ಜನರಿಗೆ ಆಸರೆಯಾದ ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘ
Team Udayavani, Oct 7, 2020, 6:54 PM IST
ಪುಣೆ, ಅ. 6: ಮುಂಬಯಿಯ ಹೊರಗಡೆ ಅತೀ ಹೆಚ್ಚು ತುಳು, ಕನ್ನಡದ ಕಲರವ ಕೇಳಿ ಬರುತ್ತಿದ್ದರೆ ಅದು ಸಾಂಸ್ಕೃತಿಕ ನಗರಿ ಪುಣೆ ಎಂದು ಹೇಳಬಹುದು. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಅದರಲ್ಲೂ ಶೈಕ್ಷಣಿಕ ರಂಗದಲ್ಲಿ ಪುಣೆಯ ತುಳು-ಕನ್ನಡಿಗರ ಸಾಧನೆ ಅನನ್ಯವಾಗಿದೆ. ಎಲ್ಲ ಸಮಾಜ ಬಾಂಧವರು ಸಂಘಟನೆಗಳ ಮೂಲಕ ನಾಡು-ನುಡಿಯ ಸೇವೆಯೊಂದಿಗೆ ಸಂಕಷ್ಟದಲ್ಲಿರುವವರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿರುವುದು ಇಲ್ಲಿನ ತುಳು, ಕನ್ನಡಿಗರ ವಿಶೇಷತೆ ಎನ್ನಬಹುದು.
ಒಗ್ಗಟ್ಟಿಗೆ ಪೂರಕವಾದ ಪಿಂಪ್ರಿ-ಚಿಂಚ್ವಾಡ್ ಬಂಟ್ಸ್ ಸಂಘ : ಪಿಂಪ್ರಿ ಚಿಂಚ್ವಾಡ್ ಪರಿಸರದಲ್ಲಿ ನೆಲೆಸಿರುವ ಬಂಟ ಸಮುದಾಯದ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಸಾಮಾಜಿಕ, ಸಾಂಸ್ಕೃತಿಕ ಭಾವೈಕ್ಯವನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಸದಾ ಸಮಾಜ ಸೇವೆಯ ತುಡಿತವನ್ನಿಟ್ಟುಕೊಂಡು ಕಾರ್ಯಗೈಯ್ಯುತ್ತಿರುವ ಬಂಟ ಸಮಾಜದ ಸಂಘಟನೆ ಎಂದರೆ ಅದು ಪಿಂಪ್ರಿ ಚಿಂಚ್ವಾಡ್‌ಬಂಟರ ಸಂಘ. ಪರಿಸರದ ಬಂಟ ಸಮಾಜ ಬಾಂಧವರ ಮತ್ತು ಸಮಾಜಿಕ ಹಿತರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡು ಅವರೆಲ್ಲರನ್ನು ಸಾಂಸ್ಕೃತಿಕವಾಗಿ ಒಂದುಗೂಡಿಸುವ ಉದ್ದೇಶದಿಂದ ಹಿರಿಯರ ಆಶೋತ್ತರದಂತೆ 24 ವರ್ಷಗಳ ಹಿಂದೆ ಸಂಘವು ಅಸ್ತಿತ್ವಕ್ಕೆ ಬಂದಿತು. ಆ ಮೂಲಕ ಹುಟ್ಟೂರಿನ ತುಳು ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಸಂಪ್ರದಾಯಗಳನ್ನು ನಿರಂತರವಾಗಿ ಆಚರಿಸಿಕೊಂಡು ಬರುವ ಮೂಲಕ ಯುವ ಪೀಳಿಗೆಯನ್ನು ಸಂಘದತ್ತ ಸೆಳೆದು ಅವರಿಗೆ ಸಂಸ್ಕೃತಿ, ಸಂಪ್ರದಾಯಗಳನ್ನು ಪರಿಚಯಿಸುತ್ತಾ ಬಂದಿದೆ. ಹತ್ತು ಹಲವು ಕಾರ್ಯಯೋಜನೆಗಳ ಮೂಲಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಸಮಾಜ ಬಾಂಧವರ ಒಗ್ಗಟ್ಟಿಗೆ ಪೂರಕವಾಗಿ ಶ್ರಮಿಸುತ್ತಿದೆ.
