ಪುಣೆ ಬಂಟರ ಸಂಘದ ವಾರ್ಷಿಕ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮ
Team Udayavani, Jul 31, 2018, 4:34 PM IST
ಪುಣೆ: ಪ್ರತಿಯೊಬ್ಬ ಸಮಾಜ ಬಾಂಧವರೂ ನಮ್ಮ ಬಂಟ ಸಮಾಜದ ಮೇಲೆ ಹಾಗೂ ಸಂಘದ ಮೇಲೆ ಅಭಿಮಾನಪಡಬೇಕಾಗಿದೆ. ಬಂಟ ಸಮಾಜ ಬಾಂಧವರು ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾ ವಿಶೇಷ ಸ್ಥರದಲ್ಲಿ ಗುರುತಿಸಿಕೊಂಡಿ¨ªಾರೆ. ಅದೇ ನಿಟ್ಟಿನಲ್ಲಿ ಪುಣೆ ಬಂಟರ ಸಾಧನೆಯೂ ಅನನ್ಯವಾಗಿದೆ. ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಿರತ ಪ್ರಯತ್ನದಿಂದ ಭವ್ಯವಾದ ಸಮುದಾಯದ ಭವನ ನಿರ್ಮಿಸಲು ಸಾಧ್ಯವಾಗಿದೆ. ಇದರೊಂದಿಗೆ ಶೈಕ್ಷಣಿಕ ನೆರವಿನ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಆದರೆ ನಮ್ಮ ಸಮಾಜದಲ್ಲಿ ಬಡವರು ಎಂಬವರಿಲ್ಲ. ಜೀವನದಲ್ಲಿ ಅಗತ್ಯವುಳ್ಳವರು ಮಾತ್ರ ಎಂಬುದನ್ನು ನಾವು ಪರಿಗಣಿಸಬೇಕಾಗಿದೆ. ಸಮಾಜದಲ್ಲಿ ಅಗತ್ಯವಿದ್ದವರಿಗೆ ನೆರವು ಕಲ್ಪಿಸಿ ಅವರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಸಂಘಗಳು ಮಾಡಬೇಕಾಗಿದೆ. ಮುಖ್ಯವಾಗಿ ಸಂಘದ ಪ್ರತಿಯೊಂದು ಕಾರ್ಯಕ್ರಮಗಳಿಗೆ ನಮ್ಮ ಮಕ್ಕಳನ್ನು ಅಗತ್ಯವಾಗಿ ಕರೆದುಕೊಂಡು ಬರಬೇಕಾಗಿದೆ. ಮಕ್ಕಳಿಗೆ ಉತ್ತಮ ವಿದ್ಯೆಯೊಂದಿಗೆ ನಮ್ಮ ತುಳು ಭಾಷೆ, ಸಂಸ್ಕೃತಿಯ ಪರಿಚಯವನ್ನು ಅವರಿಗೆ ನೀಡಬೇಕಾಗಿದೆ. ಮಕ್ಕ ಳನ್ನು ಭವಿಷ್ಯದಲ್ಲಿ ಸುಸಂಸ್ಕೃತರಾಗಿ ಬಾಳು ವಂತೆ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಭವಾನಿ ಶಿಪ್ಪಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಮುಖ್ಯ ಆಡಳಿತ ನಿರ್ದೇಶಕ ಕುಸುಮೋಧರ ಡಿ. ಶೆಟ್ಟಿ ಮುಂಬಯಿ ಇವರು ನುಡಿದರು.
