ಬಂಟರ “ಸಂತೋಷ’ದ ಹೆಗ್ಗುರುತು
Team Udayavani, Apr 6, 2018, 2:05 PM IST
“ಬಿಟ್ಟು ಬರುವಾಗ ಹುಟ್ಟಿದೂರನು. ಅಮ್ಮನ ಆಶೀರ್ವಾದದ ಕಣ್ಣೀರಿನ ಕೈತುತ್ತು….
ಜೇಬಲ್ಲಿದ್ದ ಅಪ್ಪನ ಹರಿದ ಹತ್ತರ ನೋಟು, ಕೈ ಇಲ್ಲದ ಬ್ಯಾಗಿನಲ್ಲಿ ಒಟ್ಟೆ ಬಿದ್ದ ಶರ್ಟು…
ಇಂದಿಗೂ ನೆನೆದಾಗಲೆಲ್ಲ ಮೌನ ಬಿಂದು…
ಗೆಳೆಯರ ಹಾರೈಕೆಯ ಪ್ರೀತಿಯ ಪತ್ರಗಳು, ತೊಟ್ಟೆಯಲಿ ಮುಚ್ಚಿಟ್ಟ ಅಮ್ಮನ ತಿನಸುಗಳು…
ತಟ್ಟುತ್ತಿದ್ದ ನೂರಾರು ನೆನಪಿನ ಮನಸುಗಳು, ಕಣ್ತುಂಬಿಕೊಂಡ ಬದುಕಿನ ಕನಸಗಳು…
ಇಂದಿಗೂ ನೆನೆದಾಗಲೆಲ್ಲ ಮೌನ ಬಿಂದು….’
ನಿಜ ಕಣಿÅ, ಪ್ರತಿಯೋರ್ವ ತುಳು-ಕನ್ನಡಿಗರು ಹೊಟ್ಟೆಪಾಡಿಗಾಗಿ ಹುಟ್ಟಿದೂರನು ಬಿಟ್ಟು ಮರಾಠಿ ಮಣ್ಣಿನ ತೆಕ್ಕೆಗೆ ಬಿದ್ದು, ಇಲ್ಲಿ ಸಾಧನೆಯ ಉತ್ತುಂಗ ಶಿಖರವನ್ನೇರಿ ಮತ್ತೆ ತಾವು ಹುಟ್ಟಿದೂರನ್ನು ಬಿಟ್ಟು ಬಂದ ಆ ದಿನಗಳತ್ತ ದೃಷ್ಟಿrಯಿಟ್ಟಾಗ ನೆನಪಿನ ಬುತ್ತಿಯಿಂದ ಕಾಡುವ ಮಾನಸಿಕ ತೊಳಲಾಟವನ್ನು ಯಾವ ಶಬ್ದಗಳಿಂದಲೂ ವರ್ಣಿಸಲು ಅಸಾಧ್ಯ. ಅಂತಹ ತುಳು-ಕನ್ನಡಿಗ ಸಾಧಕ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಇವರು ತಾನು ಪುಣೆಗೆ ಬಂದ ಪ್ರಾರಂಭದ ದಿನಗಳನ್ನು ನೆನೆದು “ಎಲ್ಲಿದ್ದವ…ಇಲ್ಲಿಗೆ ಬಂದೆ…ಹೇಗಿದ್ದವ…ಹೀಗಾದೆ’ ಎಂದು ಎದೆತಟ್ಟಿ ಹೇಳುವುದರೊಂದಿಗೆ ಸಾಂಸ್ಕೃತಿಕ ನಗರಿ ಪುಣೆಯಲ್ಲಿ ಪುಣೆ ಬಂಟರ ಭವನವನ್ನು ನಿರ್ಮಿಸಿರುವ ಸಾಹಸ ಗಾಥೆಯನ್ನು ಉದಯವಾಣಿಯೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ತುಳು, ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತು ವಿಶೇಷವಾದ ಆಸ್ಥೆಯನ್ನು ಹೊಂದಿರುವ ಅವರು, ಆಶಾವಾದಿ, ಇಚ್ಛಾವಾದಿ, ಮಿತಭಾಷಿ, ಸರಳ-ಸಜ್ಜನ, ಶಿಸ್ತು ಪ್ರಿಯ ವ್ಯಕ್ತಿ. ಪುಣೆ ಬಂಟರ ಸಂಘವನ್ನು ಮತ್ತು ಬಂಟ ಸಮಾಜವನ್ನು ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡಿಕೊಂಡು ಹೋರಾಟ ನಡೆಸಿ ಬದುಕಿನ ಪಥದಲ್ಲಿ ನಡೆದವರು. ಹಿರಿಯರ ಆಶೀರ್ವಾದ, ದಾನಿಗಳ ಉತ್ತೇಜನ, ದೈವ-ದೇವರ ಅನುಗ್ರಹ, ಸತತ ಪರಿಶ್ರಮ, ಶ್ರದ್ಧೆ, ಏಕಾಗ್ರತೆಯ ಸಾಧನೆಯಿಂದ ಸಫಲತೆಗಳು ಒಂದರ ಅನಂತರ ಇನ್ನೊಂದು ಅವರನ್ನು ಹಿಂಬಾಲಿಸಿದವು. ಈ ಕಾರಣದಿಂದಲೇ ಇಂದು ಯಾರು ಕನಸು-ಮನಸಲ್ಲೂ ಎಣಿಸದ ರೀತಿಯಲ್ಲಿ ಪುಣೆಯ ಹೃದಯ ಭಾಗದಲ್ಲಿ ಪ್ರತಿಷ್ಠಿತ ಪುಣೆ ಬಂಟರ ಭವನ ರಾರಾಜಿಸುವಂತಾಗಿದೆ.
ಆ ದಿನಗಳನ್ನು ನೆನೆಸಿಕೊಂಡಾಗ…?
