ಜೊತೆ ಜೊತೆಯಾಗಿದ್ದವರು…ಸಾವಿನಲ್ಲೂ ಜೊತೆಯಾದರು…!


Team Udayavani, Oct 1, 2017, 1:25 PM IST

4558.jpg

 ಮುಂಬಯಿ:  ಹುಟ್ಟು ಅನಿರೀಕ್ಷಿತ…ಸಾವು  ನಿಶ್ಚಿತ. ಆದ್ದರಿಂದ ಈ ಹುಟ್ಟು-ಸಾವುಗಳ ನಡುವೆ ನಡೆಯುವ ಚಕ್ರವನ್ನು ಬದುಕು ಎನ್ನುತ್ತಾರೆ.  ಈ ಬದುಕಿನಲ್ಲಿ ಬಾಲ್ಯ, ಯೌವ್ವನ, ಮುಪ್ಪುಗಳು ಬಂದು ಹೋದರೂ ಕೂಡಾ, “ಜೀವನದ ಅಂಚಿನಲ್ಲಿ ವಿಧಿ ಹೂಡಿದ ಆಟ…ಒಂದೇ ಸೂತ್ರಧಿ: ಒಂದೇ ಪಾತ್ರದಿ…ನಾವು ಆ ಆಟದ ಪಾತ್ರಧಾರಿಗಳು…ಈ ಮನೆಯೊಳಗಿಹ…’

ನಿಜ ಕಣ್ರೀ, ಅವರು-ಇವರು, ನಾವು-ನೀವು ಒಂದಲ್ಲ ಒಂದು ದಿನ ಬಡಿಯಲೇ ಬೇಕು ಸಾವಿನ ಕದವನ್ನು. ಮಣ್ಣಿನಿಂದ ಬಂದು, ಮಣ್ಣಿನಲ್ಲಿ ಬದುಕಿ, ಮಣ್ಣಾಗಿ ಹೋಗುವ ಜೀವನದ ಅತ್ಯಂತ ಕೊನೆಯ ಪ್ರಕ್ರಿಯೆ ಈ ಸಾವು. ಅಂತಹ ಸಾವಲ್ಲೂ ಒಂದಾಗಿ ಸಾಗಿದ ಸ್ನೇಹಿತೆಯರಿಬ್ಬರು ಮಂಬಯಿ ತುಳು-ಕನ್ನಡಿಗರ ಮನ-ಮನೆಯಲ್ಲಿ ಅಚ್ಚಳಿಯದೇ ಉಳಿಯಲಿದ್ದಾರೆ ಎಂಬುದು ಅಕ್ಷರಶಃ ನಿಜವಾದರೂ ಕೂಡಾ, ಸ್ನೇಹಿತೆಯರಿಬ್ಬರ ಮಕ್ಕಳ ಕೂಗು ಮಾತ್ರ ಎಂಥವರ ಕಣ್ಣಲ್ಲೂ ಒಂದು ಹನಿ ನೀರು ತರಿಸದೇ ಇರದು.ಸ್ನೇಹಕ್ಕೆ ಇನ್ನೊಂದು ಹೆಸರಾಗಿದ್ದರು…