ಸಂಕಷ್ಟಕ್ಕೆ ಧಾವಿಸುವ ಯುವಪಡೆಯ ದಂಡು : ಯುವ ಸದಸ್ಯರನ್ನೇ ಹೊಂದಿರುವ ಸಂಘವು ತುಳು-ಕನ್ನಡಿಗರಿಗೆ ಸಂಕಷ್ಟ ಎದುರಾದಾಗ ಅವರಿಗೆ ಜಾತಿ, ಮತವನ್ನು ಮರೆತು ಸಹಕರಿಸುತ್ತಿದೆ. ಅದರಲ್ಲೂ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸಂಘದ ಸದಸ್ಯರ ಸೇವಾಕಾರ್ಯ ಮಹತ್ತರವಾದುದಾಗಿದೆ. ಸಂಕಷ್ಟದಲ್ಲಿರುವ ಬಂಟ ಬಾಂಧವರ ಮಾತ್ರವಲ್ಲದೆ ಇಡೀ ಸಮಾಜದ ನೆರವಿಗೆ ಧಾವಿಸಿದ ಸಂಘ, ಅಂಥವರಿಗೆ ಆಶಾಕಿರಣವಾಗಿ ನೆರವವನ್ನು ನೀಡಿ ಮೇಲ್ಪಂಕ್ತಿಯಲ್ಲಿ ಗುರುತಿಸಿಕೊಂಡಿದೆ.
ಸಮಯೋಚಿತ ನಿರ್ಧಾರ : ಲಾಕ್‌ಡೌನ್‌ನಿಂದಾಗಿ ಪ್ರತಿಯೊಬ್ಬರೂ ವ್ಯಾಪಾರ, ಉದ್ಯೋಗಗಳಿಲ್ಲದೆ ಮನೆಯಲ್ಲಿಯೇ ಉಳಿಯುವಂತಹ ಪರಿಸ್ಥಿತಿ ಸೃಷ್ಟಿಯಾಗಿ ಕೆಲವರಿಗೆ ದಿನನಿತ್ಯದ ಆಹಾರಕ್ಕೂ ಪರದಾಡುವಂತಹ ಸಂದರ್ಭ ಎದುರಾದಾಗ ಜನರಿಗೆ ದಿಕ್ಕೇ ತೋಚದಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯಹಸ್ತ ನೀಡುವುದು ಸಂಘ-ಸಂಸ್ಥೆಗಳ ಆದ್ಯ ಕರ್ತವ್ಯವೆಂದು ಮನಗಂಡು ಪಿಂಪ್ರಿ-ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ ಹಾಗೂ ಸಂಘದ ಪದಾಧಿಕಾರಿಗಳು ತುರ್ತು ಸಭೆ ನಡೆಸಿ ನೆರವಿನ ಕಾರ್ಯ ಯೋಜನೆಯಲ್ಲಿ ತೊಡಗಿಸಿಕೊಂಡು ತಿಂಗಳಿಗೆ ಕುಟುಂಬವೊಂದಕ್ಕೆ ಅಗತ್ಯವಿರುವಷ್ಟು ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್‌ಗಳನ್ನು ವಿತರಿಸುವ ಕಾರ್ಯವನ್ನು ಕೈಗೊಂಡರು.
ಅಸಹಾಯಕರಿಗೆ ವೈದ್ಯಕೀಯ ನೆರವು : ಸಂಘವು ಕಳೆದ ಹಲವಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಸಮಾಜದ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವನ್ನು ಸದಾ ನೀಡುತ್ತಾ ಬಂದಿದೆ. ಕೊರೊನಾ ಸಂದರ್ಭದಲ್ಲಿ ಹಲವು ಮಂದಿಗೆ ವೈದ್ಯಕೀಯ ಸಹಾಯವನ್ನೂ ಸಂಘವು ಮಾಡಿದೆ. ಸಂಘದ ಸದಸ್ಯರೆಲ್ಲರೂ ವೈಯಕ್ತಿಕವಾಗಿ ತಮ್ಮಿಂದಾದ ಸಹಾಯವನ್ನು ನೀಡಿ ತಮ್ಮ ಔದಾರ್ಯವನ್ನು ಮೆರೆದಿದ್ದಾರೆ.