ಸಮಯವಲ್ಲದ ಸಮಯದಲ್ಲಿ ಅಪ್ಪ ಕಾಲನ ಕರೆಗೆ ಓಗಟ್ಟು ನಮ್ಮನ್ನೆಲ್ಲ ಅನಾಥರನ್ನಾಗಿ ಮಾಡಿಬಿಟ್ಟರು. ಇದರಿಂದ ಎಳವೆಯಲ್ಲೇ ಅಪ್ಪನ ಪ್ರೀತಿಯಿಂದ ವಂಚಿತನಾದೆ. ಅಮ್ಮನ ಆಶೀರ್ವಾದದ ಬಲದಿಂದ ಬೆಳೆದೆ. ದೈವ-ದೇವರ ನುಡಿಯಿಂದಲೇ ಹುಟ್ಟಿದೂರು ಬಿಟ್ಟೆ. ಅಂದಿನಿಂದಲೇ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಮೂಡಿತ್ತು. ನನ್ನ ಬಾಲ್ಯ ನನಗೆ “ಸಂಪತ್ತಿನ ಸುಪ್ಪತ್ತಿಗೆಯಾಗಿರಲಿಲ್ಲ. ಉಣ್ಣಲು ತುತ್ತಿಗಾಗಿ ಕಷ್ಟ ಪಟ್ಟಿದ್ದೇನೆ. ಉಡಲು ಬಟ್ಟೆಗಾಗಿ ಹಾತೊರೆದಿದ್ದೇನೆ’. ಬೆಳಕಿನ ಬದುಕಿನೊಂದಿಗೆ ಕತ್ತಲೆಯ ಜೀವನವನ್ನು ಬಲ್ಲವನಾಗಿದ್ದೆ. ಆ ದಿನಗಳನ್ನು ನೆನೆಸಿಕೊಂಡಾಗ ಕಣ್ಣೀರು ಬರುತ್ತದೆ.
ಹೊಟೇಲ್ ಉದ್ಯಮದತ್ತ ಮನಸ್ಸು
ಊರಿನಲ್ಲಿರುವಾಗ ಪುಣೆ ಕೈ ಬೀಸಿ ಕರೆದರೆ… ಪುಣೆಗೆ ಬಂದಾಗ ಊರು ಮತ್ತೆ ನೆನಪಾಗುತ್ತಿತ್ತು…ಅಮ್ಮನ ಕೂಗು ಮತ್ತೆ ಮತ್ತೆ ಮರುಕಳಿಸಿ ರಾತ್ರಿಯಿಡೀ ನಿದ್ದೆಗೆಟ್ಟ ದಿನಗಳಿವೆ. ಶಾಲಾ ಸಂದರ್ಭದಲ್ಲಿ ಕಲಿಕೆಯಲ್ಲೂ ಮುಂದಿದ್ದ ನಾನು ಕ್ರೀಡೆ, ನಾಟಕ, ಯಕ್ಷಗಾನ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೆ. ಇದಕ್ಕೆ ಪೂರಕವಾಗಿದ್ದ ಸಾಂಸ್ಕೃತಿಕ ನಗರಿ ಪುಣೆಯು ಭದ್ರವಾಗಿ ನೆಲೆಯೂರುವಂತೆ ಮಾಡಿತು. ಚಿಕ್ಕಪ್ಪ ಜಯಂತ್ ಶೆಟ್ಟಿಯವರು ಆಸರೆಯಾದರು. ಅವರ ಸಲಹೆಯಂತೆ ಹೊಟೇಲ್ ಉದ್ಯೋಗದೊಂದಿಗೆ ಪುಣೆಯ ವಾಡಿಯಾ ಹಾಗೂ ಫರ್ಗುಸನ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದೆ. ಮುಂದೆ ಅವರ ಮಾರ್ಗದರ್ಶನದಲ್ಲಿ ಪುಣೆಯಲ್ಲಿ ಸಣ್ಣ ಹೊಟೇಲ್ ಉದ್ಯಮವನ್ನು ಪ್ರಾರಂಭಿಸಿದೆ. ದೈವ-ದೇವರ ಸಂಕಲ್ಪದಂತೆ ಹೊಟೇಲ್ ಉದ್ಯಮದಲ್ಲಿ ಭದ್ರವಾಗಿ ತಳವೂರಿ ಬದುಕು ಕಟ್ಟಿಕೊಂಡೆ. ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಪಳಗುತ್ತಾ ಮುಂದೆ ಸಾಗಿದೆ.
ಪುಣೆ ಬಂಟರ ಸಂಘದ “ನಂಟು’
ನಾಯಕತ್ವದಲ್ಲಿ ನನಗೆ ಎಳವೆಯಿಂದಲೇ ಬಹಳ ಆಸಕ್ತಿ. ಪುಣೆ ಬಂಟರ ಸಂಘದಲ್ಲಿ ಆ ಕಾಲದಲ್ಲಿ ವರ್ಷಕ್ಕೊಂದು ಕಾರ್ಯ ಕ್ರಮವಾಗುತ್ತಿತ್ತು. ತಿಲಕ್ ಸ್ಮಾರಕ ಭವನದಲ್ಲಿ ನಡೆಯುತ್ತಿದ್ದ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಸಭಾಗೃಹದ ಕೊನೆಯ ಸೀಟಿನಲ್ಲಿ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆ. ವೇದಿಕೆಯನ್ನು ಏರುತ್ತಿದ್ದ ಗಣ್ಯರ ಮಾತುಗಳನ್ನು ಆಲಿಸುತ್ತಿದ್ದೆ. ಆಗ ನನಗೆ ಅದೊಂದು ಜಾತ್ರೆಯ ಹಾಗೆ ಕಾಣುತ್ತಿತ್ತು. ಮುಂದಿನ ದಿನಗಳಲ್ಲಿ ಸಂಘದ ಒಡನಾಟ ಬೆಳೆಸಿಕೊಂಡೆ. ಮುಂದೆ ನನಗೆ ಸಂಘದ ಕ್ಯಾಟರಿಂಗ್ ಜವಾಬ್ದಾರಿಯನ್ನು ನೀಡಿದರು. ಅದನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾದೆ. ಅನಂತರ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದೆ.
“ಈ ನಲ್ಕೆ ದಾಯೆ’…?
ಒಂದು ದಶಕದ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ತುಳುನಾಡಿನ ದೈವಾರಾಧನೆಯ ಪ್ರಾತ್ಯಕ್ಷಿಕೆಯನ್ನು ಯಾವುದೇ ರೀತಿಯ ಅವಮಾನ, ಅಗೌರವ ತೋರದ ರೀತಿಯಲ್ಲಿ ವೇದಿಕೆಯಲ್ಲಿ ಪ್ರದರ್ಶಿಸಿದ್ದೆವು. ದೈವವು ಈ ಸಂದರ್ಭದಲ್ಲಿ ಅಂದಿನ ಅಧ್ಯಕ್ಷ ಸದಾನಂದ ಶೆಟ್ಟಿಯವರಿಗೆ “ಇಂದು ನಾನು ನೆಲೆಯಿಲ್ಲದೆ ಈ ಪುಣ್ಯ ಮಣ್ಣಿನಲ್ಲಿದ್ದು, ನನಗೊಂದು ನೆಲೆ ಬೇಕಾಗಿದೆ. ಭವಿಷ್ಯದಲ್ಲಿ ನಿಮ್ಮೆಲ್ಲರ ಕೈಯಿಂದಲೇ ನಾನು ನೆಲೆ ಕಾಣುವ ದಿನಗಳು ಬರಲಿವೆೆ’ ಎಂದು ನುಡಿ ನೀಡಿತ್ತು. ದೈವದ ನುಡಿ ಇಂದು ನಿಜವಾಗುತ್ತಿದ್ದು, ಅದೇ ದೈವಾರಾಧನೆಯ ಪ್ರಾತ್ಯಕ್ಷಿಕೆಯು ಉದ್ಘಾಟನ ಸಂದರ್ಭದಲ್ಲಿ “ಈ ನಲ್ಕೆ ದಾಯೆ’ ಎಂಬ ಹೆಸರಿನಿಂದ ಪ್ರದರ್ಶನ ಕಾಣಲಿದೆ.
ಸಂಘಕ್ಕೆ ಬದಲಾವಣೆಯ ಗಾಳಿ…?
ಸಂಘದಲ್ಲಿ ನನಗೆ ನೀಡಿದ ಎಲ್ಲಾ ರೀತಿಯ ಪದವಿಗಳನ್ನು ಧಕ್ಕೆ ಬಾರದ ರೀತಿಯಲ್ಲಿ ನಿರ್ವಹಿಸಿದ್ದೇನೆ. ಸಂಘದ ಕ್ರೀಡೋತ್ಸವ, ವಾರ್ಷಿಕೋತ್ಸವ, ವಿಹಾರಕೂಟ ಇನ್ನಿತರ ಕಾರ್ಯಕ್ರಮಗಳಿಗೆ ಹೊಸತನವನ್ನು ನೀಡಿದೆ. ಸಂಘದ ಸದಸ್ಯತನವನ್ನು ಸುಮಾರು 2000ದವರೆಗೆ ಕೊಂಡೊಯ್ದು ಎಲ್ಲರೂ ಆಶ್ಚರ್ಯಪಡುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಮಕ್ಕಳಿಗೆ ಶೈಕ್ಷಣಿಕ ನೆರವು, ಆರೋಗ್ಯ ನೆರವು ಇನ್ನಿತರ ಹಲವು ಯೋಜನೆಗಳನ್ನು ಯಶಸ್ವಿಯಾಗಿಸುವಲ್ಲಿ ಶ್ರಮಿಸಿದ್ದೇನೆ. ಸಂಘಕ್ಕೆ ಬದಲಾವಣೆಯ ಗಾಳಿ ನನ್ನಿಂದಲೇ ಬೀಸಿತು ಎಂದು ನಾನು ಹೇಳುತ್ತಿಲ್ಲ. ಸಂಘದ ಅಭಿವೃದ್ಧಿಯಲ್ಲಿ ಮಾಜಿ ಅಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಪ್ರಸ್ತುತ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದ ಸಹಕಾರವನ್ನು ಮರೆಯುವಂತಿಲ್ಲ.
ಪ್ರಾದೇಶಿಕ ಸಮಿತಿಗಳ ಸ್ಥಾಪನೆ
ಸಂಘದ ಸಮಾಜಪರ ಕಾರ್ಯಕ್ರಮಗಳು ಪುಣೆಯ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಸಮಾಜ ಬಾಂಧವರ ಮನೆ-ಮನಗಳನ್ನು ತಲುಪಲು ಎರಡು ಪ್ರಾದೇಶಿಕ ಸಮಿತಿಗಳನ್ನು ಸ್ಥಾಪಿಸಲಾಯಿತು. ಇದರಿಂದ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರು ಸಂಘಕ್ಕೆ ಹತ್ತಿರವಾದರು. ಸಮಾಜ ಬಾಂಧವರು ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಾರಂಭಿಸಿದರು. ಮುಂಬಯಿ ಬಂಟರ ಸಂಘ ಆಯೋಜಿಸಿದ ವಿಶ್ವ ಕಲೋತ್ಸವದಲ್ಲಿ ಪುಣೆ ಬಂಟರ ಸಂಘದ 100 ಮಂದಿ ಕಲಾವಿದರು ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಿ ಪ್ರಶಸ್ತಿಗೆ ಭಾಜನವಾಗಿರುವುದು ನನಗೆ ಹೆಮ್ಮೆ. ಮುಂಬಯಿಯ ವಿಶ್ವ ಬಂಟರ ಕ್ರೀಡೋತ್ಸವದಲ್ಲಿ ಹಲವಾರು ಪ್ರಶಸ್ತಿಗಳು ಪುಣೆ ಬಂಟರ ಸಂಘಕ್ಕೆ ಬಂದಿವೆ. ಇವು ಪುಣೆ ಬಂಟರ ಸಂಘವನ್ನು ಹೊರಗಿನವರು ಗುರುತಿಸುವಲ್ಲಿ ಮಹತ್ತರ ಪಾತ್ರವಹಿಸಿತು. ಮುಖ್ಯವಾಗಿ ಪುಣೆ, ಮುಂಬಯಿ ಸೇರಿದಂತೆ ವಿವಿಧೆಡೆಗಳಲ್ಲಿ ನೆಲೆಸಿರುವ ತುಳು-ಕನ್ನಡಿಗರ ಪ್ರೀತಿಯನ್ನು ಗಳಿಸಿಕೊಂಡೆ.
ಪುಣೆಯಲ್ಲೊಬ್ಬ “ಐಕಳ ಹರೀಶ್ ಶೆಟ್ಟಿ’…?