ಶುಕ್ರವಾರ ಪೂರ್ವಾಹ್ನ ಮಧ್ಯ ರೈಲ್ವೆಯ ಪರೇಲ್‌ ನಿಲ್ದಾಣ ಮತ್ತು ಪಶ್ಚಿಮ ರೈಲ್ವೆಯ ಎಲ್ಫಿನ್‌ಸ್ಟನ್‌ ರೋಡ್‌ ನಿಲ್ದಾಣವನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಕನ್ನಡಿಗರಾದ ರಂಗನಟಿ ಸುಜಾತಾ ಆಳ್ವ ಮತ್ತು ಸುಮಲತಾ ಶೆಟ್ಟಿ ಅವರು ದಾರುಣವಾಗಿ ಸಾವನ್ನಪ್ಪಿದ್ದು, ಒಂದೇ ಚಾಲ್‌ನಲ್ಲಿ ನೆಲೆಸಿರುವುದರಿಂದ ಕಳೆದ ಹಲವಾರು ವರ್ಷಗಳಿಂದ ಆಪ್ತ ಸ್ನೇಹಿತೆಯರಾಗಿ ಜೊತೆ ಜೊತೆಯಾಗಿದ್ದರು. ಪರಸ್ಪರ ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಿದ್ದ ಇವರು ಸಾವಿನ ಮನೆಗೂ ಜೊತೆಯಾಗಿ ಸಾಗಿರುವುದು ವಿಪರ್ಯಾಸವೇ ಸರಿ. ಮಾರ್ಕೆಟ್‌ ಇರಲಿ, ನೆರೆಹೊರೆಯ, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿರಲಿ, ಯಾವುದೇ ರೀತಿಯ ಪೂಜೆ-ಸಮಾರಂಭಗಳಿರಲಿ ಒಟ್ಟಾಗಿ ತೆರಳುತ್ತಿದ್ದ ಇವರೀರ್ವರು ಕೊನೆಯ ವಾಸದ ಮನೆಯಾದ “ಮಣ್ಣಿನ ಕುಣಿ’ಗೆ ತೆರಳುವಲ್ಲೂ ಜೊತೆಯಾಗಿ ಸಾಗಿದ್ದಾರೆ.

ಕಾಕತಾಳೀಯ ಎಂಬಂತೆ ಇವರಿಬ್ಬರ ಸ್ನೇಹವು ಮೃತದೇಹದ ಸಂಖ್ಯೆಯಲ್ಲೂ ಮುಂದುವರಿದಿದೆ. 22 ಮೃತದೇಹಗಳ ಹಣೆಯಲ್ಲಿ ಸಂಖ್ಯೆಯನ್ನು ಬರೆಯಲಾಗಿದ್ದು, ಸುಜಾತಾ ಆಳ್ವ ಮತ್ತು ಸುಮಲತಾ ಅವರ ಹಣೆಗೆ ಕ್ರಮವಾಗಿ  2-3 ಸಂಖ್ಯೆಗಳನ್ನು ಅಚ್ಚು ಹಾಕಲಾಗಿತ್ತು.  ತಮ್ಮ ಪ್ರತಿಭೆಯಿಂದ ಸಾವಿರಾರು ಅಭಿಮಾನಿಗಳ, ಸಮಾಜ ಬಾಂಧವರ ಹೃದಯವನ್ನು ಗೆದ್ದ ಇವರೀರ್ವರು, “ಗೆಳತಿ ನೀ ನನ್ನ ಹೃದಯದ ನಂದಾದೀಪವಾದರೆ, ಅದರಲ್ಲಿ ಉರಿ ಯುವ ಬತ್ತಿ ನಾನಾಗುವೆ’ ಎಂಬ ಮಾತಿಗೆ ಪೂರಕವಾಗಿ ಕಾಣದ ಕಡಲಿನಲ್ಲಿ ಲೀನವಾಗಿದ್ದಾರೆ. ಇನ್ನೇನಿದ್ದರೂ ಅವರು ಬಿಟ್ಟು ಹೋದ ಹೆಜ್ಜೆ-ಗುರುತುಗಳ ನೆನಪುಗಳು ಮಾತ್ರ ಅಜರಾಮರ.

