ಮುಂಬಯಿ ಕನ್ನಡಿಗರಿಗೆ ರಾಜ್ಯೋತ್ಸವ ಪ್ರಶಸ್ತಿ ಯಾಕಿಲ್ಲ…?
Team Udayavani, Nov 3, 2017, 1:42 PM IST
ಮುಂಬಯಿ: “ಎಲ್ಲಾದರೂ ಇರು…ಎಂತಾದರೂ ಇರು…ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕವಿವಾಣಿಯಂತೆ ಮರಾಠಿ ಮಣ್ಣಿನಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯ ಬಣ್ಣಬನಿಯನ್ನು ಗಾಢಗೊಳಿಸಲು ಹಗಲಿರುಳು ಶ್ರಮಿಸಿ, ದಿನಂಪ್ರತಿ ಕನ್ನಡದ ತೇರನ್ನು ಎಳೆಯುತ್ತಿರುವ ಮುಂಬಯಿ ಕನ್ನಡಿಗರಿಗೆ ನವೆಂಬರ್ ಮೊದಲ ದಿನಮಾತ್ರ ರಾಜ್ಯೋತ್ಸವವಲ್ಲ. ಆದರೆ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂಬಯಿ ಸಾಧಕರೊಬ್ಬರಿಗೆ ಲಭಿಸುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಇಲ್ಲಿನ ಕನ್ನಡಿಗರು ಕೊನೆಗೂ ನಿರಾಸೆಯಿಂದ ರಾಜ್ಯೋತ್ಸವ ಪ್ರಶಸ್ತಿ ಮುಂಬಯಿಗರಿಗೆ ಯಾಕಿಲ್ಲ…? ಎಂದು ಆಕ್ರೋಶ ವ್ಯಕ್ತಪಡಿಸುವುದರೊಂದಿಗೆ ಕರ್ನಾಟಕ ಸರಕಾರದ ಮಲತಾಯಿ ಧೋರಣೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಒಂದೂವರೆ ಶತಮಾನಗಳ ಇತಿಹಾಸ…
ವಾಣಿಜ್ಯ ನಗರಿಯಾಗಿರುವ ಮುಂಬಯಿ ದೇಶದ ಆಗುಹೋಗುಗಳ ಕೇಂದ್ರ ಬಿಂದುವೂ ಹೌದು. ಸುಮಾರು 25 ಲಕ್ಷಕ್ಕೂ ಅಧಿಕ ಕನ್ನಡಿಗರು ನಗರ, ಉಪನಗರಗಳ ವಿವಿಧೆಡೆ ಗಳಲ್ಲಿ ನೆಲೆಸಿದ್ದಾರೆ. ಮುಂಬಯಿ ಕನ್ನಡಿಗರ ಸಾಂಸ್ಕೃತಿಕ, ಸಾಹಿತ್ಯಕ ಸಾಧನೆಗಳಿಗೆ ಗಟ್ಟಿ ಒಂದೂವರೆ ಶತಮಾನಗಳಿಗಿಂತಲೂ ಅಧಿಕ ಇತಿಹಾಸವಿದೆ. ಅದರಲ್ಲೂ ಕನ್ನಡವನ್ನು ಉಸಿರಾಗಿಸಿ ಕೊಂಡವರು ಮುಂಬಯಿ ಕನ್ನಡಿಗರು ಎಂದರೆ ತಪ್ಪಾಗಲಾರದು. ಇಲ್ಲಿರುವ ನೂರಾರು ಕನ್ನಡಪರ, ಜಾತೀಯಪರ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಶಾಲಾ-ಕಾಲೇಜುಗಳು, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಒಂದಲ್ಲ ಒಂದು ರೀತಿಯ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಿಗರ ಸಾಂಸ್ಕೃತಿಕ ಆಸ್ಮಿತೆಯನ್ನು ಬಿಂಬಿಸುತ್ತಿವೆ.
ಮುಂಬಯಿ ಕನ್ನಡಿಗರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ?
