ಥಾಣೆ ಬಂಟ್ಸ್ ಅಸೋಸಿಯೇಶನ್‌ನ 13ನೇ ವಾರ್ಷಿಕ ಮಹಾಸಭೆ
Team Udayavani, Sep 28, 2017, 3:20 PM IST
ಮುಂಬಯಿ: ಸಮಾಜ ಸೇವೆ ಮಾಡಲು ಥಾಣೆ ಬಂಟ್ಸ್ ಅಸೋಸಿಯೇಶನ್ ಒಂದು ವೇದಿಕೆಯನ್ನು ನೀಡಿದೆ. ಥಾಣೆ ಬಂಟ್ಸ್ ಅಸೋಸಿಯೇಶನ್‌ನಲ್ಲಿ ಪ್ರಾರಂಭದಿಂದಲೇ ವಿವಿಧ ಪದಾಧಿಕಾರಿಯಾಗಿ ಕೆಲಸ ಮಾಡಿ ಕಳೆದೆರಡು ವರ್ಷಗಳಿಂದ ಅಧ್ಯಕ್ಷನಾಗಿ ಸಂಸ್ಥೆಗೂ ಹಾಗೂ ಸಮಾಜಕ್ಕೂ ಉತ್ತಮ ಕೆಲಸ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಇದು ಕೇವಲ ನನ್ನ ಒಬ್ಬನ ಸಾಧನೆಯಲ್ಲ. ಇದರಲ್ಲಿ ನಿಮ್ಮ ಎಲ್ಲರ ಸಹಕಾರವಿದೆ. ಪದಾಧಿಕಾರಿಗಳು ವಿವಿಧ ಉಪ ಸಮಿತಿಗಳು ಹಾಗೂ ಮಾಜಿ ಅಧ್ಯಕ್ಷರ ಸಹಕಾರದಿಂದಲೇ ಉತ್ತಮ ಕಾರ್ಯಕ್ರಗಳನ್ನು ಮಾಡಲು ಸಾಧ್ಯವಾಯಿತು ಎಂದು ಥಾಣೆ ಬಂಟ್ಸ್‌ನ ನಿರ್ಗಮನ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ ಅವರು ನುಡಿದರು.
ಸೆ. 23ರಂದು ಥಾಣೆ ಪಶ್ಚಿಮದ ವುಡ್‌ಲ್ಯಾಂಡ್ ರಿಟ್ರೀಟ್ ಸಭಾಗೃಹದಲ್ಲಿ ಥಾಣೆ ಬಂಟ್ಸ್ ಅಸೋಸಿಯೇಶನ್‌ನ 13ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂದರ್ಭದಲ್ಲಿ ಅವರು ತಮ್ಮ ಕಾರ್ಯಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ ಅಸೋಸಿಯೇಶನ್‌ನಲ್ಲಿ ಇನ್ನಷ್ಟು ಕೆಲಸ ಕಾರ್ಯಗಳು ನಡೆಯಬೇಕಾಗಿದ್ದು, ನಾವೆಲ್ಲ ಒಂದಾಗಿ ಈ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿ ಸಂಸ್ಥೆಯಿಂದ ಇನ್ನಷ್ಟು ಬಲಪಡಿಸೋಣ. ಸಮಾಜ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ನನ್ನ ಸಂಪೂರ್ಣ ಸಹಕಾರವು ಈ ಸಂಸ್ಥೆಗೆ ನಿರಂತರವಾಗಿ ಇರಲಿದೆ ಎಂದರು.
ಮಹಿಳಾ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ರೇವತಿ ಸದಾನಂದ ಶೆಟ್ಟಿ ಅವರು ಮಾತನಾಡಿ, ಮಹಿಳಾ ವಿಭಾಗವು ಉತ್ತಮ ಕಾರ್ಯಗಳನ್ನು ಮಾಡಲು ಇನ್ನು ಮುಂದೆಯೂ ಈ ಸಂಸ್ಥೆಗಾಗಿ ನಿರಂತರ ದುಡಿಯುತ್ತೇನೆ. ತನ್ನ ಕಾರ್ಯಾವಧಿಯಲ್ಲಿ ಸಹಕರಿಸಿದ ಎಲ್ಲ ರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ನುಡಿದು, ತನಗೆ ವಿಶೇಷ ಸಹಕಾರ ನೀಡಿದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕೇಶವ ಆಳ್ವ ಅವರನ್ನು ಸ್ಮರಣಿಕೆಯನ್ನಿತ್ತು ಗೌರವಿಸಿದರು.