ಗೆಳೆತಿಯರ ನೆನಪಾಗಿ ಫೋನಾಯಿಸಿದ ಪ್ರಿಯಾ…!
ಗುರುವಾರ ರಾತ್ರಿ ವಿಕ್ರೋಲಿಯ ನಿವಾಸಿ ಪ್ರಿಯಾ ಮಹೇಶ್‌ ಶೆಟ್ಟಿ ಅವರಿಗೆ ಫೋನಾಯಿಸಿದ ಸುಜಾತಾ ಆಳ್ವ ಅವರು, ಶುಕ್ರವಾರ ಬೆಳಗ್ಗೆ ದಾದರ್‌ಗೆ ಹೂವು ತರಲು ಹೋಗೋಣ ಎಂದು ಹೇಳಿದ್ದರು. ಇದಕ್ಕೆ ಪ್ರಿಯಾ ಅವರು, ನಾಳೆ ಒಂದು ದಿವಸ ರಜೆಯಿರುವ ಕಾರಣ ಮನೆಯಲ್ಲಿ ಆರಾಮ ಮಾಡುವುದಾಗಿ ತಿಳಿಸಿ, ಅಪರಾಹ್ನ ಮುಲುಂಡ್‌ನ‌ಲ್ಲಿ ಒಟ್ಟಾಗಿ ಶಾಪಿಂಗ್‌ಗೆ ಮಾಡೋಣ ಎಂದಿದ್ದರು. ಅಲ್ಲದೆ ಸುಜಾತಾ ಆಳ್ವ ಅವರು ದಾದರ್‌ನಿಂದ ಬಂದಾಕ್ಷಣ ತಾನು ಫೋನಾಯಿಸುವುದಾಗಿ ತಿಳಿಸಿದ್ದರು. ಶುಕ್ರವಾರ ಮಧ್ಯಾಹ್ನ ಸುಜಾತಾ ಆಳ್ವರ ಕಾಲ್‌ ಯಾಕೆ ಬರಲಿಲ್ಲ ಎಂದು ಕಾದಿದ್ದ ಪ್ರಿಯಾ ಅವರು, ಸುಜಾತಾ ಅವರಿಗೆ ಫೋನಾಯಿಸಿದಾಗ ಪೊಲೀಸರು ರಿಸೀವ್‌ ಮಾಡಿದ್ದಾರೆ. ಹಾಸ್ಯ ಪ್ರವೃತ್ತಿಯವರಾದ ಸುಜಾತಾ ಅವರು ಒಮ್ಮೊಮ್ಮೆ ತಮಾಷೆಗಾಗಿ ಈ ರೀತಿ ಮಾತನಾಡುತ್ತಾರೆ ಎಂದು ತಿಳಿದು, ಪ್ರಿಯಾ ಅವರು ಗದರಿಸಿದಾಗ ಪೊಲೀಸರು ದುರಂತದಲ್ಲಿ ನಿಮ್ಮವರೂ ಸೇರಿದ್ದಾರೆ, ಅಲ್ಲದೆ   ಕೆಇಎಂ ಆಸ್ಪತ್ರೆಯಲ್ಲಿ ಮೃತದೇಹಗಳಿವೆ ಎಂದು ತಿಳಿಸಿದರು.

ದಿಗ್ಭ್ರಾಂತಗೊಂಡ ಸಂಘಟನೆಗಳು…!
ಸುಜಾತಾ ಆಳ್ವ ಮತ್ತು ಸುಮಲತಾ ಶೆಟ್ಟಿ ಅವರು ವಿಕ್ರೋಲಿ ಬಂಟ್ಸ್‌ ಹಾಗೂ ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಗಳ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವವರು. ಪೊಲೀಸರು ಮಾಹಿತಿ ನೀಡಿದ ತತ್‌ಕ್ಷಣ ಪ್ರಿಯಾ ಅವರಿಗೆ ದಿಕ್ಕು ತೋಚದಂತಾಗಿದೆ. ವಿಕ್ರೋಲಿ ಬಂಟ್ಸ್‌ನ ರವೀಂದ್ರ ಶೆಟ್ಟಿ ಅವರಿಗೆ ವಿಷಯ ತಿಳಿಸಿ ಅವರೊಂದಿಗೆ, ಕೆಇಎಂ ಆಸ್ಪತ್ರೆಗೆ ಧಾವಿಸಿದರು. ರಾಶಿಹಾಕಿದ್ದ 22 ಮೃತದೇಹಗಳಲ್ಲಿ ಇವರಿಬ್ಬರ ಮೃತದೇಹಗಳನ್ನು ಹುಡುಕಲು ಹರಸಾಹಸಪಟ್ಟ ಇವರು, ಕೊನೆಗೂ ಇಬ್ಬರ ಮೃತದೇಹಗಳು ಸೇರಿರುವುದನ್ನು ಕಂಡು ವಿಕ್ರೋಲಿ ಬಂಟ್ಸ್‌ನ ಸದಸ್ಯರೆಲ್ಲರಿಗೂ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸುಮಲತಾ ಅವರ ಸಹೋದರ ಮುಲುಂಡ್‌ ಪೂಜಾ ಹೊಟೇಲ್‌ ಮಾಲಕ ಸುರೇಶ್‌ ಶೆಟ್ಟಿ ಅವರು ಆಸ್ಪತ್ರೆಗೆ ಆಗಮಿಸಿದರು. ಇನ್ನೊಂದೆಡೆ ಟಿವಿ ಚಾನೆಲ್‌ಗ‌ಳಲ್ಲಿ ಆಗಾಗಲೇ ಮೃತರ ಫೋಟೊಗಳು ಬಿತ್ತರಗೊಂಡಿದ್ದವು. ವಿಷಯ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳ ರೋದನ ಮುಗಿಲು ಮುಟ್ಟಿತ್ತು.

