ಥಾಣೆ ಶ್ರೀ ಆದಿಶಕ್ತಿ ಕನ್ನಡ ಶಾಲೆಯ 44ನೇ ವಾರ್ಷಿಕೋತ್ಸವ ಸಂಭ್ರಮ
Team Udayavani, Jan 6, 2019, 12:49 PM IST
ಥಾಣೆ: ನಾವು ನಮ್ಮ ಬದುಕಿನಲ್ಲಿ ಸಂಪಾದಿಸಿದ ಹಣವನ್ನು ತಮ್ಮ ಜೀವನಕ್ಕೆ ಮಾತ್ರ ಸೀಮಿತವಾಗಿಸಿಕೊಂಡಿರದೆ ಸಂಪಾದನೆಯ ಕಿಂಚಿತ್ತು ಹಣವನ್ನು ಸಮಾಜಕ್ಕಾಗಿ ವಿನಿಯೋಗಿಸಿಕೊಂಡಾಗ ಬದುಕು ಸಾರ್ಥಕ ಎಂದೆಣಿಸಿಕೊಳ್ಳುತ್ತದೆ. ಅದರಲ್ಲೂ ವಿದ್ಯಾ ಸಂಸ್ಥೆಗಳಿಗೆ ನೀಡಿದ ಹಣ ನಿಜವಾಗಿಯೂ ಸಾರ್ಥಕ. ಶ್ರೀ ಆದಿಶಕ್ತಿ ಕನ್ನಡ ಶಾಲೆ ಇಂದು 44 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, 300 ಕ್ಕೂ ಅಧಿಕ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣವನ್ನು ನೀಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದು ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಇದರ ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ ನುಡಿದರು.
ಡಿ. 26 ರಂದು ಥಾಣೆ ಪಶ್ಚಿಮದ ಹೀರಾನಂದಾನಿ ಮೆಡೋಸ್‌ನಲ್ಲಿರುವ ಡಾ| ಕಾಶಿನಾಥ್ ಘಾಣೇಕರ್ ಸಭಾಗೃಹದಲ್ಲಿ ಜರಗಿದ ಶ್ರೀ ಆದಿಶಕ್ತಿ ಕನ್ನಡ ಸಂಘ ಮಾಜಿವಾಡಾ ಥಾಣೆ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯ 44 ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ತಾವು ಕಲಿತ ತಮ್ಮನ್ನು ಈ ಮಟ್ಟಕೇರಿಸಿದ ಶಾಲೆಯನ್ನು ಮರೆಯದೇ ಕಿಂಚಿತ್ತು ರೀತಿಯಲ್ಲಿ ಸಹಾಯ ಮಾಡಿದಲ್ಲಿ ಈ ಶಾಲೆ ಮತ್ತು ಸಂಘ ಇನ್ನಷ್ಟು ಪ್ರಗತಿಪಥದತ್ತ ಸಾಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕೃತಿ-ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದು ಶುಭಹಾರೈಸಿದರು.
ಗೌರವ ಅತಿಥಿಯಾಗಿ ಆಗಮಿಸಿದ ಬಾಕೂìರು ಕಚ್ಚಾರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಇವರು ಮಾತನಾಡಿ, ವಿದ್ಯಾಲಯ ಮತ್ತು ದೇವಾಲಯ ಇವೆರಡು ಸಮಾಜದ ಕಣ್ಣುಗಳಿದ್ದಂತೆ. ಇವೆರಡು ಸಮಾನವಾಗಿ ನಡೆದಾಗ ಸಮಾಜದ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ನಡೆಯಲು ಸಾಧ್ಯ. ಶ್ರೀ ಆದಿಶಕ್ತಿ ಕನ್ನಡ ಶಾಲೆ ಇನ್ನಷ್ಟು ಪ್ರಸಿದ್ಧಿಯನ್ನು ಪಡೆಯಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆಯ ಅಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಪರಿವಾರದ ಮಕ್ಕಳನ್ನು ಹುಡುಕಿ ತಂದು ಅವರನ್ನು ವಿದ್ಯಾವಂತರನ್ನಾಗಿಸಿದ ಹಿರಿಮೆ ಹಾಗೂ ಹತ್ತನೆ ತರಗತಿ ಯವರೆಗೆ ಯಾವುದೇ ಶುಲ್ಕವನ್ನು ಪಡೆಯದೇ ಶಿಕ್ಷಣವನ್ನು ನೀಡುತ್ತಿರುವ ಥಾಣೆ ಪರಿಸರದ ಏಕೈಕ ಕನ್ನಡ ಮಾಧ್ಯಮ ಶಾಲೆ ನಮ್ಮದಾಗಿದೆ ಎನ್ನಲು ಹೆಮ್ಮೆಯಾಗುತ್ತಿದೆ. ಶಾಲೆಗೆ ನಿರಂತರವಾಗಿ ಸಹಾಯ, ಸಹಕಾರವನ್ನು ನೀಡುತ್ತಿರುವ ದಾನಿಗಳನ್ನು, ಉತ್ತಮ ಶಿಕ್ಷಣ ನೀಡುವ ಶಿಕ್ಷಕವರ್ಗವನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕಿ ನಳಿನಿ ಸುಧಾಕರ್ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಕಳೆದ ಬಾರಿಯ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಸುಮಿತ್ ಅಂಕಲ್ಕರ್ ಅವರನ್ನು ಗೌರವಿಸಲಾಯಿತು. ಸಂಘ ಮತ್ತು ಶಾಲೆಯ ಎಲ್ಲಾ ಕಾರ್ಯಗಳಿಗೆ ಸಹಕರಿಸುತ್ತಿರುವ ಉದ್ಯಮಿ, ಸಮಾಜ ಸೇವಕ ಮುಲುಂಡ್ ಬಂಟ್ಸ್‌ನ ಮಾಜಿ ಅಧ್ಯಕ್ಷ ಎಸ್. ಬಿ. ಶೆಟ್ಟಿ, ಉದ್ಯಮಿ ಸಂತೋಷ್ ಶೆಟ್ಟಿ, ಥಾಣೆ ಉದ್ಯಮಿ ರಾಘವ ಎಸ್. ಶೆಟ್ಟಿ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲಾ ಮಾಧ್ಯಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವೀಂದ್ರ ಬಿ., ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆಯ ಕಾರ್ಯದರ್ಶಿ ವಾದಿರಾಜ್ ಶೆಟ್ಟಿ, ಕೋಶಾಧಿಕಾರಿ ಮನೋಹರ ಅಂಚನ್, ಜತೆ ಕಾರ್ಯದರ್ಶಿ ಹರೀಶ್ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಏಕನಾಥ್ ಕುಂದರ್ ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕ ರವೀಂದ್ರ ಬಿ. ಅವರು ಸ್ವಾಗತಿಸಿದರು. ಮಾಧ್ಯಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ವಿ. ಕರ್ಕೇರ ವಾರ್ಷಿಕ ವರದಿ ವಾಚಿಸಿದರು. ಮಾಧ್ಯಮಿಕ ಶಾಲಾ ಸಹ ಶಿಕ್ಷಕ ಸಂತೋಷ್ ದೊ ಡ್ಡನೆ, ಸಹ ಶಿಕ್ಷಕಿಯರುಗಳಾದ ಶರ್ಮಿಳಾ ಶೆಟ್ಟಿ, ಪ್ರಮೋದಾ ಮ್ಹಾಡಾ ಅತಿಥಿಗಳನ್ನು ಪರಿಚಯಿಸಿದರು. ಗಣ್ಯರು ಗಳನ್ನು ಅಧ್ಯಕ್ಷ ಭಾಸ್ಕರ್ ಶೆಟ್ಟಿ ಗೌರವಿಸಿದರು.
ಪ್ರಾಥಮಿಕ ವಿಭಾಗದ ಶಿಕ್ಷಕಿ ಪುಷ್ಪಾ ಕುಂಬ್ಳೆ ಸಮ್ಮಾನ ಪತ್ರ ವಾಚಿಸಿದರು. ವಿವಿಧ ಸಂಘಟ ನೆಗಳ ಪದಾಧಿಕಾರಿಗಳನ್ನು, ದಾನಿಗಳನ್ನು ಗೌರವಿಸಲಾ ಯಿತು. ಶಾಲಾ ಶಿಕ್ಷಕಿ ಪ್ರಮೋದಾ ಮಾಡಾ ದಾನಿಗಳ ಹೆಸರನ್ನು ವಾಚಿಸಿದರು. ಶಾಲಾ ಪಠ್ಯ ಪತ್ತು ಪಠ್ಯೇತ ರ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳನ್ನು ಬಹು ಮಾನವನ್ನಿತ್ತು ಅಭಿನಂದಿಸಲಾಯಿತು. ಪ್ರಮೋದಾ ಮಾಡಾ ಕಾರ್ಯಕ್ರಮ ನಿರ್ವಹಿಸಿದರು. ಸಂಪೂರ್ಣ ಸಭಾ ಕಾರ್ಯಕ್ರಮವನ್ನು ಶಿಕ್ಷಕ ವೆಂಕಟ್ರಮಣ ಶೆಣೈ ನಿರ್ವಹಿಸಿದರು. ಶಿಕ್ಷಕ ಪ್ರಕಾಶ್ ಚಿಂತಾಮಣಿ ವಂದಿಸಿದರು. ಶಾಲಾ ಮಕ್ಕಳಿಂದ ಮತ್ತು ಹಳೆವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ನಳಿನಾ ಶೆಟ್ಟಿ ಮತ್ತು ಮಮತಾ ಶೆಟ್ಟಿ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಕಳೆದ 25 ವರ್ಷಗಳಿಂದ ನನ್ನ ಸೇವೆಯಲ್ಲಿ ನಾನು ಇಲ್ಲಿ ಕೌಟುಂಬಿಕ ಪರಿವಾರವನ್ನು ಕಂಡುಕೊಂಡಿದ್ದೇನೆ. ನನ್ನ ಜೊತೆಗೆ ಎಲ್ಲರೂ ಕೂಡಿ ಬಾಳಿದ ಪರಿಣಾಮ ನಾನು ಈ ಶಾಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಲು ಸಾಧ್ಯವಾಯಿತು. ಈ ಶಾಲೆಯನ್ನು ನಾನು ಖಂಡಿತವಾಗಿಯೂ ಆದರ್ಶ ಶಾಲೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.
– ನಳಿನಿ ಎಸ್. ಶೆಟ್ಟಿ , ಸಮ್ಮಾನಿತ ಶಿಕ್ಷಕಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.