“ಕನ್ನಡಕ್ಕಾಗಿ ಮಾಡಿದ ಕೆಲಸ ಬರೇ ಕನ್ನಡದ ಕೆಲಸವಲ್ಲ. ಅದು ನಾಡಿನ ಕೆಲಸ, ನಾಡಿನ ಕೆಲಸ ಲೋಕದ ಕೆಲಸವೂ ಹೌದು’ ಎಂಬ ಹಾಮನಾ ಅವರ ಮಾತು ಮುಂಬಯಿ ಕನ್ನಡ ಸೇನಾನಿಗಳಿಗೆ ಚೆನ್ನಾಗಿ ಅನ್ವಯಿಸುತ್ತದೆ. ತಾವು ಕನ್ನಡಿಗರಾಗಿ ಉಳಿಯಲು-ಬೆಳೆಯಲು ತಮ್ಮದೇ ಆದ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಕನ್ನಡೇತರರಿಗೆ ಕನ್ನಡತ್ವದ ಪರಿಚಯ ಮಾಡಿಕೊಟ್ಟು ಅವರೊಡನೆ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ. ನಾಡು-ನುಡಿಯೊಂದಿಗೆ ಸಮಾಜ ಸೇವೆ, ಸಾಹಿತ್ಯ, ಯಕ್ಷಗಾನ, ಸಂಗೀತ, ನೃತ್ಯ, ಚಲನಚಿತ್ರ, ರಂಗಭೂಮಿ, ಬ್ಯಾಂಕಿಂಗ್, ಪತ್ರಿಕೋದ್ಯಮ, ಉದ್ಯಮ, ವೈದ್ಯಕೀಯ, ಶೈಕ್ಷಣಿಕ ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದ ಸಾಧಕ ಕನ್ನಡಿಗರು ಮುಂಬಯಿಯಲ್ಲಿದ್ದು, ಕರ್ನಾಟಕ ಸರಕಾರ ಮಾತ್ರ ಮುಂಬಯಿ ಕನ್ನಡಿಗರ ಬಗ್ಗೆ ಎಲ್ಲಾ ವಿಷಯಗಳಲ್ಲೂ ನಿರ್ಲಕ್ಷ್ಯ ವಹಿಸುತ್ತಿರುವುದು ವಿಷಾದನೀಯ.
ಸಂಘಟನೆಗಳ ಸಾಧನೆ ನಗಣ್ಯವೇ…?
ಹೊರನಾಡಿನಲ್ಲಿ ನೆಲೆಸಿದ ವಿವಿಧ ಸಮುದಾಯದ ಜನತೆ ತಮ್ಮ ಜಾತಿಗೆ ಸಂಬಂಧಪಟ್ಟಂತೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ನಾಡಿನ ಚಟುವಟಿಕೆಗಳನ್ನು ನಡೆಸಿ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮರಾಠಿ ಮಣ್ಣಿನಲ್ಲಿ ಸ್ವಂತ ಕಟ್ಟಡ, ವಿದ್ಯಾಸಂಸ್ಥೆಗಳ ಸ್ಥಾಪನೆ, ದೇವಸ್ಥಾನಗಳು, ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ನಾಡು-ನುಡಿಯ ತೇರನ್ನೆಳೆಯುತ್ತಿವೆ. ಹೆಚ್ಚಿನ ಕನ್ನಡಪರ ಹಾಗೂ ಜಾತೀಯ ಸಂಘಟನೆಗಳು ಸಾಹಿತ್ಯ ಕ್ಷೇತ್ರದಲ್ಲೂ ಕೈಯಾಡಿಸಿ ಮುಖವಾಣಿಗಳನ್ನು ಹೊರತರುವಲ್ಲಿ ಯಶಸ್ವಿಯಾಗಿವೆ. ಇವುಗಳ ಪೈಕಿ ಶತಮಾನದ ಇತಿಹಾಸವನ್ನು ಕಂಡ ಮೊಗವೀರ ವ್ಯವಸ್ಥಾಪಕ ಮಂಡಳಿಯನ್ನು ಹೊರತುಪಡಿಸಿ ಬೇರಾವ ಜಾತೀಯ ಸಂಘಟನೆಗಳಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿಲ್ಲ. 90 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಬಂಟರ ಸಂಘ ಮುಂಬಯಿ, 85 ವರ್ಷಗಳ ಇತಿಹಾಸವನ್ನು ಹೊಂದಿರುವ ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಸುವರ್ಣ ಮಹೋತ್ಸವ ಅಚರಣೆಯಲ್ಲಿರುವ ಕನ್ನಡಪರ ಸಂಸ್ಥೆ ಡೊಂಬಿವಲಿ ಕರ್ನಾಟಕ ಸಂಘ, ಕನ್ನಡ ಕಲಾಕೇಂದ್ರ ಮುಂಬಯಿ, ಚಿಣ್ಣರ ಬಿಂಬ ಮುಂಬಯಿ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಕ್ರೀಯಶೀಲವಾಗಿ ಕನ್ನಡ ಭಾಷಾ ಪ್ರಗತಿಗೆ ಶ್ರಮಿಸುತ್ತಿದ್ದು, ಇವೆಲ್ಲಾವುಗಳ ಸಾಧನೆ ನಗಣ್ಯವೇ ಎಂಬುದನ್ನು ಕರ್ನಾಟಕ ಸರಕಾರ ಅರ್ಥೈಯಿಸಿಕೊಳ್ಳಬೇಕು.