ನವರಾತ್ರಿ ಉಪವಾಸ ವ್ರತಕೈಗೊಂಡಿದ್ದ ಸ್ನೇಹಿತೆಯರು…?
ವಿಶೇಷವೆಂದರೆ ಇವರೀರ್ವರು ಇದೇ ಮೊದಲ ಬಾರಿಗೆ ದಾದರ್‌ಗೆ ಹೂವು ತರಲು ಹೋಗಿರುವುದಲ್ಲ. ಕಳೆದ ಹಲವಾರು ವರ್ಷಗಳಿಂದ ಪೂಜೆಗೆ ಹೂವು ಖರೀದಿಸಲು ವಿಕ್ರೋಲಿ ಬಂಟ್ಸ್‌ನ ಸದಸ್ಯೆಯರು ಒಂದಾಗಿ ಹೋಗುತ್ತಿದ್ದರು. ವಿಧಿ ಲಿಖೀತವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಹಾಗೆ ಶುಕ್ರವಾರ ಹಲವು ಮಂದಿಗೆ ಹೂವು ತರಲು ಬರುವಂತೆ ತಿಳಿಸಿದ್ದಾರೆ. ಆದರೆ ಕಾರ್ಯನಿಮಿತ್ತ ಯಾರು ಕೂಡಾ ಬರದೇ ಇದ್ದ ಕಾರಣ ಇವರಿಬ್ಬರೇ ತೆರಳಿದ್ದರು. ಕಳೆದ ಒಂಭತ್ತು ದಿನಗಳಿಂದ ಉಪವಾಸ ವ್ರತ ಕೈಗೊಂಡು, ದೇವಿಯ ಆರಾಧನೆಗೈದು ಶುಕ್ರವಾರ ದಾದರ್‌ನಿಂದ ಹೂವು ಖರೀದಿಸಿ, ಮಧ್ಯಾಹ್ನ ಭಾಂಡೂಪ್‌ನ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನಗೈದು ಅಪರಾಹ್ನ ಶಾಪಿಂಗ್‌ ಮಾಡುವ ಕನಸ್ಸನ್ನು ಕಂಡಿದ್ದರು.

ದಸರಾ ಸಂಭ್ರಮಕ್ಕೆ ಸೂತಕದ ಛಾಯೆ…!
ಶುಕ್ರವಾರ ಬೆಳ್ಳಂಬೆಳಗ್ಗೆ ತುಳು-ಕನ್ನಡಿಗರಿಗೆ ಎಂದಿನಂತೆ ದಿನವಾಗಿರಲಿಲ್ಲ. ಇಪ್ಪತ್ತೆರಡು ಮಂದಿಯಲ್ಲಿ ಇಬ್ಬರು ತುಳು-ಕನ್ನಡಿಗ ಮಹಿಳೆಯರು ಸೇರಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ನಗರದ ತುಳು-ಕನ್ನಡಿಗರೆಲ್ಲರು ದಿಗ್ಭ್ರಾಂತಗೊಂಡಿದ್ದರು. ಮಹಾನಗರದಲ್ಲಿ ಹಲವಾರು ಆಕಸ್ಮಿಕ ದುರಂತಗಳು ನಡೆದಿವೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಬಹಳ ಅಪರೂಪಕ್ಕೆ ಎಂಬಂತೆ ತುಳು-ಕನ್ನಡಿಗರಿಬ್ಬರು ಸಾವನ್ನಪ್ಪಿರುವುದು ದಸರಾ ಆಚರಣೆಯ ಸಂಭ್ರಮದಲ್ಲಿದ್ದ ತುಳು-ಕನ್ನಡಿಗರಿಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ರಂಗಭೂಮಿಯಲ್ಲಿ ವಿಶೇಷ ಸಾಧನೆ…!
ಸುಮಲತಾ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರು. ಸುಜಾತಾ ಆಳ್ವರದ್ದು ಬಹುಮುಖ ಪ್ರತಿಭೆ. ಮುಂಬಯಿ ಮಹಾನಗರದಲ್ಲಿ ಹುಟ್ಟಿ ಬೆಳೆದರೂ ನಾಡಿನ ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರಗಳಲ್ಲಿ ಅಪಾರ ನಂಬಿಕೆ.  ರಂಗಭೂಮಿಯ ನಂಟು ಎಳವೆಯಿಂದಲೇ ಬೆಳೆಸಿಕೊಂಡ ಇವರು 50ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಇವರ ಪ್ರತಿಭೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ತುಳು-ಕನ್ನಡ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

