ್ನು ರಚಿಸಿ ಸೈ ಎನಿಸಿಕೊಂಡವರು.
ಉತ್ತಮ ಕತೆಗಾರರಾಗಿರುವ ಇವರ ಹಲವಾರು ಕತೆಗಳಿಗೆ ಬಹುಮಾನಗಳು ಲಭಿಸಿವೆ. ಸದಾ ಹಸನ್ಮುಖೀಯಾಗಿರುವ ಇವರು ಸಹ ಕಲಾವಿದರನ್ನು ಪ್ರೋತ್ಸಾಹಿಸಿ, ಬೆಳೆಸುವ ಗುಣವನ್ನು ಹೊಂದಿದವರು. ಸಾಧನೆಯ ಮೆಟ್ಟಿಲನ್ನು ಹಂತ ಹಂತವಾಗಿ ಏರಿರುವ ಮೋಹನರದ್ದು ಅನನ್ಯ ವ್ಯಕ್ತಿತ್ವ. ರಂಗಭೂಮಿ, ಕಿರುತೆರೆ, ಸಿನೆಮಾ, ಜಾಹೀರಾತು ಕ್ಷೇತ್ರ, ಸಂಗೀತ, ಸಾಹಿತ್ಯ ಹೀಗೆ ಸದಾ ತುಡಿತದೊಂದಿಗೆ ಬದುಕು ಕಟ್ಟಿಕೊಂಡಿರುವ ಇವರು ಹೃದಯ ಶ್ರೀಮಂತಿಕೆಗೆ, ದೊಡ್ಡತನಕ್ಕೆ ನಿದರ್ಶನರಾಗುತ್ತಾರೆ. ಕಷ್ಟದಲ್ಲಿರುವವರಿಗೆ ಹೇಗಾದರೂ ನೆರವಾಗಲೇ ಬೇಕು ಎನ್ನುವುದು ಅವರ ಒಳಮನಸ್ಸಿನ ಹಂಬಲ.
ಬಡವರಿಗಾಗಿ ಅವರ ಮಾನವೀಯತೆ ಮಿಡಿಯುತ್ತಿರುತ್ತದೆ. ಹಾಗಾಗಿ ಯಾರಾದರೂ ಸಹಾಯದ ಅನಿವಾರ್ಯತೆ ಇರುವುದು ಮನದಟ್ಟಾದರೆ ಅಂಥವರಿಗೆ ತನ್ನ ಇತಿಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನೆರವಾಗುತ್ತಾರೆ.
ರಂಗಭೂಮಿ ನಿತ್ಯ ಶುದ್ಧಿಗಾಗಿ, ನಿತ್ಯ ಶೋಧನೆಗಾಗಿ, ನಿತ್ಯ ಸಂಶೋಧನೆಗಾಗಿ ಎಂಬುವುದನ್ನು ಅರಿತಿರುವ ಮೋಹನರು, ಶ್ರದ್ಧೆ, ಪರಿಶ್ರಮ, ಏಕಾಗ್ರತೆ, ಪ್ರಾಮಾಣಿಕತೆ, ಅಧ್ಯಯನ, ತರಬೇತಿ, ತ್ಯಾಗಬುದ್ಧಿ, ತನ್ಮಯತೆಯನ್ನು ಅಳವಡಿಸಿಕೊಂಡವರು. ಕಾಲಕಾಲಕ್ಕೆ ರಂಗಭೂಮಿಯಲ್ಲಿ ಕಾಣಿಸಿಕೊಳ್ಳುವ ಹೊಸ ಆಯಾಮಗಳು, ಹೊಸ ಆವಿಷ್ಕಾರಗಳು, ಬದಲಾವಣೆಗಳು, ಹೊಸ ದೃಷ್ಟಿಕೋನಗಳನ್ನು ಅರಿತವರು ಮೋಹನರು. ಪಾತ್ರದ ಒಳಹೊಕ್ಕು ತನ್ನ ಅನುಭವಗಳನ್ನು ಧಾರೆ ಎರೆಯುತ್ತ ಅಭಿನಯಿಸಿ ಪಾತ್ರವೇ ಆಗಿ, ಅದರೊಳಗೆ ಲೀನವಾಗುತ್ತ ಹೋಗುತ್ತಾರೆ. ಅದರಲ್ಲೂ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟುಕೊಳ್ಳುವ ಅವರ ಅದ್ಭುತ ಕಲೆ ಎಲ್ಲರಿಗೂ ಸಿದ್ಧಿಸುವಂಥದಲ್ಲ.
ಈ ಕಾರಣದಿಂದಲೇ ಹಿತ-ಮಿತಭಾಷಿಯಾಗಿರುವ ಮೋಹ ನರು ಮುಂಬಯಿ ರಂಗಭೂಮಿ ಕ್ಷೇತ್ರದ ಅಪರೂಪದಲ್ಲಿ ಅಪ ರೂಪದ ಮಾಣಿಕ್ಯ ಎಂದೇ ಹೇಳಬಹುದು. ಪ್ರಸ್ತುತ ಪತ್ನಿ ಸೀಮಾ ಮತ್ತು ಪುತ್ರಿ ಮಾನವಿ ಅವರೊಂದಿಗೆ ಕಲಿನಾದಲ್ಲಿ ನೆಲೆಸಿದ್ದಾರೆ. ಮೋಹನರು ರಂಗಭೂಮಿಯಲ್ಲಿ ಇನ್ನಷ್ಟು ಬೆಳೆಯಲಿ. ಬೆಳೆದು ಮಾಗಲಿ. ಮಾಗಿ ಮುದನೀಡಲಿ. ಇದು ನಮ್ಮ ಹಿರಿಯಾಸೆ.