ರಾಜಕೀಯ ನಾಯಕರನ್ನು ಬಹಿಷ್ಕರಿಸಿ…
ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರದ ದೊಣ್ಣೆ ನಾಯಕರು ಓಟಿನ ಬೇಟೆಗಾಗಿ ಮುಂಬಯಿ ಕನ್ನಡಿಗರ ಕಾಲಬುಡಕ್ಕೆ ಆಗಮಿಸುವುದು ಅನಿವಾರ್ಯ. ಈ ಸಂದರ್ಭದಲ್ಲಿ ತುಳು-ಕನ್ನಡಿಗರು ಒಗ್ಗಟ್ಟಿನಿಂದ ಸರಕಾರದ ಮಲತಾಯಿ ಧೋರಣೆಯ ವಿರುದ್ಧ ಧ್ವನಿ ಎತ್ತಬೇಕು. ಮುಂಬಯಿ ಕನ್ನಡಿಗರ ಸಾಧನೆಗೆ, ಅರ್ಹತೆಗೆ ಸರಿಯಾದ ಮನ್ನಣೆ ಸಿಗುವವರೆಗೂ ನಾಯಕರನ್ನು ಬಹಿಷ್ಕರಿಸುವ ತೀರ್ಮಾನಕ್ಕೆ ಬರಬೇಕು. ಈ ರೀತಿಯಾದಾಗ ಮಾತ್ರ ಕರ್ನಾಟಕ ಘನ ಸರಕಾರ ಮತ್ತು ಸಮಯ ಸಾಧಕರ ರಾಜಕೀಯ ನಾಯಕರು ಬುದ್ಧಿ ಕಲಿಯಲು ಸಾಧ್ಯ.
ಇನ್ನಾದರೂ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು…
ಮುಂಬಯಿ ತುಳು-ಕನ್ನಡಿಗರು ಎಲ್ಲಿ ಎಡವಿದ್ದಾರೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಒದಗಿ ಬಂದಿದೆ. ಜಾತೀಯ, ಕನ್ನಡಪರ ಸಂಘಟನೆಗಳಲ್ಲಿ ಕೇವಲ ಪದವಿಗಾಗಿ ಕಚ್ಚಾಡುವುದನ್ನು ಬಿಟ್ಟು, ಇನ್ನಾದರೂ ತುಳು-ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು. ಜಾತೀಯ-ಕನ್ನಡಪರ ನಾಯಕರೆಂದು ಬಿಂಬಿಸಿಕೊಂಡವರು ತಮ್ಮ ಸಂಘಟನೆಗಳ ಸಿದ್ಧಿ-ಸಾಧನೆಗಳ ಮುಖಾಂತರ ಕರ್ನಾಟಕ ಸರಕಾರದ ಕಣ್ತೆರೆಸುವ ಕೆಲಸ ಮಾಡಬೇಕು. ಅದು ಬಿಟ್ಟು ಅನಗತ್ಯ ಸಮಾರಂಭಗಳ ಮುಖಾಂತರ ಗುಂಡು-ತುಂಡಿನ ಪಾರ್ಟಿಯನ್ನು ಆಯೋಜಿಸಿ ಬೀಗುವುದು ನಮ್ಮ ಸಂಸ್ಕೃತಿಯೂ ಅಲ್ಲ…ಸಂಸ್ಕಾರವೂ ಅಲ್ಲ. ಕನ್ನಡ ನಾಡಿನ ಉಜ್ವಲ ಭವಿಷ್ಯಕ್ಕಾಗಿ ಹೊರನಾಡ ಕನ್ನಡಿಗರು ಯಥಾಸಾಧ್ಯ ಶ್ರಮಿಸುತ್ತಾ ಬಂದವರು. ಮುಂಬಯಿ ಕನ್ನಡಿಗರು ಇಟ್ಟ ಹೆಜ್ಜೆ, ತೊಟ್ಟ ರೂಪದ ಕಡೆಗೆ ಇನ್ನಾದರೂ ಕರ್ನಾಟಕ ಸರಕಾರ ಕಣ್ಣು ಹಾಯಿಸಲಿ.