“ದೇಯಕ್ಕನ ದೈವದಿಲ್ಲ್‌ ‘ ಕೊನೆಯ ತುಳು ನಾಟಕ…!
“ಲಕ್ಕ್‌ಮಗ್‌ ಲಕ್ಕ್‌…ಅಮ್ಮ ಬತ್ತೆರ್‌…ಈ ಅವಸ್ಥೆಡ್‌ ನಿನಡ್‌  ತೂಂಡ ಆರ್‌ ನೆರ್ವೆರ್‌…ಮಂಡೆಗ್‌ ನೀರ್‌ಕಂತ್‌ ಮೈಪೆರ್‌. ಬೇಗ ಲಕ್ಕ್‌ದ ದೈವಗೋ ಬತ್ತಿಪಾಡ್‌’. ಬಂಟರ ಸಂಘದಲ್ಲಿ ಇತ್ತೀಚೆಗೆ ನಡೆದ “ದೇಯಕ್ಕನ ದೈವದಿಲ್ಲ್‌ ‘ ಸುಜಾತಾ ಆಳ್ವ ನಟಿಸಿರುವ ಕೊನೆಯ ತುಳು ನಾಟಕದ ಸಂಭಾಷಣೆಯ ತುಣುಕಿದು.  ಆ ದಿನ ತಮ್ಮ  ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನಗೆದ್ದಿದ್ದರು. ಆದರೆ ಇಂದು ಸುಜಾತಾ ಅವರು ಮುಂಬಯಿ ತುಳು-ಕನ್ನಡಿಗರ ಕಣ್ಣಂಚಿನಿಂದಲೇ ಮರೆಯಾಗಿ ಹೋಗಿದ್ದಾರೆ.  ಹುಟ್ಟು-ಸಾವು ನಮ್ಮ ಕೈಯಲಿಲ್ಲ ಎಂಬುದು ಮತ್ತೂಮ್ಮೆ ಸಾಬೀತಾದಂತಾಗಿದ್ದು,   ಅದೆಲ್ಲಾಕಾಲನ ವಶಕ್ಕೆ ಬಿಟ್ಟದ್ದು, ಬದುಕನ್ನು ಮಾತ್ರ ನಾವು ರೂಪಿಸಿಕೊಳ್ಳಬಹುದು ಎಂದು ಹೇಳಬಹುದೇ ಹೊರತು ರೂಪಿಸಿಕೊಳ್ಳುತ್ತೇವೆ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ.