ಅನ್ನದಾನದ ವ್ಯವಸ್ಥೆ : ಕೋವಿಡ್ ಮಹಾಮಾರಿಯಿಂದಾಗಿ ಜನ ಜೀವನ ಸ್ತಬ್ಧಗೊಂಡು ಸಾವಿರಾರು ಜನರು ತಮ್ಮ ಉದ್ಯೋಗ ಗಳನ್ನು ಕಳೆದುಕೊಂಡು ಆಶ್ರಯರಹಿತರಾಗಿ ಹೊಟ್ಟೆಗೆ ಹಿಟ್ಟಿಲ್ಲದಂತಾಗಿ ಅನ್ಯ ಮಾರ್ಗವಿಲ್ಲದೆ ತಮ್ಮ ತಮ್ಮ ಊರಿಗೆ ನಡೆದುಕೊಂಡು ಹೋಗುವ ದೃಶ್ಯಾವಳಿ ಯನ್ನು ಕಂಡ ಸಂಘವು ಇಂಥವರ ನೆರವಿಗೆ ಧಾವಿಸಿತು. ಇವರ ಕಷ್ಟಗಳನ್ನು ಕಾಣಲಾರದೆ ಸಂಘದ ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ತಮ್ಮ ಹೊಟೇಲ್‌ನಲ್ಲಿ ಒಂದೂವರೆ ತಿಂಗಳ ಕಾಲ ನಿರಂತರವಾಗಿ
ಅನ್ನದಾನದ ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ. ಇವರಂತೆಯೇ ಸಂಘದ ಇನ್ನಿತರ ಪದಾಧಿಕಾರಿಗಳು ತಮ್ಮಿಂದಾದ ನೆರವನ್ನು ಕಷ್ಟದಲ್ಲಿರುವ ಜನರಿಗೆ ನೀಡಿದ್ದಾರೆ. ಕೇವಲ ಸಮಾಜ ಬಾಂಧವರಿಗಷ್ಟೇ ಅಲ್ಲದೆ ಇನ್ನಿತರ ಜನರಿಗೂ ಮಾನವೀಯ ಕಳಕಳಿಯಿಂದ ನೆರವಿನ ಹಸ್ತವನ್ನು ನೀಡಿದ್ದಾರೆ.
ಕೋವಿಡ್ ವಾರಿಯರ್ಸ್‌ಗೆ ನೆರವು : ಕೋವಿಡ್ ತಡೆಗೆ ಪೊಲೀಸರು ದಿನದ 24 ಗಂಟೆಗಳ ಕಾಲವೂ ಕಾರ್ಯನಿರತರಾಗಿದ್ದರು. ಇಂತಹ ಪೊಲೀಸರಿಗೆ ಸಂಘದ ಸದಸ್ಯರ ಲಾಡ್ಜಿಂಗ್‌ಗಳಲ್ಲಿ ಎರಡು ರೂಮ್‌ಗಳನ್ನು ಲಾಕ್‌ಡೌನ್ ಸಮಯದಲ್ಲಿ ಉಚಿತವಾಗಿ ಒದಗಿಸುವ ಔದಾರ್ಯವನ್ನು ಮೆರೆಯಲಾಗಿತ್ತು. ಸಂಘದ ವತಿಯಿಂದ ಕೊರೊನಾ ವಾರಿಯರ್ಸ್‌ಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಮಾಡಿದುದು ಸಂಘದ ಮಾನವೀಯತೆಗೆ ಸಾಕ್ಷಿ.