ಇವರು ಸಾಧಕರಲ್ಲವೆ…?
ಮುಂಬಯಿ ಮಹಾನಗರದ ಕನ್ನಡ ಸಾಹಿತ್ಯ-ಸಂಸ್ಕೃತಿಗೆ ತನ್ನದೇ ಆದ ಒಂದು ಚಾರಿತ್ರಿಕ ಮಹತ್ವವಿದೆ. ಸಾಹಿತ್ಯ, ಸಂಶೋಧನ ಕ್ಷೇತ್ರದಲ್ಲಿ ಮುಂಬಯಿಯಲ್ಲಿದ್ದುಕೊಂಡು ಅಪಾರ ಸಾಧನೆಗೈದ ಡಾ| ತಾಳ್ತಜೆ ವಸಂತ್ ಕುಮಾರ್, ಡಾ| ವ್ಯಾಸರಾಯ ನಿಂಜೂರು, ಡಾ| ಸುನೀತಾ ಎಂ. ಶೆಟ್ಟಿ, ಡಾ| ಜಿ. ಡಿ. ಜೋಶಿ, ಯಕ್ಷಗಾನ-ಸಾಹಿತ್ಯ-ಸಂಘಟನ ಕ್ಷೇತ್ರದ ಸಾಧಕ ಎಚ್. ಬಿ. ಎಲ್. ರಾವ್, ಕ್ರೀಡಾ ಕ್ಷೇತ್ರದಲ್ಲಿ ಡಾ| ಪದ್ಮನಾಭ ವಿ. ಶೆಟ್ಟಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಬಿ. ಎನ್. ಶ್ರೀಕೃಷ್ಣ ಮೊದಲಾದ ಸಾಧಕರ ಸಾಧನೆ ಪ್ರಸ್ತುತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗಿಂತ ಕಡಿಮೆಯಿದೆಯೇ…? ವಯಸ್ಸಿನ ಮಿತಿಯನ್ನು ತೆಗೆದುಕೊಳ್ಳುವುದಾದರೂ ಇವರಿಗೆ ಅರುವತ್ತರ ಗಡುವು ದಾಟಿಲ್ಲವೆ…?.
