ತುಳುವರ ಹೃದಯ ಶ್ರೀಮಂತಿಕೆ ಮೆಚ್ಚುವಂಥದ್ದು: ಕಡ್ತಲ
Team Udayavani, Jul 30, 2019, 1:29 PM IST
ಪುಣೆ, ಜು. 29: ತುಳುನಾಡಿನ ಎಲ್ಲಾ ಜಾತಿ-ಧರ್ಮದ ತುಳುವರ ದಿನ ನಿತ್ಯದ ಬದುಕಿನೊಂದಿಗೆ, ತಾವು ಮಾಡುವ ಕಾರ್ಯಕಸುಬು, ಅಚಾರ ವಿಚಾರಗಳು, ಮಣ್ಣಿನ ಸಂಸ್ಕೃತಿ, ಪ್ರಕೃತಿಯೊಂದಿಗೆ ಬೆಸೆದುಕೊಂಡಿದ್ದ ಆಚರಣೆಗಳು ಮನಸ್ಸಿಗೆ ಮುಟ್ಟುವಂತಿದ್ದವು. ನಮ್ಮ ಹಿರಿಯರು ತಮ್ಮ ಹೊಲ, ಗದ್ದೆಗಳ ಕೃಷಿ ಕಾರ್ಯ ಅಥವಾ ಇತರ ವ್ಯವಸಾಯದಲ್ಲಿ ತಮ್ಮದೇ ಪದ್ಧತಿಯ ನೆಲೆಯಲ್ಲಿ ನಾಡು ನುಡಿಯಲ್ಲಿ, ಜಾನಪದ ಕಟ್ಟು ಕಟ್ಟಳೆಗಳೊಂದಿಗೆ ಬೇರೆಯುತ್ತಿದ್ದ ಪ್ರತಿ ದಿನವು ವಿಶೇಷವಾಗಿತ್ತು ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ ನುಡಿದರು.
ಬಿಲ್ಲವ ಸಮಾಜ ಬಾಂಧವರ ಬಿರುವೆರ್ ಪುಣೆ ಕೂಡುವಿಕೆಯಲ್ಲಿ ಜು. 28ರಂದು ಪುಣೆಯ ಮಹಾಲಕ್ಷ್ಮೀ ಲಾನ್ಸ್‌ನಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಆಟಿಡೂಂಜಿ ಕೂಟ ಆಚರಣೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಕಾರ್ಯ ಎಲ್ಲಾ ಮುಗಿದು ಅನಂತರ ಮಳೆಗಾಲದಲ್ಲಿ ಅಡಿಕೆಯ ಹಿಂಗಾರ ನೆಲಕಚ್ಚುವಂತಹ ಪರಿಸ್ಥಿತಿಯ ಪುನರ್ವಸು, ಪುಷ್ಯಾ ನಕ್ಷತ್ರದ ಬಾನು ಬಿರಿದು ಬರುವ ಜಡಿಮಳೆ, ಅದರಲ್ಲೂ ಆಟಿ ತಿಂಗಳ ಅಂದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅರಿತವರು ಇಲ್ಲಿ ಇಲ್ಲದಿರಬಹುದು. ಆದರೆ ಹಿರಿಯರಿಂದ ಕೇಳಿ ತಿಳಿದುಕೊಂಡವರು ನಾವು. ಹಿಂದೆ ಅಂತಹ ಕಷ್ಟದ ದಿನಗಳು ಆಟಿ ತಿಂಗಳಲ್ಲಿದ್ದವು. ದೇಹಕ್ಕೆ ಹಸಿವು ಎಂಬುವುದನ್ನು ದೇವರು ಕೊಟ್ಟಿದ್ದಾನೆ. ಅದನ್ನು ತನ್ನ ಸ್ವ ಶಕ್ತಿಯಿಂದ ಸಂಪಾದಿಸುವುದು ಮಾನವ ಧರ್ಮ ಎಂಬುದು ಕೂಡಾ ಅಷ್ಟೇ ಸತ್ಯ. ಶ್ರೀಮಂತಿಕೆ ಇರಲಿ, ಬಡತನವಿರಲಿ ಹಿಂಸೆ, ಅನಾಚಾರವಿಲ್ಲದೆ ಬದುಕು ಕಟ್ಟಿಕೊಂಡವರು