ಜು. 29 ರಂದು ನಗರದ ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ನಡೆದ ಪುಣೆ ಬಂಟರ ಸಂಘದ ಶೈಕ್ಷಣಿಕ ನೆರವು ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮ ಮಕ್ಕಳಿಗೆ ಸಭ್ಯ ಸಂಸ್ಕಾರವನ್ನು ನೀಡುವ ಮೂಲಕ ಸಮಾಜದ ಮೇಲೆ ಅಭಿಮಾನ ಬೆಳೆಸಿಕೊಳ್ಳುವಂತೆ ಮಾಡಿದರೆ ಅಂತರ್ಜಾತಿ ವಿವಾಹವಾಗದಂತೆ ತಡೆಯಬಹುದಾಗಿದೆ. ಜೀವನದಲ್ಲಿ ಸೊಲುಬಂದಾಗ ಕುಗ್ಗದೆ, ಗೆಲುವು ಬಂದಾಗ ಹಿಗ್ಗದೆ ಬಾಳುವುದೇ ನಿಜವಾದ ಜೀವನವಾಗಿದೆ. ಹಿಂದಿನ ಕಷ್ಟದ ದಿನಗಳಲ್ಲಿಯೂ ನಮ್ಮ ಹಿರಿಯರು ನೀಡಿದ ಪ್ರೀತಿ, ದೈವ ದೇವರ ಅನುಗ್ರಹದಿಂದಾಗಿಯೇ ನಾವಿಂದು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗಿದೆ. ಆದುದರಿಂದ ಆದರ್ಶ ಸಮಾಜ ನಿರ್ಮಾಣವನ್ನು ಮಾಡಿದ ದೂರದೃಷ್ಟಿಯ ಚಿಂತನೆಯ ನಮ್ಮ ಹಿರಿಯರನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಬಂಟರ ಸಂಘ ಪುಣೆ ಇದರ ಗೌರವಾಧ್ಯಕ್ಷ ಜಗನ್ನಾಥ ಶೆಟ್ಟಿ ಮಾತನಾಡಿ, ನಮ್ಮ ಸಂಘದ ವತಿಯಿಂದ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡಿ ಮಕ್ಕಳ ವಿದ್ಯೆಗೆ ಉತ್ತೇಜನ ನೀಡುವ ಕಾರ್ಯ ಮನಸ್ಸಿಗೆ ಆನಂದವಾಗುತ್ತಿದೆ. ಪುಣೆಯಲ್ಲಿರುವ ಬಂಟ ಬಾಂಧವರೆಲ್ಲರೂ ಒಗ್ಗಟಾಗಿ ಸಂಘದ ಪ್ರತಿಯೊಂದು ಕಾರ್ಯಗಳಲ್ಲಿಯೂ ಬೆರೆಯುತ್ತಿರಬೇಕು. ಸಂಘದ ಮೂಲಕ ಭವಿಷ್ಯದಲ್ಲಿ ಸಮಾಜದ ಬೆಳವಣಿಗೆಯ ಕಾರ್ಯಗಳು ನಿರಂತವಾಗಿ ನಡೆಯುತ್ತರಲಿ. ಪುಣೆ ಬಂಟರ ಸಂಘದ ಹೆಸರು ವಿಶ್ವದಲ್ಲಿಯೇ ಗುರುತಿಸುವಂತಾಗಲಿ ಎಂದರು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರು ಮಾತನಾಡಿ, ನಮ್ಮ ಸಮಾಜದಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಅಂತೆಯೇ ನಮ್ಮ ಸಂಘದ ಮಹಿಳಾ ಸದಸ್ಯರೇ ಆಯೋಜಿಸಿರುವ ಮರಿಯಾಲೊಡೊಂಜಿ ದಿನ ಆಚರಣೆಯ ಸಂದರ್ಭ ನಾವು ದೇಶವನ್ನು ಕಾಯುವ ನಮ್ಮ ಹೆಮ್ಮೆಯ ಯೋಧರನ್ನೂ ನೆನಪಿಸಿಕೊಂಡು ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಗುರುಹಿರಿಯರ, ದೈವ-ದೇವರುಗಳ ನೆನಪನ್ನೂ ಮಾಡಬೇಕಾಗಿದೆ. ಸಮಾಜವನ್ನು ಕಟ್ಟುವ ನಮ್ಮ ಸಂಕಲ್ಪದಲ್ಲಿ ಸಾಮಾಜಿಕ ಚಿಂತನೆಯೊಂದಿಗೆ ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಸಮಾಜದ ಹಿರಿಯರ ಮಾರ್ಗದರ್ಶನದೊಂದಿಗೆ ಸಂಘದ ಮೂಲಕ ಸಮಾಜ ಬಾಂಧವರಿಗೆ ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ ಬಾಂಧವ್ಯಗಳನ್ನೂ ವರ್ಧಿಸುವಂತಹ ಕಾರ್ಯಕ್ರಮಗಳನ್ನು ವಿವಿಧ ಹಂತಗಳಲ್ಲಿ ಆಯೋಜಿಸಿ ಸಾಧ್ಯವಾದಷ್ಟು ಜನರನ್ನು ತಲುಪುವುದೇ ನಮ್ಮ ಆದ್ಯತೆಯಾಗಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ ಆರ್. ಶೆಟ್ಟಿ, ರಾಮಕೃಷ್ಣ ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಕೆ. ಹೆಗ್ಡೆ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಶೆಟ್ಟಿ, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್ ಜಯ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿ-ಗಣ್ಯರು ಭವನದ ಆವರಣದಲ್ಲಿರುವ ಶಿವಾಜಿ ಪ್ರತಿಮೆಗೆ ಹಾರಾರ್ಪಣೆಗೈದರು. ನಂತರ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ದೇವರಿಗೆ ಆರತಿ ಬೆಳಗಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅತಿಥಿಗಳನ್ನು ಶಾಲು ಹೊದೆಸಿ ಸ್ಮರಣಿಕೆ, ಪುಷ್ಪಗುಚ್ಚಗಳನ್ನು ನೀಡಿ ಸತ್ಕರಿಸಲಾಯಿತು. ಈ ಸಂದರ್ಭ ಅಂಗಾಂಗ ದಾನದ ಜನಜಾಗೃತಿಯನ್ನು ಮೂಡಿಸುವಲ್ಲಿ ಮಹತ್ತರವಾದ ಸೇವೆಯನ್ನು ಸಲ್ಲಿಸುತ್ತಿರುವ ಪುಣೆ ರೀಬರ್ಥ್ ಫೌಂಡೇಶನ್ ಅಧ್ಯಕ್ಷರಾದ ರಾಜೇಶ್ ಆರ್. ಶೆಟ್ಟಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಭವನದ ನಿರ್ಮಾಣಕ್ಕೆ ದೇಣಿಗೆ ನೀಡಿದ ಮಹಾದಾನಿಗಳನ್ನು ಸಮ್ಮಾನಿಸಲಾಯಿತು. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಹಂಚಲಾಯಿತು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿಯವರ ಸಿದ್ಧಿಸಾಧನೆಗಳನ್ನೊಳಗೊಂಡ ಯಶಸ್ವಿ ಪತ್ರಿಕೆಯ ಪ್ರತಿಯನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ರೇಖಾ ರೈ, ಪ್ರಮೀಳಾ ಶೆಟ್ಟಿ, ಮಮತಾ ಶೆಟ್ಟಿ ಪ್ರಾರ್ಥನೆಗೈದರು. ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ ಸ್ವಾಗತಿಸಿದರು. ಕಾಂತಿ ಸೀತಾರಾಮ ಶೆಟ್ಟಿ ಹಾಗೂ ಸುಲತಾ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಅಜಿತ್ ಕೆ. ಹೆಗ್ಡೆ ವಂದಿಸಿದರು.
ಗಣೇಶ್ ಎರ್ಮಾಳ್ ಅವರಿಂದ ರಸಮಂಜರಿ ಕಾರ್ಯಕ್ರಮ, ಮಮತಾ ಶೆಟ್ಟಿ, ಪ್ರಶಾಂತ ಶೆಟ್ಟಿ, ರೋಹನ್ ಶೆಟ್ಟಿ ಅವರಿಂದ ಗಾಯನ, ವೀಣಾ ಡಿ. ಶೆಟ್ಟಿ ಬಳಗದಿಂದ ಆಟಿಕಳಂಜ ನೃತ್ಯ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಜಯಂತ್ ಶೆಟ್ಟಿ, ಸದಾನಂದ ಕೆ. ಶೆಟ್ಟಿ, ಡಾ| ದಯಾನಂದ ಶೆಟ್ಟಿ, ಜಗನ್ನಾಥ ಶೆಟ್ಟಿ ಮುಂಬಯಿ, ಕರ್ನೂರು ಮೋಹನ್ ರೈ, ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಕೊಲ್ಯಾರು ರಾಜು ಶೆಟ್ಟಿ, ಯಶಸ್ವಿ ಪತ್ರಿಕೆಯ ಜಯರಾಮ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.