ಸಂಪೂರ್ಣ ಮಹಾರಾಷ್ಟ್ರ ಆವರಿಸಿದ ಮಾನ್ಸೂನ್
Team Udayavani, Jun 15, 2020, 9:20 AM IST
ಸಾಂದರ್ಭಿಕ ಚಿತ್ರ
ಮುಂಬಯಿ, ಜೂ. 14: ಕರಾವಳಿ ಮಹಾರಾಷ್ಟ್ರವನ್ನು ಅಪ್ಪಳಿಸಿದ ನಾಲ್ಕು ದಿನಗಳ ಅನಂತರ ನೈಋತ್ಯ ಮಾನ್ಸೂನ್ ಸ್ಥಿರವಾದ ಪ್ರಗತಿಯನ್ನು ಸಾಧಿಸಿದ್ದು, ಇದೀಗ ಸಂಪೂರ್ಣ ರಾಜ್ಯವನ್ನು ಆವರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರವಿವಾರ ತಿಳಿಸಿದೆ.
ಮಾನ್ಸೂನ್‌ನ ಪ್ರಗತಿಯು ಈವರೆಗೆ ಸಾಮಾನ್ಯವಾಗಿದೆ ಮತ್ತು ನಿರೀಕ್ಷಿತ ಮಾರ್ಗದಲ್ಲಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ 10 ದಿನಗಳಲ್ಲಿ ಮಧ್ಯ ಮತ್ತು ಉತ್ತರ ಮಹಾರಾಷ್ಟ್ರ ಹಾಗೂ ವಿದರ್ಭದ ಕೆಲವು ಭಾಗಗಳಲ್ಲಿ ನಿರಂತರ ಮಳೆಯಾಗಿದೆ ಎಂದು ಐಎಂಡಿಯ ಮುಂಬಯಿ ಕೇಂದ್ರದ ಉಪ ಮಹಾ ನಿರ್ದೇಶಕ ಕೆ. ಎಸ್. ಹೊಸಳಿಕರ್ ಅವರು ಮಾಹಿತಿ ನೀಡಿದ್ದಾರೆ. ನೈಋತ್ಯ ಮಾನ್ಸೂನ್ ರವಿವಾರ ಇಡೀ ರಾಜ್ಯವನ್ನು ಆವರಿಸಿದೆ ಎಂದವರು ಹೇಳಿದ್ದಾರೆ.
ಉತ್ತರ ಮಹಾರಾಷ್ಟ್ರ ಮತ್ತು ಮರಾಠವಾಡ ಪ್ರದೇಶದ ಹೆಚ್ಚಿನ ಭಾಗಗಳು ಪ್ರತಿವರ್ಷ ನೀರಿನ ಕೊರತೆಯನ್ನು ಎದುರಿಸುತ್ತವೆ. ಪ್ರಸಕ್ತ ವರ್ಷ ಈ ಪ್ರದೇಶಗಳಲ್ಲಿ ಮಳೆ ಬಂದಿರುವುದು ಉತ್ತಮ ಸಂಕೇತವಾಗಿದೆ. ಇದು ರೈತರ ಬಿತ್ತನೆ ಪೂರ್ವ ಚಟುವಟಿಕೆಗಳನ್ನು ವೇಗಗೊಳಿಸಲು ಸಹಾಯ ಮಾಡಲಿದೆ ಎಂದವರು ನುಡಿದಿದ್ದಾರೆ.
ಆದರೆ, ನಾಸಿಕ್ ಸೇರಿದಂತೆ ಕೆಲವು ನಗರ ಪ್ರದೇಶಗಳಲ್ಲಿ ಭಾರೀ ಮಳೆಯು ಕೆಲವು ಸಮಸ್ಯೆಗಳಿಗೆ ಕಾರಣವಾಯಿತು. ಶನಿವಾರ ಭಾರೀ ಮಳೆಯ ಅನಂತರ ನಾಸಿಕ್ ರೋಡ್ ಪೊಲೀಸ್ ಠಾಣೆಯೊಳಗೆ ನೀರು ನುಗ್ಗಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಮ್ಮ ಪ್ರದೇಶದಲ್ಲಿ ಸಂಜೆ 6 ಗಂಟೆ ಸುಮಾರಿಗೆ ಮಳೆ ಪ್ರಾರಂಭವಾಯಿತು ಮತ್ತು ಇದಾದ ಒಂದೆರಡು ಗಂಟೆಗಳಲ್ಲೇ ನಾಸಿಕ್ ರೋಡ್ ಪೊಲೀಸ್ ಠಾಣೆ ಮುಳುಗಡೆ ಹೊಂದಿತು. ನೀರನ್ನು ಹೊರಹಾಕಲು ಸರ್ವ ಸಿಬಂದಿಗಳು ಹರಸಾಹಸ ಮಾಡಬೇಕಾಯಿತು ಎಂದು ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.