ಕಾನೂನು ಹೋರಾಟಕ್ಕೆ ಮುಂದಾಗಿದ್ದ ವಿಕ್ರೋಲಿ ಬಂಟ್ಸ್‌…
ಮೃತದೇಹಗಳ ಚಿನ್ನಾಭರಣಗಳನ್ನು ದೋಚುತ್ತಿರುವ ಕಳ್ಳರ ಫೋಟೊಗಳು ಶುಕ್ರವಾರದಿಂದಲೆ ವಾಟ್ಸಾಪ್‌, ಫೇಸ್‌ಬುಕ್‌ ಮುಖಾಂತರ ಹರಿದಾಡುತ್ತಿದ್ದು, ಈಗಾಗಲೇ ಇದರ ಬಗ್ಗೆ ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷ ಗಣೇಶ್‌ ಎಂ. ಶೆಟ್ಟಿ ಅವರು ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿ ದ್ದರು.  ಘಟನೆಯ ಬಗ್ಗೆ ಮಹಾರಾಷ್ಟ್ರ ಗೃಹ ಇಲಾಖೆ, ಸಿಎಂ ಫಡ್ನವೀಸ್‌, ಕೇಂದ್ರ ರೈಲ್ವೆ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಮನವರಿಗೆ ಮಾಡಲಾಗಿತ್ತು.  ಶನಿವಾರ ಮುಂಬಯಿ ಪೊಲೀಸ್‌ ಕಮಿಷನರ್‌ ಫೋನಾಯಿಸಿ ಮಾಹಿತಿ ಕಲೆಹಾಕಿದ್ದಾರೆ. ಇದರ ವಿರುದ್ಧ ಸರಕಾರವೇ ಎಫ್‌ಐಆರ್‌ ದಾಖಲಿಸುವವರೆಗೆ ಹೋರಾಟ ನಡೆಸುವುದಾಗಿ ಗಣೇಶ್‌ ಶೆಟ್ಟಿ ಅವರು ಎಚ್ಚರಿಕೆ ನೀಡಿದ್ದರು. ಅವರ ಹೋರಾಟ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿತ್ತು.

ಎಚ್ಚೆತ್ತ ಕಳ್ಳರು…ಸ್ವಲ್ಪ ಚಿನ್ನಾಭರಣ ವಾಪಸ್‌…
ಗಣೇಶ್‌ ಶೆಟ್ಟಿ ಅವರ ಹೋರಾಟ ಪೊಲೀಸರಿಗೆ ಬಿಸಿಮುಟ್ಟಿಸಿದೆ. ಶುಕ್ರವಾರ ಮೃತದೇಹಗಳ ಪಂಚನಾಮೆ ನಡೆಸುವಾಗ ಚಿನ್ನಾಭರಣಗಳು ದೇಹದಲ್ಲಿ ಇರಲಿಲ್ಲ ಎಂದು ಪೊಲೀಸ್‌ ಖದರ್‌ನಲ್ಲಿ ಬೊಬ್ಬೆ ಹಾಕಿದ್ದ ದಾದರ್‌ ಪೊಲೀಸರು ಶನಿವಾರ ಸಂಜೆ ಸ್ನೇಹಿತೆಯರಿಬ್ಬರ ತಾಳಿ ಹೊರತುಪಡಿಸಿ ಉಳಿದೆಲ್ಲ ಚಿನ್ನಾಭರಣಗಳನ್ನು ವಾಪಾಸು ತಂದುಕೊಟ್ಟಿದ್ದಾರೆ. ಪ್ರಸ್ತುತ ಮೃತದೇಹಗಳಿಂದ ಚಿನ್ನಾಭರಣಗಳನ್ನು ಪೊಲೀಸರೆ ದೋಚಿರುವ ಬಗ್ಗೆ ಸಂಶಯ ಮೂಡುತ್ತಿದೆ. ಒಂದು ವೇಳೆ ಇದು ನಿಜವಾದಲ್ಲಿ ಅಂತವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಗಣೇಶ್‌ ಶೆಟ್ಟಿ ಅವರು ಆಗ್ರಹಿಸಿದ್ದಾರೆ.

ದುರಂತಕ್ಕೆ ಯಾರು ಹೊಣೆ…?
ರೈಲ್ವೆ ಬ್ರಿಡ್ಜ್ ಅಸಮರ್ಪಕವಾಗಿರುವ ಬಗ್ಗೆ ಸ್ಥಳೀಯರು ಹಾಗೂ ಪ್ರಯಾಣಿಕರು  ಹಲವಾರು ವರ್ಷಗಳಿಂದ ರೈಲ್ವೆಗೆ ಮನವಿ ಸಲ್ಲಿಸುತ್ತಿದ್ದು, ಸರಕಾರ ಮಾತ್ರ ಮೀನಮೇಷ ಎಣಿಸಿ, ಪ್ರಸ್ತುತ 23 ಜೀವಗಳನ್ನು ಬಲಿತೆಗೆದುಕೊಂಡಿದೆ. ದುರಂತದಲ್ಲಿ 23 ಕುಟುಂಬಗಳು ಅನಾಥವಾದರೆ, ಗಾಯಗೊಂಡಿರುವ ಹಲವು ಮಂದಿ ಕೈ-ಕಾಲುಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮುಂಬಯಿಯ ಇತಿಹಾಸದಲ್ಲೇ ಅತೀ ದೊಡ್ಡ ಕಾಲು¤ಳಿತ ದುರಂತ ಇದಾಗಿದೆ. ಸರಕಾರ ಇನ್ನಾದರೂ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳುಹಿಸದಂತೆ ನೋಡಿಕೊಳ್ಳಬೇಕು.