ತುಳುನಾಡಿನವರು. ಅದ್ದರಿಂದ ಇಂತಹ ಕಠಿನ ಸಮಯದಲ್ಲಿ ಪ್ರಕೃತಿದತ್ತವಾಗಿ ಸಿಗುವ ಆಹಾರ ವಸ್ತುಗಳಾದ ತೇವು, ತೊಜಂಕ್, ತಿಮರೆ, ಹಲಸು, ಕೆನೆ, ಗೆಣಸು ಮೊದಲಾದ ವಸ್ತುಗಳನ್ನು ಆಹಾರವಾಗಿ ಗಂಜಿಯೊಂದಿಗೆ ಸವಿದು ಜೀವನ ನಡೆಸಿ ಗೌರವದಿಂದ ಬದುಕಿದವರು ನಮ್ಮ ಹಿರಿಯರು. ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಇಂತಹ ಕಷ್ಟಮಯ ಕಾಲದ ದಾರಿದ್ರ್ಯವನ್ನು ಕಳೆಯಲು ದೇವರು ಆಟಿ ಕಳೆಂಜೆಯನ್ನು ತುಳುನಾಡಿಗೆ ಕಳುಹಿಸುತ್ತಿದ್ದರು. ಇಂತಹ ಪರಿಸ್ಥಿತಿ ಇಂದು ಇಲ್ಲದೆ ಇದ್ದರೂ ಕೂಡ ಅಂದಿನ ಆಟಿತಿಂಗಳ ದಿನಗಳನ್ನು ಇಂದಿಗೂ ಜನರು ಮೆಲುಕು ಹಾಕುತ್ತಾ ಅದರ ನೆನಪಿನಲ್ಲಿ ತುಳುನಾಡಿನಾದ್ಯಂತ ಆಚರಿಸುತ್ತಾರೆ. ಯುವ ಪೀಳಿಗೆಗೆ ಇದರ ಮಹತ್ವವನ್ನು ತಿಳಿಸುತ್ತಾರೆ. ಅಂತಹ ಕಾರ್ಯವನ್ನು ಬಿರುವೆರ್ ಪುಣೆ ಆಯೋಜನೆಯಲ್ಲಿ ಬಿಲ್ಲವ ಸಮಾಜದ ಬಾಂಧವರಿಗಾಗಿ ಆಚರಿಸುತ್ತಿದ್ದೇವೆ. ಇಲ್ಲಿ ನೆಲೆಸಿರುವ ನಮ್ಮ ಸಮಾಜದ ಎಲ್ಲಾ ಬಾಂಧವರಿಗೆ, ಮಕ್ಕಳಿಗೆ ತಿಳಿಸುವ ಕಾರ್ಯ ಇದಾಗಿದೆ. ಇಲ್ಲಿ ತುಳುನಾಡಿನ ವೈವಿಧ್ಯಮಯ ಸಂಸ್ಕೃತಿಯ ಅನಾವರಣವಾಗಿದೆ.
ಈ ಕಾರ್ಯಕ್ರಮವನ್ನು ಪುಣೆಯಲ್ಲಿ ಆಚರಿಸಬೇಕು ಎಂದಾಗ ನಮ್ಮ ಬಿಲ್ಲವ ಸಮಾಜ ಬಾಂಧವರ ಯುವಕರು, ಮಹಿಳೆಯರ ಹುರುಪು, ಹುಮ್ಮಸ್ಸು, ಸಹಕಾರ, ಊಟ-ತಿಂಡಿ ತಯಾರಿಸುವಲ್ಲಿ ಅವರೆಲ್ಲರೂ ತೋರಿದ ಉತ್ಸಾಹ ಕಂಡಾಗ ಮುಂದೆ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ನಮಗೆ ಸ್ಫೂರ್ತಿ ಸಿಕ್ಕಿದೆ. ಸುಮಾರು 40ಕ್ಕೂ ಮಿಕ್ಕಿದ ತುಳುನಾಡಿನ ತಿಂಡಿತಿನಿಸು ಊಟದ ತಯಾರಿಗಾಗಿ ನಮ್ಮವರು ನಿಂತು ಸಹಕರಿಸಿದ್ದಾರೆ. ಬ್ರಹ್ಮಬೈದರು, ಕೋಟಿ-ಚೆನ್ನಯರ ಅಭಯ ಹಸ್ತ, ನಾರಾಯಣ ಗುರುಗಳ ಆಶೀರ್ವಾದ ಮತ್ತು ಹಿರಿಯರ ಆಶೀರ್ವಾದ ನಮಗೆ ಪ್ರೇರಣೆಯಾಗಿದೆ. ಎಲ್ಲಾ ಸಮಾಜ ಬಾಂಧವರ ಪ್ರೋತ್ಸಾಹ ಸಿಕ್ಕಿದೆ ಎಂದರು.