ಹೊಟೇಲ್ ಉದ್ಯಮಿಗಳೇ ಆಧಾರ ಸ್ತಂಭ : ಪಿಂಪ್ರಿ- ಚಿಂಚ್ವಾಡ್ ಬಂಟ್ಸ್ ಸಂಘಕ್ಕೆ ಇಲ್ಲಿನ ಹೊಟೇಲ್ ಉದ್ಯಮಿಗಳೇ ಆಧಾರ ಸ್ತಂಭವಾಗಿದ್ದಾರೆ. ಹೊಟೇಲ್‌ಗಳು ಮುಚ್ಚಿ ಉದ್ಯಮಿಗಳೇ ದಿಕ್ಕು ತೋಚದ ಸ್ಥಿತಿಯಲ್ಲಿದ್ದರು ಕೂಡ ಕಷ್ಟದಲ್ಲಿದ್ದ ಅವರು ತಮ್ಮವರನ್ನು ಕೈಬಿಡಲಿಲ್ಲ. ಪಿಂಪ್ರಿ-ಚಿಂಚಾÌಡ್‌ನ ಉಪನಗರಗಳಲ್ಲಿ ನೆಲೆಸಿರುವ ಉದ್ಯಮಿಗಳು ವಾಟ್ಸ್‌ಆ್ಯಪ್ ಮುಖಾಂತರ ಮಾಹಿತಿಯನ್ನು ಕಲೆಹಾಕಿ ಸಂಕಷ್ಟಕ್ಕೀಡಾದ ಎಲ್ಲರ ಮನೆ ಮನೆಗಳಿಗೆ ತೆರಳಿ ನೆರವು ನೀಡಲಾಗಿತ್ತು.
ನಮ್ಮ ಹಿರಿಯರು ಯಾವ ರೀತಿಯ ಧ್ಯೇಯೋದ್ದೇಶಗಳನ್ನು ಮುಂದಿಟ್ಟುಕೊಂಡು ಸಂಘವನ್ನು ಸ್ಥಾಪಿಸಿದ್ದರೋ ಅದೇ ಹಾದಿಯಲ್ಲಿ ಸಂಘವನ್ನು ಮುನ್ನಡೆಸುವ ಜವಾಬ್ದಾರಿ ನಮ್ಮ ಮುಂದಿದೆ. ಕೋವಿಡ್ ಹಿನ್ನಲೆಯಲ್ಲಿ ಲಾಕ್‌ಡೌನ್ ಆದ ಸಂದರ್ಭದಲ್ಲಿ ಅದೆಷ್ಟೋ ಜನರು ಸಂಕಷ್ಟದಲ್ಲಿರುವುದನ್ನು ಕಂಡ ನಾವು ಸಂಘದ ಪದಾಧಿಕಾರಿಗಳೊಂದಿಗೆ ಸಮನ್ವಯ ಸಾ ಧಿಸಿ ನಮ್ಮ ಕೈಲಾದ ಸಹಾಯವನ್ನು ಕುಟುಂಬಗಳಿಗೆ ನೀಡುವ ನಿರ್ಧಾರ ಕೈಗೊಂಡು ಅದರಂತೆ ನೆರವು ನೀಡಿದ್ದೇವೆ. ಇದು ಸಂಘದ ಕರ್ತವ್ಯವೆಂದು ನಾವು ಭಾವಿಸಿ ಮಾಡಿದ್ದೇವೆಯೇ ಹೊರತು ಯಾವುದೇ ಪ್ರಚಾರಕ್ಕಲ್ಲ. ಅದೇ ರೀತಿ ಸಮಾಜ ಬಾಂಧವರಲ್ಲಿ ಸಂಘದ ಮೂಲಕ ಭರವಸೆಯನ್ನು ಮೂಡಿಸುವ ಪ್ರಯತ್ನವನ್ನೂ ಮಾಡಿದ್ದೆವು. ಪ್ರತಿಯೊಬ್ಬರೂ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಂಡು ನಮ್ಮ ಕುಟುಂಬವನ್ನೂ ರಕ್ಷಿಸುವ ಜವಾಬ್ದಾರಿಯೊಂದಿಗೆ ಕಾಳಜಿ ವಹಿಸಬೇಕಾಗಿದೆ. ಸಂಘದ ಕಾರ್ಯಕ್ಕೆ ಬೆಂಬಲವಾಗಿ ಕೈಜೋಡಿಸಿದ ದಾನಿಗಳು, ಸಂಘದ ಪದಾಧಿಕಾರಿಗಳು, ಮಹಿಳಾ ಮತ್ತು ಯುವ ವಿಭಾಗಗಳ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಂಘದ ಮೂಲಕ ಸಮಾಜ ಬಾಂಧವರಿಗೆ ನೆರವನ್ನು ನೀಡುವ ನಮ್ಮ ಸಂಕಲ್ಪ ಮುಂದುವರಿಯಲಿದೆ.. -ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಅಧ್ಯಕ್ಷರು, ಬಂಟರ ಸಂಘ ಪಿಂಪ್ರಿ- ಚಿಂಚ್ವಾಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.