ಅಮಾಯಕ ಜೀವಗಳಿಗೆ 10 ಲಕ್ಷ ಬೆಲೆ…!
ದುರಂತ ನಡೆದ ತತ್‌ಕ್ಷಣ ಮೃತಪಟ್ಟವರಿಗೆ 10 ಲಕ್ಷ ರೂ.  ಪರಿಹಾರವನ್ನಿತ್ತು ಸರಕಾರವು ಕೈತೊಳೆದುಕೊಂಡಿದೆ. ಸರಕಾರದ 10 ಲಕ್ಷ ರೂ. ಗಳಿಂದ ಹೋದ ಜೀವಗಳು ಮತ್ತೆ ಬರುತ್ತವೆಯೇ ಎಂಬುದನ್ನು ಚಿಂತಿಸಬೇಕಾಗಿದೆ. ತಂದೆ-ತಾಯಿ, ಮಗ-ಮಗಳು, ಸೊಸೆ, ಅಳಿಯ ಹೀಗೆ ಮನೆಯ ಬೆಳಕಾಗಿದ್ದವರನ್ನು  ಕಳೆದುಕೊಂಡು ಅನಾಥರಾದವರಿಗೆ ಹೋದ ಜೀವ ಮತ್ತೆ ಮರುಕಳಿಸಲು ಈ ಹಣದಿಂದ ಸಾಧ್ಯವೇ ಇಲ್ಲ. ಈ ದುರಂತ ಎಲ್ಲರಿಗೂ ಒಂದು ಪಾಠವಾಗಬೇಕು. ಪ್ರತಿಷ್ಠೆಗೋಸ್ಕರ ಬುಲೆಟ್‌ ರೈಲು ಇತ್ಯಾದಿ ನೂತನ ಯೋಜನೆಗಳನ್ನು  ತರುವ ಬದಲು ಇದ್ದದ್ದನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ಪ್ರಯೋಜನವಾಗುವಂತೆ ಮಾಡುವುದು ಸರಕಾರದ ಆಧ್ಯ ಕರ್ತವ್ಯವಾಗಬೇಕು. ಆಗ ಮಾತ್ರ ಇಂತಹ ದುರಂತಗಳನ್ನು ತಡೆಗಟ್ಟಬಹುದು. 

ಮೃತದೇಹದ ತಾಳಿಯನ್ನೂ ಬಿಡದ ದೂರ್ತರು…
ದುರಂತದಲ್ಲಿ ಸಾವನ್ನಪ್ಪಿದ ಸುಜಾತಾ ಆಳ್ವ ಹಾಗೂ ಸುಮಲತಾ ಅವರ ದೇಹ ತಣ್ಣಗಾದರೂ ಕೂಡಾ ಅವರ ಚಿನ್ನಾಭರಣಕ್ಕಾಗಿ ದೂರ್ತರು ಮುಗಿಬಿದ್ದಿರುವುದು  ಅಮಾನವೀಯತೆಯ ಪರಮಾವಧಿಯನ್ನು ಬಿಂಬಿಸುತ್ತದೆ. ಸ್ನೇಹಿತೆಯರಿಬ್ಬರ ಚಿನ್ನದ ತಾಳಿ, ಕೈಬಳೆ, ಉಂಗುರ, ಕಿವಿಯೋಲೆ ಇತ್ಯಾದಿಗಳನ್ನು ದೋಚಿರುವ ಕಳ್ಳ-ಕದೀಮರು ಮೃತದೇಹಗಳ ಮೂಗುತಿಯನ್ನು ಕಿತ್ತು ತೆಗೆದಿದ್ದಾರೆ. ಎಲ್ಲಿ ಬೆಂಕಿ ಬೀಳುತ್ತದೆ…? ಎಲ್ಲಿ ಹೆಣ ಉರುಳುತ್ತದೆ…? ಎಂದು ಬಕ ಪಕ್ಷಿಯಂತೆ ಕಾದು ಕುಳಿತು ರಣಹದ್ದಿನಂತೆ ಚಿನ್ನಕ್ಕಾಗಿ ಮೃತದೇಹವನ್ನು  ಎಳೆದಾಡುವವರಿಗೆ  ಇದಕ್ಕಿಂತ ದೊಡ್ಡ ಸಾವು ಬರಲಿ ಎಂದು ತುಳು-ಕನ್ನಡಿಗರು ಹಿಡಿ ಶಾಪ ಹಾಕಿದ್ದರು.