ನನ್ನ ಉತ್ಸಾಹದ ಚಿಲುಮೆಯಂತಿದ್ದ ಸಮಾಜ ಸೇವೆಯನ್ನು ಕಂಡ “ಐಕಳ ಹರೀಶ್ ಶೆಟ್ಟಿ’ ಅವರು ಪುಣೆಯಲ್ಲೊಬ್ಬರು “ಐಕಳ ಹರೀಶ್ ಶೆಟ್ಟಿ’ ಇದ್ದಾರೆ ಎಂದು ಒಮ್ಮೆ ನುಡಿದಿದ್ದರು. ನನ್ನ ಸಮಾಜ ಸೇವೆಗೆ ಹಲವು ಮಂದಿ ಪ್ರೇರಣೆಯಿದ್ದರೂ ಕೂಡಾ ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಸೇವೆಯ ಶೈಲಿ ನನಗಿಷ್ಟ. ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಅವರ ಶೇ. 10ರಷ್ಟು ಸಂಘಟನಾತ್ಮಕ ಕೌಶಲ ನನ್ನಲ್ಲಿಲ್ಲ. ಆದರೆ ಅವರನ್ನು ನಾನು ಅನುಕರಣೆ ಮಾಡುತ್ತಿಲ್ಲ. ಅವರ ಮಾರ್ಗದರ್ಶನದಿಂದ ನನ್ನ ಹಾದಿಯಲ್ಲೇ ನಾನು ಸಾಗುತ್ತಿದ್ದೇನೆ. ಅವರಂತೆ ಅನೇಕ ಮಂದಿ ಹಿರಿಯರು ಕಾಲ ಕಾಲಕ್ಕೆ ಮಾರ್ಗದರ್ಶನ, ಸಲಹೆಗಳನ್ನು ನೀಡಿದ್ದಾರೆ. ಒಟ್ಟಿನಲ್ಲಿ ಪುಣೆಯಲ್ಲಿ ಬಂಟರ ಭವನವೊಂದು ತಲೆ ಎತ್ತಿ ನಿಲ್ಲಬೇಕು ಎಂಬ ಇಚ್ಛೆ ನನ್ನದಾಗಿತ್ತು.
ಪುಣೆ “ಬಂಟರ ಸಾಂಸ್ಕೃತಿಕ ಭವನ’ ನಿರ್ಮಾಣ ಕಾರ್ಯ
ಸಂಘದ ಅಂದಿನ ಅಧ್ಯಕ್ಷ ಗುಂಡುರಾಜ್ ಶೆಟ್ಟಿ ಅವರ ಕಾಲದಲ್ಲಿ ಭವನ ನಿರ್ಮಾಣಕ್ಕೆ ಜಮೀನು ಖರೀದಿಸಿ ಪೂರ್ವಸಿದ್ಧತೆ ಮಾಡಲಾಗಿತ್ತು. ಅನಂತರ ಅಧ್ಯಕ್ಷ ಸದಾನಂದ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಭವನ ನಿರ್ಮಾಣ ಯೋಜನೆಗೆ ಶಿಲಾನ್ಯಾಸಗೈದು ನಿರ್ಮಾಣ ಕಾರ್ಯ ಪ್ರಾರಂಭಗೊಂಡಿತು. ಮಹಾದಾನಿ, ಸಮಾಜ ಸೇವಕ ಓಣಿಮಜಲು ಜಗನ್ನಾಥ ಶೆಟ್ಟಿ ಅವರ ಅಧ್ಯಕ್ಷತೆಯ ಸಂದರ್ಭಲ್ಲೂ ಭವನ ನಿರ್ಮಾಣದ ಯೋಜನೆಯು ಅಭೂತಪೂರ್ವವಾಗಿ ಸಾಗಿತು. ಆನಂತರದ ದಿನಗಳಲ್ಲಿ ಭವನ ನಿರ್ಮಾಣ ಮಾತ್ರ ಆರ್ಥಿಕ ಕೊರತೆಯಿಂದ ಹಾಗೂ ಇನ್ನಿತರ ಸಮಸ್ಯೆಗಳಿಂದ ಕುಂಟುತ್ತ ಸಾಗಿತು. ನಾನು ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷನಾಗಿ ಮತ್ತು ಸಂಘದ ಅಧ್ಯಕ್ಷನಾಗಿ “ಮಾಡು ಇಲ್ಲವೆ ಮಡಿ’ ಎಂಬ ನಾಣ್ನುಡಿಯಂತೆ ನಿರ್ಮಾಣ ಕಾರ್ಯಕ್ಕೆ ಮತ್ತಷ್ಟು ವೇಗ ತುಂಬಿದೆ. ಪ್ರತಿಯೋರ್ವ ಮಾಜಿ ಅಧ್ಯಕ್ಷರು ಹಾಗೂ ಸಮಾಜದ ಹಿರಿಯರು, ದಾನಿಗಳ ಮನೆ-ಮನೆಗೆ ತೆರಳಿ ಸಹಕರಿಸುವಂತೆ ಅವರ ಕಾಲು ಹಿಡಿದೆ. ನನ್ನ ತುಡಿತವನ್ನು ಕಂಡು ನನಗೆ ಬೆನ್ನೆಲುಬಾಗಿ ನಿಂತರು. ಮಾಜಿ ಅಧ್ಯಕ್ಷರು ಹಾಗೂ ಸಮಿತಿಯವರು ನೀಡಿದ ದೇಣಿಗೆಯಿಂದ ಭವನ ನಿರ್ಮಾಣ ಕಾರ್ಯಕ್ಕೆ ಹೊಸ ಚೈತನ್ಯ ತುಂಬಿತು. ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಅವರ ಬೃಹತ್ ದೇಣಿಗೆಯಿಂದ ಇಂದು ಭವನ ಕಂಗೊಳಿಸುತ್ತಿದೆ ಎನ್ನಲು ಸಂತೋಷವಾಗುತ್ತಿದೆ.