ಬೊಗಳೆ ಬಿಡುವ ದೊಣ್ಣೆನಾಯಕರು
ಕರ್ನಾಟಕ ಸರಕಾರದಿಂದ ತಮ್ಮ ಸೇವೆಗೆ ಏನಾದರೂ ಒಂದಿಷ್ಟು ಮಾನ್ಯತೆ ದೊರೆಯುವ ಆಶಯದಿಂದ. ಪ್ರತಿವರ್ಷ ಮುಂಬಯಿ ಕನ್ನಡಿಗರು ತಮ್ಮ ಒಂದಲ್ಲ ಒಂದು ಸಮಾರಂಭಕ್ಕೆ ಕರ್ನಾಟಕದ ಸಚಿವರು, ಸಂಸದರು, ಶಾಸಕರನ್ನು ಆಹ್ವಾನಿಸುತ್ತಾರೆ. ವಿಮಾನ ನಿಲ್ದಾಣದಿಂದಲೇ ಇವರ ಮುಖಕ್ಕೆ ಸ್ವಾಗತ ಒಂದು ಕಡೆಯಾದರೆ, ಇವರೊಂದಿಗೆ ನಿಂತು ಸೆಲ್ಫಿ ತೆಗೆದು ಪ್ರಚಾರ ಗಿಟ್ಟಿಸಿಕೊಳ್ಳುವ ಇಲ್ಲಿನ ಸಮಾಜ ಸೇವಕರು ಇನ್ನೊಂದೆಡೆ. ಒಟ್ಟಿನಲ್ಲಿ ಪ್ರತಿವರ್ಷ ಮಂತ್ರಿ ಮಹೋದಯರು ಇಲ್ಲಿನ ಕನ್ನಡಿಗರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಯ ಮಹಾಪೂರವನ್ನೇ ನೀಡುತ್ತಾರೆ. ಈ ಭರವಸೆ ವಿಮಾನ ನಿಲ್ದಾಣವರೆಗೆ ಮಾತ್ರ ಇರುತ್ತದೆಯೇ ಹೊರತು, ಅನಂತರ ಮುಂಬಯಿ ಕನ್ನಡಿಗರ ನೆನಪವೇ ಅವರಿಗಿರುವುದಿಲ್ಲ. ನೀವ್ಯಾರೋ…ನಾವ್ಯಾರೋ…ಎಂಬಂತೆ ವರ್ತಿಸುವ ಈ ದೊಣ್ಣೆ ನಾಯಕರ ಬೆಣ್ಣೆ ಮಾತುಗಳಿಗೆ ಮರುಳಾಗುವ ಮುಂಬಯಿ ಕನ್ನಡಿಗರು ಇನ್ನಾದರೂ ಬುದ್ಧಿ ಕಲಿಯಬೇಕು.
ಮುಂಬಯಿ ಕನ್ನಡಿಗರಲ್ಲಿ ಹಲವು ಮಂದಿಗೆ ಈಗಾಗಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯ. ಎಷ್ಟು ಮಂದಿ ತಮ್ಮ ಅರ್ಹತೆ ಮತ್ತು ಸಾಧನೆಗೆ ತಕ್ಕಂತೆ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂಬುದು ಮಾತ್ರ ಅವರವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರವಾಗಿದೆ. ಕೆಲವರಂತು ಪ್ರಶಸ್ತಿಯನ್ನು ಖರೀದಿಸಿ ಮೆರೆದಾಡಿದ ವಿಷಯ ಗುಟ್ಟಾಗಿ ಉಳಿದಿಲ್ಲ. ಇನ್ನೂ ಕೆಲವರು ಯಾರಿಗೂ ಪರಿಚಯವಿಲ್ಲದೆ, ಪ್ರಶಸ್ತಿ ಘೋಷಣೆಯ ದಿನವೇ ಪ್ರಚಾರಕ್ಕೆ ಬಂದವರಿದ್ದಾರೆ. ರಾಜಕೀಯ ಪ್ರಭಾವ ಬೀರಿ, ಬಕೆಟ್ ಹಿಡಿದು ಪ್ರಶಸ್ತಿ ಗಿಟ್ಟಿಸಿಕೊಳ್ಳುವವರಿಂದಲೇ ಮುಂಬಯಿಯ ನಿಜವಾದ ಕನ್ನಡಿಗ ಸಾಧಕರು ಮೂಲೆಗುಂಪಾಗುತ್ತಿರುವುದು ಅಕ್ಷರಶಃ ನಿಜ. ಇನ್ನಾದರೂ ಮುಂಬಯಿಯ ಅರ್ಹ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸುವಂತಾಗಲಿ.
ಉದರ ನಿಮಿತ್ತ ಮಹಾರಾಷ್ಟ್ರದ ಮುಂಬಯಿಯನ್ನು ಕರ್ಮಭೂಮಿಯಾಗಿ ಸ್ವೀಕರಿಸಿದ ಕನ್ನಡಿಗರ ಹೃದಯ ಬಡಿತ ಸದಾ ಸರ್ವದ ಕನ್ನಡ ನಾಡು ನುಡಿಯ ಶ್ರೆಯೋಭಿವೃದ್ಧಿಗಾಗಿ ಮಿಡಿಯುತ್ತಿರುತ್ತದೆ ಎಂಬುದನ್ನು ಕಾಯಕದ ಮೂಲಕ ತೋರಿಸಿಕೊಟ್ಟವರು ಮುಂಬಯಿ ಕನ್ನಡಿಗರು. ಪ್ರಾಯಶಃ ಕನ್ನಡದ ಡಿಂಡಿಮ ಕರತಲಾಮಲಕವಾಗಿ ಬಾರಿಸುವ ಕೈಚಳಕ ನಮ್ಮಂತೆ ಪ್ರಪಂಚದ ಇನ್ಯಾವುದೇ ನಗರದ ಕನ್ನಡಿಗರಿಗೆ ಕರಗತವಾಗಿಲ್ಲವೆಂದು ಎದೆ ತಟ್ಟಿ ಹೇಳಿಕೊಳ್ಳಬಹುದು. ಬರಿಗಾಲಲ್ಲಿ ಕರ್ಮಭೂಮಿಗೆ ಆಗಮಿಸಿದ ಅನೇಕ ಸಾಧಕರು ಭಾಗ್ಯವಿಧಾತರಾಗಿ ಪರಿವರ್ತನೆಯಾದಾಗ ತಮ್ಮ ಸಂಪಾದನೆಯ ವಿನಿಯೋಗವನ್ನು ತೊಡಗಿಸಿಕೊಳ್ಳುವುದಕ್ಕೆ ಜನ್ಮಭೂಮಿಯನ್ನೇ ಆಯ್ಕೆ ಮಾಡಿರುವುದು ಸಂತಸದ ವಿಷಯ. ನಾಡು-ನುಡಿಯ ಎತ್ತರ ಬಿತ್ತರಗಳನ್ನು ಕಾಲಕಾಲಕ್ಕೆ ಮೆರೆಸಿ ಮೇಳೈಸಿದ ಮುಂಬೈಗರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕರಿಸದೇ ಹೊರಗಿಟ್ಟಿರುವುದು, ಹೊರಗಟ್ಟಿರುವುದು ಹೊಣೆಗೇಡಿ ಸರಕಾರದ ಧೂರ್ತ ನಿರ್ಧಾರ. ಹೊರನಾಡ ಮುಂಬೈ ಕನ್ನಡಿಗರ ಒಕ್ಕೊರಲಿನ ಪ್ರತಿಭಟನ ಧ್ವನಿ ಕನ್ನಡಾಂಬೆಯ ಕಿವಿಗೆ ಮುಟ್ಟಲಿ. ಹೃದಯ ತಟ್ಟಲಿ…ಅನ್ಯಾಯ ಮೆಟ್ಟಲಿ
– ಅಶೋಕ್ ಪಕ್ಕಳ (ಗೌರವ ಸಂಪಾದಕರು : ಬಂಟರವಾಣಿ ಮುಂಬಯಿ)
ಅನೇಕ ಕನ್ನಡ ಪರ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಅನೇಕ ವರ್ಷಗಳಿಂದ ಮುಂಬಯಿಯ ಬಂಟರ ಸಂಘ ಮತ್ತು ಬಿಲ್ಲವರ ಅಸೋಸಿಯೇಶನ್ ನಡೆಸಿಕೊಂಡು ಬರುತ್ತಿವೆ. ಕರ್ನಾಟಕ ಸರಕಾರ ಇದನ್ನು ಗಮನಿಸಲಿ. ಮುಂದಿನ ವರ್ಷವಾದರೂ ಈ ಸಂಸ್ಥೆಗಳು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಲಿ
– ಡಾ| ಗಿರಿಜಾ ಶಾಸ್ತ್ರಿ (ಕವಿ, ವಿಮರ್ಶಕಿ)