ಹೂ ತರಲು ಹೋದವರು ಮಸಣ ಸೇರಿದರು
ಕಾಂಜೂರ್‌ಮಾರ್ಗ ಪೂರ್ವದ ನೆಹರೂ ನಗರ ನಿವಾಸಿಗಳಾದ ಸುಜಾತಾ ಆಳ್ವ ಮತ್ತು ಸುಮಲತಾ ಶೆಟ್ಟಿ ಅವರು ಶುಕ್ರವಾರ ಮುಂಜಾನೆ ಬೇಗ ಎದ್ದು ಮನೆಯ ಕೆಲಸಗಳನ್ನು ನಿರ್ವಹಿಸಿ, ಕಾಂಜೂರ್‌ಮಾರ್ಗ್‌ ನಿಲ್ದಾಣದಿಂದ ಬೆಳಗ್ಗೆ 8.15 ರ ರೈಲನ್ನು ಹಿಡಿದಿದ್ದರು. ತೆರಳುವಾಗ ಸುಮಲತಾ ಅವರ ಪುತ್ರಿ ನಿಧಿ ಕೂಡಾ ಅವರೊಟ್ಟಿಗಿದ್ದು, ನಿಧಿ ಸಯಾನ್‌ ನಿಲ್ದಾಣದಲ್ಲಿ ಇಳಿದು ಕಾಲೇಜಿಗೆ ತೆರಳಿದರು. ಇವರಿಬ್ಬರು ದಾದರ್‌ನಲ್ಲಿ ದಸರಾ ಹಬ್ಬಕ್ಕಾಗಿ ಹೂವು ಖರೀದಿಸಿ ಎಲ್ಫಿನ್‌ಸ್ಟನ್‌ರೋಡ್‌ಗೆ ರೈಲು ಹಿಡಿಯಲು ತೆರಳಿದ್ದರು. ಇದೇ ಸಂದರ್ಭದಲ್ಲಿ ಸುಮಲತಾ ಅವರ ಪರೇಲ್‌ನಲ್ಲಿರುವ ಸಂಬಂಧಿಕರೊಬ್ಬರು ಮಳೆ ಜೋರಾಗಿ ಬರುತ್ತಿದ್ದು,  ಈಗ ತೆರಳುವುದು ಬೇಡ ಎಂಬ ಸೂಚನೆಯನ್ನು ನೀಡಿದ್ದರು. ಇಲ್ಲ ಮಳೆ ಜೋರಾದರೆ  ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಎದುರಾಗುತ್ತದೆ ಎಂದು ನುಡಿದ  ಸ್ನೇಹಿತೆಯರಿಬ್ಬರನ್ನು ಆನಂತರ ಅವರು ಎಲ್ಫಿನ್‌ಸ್ಟನ್‌ರೋಡ್‌ ನಿಲ್ದಾಣದಲ್ಲಿ  ಬಿಟ್ಟು ಹೋಗಿದ್ದರು. ಒಟ್ಟಿನಲ್ಲಿ ಸಾವೆಂಬುವುದು ತಮಗೆ ಹೊಂಚು ಹಾಕಿ ಕಾಯುತ್ತಿದೆ ಎಂಬುವುದು ಸ್ನೇಹಿತೆಯರ ಅರಿವಿಗೆ ಬರಲೇ ಇಲ್ಲ.

ಡಾ| ದಿನೇಶ್‌ ಶೆಟ್ಟಿ ರೆಂಜಾಳ

ಟಾಪ್ ನ್ಯೂಸ್

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!

Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.