ಭವನಕ್ಕೆ ದಾನಿಗಳ ಆಗಮನ
ಅದೇ ಸಂದರ್ಭದಲ್ಲಿ ಸಂಘದ ಸಮಾರಂಭವೊಂದಕ್ಕೆ ಮುಂಬಯಿ ಬಂಟ ಸಮಾಜದ ಮಹಾ ದಾನಿಗಳಾದ ಚರಿಷ್ಮಾ ಬಿಲ್ಡರ್ನ ಸುಧೀರ್ ಶೆಟ್ಟಿ, ಆಲ್‌ಕಾರ್ಗೋ ಇದರ ಶಶಿಕಿರಣ್ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾಲಯದ ವಿನಯ್ ಹೆಗ್ಡೆ ಇವರು ಆಗಮಿಸಿದ್ದರು. ಭವನದ ಸ್ಥಿತಿಯನ್ನು ಕಂಡು ಈ ಮೂವರು ಮಹನೀಯರು ಬೃಹತ್ ದೇಣಿಗೆ ನೀಡುವುದಾಗಿ ಘೋಷಿಸಿದರು. ಅನಂತರದ ದಿನಗಳಲ್ಲಿ ನಗರ ಸೇವಕ ಸದಾನಂದ ಶೆಟ್ಟಿ, ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜರ ಇವರು ಆಗಮಿಸಿ ಭವನಕ್ಕೆ ಬೃಹತ್ ದೇಣಿಗೆ ನೀಡಿದರು. ಹೀಗೆ ಮುಂಬಯಿ ಹಾಗೂ ಊರ-ಪರವೂರಿನ ಮಹಾ ದಾನಿಗಳೆಲ್ಲ ಬಂದು ಭವನವನ್ನು ವೀಕ್ಷಿಸಿ ದೇಣಿಗೆ ನೀಡಿದ ಪರಿಣಾಮ ಭವನದ ಚಿತ್ರಣ ಬದಲಾಗಲು ಪ್ರಾರಂಭವಾಯಿತು.
ನನ್ನಿಂದ “ಸಾಧ್ಯವೇ ಇಲ್ಲ’ ಎಂದು ಕಣ್ಣೀರಿಟ್ಟಿದ್ದೆ…!
ಪುಣೆ, ಮುಂಬಯಿ ಸಹಿತ ದೇಶ-ವಿದೇಶಗಳ ದಾನಿಗಳು ನನ್ನನ್ನು ಪ್ರೋತ್ಸಾಹಿಸಿದ ಪರಿಣಾಮ ನನ್ನ ಕುಟುಂಬ- ಉದ್ಯಮವನ್ನು ಸಂಪೂರ್ಣವಾಗಿ ಬದಿಗಿಟ್ಟು ಭವನ ನಿರ್ಮಾಣದೆಡೆಗೆ ವಾಲಿಕೊಂಡೆ. ಬಂಟರ ಸಂಘದ ಕಚೇರಿಯನ್ನು ನನ್ನ ತ್ರಿತಾರಾ ಹೊಟೇಲ್‌ನ ಕಚೇರಿಗೆ ವರ್ಗಾಯಿಸಿಕೊಂಡೆ. ಸಂಘದ ಕಾರ್ಯಕಾರಿ ಸಮಿತಿಗೆ ಹುರುಪು ತುಂಬಿದೆ. ಹಂತ ಹಂತವಾಗಿ ಭವನಕ್ಕೆ ವಿನೂತನ ರೀತಿಯಲ್ಲಿ ಹೊಳಪು ನೀಡಲು ಮುಂದಾದೆ. ಮುಂಬಯಿ ಇನ್ನಿತರ ಪ್ರದೇಶಗಳ ಗಣ್ಯರನ್ನು ಸಂಘದ ಕಾರ್ಯಕ್ರಮಗಳಿಗೆ ಆಹ್ವಾನಿಸಿ, ಪ್ರತಿಯೋರ್ವ ದಾನಿಯನ್ನು ಸಂಪರ್ಕಿಸಿ, ವೈಯಕ್ತಿಕವಾಗಿ ಭೇಟಿಯಾಗಿ ಭವನ ನಿರ್ಮಾಣದ ಬಗ್ಗೆ ತಿಳಿಸಿದಾಗ ಎಲ್ಲಾ ದಾನಿಗಳು ತಮ್ಮಿಂದಾದ ಸಹಾಯವನ್ನು ನೀಡಿ ಪ್ರೋತ್ಸಾಹಿಸಿದರು. ನನ್ನೊಂದಿಗೆ ಕಾರ್ಯಕಾರಿ ಸಮಿತಿಯು ಕೂಡಾ ಹಗಲಿರುಳು ನಿದ್ದೆ ಬಿಟ್ಟು ಇದಕ್ಕಾಗಿ ಶ್ರಮಿಸಿದೆ. ನೋಟು ಅಪಮೌಲ್ಯ ಹಾಗೂ ಹೈವೇ ಸಮೀಪದ ಹೊಟೇಲ್‌ಗಳು 6 ತಿಂಗಳ ಕಾಲ ಮುಚ್ಚಿದ್ದ ಸಂದರ್ಭದಲ್ಲೂ ಸುಮ್ಮನೆ ಕೂರದೆ ಅದಮ್ಯವಾಗಿ ಕಾರ್ಯನಿರ್ವಹಿಸಿದ್ದೇನೆ. ಒಂದು ಕಾಲದಲ್ಲಿ ಇದು ನನ್ನಿಂದ ಸಾಧ್ಯವೇ ಇಲ್ಲ ಎಂದು ಕಣ್ಣಿರು ಹಾಕಿದ ಸಂದರ್ಭವೂ ಉಂಟು.
ಸಂಘದ ಕಾನೂನು ಸಮಸ್ಯೆಗಳಿಗೆ ತೆರೆ
ಭವನ ನಿರ್ಮಾಣದ ಬಗ್ಗೆ ಇದ್ದ ಕಾನೂನಿನ ತೊಡಕು, ರಸ್ತೆ ವಿವಾದ, ಚಾರಿಟಿ ಕಮಿಷನ್‌ನಲ್ಲಿದ್ದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಯಿತು. ಪುಣೆ ಮಹಾನಗರ ಪಾಲಿಕೆಯಿಂದ ಭವನ ನಿರ್ಮಾಣಕ್ಕೆ ಇದ್ದ ತೊಡಕುಗಳನ್ನು ಸಂಪೂರ್ಣವಾಗಿ ನಿವಾರಿಸಲಾಯಿತು. ಪ್ರಸ್ತುತ ಮಿತ್ರರ ಸಹಾಯದಿಂದ ಭವನದ ಉದ್ಘಾಟನ ಸಮಾರಂಭಕ್ಕೆ ಎರಡು ತಿಂಗಳ ಮುಂಚಿತವಾಗಿಯೇ ಪುಣೆ ಮಹಾನಗರ ಪಾಲಿಕೆಯಿಂದ ಕಂಪ್ಲೀಷನ್ ಸರ್ಟಿಫಿಕೇಟ್ ಪಡೆದಿರುವುದು ನಮ್ಮ ಸಮಿತಿಗೆ ಹೆಮ್ಮೆಯ ವಿಷಯವಾಗಿದೆ.
“ದೈವ-ದೇವರ ಮತ್ತು ತಾಯಿ’ಯ ಕೆಲಸ
ಕಳೆದ ಕೆಲವು ವರ್ಷಗಳಿಂದ ಇದು ಸಂಘದ ಕೆಲಸವಲ್ಲ, ದೈವ-ದೇವರು, ತಾಯಿ-ತಂದೆಯ ಕಾರ್ಯ ಎಂಬಂತೆ ಮಾಜಿ ಅಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು, ಪುಣೆಯ ಇತರ ಬಂಟ ಸಂಘಟನೆಗಳು, ಕಾರ್ಯಕಾರಿ ಸಮಿತಿಯವರು ನನ್ನೊಂದಿಗೆ ಕೈಜೋಡಿಸಿದ್ದಾರೆ. ಮುಂಬಯಿಯ ಆರ್ಕಿಟೆಕ್ಟ್ ಭರತ್ ಶೆಟ್ಟಿ ಇವರ ಸಹಕಾರವನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ನಿಜ ಹೇಳುವುದಾದರೆ ದಾನಿಗಳಿಂದಲೇ ಸುಮಾರು 27 ಕೋ. ರೂ. ಗಳು ದೇಣಿಗೆ ಸಂಗ್ರಹಗೊಂಡಿರುವುದು ಸಂತೋಷದ ವಿಷಯ. ಇದು ನನ್ನಿಂದಲೇ ಎಂದು ನಾನು ಹೇಳುತ್ತಿಲ್ಲ. ಪುಣೆ ಹಾಗೂ ಮುಂಬಯಿಯ ದಾನಿಗಳು ನೆಲೆಸಿರುವ ಗಲ್ಲಿ ಗಲ್ಲಿಗೆ ಹೋಗಿ ದೇಣಿಗೆ ಸಂಗ್ರಹಿಸಿದ್ದೇವೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಚಿರಋಣಿಯಾಗಿದ್ದೇನೆ.
“ಬಂಟ ಭೂಷಣ ಮೂಲ್ಕಿ ಸುಂದರ್‌ರಾಮ್ ಶೆಟ್ಟಿ’
ಬಂಟ ಸಮಾಜದ ಉದ್ಧಾರದಲ್ಲಿ ಸುಂದರ್‌ರಾಮ್ ಶೆಟ್ಟಿ ಇವರ ಕೊಡುಗೆ ಅಪಾರವಾಗಿದೆ. ವಿಜಯ ಬ್ಯಾಂಕಿನ ಅಭ್ಯುದಯ ಹರಿಕಾರರಾಗಿರುವ ಸುಂದರರಾಮ ಶೆಟ್ಟಿ ಇವರ ಮೂರ್ತಿಯನ್ನು ಭವನದಲ್ಲಿ ಪ್ರತಿಷ್ಠಾಪಿಸುವುದರೊಂದಿಗೆ ಬಂಟ ಕುಲಭೂಷಣ ಜಸ್ಟೀಸ್ ಕೆ. ಎಸ್. ಹೆಗ್ಡೆ, ಶಿವಾಜಿ ಮಹಾರಾಜ, ಶ್ರೀ ನಿತ್ಯಾನಂದ ಸ್ವಾಮಿ ಹಾಗೂ ಶ್ರೀ ಸಾಯಿಬಾಬಾರ ಮೂರ್ತಿಯನ್ನು ಭವನದಲ್ಲಿ ಪ್ರತಿಷ್ಠಾಪಿಸಲಾಗಿದೆ. ಭವನವು ಕರ್ನಾಟಕ-ಮಹಾರಾಷ್ಟ್ರದ ಸ್ನೇಹಸೇತುವಾಗಿ ಕಂಗೊಳಿಸುತ್ತಿದ್ದು, ಇದರ ನಿರ್ಮಾಣದಲ್ಲಿ ಪಾಲು ಪಡೆದ ನಾನು ಭಾಗ್ಯವಂತ.
ದೇಣಿಗೆ ನೀಡಲು ಹಿಂಜರಿಯುತ್ತಿದ್ದರು
ಪುಣೆಯ ಪ್ರತಿಯೊಂದು ಮನೆಗಳಿಗೆ ಕಾರ್ಯಕಾರಿ ಸಮಿತಿ ಮತ್ತು ಮಹಿಳಾ ವಿಭಾಗದವರು ತೆರಳಿ ದೇಣಿಗೆ ಸಂಗ್ರಹಿಸಿದ್ದಾರೆ. ಇಲ್ಲಿ ನಮಗೆ ಜಾತಿ, ಮತ ಭೇದವಿಲ್ಲ. ಎಲ್ಲರೂ ಒಂದೇ ಎಂಬ ಭಾವನೆಯಿದೆ. ಒಂದು ಕಾಲದಲ್ಲಿ ಯಾರು ನಮಗೆ ದೇಣಿಗೆ ನೀಡಲು ಹಿಂಜರಿಯುತ್ತಿದ್ದರೂ, ಅವರು ಭವನದ ಕಾರ್ಯವನ್ನು ಕಂಡು ಪ್ರಸ್ತುತ ಸ್ವತಃ ಮುಂದೆ ಬಂದು ನಮಗೆ ಸಹಕರಿಸುತ್ತಿದ್ದಾರೆ. ಯಾವುದೇ ರೀತಿಯ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಈ ಬೃಹತ್ ಯೋಜನೆಯನ್ನು ಸಂಪೂರ್ಣಗೊಳಿಸಿದ್ದೇವೆ.