ಕನ್ನಡ-ನಾಡು ನುಡಿಗಾಗಿ ಮುಂಬಯಿ ಕನ್ನಡಿಗರು ಮಾಡಿದ ಸೇವೆ ಅನನ್ಯವಾದುದು. ರಾತ್ರಿಶಾಲೆಗಳ ಮೂಲಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಕನ್ನಡ ಪತ್ರಿಕೆಗಳು, ನಿಯತಕಾಲಿಕೆಗಳ ರೋಚಕ ಪ್ರಗತಿಯನ್ನು ದಾಖಲಿಸಿದ ಶ್ರೇಯಸ್ಸು ಮುಂಬೈ ಕನ್ನಡಿಗರಿಗಿದೆ. ಸಾಹಿತ್ಯೋತ್ಸವ, ಕಲೋತ್ಸವ, ನಾಟಕೋತ್ಸವ, ಕ್ರೀಡೋತ್ಸವ, ಯಕ್ಷಗಾನೋತ್ಸವ, ಕಲೋತ್ಸವ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯ ಉಳಿವು-ಬೆಳವಣಿಗೆಗೆ ದುಡಿದು,ತನು-ಮನ-ಧನವನ್ನು ಅರ್ಪಿಸಿದ ಕನ್ನಡಿಗರ ಸೇವೆಯನ್ನು ಕರ್ನಾಟಕ ಸರಕಾರ ಯಾಕೆ ಗುರುತಿಸುವುದಿಲ್ಲ ಎಂಬುದು ಅಶ್ಚರ್ಯ ಮತ್ತು ಬೇಸರದ ಸಂಗತಿಯಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳು, ಸಂಸ್ಥೆಗಳು ಮುಂಬಯಿಯಲ್ಲಿದ್ದರೂ ಅವರಿಗೆ ಮಾನ್ಯತೆ ನೀಡದೆ ಇರುವ ಕರ್ನಾಟಕ ರಾಜ್ಯ ಸರಕಾರದ ನಿಲುವು ಖಂಡನೀಯ
– ಅಶೋಕ್ ಸುವರ್ಣ (ಸಂಪಾದಕರು : ಮೊಗವೀರ ಮಾಸಿಕ)
ಬಹುಸಂವೇದನೆಯ, ಅನ್ಯಭಾಷಿಕ ಮಹಾನಗರದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿ-ಬೆಳೆಸುವುದು ಸುಲಭದ ಕೆಲಸವಲ್ಲ. ಕನ್ನಡದ ಪ್ರಜ್ಞೆ ಸದಾ ಜಾಗೃತವಾಗಿರುವಂತೆ ಪ್ರಯತ್ನಿಸುತ್ತಿರುವುದು ಕನ್ನಡಿಗರ ಅಸ್ಮಿತೆಯ ನೆಲೆಯಿಂದ ಅನಿವಾರ್ಯ. ಇಲ್ಲಿನ ಕನ್ನಡಿಗರು ಕಳೆದ ಒಂದೂವರೆ ಶತಮಾನಗಳಿಂದ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯ ರಂಗದಲ್ಲಿ ಅದ್ಭುತ ಸಾಧನೆಗೈದಿದ್ದಾರೆ. ಪ್ರಶಸ್ತಿಯ ನಿರೀಕ್ಷೆಯಿಲ್ಲದೆ ನಿಸ್ವಾರ್ಥ ದೃಷ್ಟಿಯಿಂದ ಕನ್ನಡದ ಅಭ್ಯುದಯದ ಕಾಳಜಿಯಿಂದ ಕನ್ನಡಿಗರು ಸೇವೆ ಸಲ್ಲಿಸುತ್ತಿದ್ದಾರೆ. ಹೊರನಾಡ ಕನ್ನಡಿಗರಿಗೆ ಪರಕೀಯ ಪ್ರಜ್ಞೆ ಕಾಡದಂತೆ ಅವರನ್ನೂ ತಮ್ಮವರು ಎಂದು ಗುರುತಿಸುವ ಕೆಲಸ ಕರ್ನಾಟಕ ಸರಕಾರದಿಂದ ಆಗಬೇಕು. ಈ ಜವಾಬ್ದಾರಿ ಸರಕಾರದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಮಿಳಿತವಾಗಬೇಕು. ಕರ್ನಾಟಕ ಹೊರತುಪಡಿಸಿ ಜಗತ್ತಿನ ಎಲ್ಲಾ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರಿಗೆ ವರ್ಷಕ್ಕೆ ಒಂದೇ ಪ್ರಶಸ್ತಿ ನೀಡುತ್ತಾರೆ. ಮುಂಬಯಿಗೆ ಪ್ರತ್ಯೇಕವಾಗಿ ನೀಡಬೇಕು. ಹೊರನಾಡಿನಲ್ಲಿಯೇ ಅತೀ ಹೆಚ್ಚು ಕನ್ನಡ ಸಂಘಟನೆಗಳು ಇರುವುದು, ಅತ್ಯಧಿಕ ಕನ್ನಡದ ಕೆಲಸಗಳು ನಿರಂತರ ನಡೆಯುತ್ತಿರುವುದು ಮುಂಬಯಿಯಲ್ಲಿ. ಆದ್ದರಿಂದ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಹಕ್ಕು ನಮಗಿದೆ. ನೀಡಿ ಪ್ರೋತ್ಸಾಹಿಸುವ ಜವಾಬ್ದಾರಿ ಕರ್ನಾಟಕ ಸರಕಾರದ್ದು
– ಡಾ| ಭರತ್ ಕುಮಾರ್ ಪೊಲಿಪು (ಗೌ.ಪ್ರ.ಕಾರ್ಯದರ್ಶಿ : ಕರ್ನಾಟಕ ಸಂಘ ಮುಂಬಯಿ).
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂಬಯಿ ಕನ್ನಡಿಗರಿಗೆ ಕಳೆದ 3 ವರ್ಷಗಳಿಂದ ಗಗನ ಕುಸುಮವಾಗಿದೆ. ಪ್ರಶಸ್ತಿ ಪುರಸ್ಕಾರಗಳು ಎಂದಾಗ ನಾವುಗಳು ಅಲ್ಲಿನ ಸರಕಾರಕ್ಕೆ ಅಲ್ಲಿನ ಜನಪ್ರತಿನಿಧಿಗಳಿಗೆ ಕಾಣುವುದಿಲ್ಲ. ತಾಯಿ ಭವಾನಿಯ ನೆಲದಲ್ಲಿ ಮಾತೆ ಭುವನೇಶ್ವರಿಯ ನಿತ್ಯ ತೇರು ಎಳೆಯುವ ನಮ್ಮ ಕಾರ್ಯಕ್ಕೆ ಮನ್ನಣೆ ಇಲ್ಲ ಎನ್ನುವುದು ಪ್ರಶ್ನಾರ್ಥಕ. ಇಪ್ಪತ್ತು ಲಕ್ಷಕ್ಕೂ ಹೆಚ್ಚು ಕನ್ನಡಿಗರಿರುವ, ಮೂನ್ನೂರಕ್ಕೂ ಅಧಿಕ ತುಳು ಕನ್ನಡ ಸಂಘಟನೆಗಳಿರುವ ಮುಂಬಯಿಗಾಗಿ ಒಂದೆರಡು ರಾಜ್ಯೋತ್ಸವ ಪ್ರಶಸ್ತಿಗಳು ಮೀಸಲಾಗಿಡುವಂತೆ ಅಲ್ಲಿನ ರಾಜಕೀಯಕ್ಕೆ ಇಲ್ಲಿನ ನಾಯಕರು ಮನವರಿಕೆ ಮಾಡಬೇಕು. ಆ ನಿಟ್ಟಿನಲ್ಲಿ ಇಲ್ಲಿನ ರಾಜಕೀಯ ನೇತಾರರು ಹಾಗೂ ಸಮಾಜ ಸೇವಕರು ಕಾರ್ಯಪ್ರವೃತ್ತರಾಗಬೇಕು
– ಪೇತ್ರಿ ವಿಶ್ವನಾಥ ಶೆಟ್ಟಿ (ಕವಿ, ಲೇಖಕ, ಕಥೆಗಾರ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.