ಮುಂಬಯಿಯ ಪ್ರಸಿದ್ಧ ರಂಗಕಲಾವಿದ ವಾಮನ್‌ರಾಜ್ ಅವರ ಅನಂತರದ ಪರಂಪರೆಯನ್ನು ಬೆಳೆಸಿಕೊಂಡು ಬಂದವರು ಮೋಹನರು. ಹಿರಿಯ ರಂಗಕರ್ಮಿ ಡಾ| ಭರತ್ ಕುಮಾರ್ ಪೊಲಿಪು ಮೋಹನರ ಪ್ರತಿಭೆಗೆ ಮತ್ತಷ್ಟು ಹೊಳಪು ನೀಡಿದವರು. ಅವರ ಮೃಗತೃಷ್ಠಾ, ಇನ್ನೊಬ್ಬ ದ್ರೋಣಾಚಾರ್ಯ, ಕೋಮಲ ಗಾಂಧಾರ, ಆಷಾಢದ ಒಂದು ದಿನ ಇತ್ಯಾದಿ ನಾಟಕಗಳು ಒಳ ಮತ್ತು ಹೊರನಾಡಿನಲ್ಲಿ ಸಾಕಷ್ಟು ಸದ್ದು ಮಾಡಿವೆ. ಮೋಹನರ ಅಭಿನಯನವನ್ನು ಒಳನಾಡಿನಲ್ಲಿ ಪರಿಚಯಿಸಿದ ಶ್ರೇಯಸ್ಸು ಡಾ| ಭರತ್ ಕುಮಾರ್ ಪೊಲಿಪು ಅವರಿಗೆ ಲಭಿಸುತ್ತದೆ. ಡಾ| ಭರತ್ ಕುಮಾರ್ ಪೊಲಿಪು ಅವರ ಬತ್ತಳಿಕೆಯಿಂದ ಹೊರಬಂದಂತಹ ಬಿಲ್ಲೆಂಬ ನಾಟಕ ಕೃತಿಗಳಲ್ಲಿ ಮೋಹನರನ್ನು ಬಾಣವಾಗಿ ಉಪಯೋಗಿಸಿಕೊಂಡು ಅವರೊಳಗಿನ ಪ್ರತಿಭೆಯನ್ನು ಲೋಕಮುಖಕ್ಕೆ ಪರಿಚಯಿಸಿದ್ದಾರೆ. ಎಲ್ಲಿ… ಯಾವಾಗ… ಹೇಗೆ ಬಾಣವನ್ನು ಹೂಡಬೇಕು ಎಂಬ ನೈಪುಣ್ಯತೆ ಮತ್ತು ಚಾಕಚಕ್ಯತೆ ಮೋಹನರ ರಕ್ತದ ಕಣ ಕಣದಲ್ಲಿರುವುದು ವಿಶೇಷವಾಗಿದೆ.
ಮೋಹನ ತನಗೆ ತೋಚಿದ್ದನ್ನು ನೇರವಾಗಿ ಹೇಳುತ್ತಾನೆ. ಆತ ಮಾನವೀಯತೆಯ ಪ್ರತಿರೂಪ. ಇಲ್ಲಿಯ ವರೆಗೆ ಎಷ್ಟು ಮಂದಿಗೆ ಸಹಕರಿಸಿದ್ದಾನೆ ಎಂಬುವುದು ಅವನಿಗೆ ಗೊತ್ತಿರಲಿಕ್ಕಿಲ್ಲ. ಈತ ನಮ್ಮವರು ಎಂದು ಒಮ್ಮೆ ಎಣಿಸಿದರೆ, ಅವರನ್ನು ಹೃದಯದಲ್ಲಿಟ್ಟು ಪೂಜಿಸುತ್ತಾನೆ. ಉದ್ಯಮ ಕ್ಷೇತ್ರದಲ್ಲಿ ಮೋಹನನ ತೇಜೋವಧೆಗೆ ಬಹಳಷ್ಟು ಮಂದಿ ಪ್ರಯತ್ನಿಸಿದ್ದಾರೆ. ಆದರೆ ಮೋಹನ ಮಾತ್ರ ಕಲ್ಲಿನಂತೆ ನಿಂತು ಎಲ್ಲವನ್ನೂ ಎದುರಿಸಿದ್ದಾನೆ. ಎಲ್ಲರೂ ನನ್ನವರು ಎಂದೆಣಿಸಿ ಸದಾ ಹಾಸ್ಯ ಪ್ರವೃತ್ತನಾಗಿರುತ್ತಾನೆ. ಊರು ಮುಳುಗುವ ಸಂದರ್ಭದಲ್ಲೂ ಆತ ಹಾಸ್ಯಪ್ರಜ್ಞೆಯನ್ನು ಬಿಟ್ಟವನಲ್ಲ. ನಮ್ಮದು ಮೂವತ್ತು ವರ್ಷಗಳ ಸ್ನೇಹ. ಅವನಂತಹ ಸ್ನೇಹಿತನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ.
ನಿಜವಾಗಿಯೂ ಆತ ಗ್ರೇಟ್ ಪರ್ಸನ್.
– ಶಿವಾನಂದ ಶೆಟ್ಟಿ
(ಬಾಲ್ಯಸ್ನೇಹಿತರು)
ಡಾ| ದಿನೇಶ್ ಶೆಟ್ಟಿ ರೆಂಜಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.