“ವಿಷವನ್ನು ಅಮೃತ’ವನ್ನಾಗಿಸಿಕೊಂಡು ಮುನ್ನಡೆದೆ
ಯಾರು ಕಾಲೆಳೆದರು ಅವರ ಕೈ ಎಳೆಯಲು ನಾನು ಹೋಗಲಿಲ್ಲ. ಉತ್ತಮ ಕಾರ್ಯಗಳನ್ನು ಮಾಡುವಾಗ ವಿಘ್ನಗಳು ಬರುವುದು ಸಹಜ. ಆ ವಿಘ್ನಗಳ ಹೆಗಲಿಗೆ ಕೈಹಾಕಿಕೊಂಡು ಅದನ್ನು ನಿರ್ವಿಘ್ನವನ್ನಾಗಿಸಿಕೊಂಡೆ. ವಿಷವನ್ನು ಅಮೃತವನ್ನಾಗಿಸಿಕೊಂಡು ಮುನ್ನಡೆದೆ. ಯಾವುದೇ ವಿಚಾರದಲ್ಲಿ ನಮ್ಮ ಮಾತು ಕೆಲಸವಾಗಬಾರದು. ಕೆಲಸ ಮಾತಾಗಬೇಕು ಮತ್ತು ನಮ್ಮ ಮಾತು ಕೆಲಸಕ್ಕೆ ಸೇತುವೆಯಾಗಬೇಕು ಎಂಬ ಮಾತನ್ನು ಅರಿತು ಭವನ ನಿರ್ಮಾಣದ ಎಲ್ಲಾ ಕಾರ್ಯಗಳಲ್ಲಿ ದುಂದುವೆಚ್ಚಕ್ಕೆ ಮುಂದಾಗದೆ, ನಿಯಮಿತ ವೆಚ್ಚಕ್ಕೆ ಮೊದಲ ಆದ್ಯತೆಯನ್ನು ನೀಡಿದೆ.
ಬಸ್‌ನಲ್ಲಿ ರಟ್ಟೆ ಹಿಡಿದಿದ್ದರು…
ಹತ್ತನೇ ತರಗತಿಯವರೆಗೆ ಊರಿನಲ್ಲಿ ಕಲಿತು, ಮನೆಯ ಸಮಸ್ಯೆಗಳನ್ನು ಅರಿತು ದಿಕ್ಕುತೋಚದೆ ಪುಣೆಗೆ ಬರುವ ಮನಸ್ಸು ಮಾಡಿದೆ. ಮನೆ ಸಮೀಪದ ಪುರೋಹಿತರೊಬ್ಬರು ಪುಣೆಯ ಬಸ್ ಟಿಕೆಟ್ ತೆಗೆದಿದ್ದೇನೆ ಎಂದು ಹೇಳಿ ಬಸ್ ಹತ್ತಿಸಿಯೇ ಬಿಟ್ಟರು. ಬಸ್ ಬೆಳ್ಮಣ್‌ಗೆ ಬರುವಷ್ಟರಲ್ಲಿ ಬಸ್‌ನವರು ಟಿಕೆಟ್ ಇಲ್ಲದೆ ಕೆಳಗಿಳಿಯುವಂತೆ ರಟ್ಟೆ ಹಿಡಿದರು. ತುಂಬಿ ಬಂದ ನನ್ನ ಕಣ್ಣೀರ ಧಾರೆಯನ್ನು ಕಂಡು ಮನ ಕರಗಿ ಬಸ್‌ನ ಕ್ಯಾಬೀನ್‌ನಲ್ಲಿ ಕುಳಿತುಕೊಳ್ಳಲು ಅನುಮತಿ ನೀಡಿದರು. “ಹೇಗೋ…ಎಧ್ದೋ…ಬಿಧ್ದೋ…ಕೊನೆಗೂ’ ಪುಣೆಗೆ ಬಂದಿಳಿದೆ. ಊರಿಗೆ ಹೋದಾಗ ಪುರೋಹಿತರಲ್ಲಿ ಟಿಕೆಟ್‌ಗೆ ಬಗ್ಗೆ ವಿಚಾರಿಸಿದಾಗ, ಅವತ್ತು ನೀನು ಚಡ್ಡಿಯಲ್ಲಿ ಹೋಗಿದ್ದೆ, ಇವತ್ತು ಪ್ಯಾಂಟ್‌ನಲ್ಲಿ ಬಂದೆ. ಮುಂದೊಂದು ದಿನ ಎಲ್ಲವನ್ನು ಸಾಧಿಸಿ…ಎಲ್ಲರನ್ನು ಗೆದ್ದು ಬರುವೆ…ಎಂದು ಆಶೀರ್ವದಿಸಿದ್ದರು. ಆ ಕಾಲ ಈಗ ಕೂಡಿ ಬಂದಿದೆ.