ಸಮಾರಂಭವನ್ನು ಮುಖ್ಯ ಅತಿಥಿಗಳಾದ ಜಾನಪದ ವಿದ್ವಾಂಸ ಸಾಹಿತಿ ಬನ್ನಂಜೆ ಬಾಬು ಅಮೀನ್ ಮತ್ತು ಪುಣೆ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾದ ಸುಂದರ್ ಪೂಜಾರಿಯವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪುಣೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರುಗಳಾದ ಸದಾನಂದ ಪೂಜಾರಿ, ಸದಾಶಿವ ಎಸ್. ಸಾಲ್ಯಾನ್, ಉದ್ಯಮಿ ಬಾಲಕೃಷ್ಣ ವಿ. ಸುವರ್ಣ, ಬಿಲ್ಲವ ಸಂಘದ ಉಪಾಧ್ಯಕ್ಷ ಸಂದೇಶ್ ಪೂಜಾರಿ, ಉದ್ಯಮಿ ಕೆ. ಕೆ. ಪೂಜಾರಿ, ಪುಣೆ ಬಿಲ್ಲವ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ಕೆ. ಪೂಜಾರಿ, ಕಾರ್ಯದರ್ಶಿ ರೇವತಿ ಪೂಜಾರಿ ಅವರು ಉಪಸ್ಥಿತರಿದ್ದರು.
ನಾರಾಯಣ ಶೆಟ್ಟಿ ನಂದಳಿಕೆ ಮುಂಬಯಿ ಮತ್ತು ತಂಡದವರ ಆಟಿ ಕಳೆಂಜೆ ವೇಷಧಾರಿ ಯು ಸಭೆಯ ಮಧ್ಯೆ ಪಾಡ್ದನದೊಂದಿಗೆ ವೇದಿಕೆಗೆ ಬಂದು ತುಳುವರ ಮೂಲ ಕೃಷಿ ಸಂಸ್ಕೃತಿಯ ನೇಜಿ ನೆಡುವ ಮೂಲಕ ಗಣ್ಯರು ಈ ಕೂಟವನ್ನು ಉದ್ಘಾಟಿಸಿದರು. ಶಂಕರ ಪೂಜಾರಿಯವರು ಪ್ರಾರ್ಥನೆಗೈದರು. ಬಿಲ್ಲವ ಸಂಘದ ಕೋಶಾಧಿಕಾರಿ ಹರೀಶ್ ಮೂರ್ಜೆ ಸ್ವಾಗತಿಸಿದರು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮತ್ತು ಸುಂದರ ಪೂಜಾರಿ ಅವರು ಮಾತನಾಡಿ ಶುಭಹಾರೈಸಿದರು.
ಬೆಳಗ್ಗೆ 10ರಿಂದ ಪ್ರಾರಂಭಗೊಂಡ ಕಾರ್ಯಕ್ರಮವು ಸಂಜೆ 6.30ರ ತನಕ ವಿವಿಧ ಸಾಮಾಜಿಕ, ಧಾರ್ಮಿಕ, ಸಂಸ್ಕೃತಿಯನ್ನು ಬಿಂಬಿಸುವ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಚಿಂತನ ಮಂಥನ ಹಾಗೂ ವಿವಿಧ ಬಗೆಯ ತುಳುನಾಡಿನ ತಿನಿಸು ಊಟೋಪಹಾರಗಳೊಂದಿಗೆ ನಡೆಯಿತು. ಅಲ್ಲದೆ ಅತಿಥಿ-ಗಣ್ಯರು, ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾದಿಧಿಕಾರಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ಜರಗಿತು. ರಿತೇಶ್ ಕುಮಾರ್ ಪೂಜಾರಿ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.