ಯುವ ವಿಭಾಗದ ನಿರ್ಗಮನ ಕಾರ್ಯಾಧ್ಯಕ್ಷೆ ಪ್ರಿಯಾಂಕಾ ಆರ್. ಶೆಟ್ಟಿ ಅವರು ಮಾತನಾಡಿ, ತಮ್ಮ ಕಾರ್ಯಾವಧಿಯಲ್ಲಿ ಉತ್ತಮ ಸಮಾಜಪರ ಕಾಳಜಿಯಿಂದ ಕೆಲಸಗಳನ್ನು ಮಾಡಿರುವ ಆತ್ಮತೃಪ್ತಿ ಇದೆ. ಎಲ್ಲಾ ಕಾರ್ಯಗಳಿಗೂ ನನ್ನ ಸಂಪೂರ್ಣ ಸಹಕಾರವಿದೆ ಎಂದರು. ಇದೇ ಸಂದರ್ಭದಲ್ಲಿ ಚುನಾವಣಾಧಿಕಾರಿ ನ್ಯಾಯವಾದಿ ಪದ್ಮನಾಭ ಶೆಟ್ಟಿ ಅವರು 2017-2019ನೇ ಸಾಲಿನ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕುಶಲ್ ಸಿ. ಭಂಡಾರಿ ಮಾತನಾಡಿ, ಸಂಸ್ಥೆಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯ ವಾಗಿದೆ. ನಾವೆಲ್ಲರೂ ಒಮ್ಮತ ಮತ್ತು ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸೋಣ ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಸುಮತಿ ಕರುಣಾಕರ ಶೆಟ್ಟಿ ಮತ್ತು ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ರಂಜನ್ ಆರ್.ಶೆಟ್ಟಿ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಸಮಾಜ ಬಾಂಧವರ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಜ್ಯೋತಿ ಎನ್. ಶೆಟ್ಟಿ ಅವರು ಪ್ರಾರ್ಥನೆಗೈದರು. ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಿದರು. ಕುಶಲ ಸಿ. ಭಂಡಾರಿ ಅವರು ಸ್ವಾಗತಿಸಿದರು. ಕಾರ್ಯದರ್ಶಿ ವೇಣುಗೋಪಾಲ್ ಎಲ್. ಶೆಟ್ಟಿ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸುನಿಲ್ ಜೆ. ಶೆಟ್ಟಿ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸ್ಥಾಪಕಾಧ್ಯಕ್ಷ ಡಿ. ಜಿ. ಬೋಳಾರ್, ಮಾಜಿ ಅಧ್ಯಕ್ಷರಾದ ಭಾಸ್ಕರ ಎಂ. ಶೆಟ್ಟಿ, ಸಿಎ ಕರುಣಾಕರ ಶೆಟ್ಟಿ, ಸಿಎ ಜಗದೀಶ್ ಶೆಟ್ಟಿ, ಸದಸ್ಯರಾದ ಶೇಖರ್ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಲೋಚನಾ ಶೆಟ್ಟಿ, ಪ್ರಮೋದಾ ಮ್ಹಾಡ, ಶಿಕ್ಷಣ ಸಮಿತಿಯ ಸೀತಾರಾಮ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕರ್ನೂರು ಮೋಹನ್ ರೈ, ನಿತ್ಯಾನಂದ ಬೆಳುವಾಯಿ, ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಕೀರ್ತಿ ಶೆಟ್ಟಿ, ಸುನಿಲ್ ಆಳ್ವ, ಸುರೇಶ್ ಶೆಟ್ಟಿ, ಉಮಾ ಶೆಟ್ಟಿ, ಜ್ಯೋತಿ ಎನ್. ಶೆಟ್ಟಿ ಮೊದಲಾದವರು ಮಾತನಾಡಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಜತೆ ಕಾರ್ಯದರ್ಶಿ ಭಾಸ್ಕರ ಎನ್. ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಜತೆ ಕೋಶಾಧಿಕಾರಿ ಅಶೋಕ್ ಎಂ. ಶೆಟ್ಟಿ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.