ಮನಸ್ಸಲ್ಲಿತ್ತು ಭವನದ ಕನಸು
ಖಂಡಿತವಾಗಿಯೂ ಇಲ್ಲ. ಪ್ರತಿಯೊಬ್ಬರ ಮನಸ್ಸಿನಲ್ಲಿ ನಾನು ಅಧ್ಯಕ್ಷ ಪದವಿಗಾಗಿ ಟೊಂಕ ಕಟ್ಟಿದ್ದೆ ಎಂಬ ಭಾವನೆಯಿತ್ತು. ಅದಕ್ಕೆ ನಾನು ಅಂದು ಉತ್ತರ ನೀಡಲು ಹೋಗಲಿಲ್ಲ. ನನ್ನ ಮನಸ್ಸಿನಲ್ಲಿ ಇದ್ದದ್ದು ಪುಣೆ ಬಂಟರ ಭವನ ನಿರ್ಮಾಣ ಮಾತ್ರ. ಅದು ಇಂದು ಯಶಸ್ವಿಯಾಗಿದೆ. ಯಾರು ನನ್ನನ್ನು ಹೀಯಾಳಿಸಿದ್ದಾರೋ ಅವರೇ ಇಂದು ಸಂತೋಷಣ್ಣನಿಗೆ ಒಳ್ಳೆಯ ಮನಸ್ಸಿದೆ, ಅವರಲ್ಲಿ ಮೋಸ-ಕಪಟವಿಲ್ಲ, ಹೃದಯ ವೈಶಾಲ್ಯವಿದೆ ಎಂದು ಹೇಳುತ್ತಿದ್ದಾರೆ. ನನ್ನ ಮುಂದಾಳತ್ವದಲ್ಲಿ ಭವನ ನಿರ್ಮಾಣಕ್ಕೆ ನಾನು ನಂಬಿರುವ ದೈವ-ದೇವರು, ನನ್ನ ಹೆತ್ತವರು, ನನ್ನ ಗುರುಗಳ ಆಶೀರ್ವಾದವಿತ್ತು ಎಂದು ನನ್ನ ಭಾವನೆ. ಪ್ರಾರಂಭದ ದಿನಗಳಲ್ಲಿ ಭವನ ನಿರ್ಮಾಣವೊಂದು ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. ಇದು ಪುಣೆ ಬಂಟರ ಗೌರವದ ಪ್ರತೀಕವೂ ಆಗಿತ್ತು. ಈ ಕಾರಣದಿಂದಲೇ ಬಂಟರ ಭವನ ಎಂಬ ಸತ್ಯದ ಮಂಚಕ್ಕೆ ನಾನು ಕೈ ನೀಡಿದ್ದೆ. ಅದಕ್ಕೆ ತಕ್ಕಂತೆ ನನ್ನ ಅನಾರೋಗ್ಯದ ಸಂದರ್ಭದಲ್ಲೂ ಯಾವುದೇ ರೀತಿಯ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದ್ದೇನೆ. ನಾನು ಇಲ್ಲಿ ಮಲ್ಲಿಗೆ ಹಾರದ ದಾರದ ಹಾಗೆ. ಹಾರದಲ್ಲಿ ಪೋಣಿಸಿದ ಮಲ್ಲಿಗೆ ದಾನಿಗಳು ಇದ್ದ ಹಾಗೆ. ಅವರಿಲ್ಲದೆ ಈ ಹಾರ ಸಂಪೂರ್ಣಗೊಳ್ಳಲು ಸಾಧ್ಯವೇ ಇಲ್ಲ.
“ಆಶೀರ್ವಾದ’ದ ನುಡಿಗಳು
ಪ್ರತಿಯೋರ್ವ ದಾನಿ, ಅತಿಥಿ-ಗಣ್ಯರಿಗೆ ಅವರನ್ನು ಮುಖತಃ ಭೇಟಿಯಾಗಿ ಭವನ ಉದ್ಘಾಟನ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಿದ್ದೇನೆ. ಎಲ್ಲ ದಾನಿಗಳು ಭವನದ ಬಗ್ಗೆ ಕೇಳಿ ತಿಳಿದು ಸಂತೋಷಟ್ಟಿದ್ದಾರೆ. ಅವರು ನೀಡಿದ ದೇಣಿಗೆಯು ಉತ್ತಮವಾಗಿ ವಿನಿಯೋಗವಾಗಿದೆ ಎಂಬುವುದು ಭವನಕ್ಕೆ ಭೇಟಿಕೊಟ್ಟಾಗ ಅನುಭವಕ್ಕೆ ಬರುತ್ತದೆ. ಬೃಹತ್ ದೇಣಿಗೆ ನೀಡಿದ ಮಹಾ ದಾನಿಗಳು ಮತ್ತು ಅವರು ಸೂಚಿಸಿದ ಹೆಸರನ್ನು ಅವರ ಭಾವಚಿತ್ರದೊಂದಿಗೆ ಭವನದ ಸೂಕ್ತ ಸ್ಥಳಗಳಿಗೆ ನೀಡಲಾಗಿದೆ. ದಾನಿಗಳಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಗೌರವ ನೀಡಲಾಗಿದೆ. ಸಂಘದ ಮಾಜಿ ಅಧ್ಯಕ್ಷರು ತುಂಬಾ ಸಂತೋಷದಿಂದ ಸಹಕರಿಸುತ್ತಿದ್ದಾರೆ. ಆತ್ಮೀಯ ಮಿತ್ರರು ನೀಡಿದ ಬಲವನ್ನು ಮರೆಯುವಂತಿಲ್ಲ.
ಪುಣೆ “ಬಂಟರ ಭವನ ತುಳು-ಕನ್ನಡಿಗರ’ ಹೆಮ್ಮೆ
ಪುಣೆ ಬಂಟರ ಭವನ ಕೇವಲ ಸಮಾಜದ ಭವನವಲ್ಲ. ಇದು ಎಲ್ಲ ತುಳು-ಕನ್ನಡಿಗರ ಹೆಮ್ಮೆಯಾಗಿದೆ. ಪುಣೆ ಸಹಿತ ಮುಂಬಯಿಯ ಪ್ರತಿಯೊಬ್ಬರು ಇದರ ಪ್ರಯೋಜನವನ್ನು ಪಡೆಯಬಹುದು. ಭವನಕ್ಕೆ ಜಾತಿ, ಮತ, ಧರ್ಮವನ್ನು ಮರೆತು ಎಲ್ಲರು ಸಹಕರಿಸಿದ್ದಾರೆ. ಎ. 7 ಮತ್ತು 8 ರಂದು ಎರಡು ದಿನಗಳ ಕಾಲ ನಡೆಯಲಿರುವ ಉದ್ಘಾಟನ ಸಮಾರಂಭದಲ್ಲಿ ಪುಣೆ, ಮುಂಬಯಿ ಹಾಗೂ ಇನ್ನಿತರ ಉಪನಗರಗಳ ತುಳು-ಕನ್ನಡಿಗರು, ಸಮಾಜ ಬಾಂಧವರು ಪಾಲ್ಗೊಂಡು ಸಂಭ್ರಮದ ಯಶಸ್ಸಿಗೆ ಸಹಕರಿಸುವಂತೆ ನಾನು ಕೈಮುಗಿದು ನಮ್ರತೆಯಿಂದ ವಿನಂತಿಸುತ್ತಿದ್ದೇನೆ.
ಡಾ| ದಿನೇಶ್ ಶೆಟ್ಟಿ ರೆಂಜಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.